ಸುದ್ದಿ ಸಂಕ್ಷೇಪ
ವಿದ್ಯುತ್ ಹರಿದು ಕಾರ್ಮಿಕ ಸಾವು
ಕೆಜಿಎಫ್: ಬೆಸ್ಕಾಂ ಇಲಾಖೆಗೆ ಸಂಬಂಧಿಸಿ ವಿದ್ಯುತ್ ತಂತಿಗಳ ಬದಲಾವಣೆ ಕೆಲಸದಲ್ಲಿ ನಿರತರಾಗಿದ್ದ ಗುತ್ತಿಗೆ ದಿನಗೂಲಿ ಕಾರ್ಮಿಕರೊಬ್ಬರು ವಿದ್ಯುತ್ ಸ್ಪರ್ಶಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಗಂಭೀರ ಗಾಯಗೊಂಡು ಕೋಲಾರದ ಎಸ್.ಎನ್.ಆರ್ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಬೆಮೆಲ್ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿದ್ಯುತ್ ಹರಿದು ಸ್ಥಳದಲ್ಲೇ ಮೃತಪಟ್ಟಿರುವ ವ್ಯಕ್ತಿ ಮೆಹಬೂದ್ಅಲಿ(19) ಮತ್ತು ಗಾಯಗೊಂಡಿರುವ ವ್ಯಕ್ತಿ ಸಲಾಂ ಎಂದು ಗುರುತಿಸಲಾಗಿದೆ. ಇವರಿಬ್ಬರು ಪಶ್ಚಿಮ ಬಂಗಾಳದ ಸುಕದೇವ್ಪುರ ಮೂಲದವನು ಎಂದು ತಿಳಿದು ಬಂದಿದೆ. ಹೈದರಬಾದ್ ಮೂಲದ ವಿಶ್ವನಾಥ್ ಪ್ರಾಜೆಕ್ಟ್ ಲಿಮಿಟೆಡ್ ಸಂಸ್ಥೆ ಬೆಸ್ಕಾಂ ಇಲಾಖೆಯ ವಿದ್ಯುತ್ ತಂತಿಗಳ ಬದಲಾವಣೆ ಗುತ್ತಿಗೆ ಪಡೆದಿದ್ದು ಈ ಸಂಸ್ಥೆಯಲ್ಲಿ ದಿನಗೂಲಿ ಕಾರ್ಮಿಕರಾಗಿ ಕಳೆದ ಮೂರು ತಿಂಗಳಿಂದ 15 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಶುಕ್ರವಾರ ಸಂಜೆ ವಿದ್ಯುತ್ ತಂತಿ ಬದಲಾವಣೆ ಮಾಡುತ್ತಿದ್ದ ವೇಳೆ ಬೆಸ್ಕಾಂ ಇಲಾಖೆಗೆ ವಿದ್ಯುತ್ ಸರಬರಾಜು ಸ್ಥಗಿತಮಾಡುವಂತೆ ತಿಳಿಸಿದ ನಂತರ ಬದಲಾವಣೆ ಕಾರ್ಯದಲ್ಲಿ ತೊಡಗಿದ್ದಾಗ ತಂತಿಗಳಿಂದ ವಿದ್ಯುತ್ ಹರಿದು ಈ ದುರಂತ ಸಂಭವಿಸಿದೆ ಎಂದು ಮೃತಪಟ್ಟ ಕಾರ್ಮಿಕ ಸಹದ್ಯೋಗಿ ತಿಳಿಸಿದ್ದಾರೆ. ಘಟನೆಗಯ ಬಗ್ಗೆ ಬೆಸ್ಕಾಂ ಇಲಾಖೆಯಿಂದ ವಿದ್ಯುತ್ ಸರಬರಾಜು ಆದ ಬಗ್ಗೆ ಪೊಲೀಸರ ವಿಚಾರಣೆ ನಂತರ ಸೂಕ್ತ ಮಾಹಿತಿ ಸಿಗಬೇಕಾಗಿದೆ. ಪ್ರಕರಣ ದಾಖಲಿಸಿಕೊಂಡ ಬೆಮೆಲ್ನಗರ ಠಾಣಾ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ನೀರಿನ ವಿಷಯವಾಗಿ ಘರ್ಷಣೆ
ಚಿಂತಾಮಣಿ: ಕುಡಿಯುವ ನೀರಿನ ವಿಷಯವಾಗಿ 2 ಗುಂಪುಗಳ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋದಾಗ ಪೊಲೀಸರು ಮಧ್ಯ ಪ್ರವೇಶಿಸಿ ರಾಜಿ ಸಂಧಾನದ ಮೂಲಕ ಸಂಭಾವ್ಯ ದುರ್ಘಟನೆಯೊಂದನ್ನು ತಡೆದ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಸುಜ್ಜನಹಳ್ಳಿ ಮತ್ತು ಕುರುಮಾರ್ಲಹಳ್ಳಿಯಲ್ಲಿ ನಡೆದಿದೆ.
