ಮೊಯ್ಲಿ ಅಕ್ರಮ ಸಂತಾನವೇ ಎತ್ತಿನಹೊಳೆ
ಚಿಕ್ಕಬಳ್ಳಾಪುರ: ಕರಾವಳಿ ಭಾಗದ ಜನರ ವಿರೋಧ ಎದುರಿಸಬೇಕಾಗುತ್ತದೆ ಎಂಬ ದುರುದ್ದೇಶದಿಂದ ಡಾ. ಪರಮಶಿವಯ್ಯನವರ ವರದಿ ಮೂಲೆ ಗುಂಪು ಮಾಡಲು ಮುಂದಾಗಿರುವ ಎಂ. ವೀರಪ್ಪ ಮೊಯ್ಲಿ ಅಕ್ರಮ ಸಂತಾನವೇ ಎತ್ತಿನಹೊಳೆ ಯೋಜನೆ ಎಂದು ಸಿಪಿಎಂ ಅಭ್ಯರ್ಥಿ ಜಿ.ವಿ.ಶ್ರೀರಾಮರೆಡ್ಡಿ ಆರೋಪಿಸಿದರು.
ಎತ್ತಿನಹೊಳೆ ಯೋಜನೆಯಿಂದ ನೀರು ಬರಲ್ಲ, ಮೊಯ್ಲಿಗೆ ಪ್ರಾಮಾಣಿಕತೆಯಿದ್ದರೆ ಯೋಜನೆಗೆ ಸಂಬಂಧಿಸಿದಂತೆ ಡಿಪಿಆರ್( ವಿಸೃತ ಯೋಜನಾ ವರದಿ) ಅನ್ನು ತಂದು ಈ ಭಾಗದ ಜನರಿಗೆ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.
ತಾಲೂಕಿನ ಅಣಕನೂರು ಬಳಿ ಲೋಕಸಭಾ ಚುನಾವಣೆ ಪ್ರಚಾರದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಸಿಪಿಎಂ ಕಾರ್ಯಕರ್ತರ ಸಮಾವೇಶದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜನರ ದಾಹ ತೀರಿಸಲು ಎತ್ತಿನಹೊಳೆ ಯೋಜನೆಯಿಂದ 24 ಟಿಎಂಸಿ ನೀರನ್ನು ಒದಗಿಸಲಾಗುತ್ತದೆ ಎಂದು. ಹೇಳುತ್ತಿರುವುದು ಶುದ್ಧ ಸುಳ್ಳು. ದೇವನಹಳ್ಳಿಯಲ್ಲಿ ಕೈಗಾರಿಕೆಗೆ 3 ಟಿಎಂಸಿ ನೀರನ್ನು ನೀಡುವ ಪ್ರಮುಖ ಉದ್ದೇಶದಿಂದ ಯೋಜನೆಯನ್ನು ಕೈಗೊಳ್ಳಲಾಗುತ್ತಿದೆ. ಕೇವಲ 9 ಟಿಎಂಸಿ ನೀರು ಯೋಜನೆಯಿಂದ ಸಿಗುತ್ತದೆ ಎಂಬ ವಾಸ್ತವಾಂಶ ಮರೆಮಾಚಿ ಈ ಭಾಗದ ಜನರನ್ನು ಬಲಿಪಶುವನ್ನಾಗಿಸುವ ಹುನ್ನಾರವೇ ಆಗಿದೆ ಎಂದು 0ಆರೋಪಿಸಿದರು.
