ಕೋಲಾರಕ್ಕಿಂದು ಸಿಎನ್ಆರ್ ರಾವ್
ಕೋಲಾರ: ನಗರದ ಹೊರವಲಯದ ದೇವರಾಜ್ ಅರಸ್ ಉನ್ನತ ಶಿಕ್ಷಣ ಹಾಗೂ ಸಂಶೋಧನಾ ಸಂಸ್ಥೆಯ ನಾಲ್ಕನೇ ಘಟಿಕೋತ್ಸವ ಸಮಾರಂಭವನ್ನು ಶನಿವಾರ ಬೆಳಿಗ್ಗೆ 11 ಗಂಟೆಗೆ ಸ್ವಾಯತತ್ತೆ ಹೊಂದಿರುವ ವಿಶ್ವ ವಿದ್ಯಾಲಯದ ಬಯಲು ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ವಿವಿ ಕುಲಪತಿ ಪ್ರೊ. ಪ್ರೇಮನಾಥ್ ಎಫ್. ಕೊಟೂರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾರ್ಯಕ್ರಮದಲ್ಲಿ ಭಾರತ್ನ ರತ್ನ ಡಾ.ಸಿ.ಎನ್.ಆರ್. ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಘಟಿಕೋತ್ಸವ ಭಾಷಣ ಮಾಡಲಿದ್ದು, ಬೆಂಗಳೂರಿನಲ್ಲಿರುವ ಭಾರತ ವೈಜ್ಞಾನಿಕ ಸಂಸ್ಥೆಯ ನಿರ್ದೇಶಕ ಪದ್ಮಭೂಷಣ ಡಾ.ಪಿ. ಬಲರಾಮ್ ಅವರಿಗೆ ಗೌರವಾನ್ವಿತ ಎಂ.ಡಿ. ಆನರ್ಸ್ ಕೌಸ್ ಪದವಿ ಸಮರ್ಪಣೆ ಮಾಡಲಾಗುವುದೆಂದು ಹೇಳಿದರು.
ಡಾ.ಸಿ.ಎನ್.ಆರ್. ರಾವ್ ಅವರು ತಮ್ಮ ಬಿಡುವಿಲ್ಲದ ಕಾರ್ಯಭಾರದ ನಡುವೆಯೂ ನಮ್ಮ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿದ್ದಾರೆ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ, ಇಡೀ ಕಾರ್ಯಕ್ರಮಕ್ಕೆ ಅವರು ಕೇವಲ ಎರಡು ಗಂಟೆಗಳ ಕಾಲ ಸಮಯ ಮೀಸಲಿಟ್ಟಿದ್ದಾರೆಂದರು.
ವಿಶ್ವ ವಿದ್ಯಾಲಯದ ಒಟ್ಟು 201 ವಿದ್ಯಾರ್ಥಿಗಳ ಪೈಕಿ 182 ಮಂದಿ ಘಟಿಕೋತ್ಸವದಲ್ಲಿ ಭಾಗವಹಿಸಲಿದ್ದಾರೆ. ವಿವಿಧ ಕೋರ್ಸ್ಗಳಲ್ಲಿ ಪದವಿಗಳನ್ನು ಪ್ರಧಾನ ಮಾಡಲಾಗುವುದು. ಎಂಬಿಬಿಎಸ್ನ 119, ಸ್ನಾತಕೋತ್ತರ ಪದವಿಯ 62, ಸ್ನಾತಕೋತ್ತರ ಡಿಪ್ಲೊಮೋದ 16, ಎಂಫಿಲ್ನ 2 ಹಾಗೂ ಸ್ನಾತಕೋತ್ತರ ಡಿಪ್ಲೊಮೋ ಜಿನೋಮಿಕ್ ಟೆಕ್ನಾಲಜಿಯ 2 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಗುವುದೆಂದರು.
ಚಿನ್ನದ ಪದಕ ಗಳಿಸಿರುವ ವಿದ್ಯಾರ್ಥಿಗಳು: ಅರುಂಧತಿ ಸಂಜಯ್ ತುಂಬೇಕರ್, ಎಂಬಿಬಿಎಸ್, ಜನವರಿ 2013 ಸಾಲಿನ ವಿದ್ಯಾರ್ಥಿನಿ ಡಾ.ಜಿ. ಗಣೇಶ್, ಎಂಡಿ, ಜೀವರಾಸಾಯನ ಶಾಸ್ತ್ರ ವಿಭಾಗ, ಡಾ.ಶ್ವೇತ.ಕೆ, ಎಂಡಿ, ಸೂಕ್ಷ್ಮಜೀವಾಣುಶಾಸ್ತ್ರ, ಡಾ. ಸಿಂಧು.ಬಿ.ಎಸ್, ಎಂಡಿ, ಅರವಳಿಕೆ, ಡಾ. ಪದ್ಮಿನಿ ಭಟ್, ಎಂಎಸ್, ಗರ್ಭಿಣಿ ಮತ್ತು ಸ್ತ್ರೀ ರೋಗಶಾಸ್ತ್ರ, ಡಾ. ಪ್ರಿಯದರ್ಶಿನಿ ಅರವಿಂದ್, ಡಿಪ್ಲೊಮೋ ಅರವಳಿಕೆ ಹಾಗೂ ಡಾ. ಕಲ್ಪನಾ ಗೋಪನ್ ಪಿ, ಡಿಪ್ಲೊಮೋ ಗರ್ಭಿಣಿ ಮತ್ತು ಸ್ತ್ರೀ ರೋಗಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಚಿನ್ನದ ಪದಕ ಪಡೆಯಲಿದ್ದಾರೆಂದು ಪ್ರೊ. ಪ್ರೇಮನಾಥ್ ಎಫ್. ಕೊಟೂರ್ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕುಲಾಧಿಪತಿ ರಾಜೇಶ್ ಎನ್. ಜಗದಾಳೆ ವಹಿಸಲಿದ್ದು, ತಾವು ವಿವಿಯ ವರದಿಯನ್ನು ಮಂಡಿಸಲಿರುವುದಾಗಿ ಹೇಳಿದರು. ದೇವರಾಜ್ ಅರಸು ಎಜುಕೇಷನಲ್ ಟ್ರಸ್ಟ್ ಅಧ್ಯಕ್ಷ ಆರ್.ಎಲ್. ಜಾಲಪ್ಪ ಹಾಗೂ ಕಾರ್ಯದರ್ಶಿ ನಾಗರಾಜ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆಂದರು.
ಪತ್ರಿಕಾಗೋಷ್ಠಿಯಲ್ಲಿ ದೇವರಾಜ್ ಅರಸ್ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಸಾಣಿಕೊಪ್, ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ. ಪ್ರಸಾದ್ ಹಾಗೂ ಆರ್.ಎಲ್. ಜಾಲಪ್ಪ ಆಸ್ಪತ್ರೆಯ ವೈದ್ಯಕೀಯ ಆಧೀಕ್ಷಕ ಡಾ. ಶ್ರೀರಾಮ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