ತಾಲೂಕಿನ ಕುರುಮಾರ್ಲಹಳ್ಳಿ ಕೆರೆಯ ನೀರನ್ನು ಸುಜ್ಜನಹಳ್ಳಿ ಗ್ರಾಮಸ್ಥರಿಗೆ ಬಿಡಬೇಕು ಎಂಬ ವಿಷಯವಾಗಿ ಎರಡು ಗ್ರಾಮದ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು. ಈ ಸಂದರ್ಭದಲ್ಲಿ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ 2 ಗುಂಪುಗಳನ್ನು ಸಮಾಧಾನ ಪಡಿಸಿದ್ದಾರೆ.
ಮರದಿಂದ ಬಿದ್ದು ವ್ಯಕ್ತಿ ಸಾವು
ಚಿಂತಾಮಣಿ: ಹುಣಿಸೆ ಕಾಯಿ ಉದುರಿಸುವಾಗ ಮರದಿಂದ ಆಯಾ ತಪ್ಪಿ ಕೆಳಗೆ ಬಿದ್ದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಚಿಕ್ಕಪುರದಲ್ಲಿ ನಡೆದಿದೆ.
ತಾಲೂಕಿನ ಕಸಬಾ ಹೋಬಳಿ ಚಿಕ್ಕಪುರ ಗ್ರಾಮದ ಮುನಿರೆಡ್ಡಿ(45) ಮೃತವ್ಯಕ್ತಿ. ಈತ ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ತನ್ನ ಜಮೀನಿನಲ್ಲಿದ್ದ ಮರದಲ್ಲಿ ಹುಣಿಸೆಕಾಯಿ ಉದುರಿಸುತ್ತಿದ್ದ ಸಂದರ್ಭದಲ್ಲಿ ಆಯಾ ತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಗ್ರಾಮಾಂತರ ಠಾಣೆಯ ಸಬ್ಇನ್ಸ್ಪೆಕ್ಟರ್ ನಯಾಜ್ ಬೇಗ್ ಕೇಸ್ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ
ಮುಳಬಾಗಲು: ತಾಲೂಕಿನ ಬಂಡಹಳ್ಳಿ ಗ್ರಾಮದ ಸೋಮಶೇಖರ್(23) ಎಂಬ ಯುವಕ ಕ್ಷುಲ್ಲಕ ಕಾರಣಕ್ಕೆ ಮೈಮೇಲೆ ಸೀಮೆಎಣ್ಣಿ ಸುರಿದುಕೊಂಡು ಸಾವಿಗೀಡಾಗಿದ್ದಾನೆ. ಮನೆಯಲ್ಲಿ ಮೂರು ಮಂದಿ ಸಹೋದರರಿದ್ದರೂ ಯಾರೂ ಕೃಷಿ ಚಟುವಟೆಕೆಯಲ್ಲಿ ತೊಡಗಿಸಿಕೊಳ್ಳದೇ ತಾನೊಬ್ಬನೇ ದುಡಿಯಬೇಕು ಎಂಬ ಮನೋವೇಧನೆಯಿಂದ ಬೇಸತ್ತು ಸೀಮೆ ಎಣ್ಣಿ ಸುರಿದುಕೊಂಡು ತೀವ್ರವಾದ ಗಾಯಗಳಿಂದಾಗಿ ಬೆಂಗಳೂರಿನ ವಿಕ್ಟೋರಿಯ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ಸಾವಿಗೀಡಾಗಿದ್ದಾನೆಂದು ಮುಳಬಾಗಲು ಪೊಲೀಸರು ತಿಳಿಸಿದ್ದಾರೆ.
