ಕೋಲಾರ

ಬೂತ್ ಮಟ್ಟದ ಅಧಿಕಾರಿಗಳ ಸಂಭಾವನೆ ಏರಿಕೆಗೆ ಆಗ್ರಹ

Published On :

ಕೋಲಾರ: ಮತಗಟ್ಟೆ ಹಂತದ ಅಧಿಕಾರಿಗಳ ಸಂಭಾವನೆ ಹೆಚ್ಚಿಸುವಂತೆ ಆಗ್ರಹಿಸಿ ನೌಕರರ ಸಂಘ ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ  ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಎನ್. ಮಂಜುನಾಥ್, ವರ್ಷವಿಡೀ ಕೆಲಸ ಮಾಡುವ ಬೂತ್ ಮಟ್ಟದ ಅಧಿಕಾರಿಗಳಿಗೆ ಈಗ ನೀಡುತ್ತಿರುವ 3 ಸಾವಿರ ರು. ಸಂಭಾವನೆಯನ್ನು 10 ಸಾವಿರ ರು.ಗಳಿಗೆ ಏರಿಸಬೇಕು ಎಂದು ಮನವಿ ಮಾಡಿದರು. ಮತಗಟ್ಟೆ ಹಂತದ ಅಧಿಕಾರಿಗಳಿಗೆ ಇಡೀ ವರ್ಷದ ಸ್ಟೇಷನರಿ ಸಾಮಗ್ರಿ, ಪ್ರಯಾಣ ಭತ್ಯೆಗಾಗಿ 2 ಸಾವಿರ ರು. ನೀಡಬೇಕು ಎಂದು ಕೋರಲಾಯಿತು. ಮತದಾನದ ದಿನದಂದು ಬೂತ್ ಹಂತದ ಅಧಿಕಾರಿಗಳಿಗೆ ವಿಶೇಷ ಆಸನದ ವ್ಯವಸ್ಥೆ ಮಾಡಿಕೊಡಬೇಕು ಮತ್ತು ಆ ದಿನದ ಭತ್ಯೆಯನ್ನು ಚುನಾವಣಾ ಕರ್ತವ್ಯದ ಮೇಲಿರುವ ಅಧಿಕಾರಿಗಳಿಗೆ ನೀಡುವಂತೆಯೇ ಸಂಭಾವನೆ ನೀಡುವಂತೆ ಮನವಿ ಮಾಡಿದರು. ನಮ್ಮ ಬೇಡಿಕೆಗಳ ಮನವಿಯನ್ನು ರಾಜ್ಯ ಚುನಾವಣಾಧಿಕಾರಿಗಳಿಗೆ ಕಳುಹಿಸಿ ನ್ಯಾಯ ಒದಗಿಸಿಕೊಡಬೇಕೆಂದು ಮನವಿ ಮಾಡಿದರು. ಜಿಲ್ಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ  ವೆಂಕಟಶಿವಪ್ಪ, ಶಿಕ್ಷಕರು ಕಳೆದ 7 ವರ್ಷಗಳಿದ ಬೂತ್ ಹಂತದ ಅಧಿಕಾರಿಗಳಾಗಿ ವರ್ಷಕ್ಕೆ ಕೇವಲ 3 ಸಾವಿರ ರು.ಗಳ ಸಂಭಾವನೆಯಲ್ಲಿ ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿದ್ದಾರೆ ಎಂದರು.
ಈ ಕಾರ್ಯ ಹೊಣೆಗಾರಿಕೆಯಿಂದ ಕೂಡಿದ್ದು, ವರ್ಷವಿಡೀ ಮನೆಗಳಿಗೆ ತೆರಳಿ ಮಾಹಿತಿ ಸಂಗ್ರಹ, ಕೆಲವು ಸಂದರ್ಭಗಳಲ್ಲಿ ರಜೆ ದಿನಗಳಲ್ಲೂ ಕಾರ್ಯನಿರ್ವಹಿಸುವ ಅನಿವಾರ್ಯ ಎದುರಿಸುತ್ತಿದ್ದು, ನೀಡುತ್ತಿರುವ ಸಂಭಾವನೆ ಸಾಲದು ಎಂದರು.
ಚುನಾವಣಾ ಆಯೋಗಕ್ಕೆ ಬೂತ್ ಮಟ್ಟದ ಅಧಿಕಾರಿಗಳ ಸಂಭಾವನೆ ಏರಿಕೆಗೆ ರಾಜ್ಯ ಚುನಾವಣಾ ಆಯೋಗಕ್ಕೆ ಕೋರಲಾಗಿದ್ದು, ಶೀಘ್ರ ಏರಿಕೆಗೆ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಿ.ಕೆ. ರವಿ ಭರವಸೆ ನೀಡಿ, ಚುನಾವಣಾ ದಿನದ ಸಂಭಾವನೆ ನೀಡಲು ನಿಯಮಗಳಲ್ಲಿ ಅವಕಾಶವಿದ್ದಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ನೌಕರರ ಸಂಘ ಮತಗಟ್ಟೆ ಅಧಿಕಾರಿಗಳು, ಶಿಕ್ಷಕ, ನೌಕರರಿಗೆ ಶೇ.100 ಮತದಾನ ಸಾಧನೆಗೆ ಜನತೆಗೆ ಅರಿವು ಮೂಡಿಸುವಂತೆ ತಿಳಿಸುವ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಜಿಲ್ಲಾಧಿಕಾರಿಗಳು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಬಿ. ಅಶೋಕ್, ರಾಜ್ಯಪರಿಷತ್ ಸದಸ್ಯ ಹಾಗೂ ಶಿಕ್ಷಕರ ಸಂಘದ ಉಪಾಧ್ಯಕ್ಷ ಎಂ. ನಾಗರಾಜ್, ಪತ್ರಿಕಾ ಕಾರ್ಯದರ್ಶಿ ಸಿ.ಎಲ್.ಶ್ರೀನಿವಾಸಲು, ನೌಕರರ ಸಂಘದ ಜಂಟಿ ಕಾರ್ಯದರ್ಶಿ ಎಂ.ಎನ್. ಶ್ರೀನಿವಾಸಮೂರ್ತಿ, ತಾಲೂಕು ಉಪಾಧ್ಯಕ್ಷ ಕೆ.ಟಿ. ನಾಗರಾಜ್, ನೌಕರರ ಸಂಘದ ಉಪಾಧ್ಯಕ್ಷ ಖಾದರ್ ಇಲಾಹಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.