ಈಗಾಗಲೇ ಎತ್ತಿನಹೊಳೆ ಯೋಜನೆ ನಮ್ಮ ಸಾಧನೆ ಎಂದು ಹೇಳಿಕೊಳ್ಳುವ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಕರಾವಳಿ ಭಾಗದ ಜನರ ವಿರೋಧದ ಭಯದಿಂದ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುತ್ತಿದ್ದಾರೆ. ತಾನು ಸುಳ್ಳು ಭರವಸೆಗಳನ್ನು ಹೇಳುತ್ತೇನೆ ಎನ್ನುವುದನ್ನು ಆ ಭಾಗದ ಜನರು ಅರಿತಿರುವುದರಿಂದ ವೀರಪ್ಪ ಮೊಯ್ಲಿ ಹಿಂದಿನ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿಯೇ ಬಂದು ಇಲ್ಲಿ ಚುನಾವಣೆ ಎದುರಿಸಿದರು. ಇಲ್ಲೂ ಜನರ ನಿರೀಕ್ಷೆ ಹುಸಿ ಮಾಡಿ, ಇದೀಗ ಮತ್ತೊಮ್ಮೆ ಜನರಿಗೆ ಮೋಸ ಮಾಡಲು ಹೊರಟಿದ್ದಾರೆ ಎಂದರು. ಕೇಂದ್ರ ಸಚಿವರಾಗಿದ್ದ ಜೈಪಾಲರೆಡ್ಡಿ ಮುಖೇಶ್ ಅಂಬಾನಿಯ ಪರ ಕೆಲಸ ಮಾಡಲಿಲ್ಲ. ಅಲ್ಲದೇ ಅವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾದ ಕಾರಣ ಅವರನ್ನು ಆ ಸ್ಥಾನದಿಂದ ಕೆಳಗಿಸಿ ಮೊಯ್ಲಿಯವರಿಗೆ ಜವಾಬ್ದಾರಿ ನೀಡಲಾಯಿತು. ಮೊಯ್ಲಿ ಗ್ಯಾಸ್ ಕಂಪನಿಗಳು ನಷ್ಟದಲ್ಲಿವೆ ಎಂಬ ಸುಳ್ಳು ಮಾಹಿತಿ ನೀಡಿ ಮುಖೇಶ್ ಅಂಬಾನಿಗೆ 1 ಲಕ್ಷ ಕೋಟಿ ರು. ಲಾಭ ಬರುವ ರೀತಿಯಲ್ಲಿ ಅನುಕೂಲ ಮಾಡಿಕೊಟ್ಟರು. ಇದಕ್ಕೆ ಪ್ರಧಾನಿ ಆಕ್ಷೇಪ ವ್ಯಕ್ತಪಡಿಸಿದರೂ ತಲೆ ಕೆಡಿಸಿಕೊಳ್ಳದೇ ದೇಶಕ್ಕೆ ನಷ್ಟವನ್ನುಂಟು ಮಾಡಿದರು ಎಂದು ಆರೋಪಿಸಿದರು. ಸಿಪಿಎಂ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಪ್ರಸನ್ನ ಕುಮಾರ್, ಎಸ್. ವರಲಕ್ಷ್ಮೀ, ಮೀನಾಕ್ಷಿ ಸುಂದರಂ ಮಾತನಾಡಿದರು. ಮುಖಂಡರಾದ ಬಸವರಾಜ್, ಚಂದ್ರತೇಜಸ್ವಿ, ಗೋಪಾಲಗೌಡ, ಜಯರಾಮರೆಡ್ಡಿ, ಪ್ರಕಾಶ್, ಮುನಿವೆಂಕಟಪ್ಪ, ಸಿದ್ಧಗಂಗಪ್ಪ, ಗೋಪಿನಾಥ್, ಚನ್ನರಾಯಪ್ಪ, ಬಿ.ಎನ್. ಮುನಿಕೃಷ್ಣಪ್ಪ, ಮಧುಲತಾ ಇದ್ದರು.
ಸಿಪಿಎಂ ಅಭ್ಯರ್ಥಿ ನಾಮಪತ್ರ ಸಲ್ಲಿಕೆ
ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಿಪಿಎಂ ಅಭ್ಯರ್ಥಿಯಾಗಿ ಜಿ.ವಿ. ಶ್ರೀರಾಮರೆಡ್ಡಿ ಶನಿವಾರ ತಮ್ಮ ಉಮೇದುವಾರಿಕೆಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದರು. ನಂತರ ನಗರದ ಶಾಂತಿಸಾಗರ ಹೋಟೆಲ್ ಮುಂಭಾಗದಿಂದ ರ್ಯಾಲಿ ಮೂಲಕ ಬಿ.ಬಿ. ರಸ್ತೆ, ಶಿಡ್ಲಘಟ್ಟ ವೃತ್ತದಿಂದ ತಾಲೂಕಿನ ಅಣಕನೂರು ಬಳಿ ಆಯೋಜಿಸಿದ್ದ ಸಮಾವೇಶಕ್ಕೆ ಆಗಮಿಸಿದರು. ಕೆಂಪು ಅಂಗಿಗಳನ್ನು ಧರಿಸಿದ್ದ ಕಾರ್ಯಕರ್ತರು ಘೋಷಣೆಗಳೊಂದಿಗೆ ಸಾಗುತ್ತಿದ್ದ ದೃಶ್ಯ ಕೆಂಪುಸಾಗರದಂತಿತ್ತು.