ಅಸಮರ್ಪಕ ವಿದ್ಯುತ್; ಕಚೇರಿಗೆ ಬೀಗ ಜಡಿದ ರೈತರು
ಚಿಕ್ಕಬಳ್ಳಾಪುರ/ಗೌರಿಬಿದನೂರು: ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಅಸಮರ್ಪಕ ವಿದ್ಯುತ್ ಸರಬರಾಜಿನಿಂದ ಬೇಸತ್ತು ಹೋಬಳಿಯ ರೈತರು ಬೆಸ್ಕಾಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ಮಾಡಿದರು.
ವಿದ್ಯುತ್ ಕೇವಲ ಮೂರು ಗಂಟೆಗಳ ಕಾಲವೂ ನೀಡದೆ ಗ್ರಾಮೀಣ ಭಾಗದ ರೈತರಿಗೆ ವ್ಯವಸಾಯ ಮಾಡುವುದಕ್ಕೆ ಅನಾನುಕೂಲ ಮಾಡುತ್ತಿದ್ದು ಇದರಿಂದ ಬೆಳೆಗಳು ಬೆಳೆಯುವುದಕ್ಕೆ ಆಗುತ್ತಿಲ್ಲ. ಇದಕ್ಕೆ ವಿದ್ಯುತ್ ಸಮಸ್ಯೆ ಕಾರಣ ಎಂದು ರೈತ ಮುಖಂಡ ಬಂಡೀರಾಮನಹಳ್ಳಿ ಲೋಕೇಶ್ ಆರೋಪಿಸಿದರು.
ಇಲ್ಲಿನ ಬೆಸ್ಕಾಂ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದರೂ ಕ್ರಮ ಕೈಗೊಂಡಿಲ್ಲ. ಮಕ್ಕಳ ಪರೀಕ್ಷಾ ಸಮಯದಲ್ಲಿ ವಿದ್ಯುತ್ ಸಮಸ್ಯೆ ಎದುರಾಗುತ್ತಿದ್ದು, ರೈತರಿಗೆ ಬೇಸಿಗೆಯಲಿ ಸಣ್ಣ ಪುಟ್ಟ ಬೆಳೆಗಳಿಗೆ ನೀರು ಹಾಯಿಸಲಾಗದೆ ಬೆಳೆಗಳು ಒಣಗುತ್ತಿವೆ. ಅಧಿಕಾರಿಗಳು ಅಸಮರ್ಪಕ ವಿದ್ಯುತ್ ಸರಬರಾಜಿನ ಬಗ್ಗೆ ಗಮನ ನೀಡಬೇಕು ಎಂದು ಗ್ರಾಪಂ ಸದಸ್ಯ ನರಸಿಂಹ ರೆಡ್ಡಿ ಒತ್ತಾಯಿಸಿದರು. ರೈತ ನಾಗರಾಜರೆಡ್ಡಿ, ಹಳೇಹಳ್ಳಿ ಶಿವಕುಮಾರ್, ರಮೇಶ್, ರವಿ ಹಾಗೂ ವಿವಿಧ ಗ್ರಾಮಗಳ ಗ್ರಾಮಸ್ಥರು, ರೈತರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