ಸಿಪಿಎಂ ಅಭ್ಯರ್ಥಿ ಆಸ್ತಿ 67 ಲಕ್ಷ
ಚಿಕ್ಕಬಳ್ಳಾಪುರ: ಸಿಪಿಎಂ ಅಭ್ಯರ್ಥಿ ಜಿ.ವಿ. ಶ್ರೀರಾಮರೆಡ್ಡಿ ಒಟ್ಟು 14,20,730 ರು. ಮೌಲ್ಯದ ಚರಾಸ್ತಿ ಮತ್ತು 53 ಲಕ್ಷ ರು. ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ. ಉಡುಪಿ ಮಠದ ಅತಿಕ್ರಮ ಪ್ರವೇಶದ ಹಿನ್ನೆಲೆಯಲ್ಲಿ ಉಡುಪಿ ನಗರ ಠಾಣೆಯಲ್ಲಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಕಾರಾಗೃಹ ಶಿಕ್ಷೆಯೊಂದಿಗೆ ದಂಡನೀಯವಾಗಬಹುದಾದ ಯಾವುದೇ ಅಪರಾಧದ ಆಪಾದಿನಾಗಿರುತ್ತೇನೆ. ಇದನ್ನು ಪ್ರಶ್ನಿಸಿ ಕರ್ನಾಟಕ ಉಚ್ಚನ್ಯಾಯಾಲಯದಿಂದ ತಡೆಯಾಜ್ಞೆಯನ್ನೂ ತಂದಿದ್ದೇನೆ ಎಂದು ಸ್ವತಃ ಚುನಾವಣಾ ಆಯೋಗಕ್ಕೆ ನೀಡಿರುವ ಅಫಿಡವಿಟ್‌ನಲ್ಲಿ ಒಪ್ಪಿಕೊಂಡಿದ್ದಾರೆ. ಕೇವಲ ಬ್ಯಾಂಕಿನಲ್ಲಿ 17,280 ರು. ಮತ್ತು ಕೈನಲ್ಲಿ 28,450 ರು. ಇದೆ. ಇನ್ನೂ ಯಾವುದೇ ಕಂಪನಿಯಲ್ಲಿ ಷೇರು, ಠೇವಣಿ, ವಿಮೆಗಾಗಿ ಹಣವನ್ನಿಟ್ಟಿಲ್ಲ. 13.75 ಲಕ್ಷ ರು. ಮೌಲ್ಯದ ಟೊಯೋಟಾ ಇನ್ನೋವಾ ಕಾರು, ಚಿಂತಾಮಣಿಯ ಗುಂಟಿಪಲ್ಲಿ ಗ್ರಾಮದಲ್ಲಿ 3 ಎಕರೆ (ಪಿತಾರ್ಜಿತ), ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ 50 ಲಕ್ಷ ರು. ಮೌಲ್ಯದ 30, 60 ಚ.ಅಡಿ ವಿಸ್ತೀರ್ಣದ ಕೃಷಿಯೇತರ ಭೂಮಿಯನ್ನು ಹೊಂದಿದ್ದು ಬಾಗೇಪಲ್ಲಿಯ ಕಾರ್ಪೋರೇಷನ್ ಬ್ಯಾಂಕಿನಲ್ಲಿ 6.20 ಲಕ್ಷ ರು. ಕಾರು ಸಾಲವನ್ನು ಹೊಂದಿದ್ದು ಅಫಿಡವಿಟ್‌ನ ಪತ್ನಿ, ಅವಲಂಬಿತರ ಕಾಲಂ ಎಲ್ಲಾದರಲ್ಲೂ ಅನ್ವಯಿಸುವುದಿಲ್ಲ ಎಂದು ಬರೆಯಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

