ಡಾ.ಎಲ್.ಬಿ ಪ್ರಶಸ್ತಿ ಪ್ರದಾನ ಸಮಾರಂಭ
ಕಪ್ರ ವಾರ್ತೆ, ಕೋಲಾರ, ಮಾ.22
ಸಮಯ ಸಾಧಕ ರಾಜಕಾರಣ ವಿಜೃಂಭಿಸುತ್ತಿರುವುದರಿಂದ ಸೈದ್ಧಾಂತಿಕ ರಾಜಕಾರಣ ಬಲಿಷ್ಠಗೊಳಿಸುವ ಪ್ರಾಮಾಣಿಕ ಪ್ರಯತ್ನ ಸಮಾನ ಮನಸ್ಕರಿಂದ ಜರೂರಾಗಿ ಆಗಬೇಕಾಗಿದೆ ಎಂದು ಸಾಹಿತಿ ಡಾ. ಬರಗೂರು ರಾಮಚಂದ್ರಪ್ಪ ತಿಳಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಡಾ.ಎಲ್.ಬಸವರಾಜು ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಭೌತಸಂತ, ಲೇಖಕ ಡಾ.ಜಿ. ರಾಮಕೃಷ್ಣನವರಿಗೆ ಡಾ.ಎಲ್.ಬಿ. ಬಸವರಾಜು ಪ್ರಸಸ್ತಿ ಪ್ರದಾನ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿ, ಕಲುಷಿತಗೊಳ್ಳುತ್ತಿರುವ ರಾಜಕಾರಣಕ್ಕೆ ಪಕ್ಷಾಂತರವೂ ಕಾರಣವಾಗಿರುವುದರಿಂದ ಚುನಾವಣೆ ಸಂದರ್ಭದಲ್ಲಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಜಿಗಿಯುವ ರಾಜಕಾರಣಿಗಳಿಗೆ ಕಡಿವಾಣ ಹಾಕಲು ಪಕ್ಷಾಂತರ ನಿಷೇಧ ಕಾಯಿದೆಯನ್ನು ಬಲಗೊಳಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಡಾ.ಜಿ. ರಾಮಕೃಷ್ಣ ಪಕ್ಷಾಂತರಿಯೂ ಅಲ್ಲ, ತತ್ವಾಂತರಿ ಆಗಿರುವುದರಿಂದ ಸಾಹಿತ್ಯ ಲೋಕ ಮೆಚ್ಚುವ ರೀತಿಯಲ್ಲಿ ಕೆಲಸ ಮಾಡಿದ್ದಾರೆಂದು ಬಣ್ಣಿಸಿದರು.
ಅಭಿನಂದನೆ ಇಂದು ಅಪಮೌಲ್ಯಕ್ಕೊಳಗಾಗಿರುವುದರಿಂದ ಅಭಿನಂದನಾ ನುಡಿಗಳನ್ನಾಡಲು ಹಿಂಜರಿಯುವಂತಾಗಿದೆ. ಆದರೆ, ರಾಮಕೃಷ್ಣರವರಿಗೆ ನೀಡಿರುವ ಪ್ರಶಸ್ತಿಯ ಮೌಲ್ಯ ಹಾಗೂ ಉದ್ದೇಶ ಸಾರ್ಥಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಯಾವುದೇ ಪ್ರಶಸ್ತಿಯನ್ನು ಒಪ್ಪದ ರಾಮಕೃಷ್ಣರವರು ಡಾ.ಎಲ್.ಬಿ. ಬಸವರಾಜು ಪ್ರತಿಷ್ಠಾನ ನೀಡುತ್ತಿರುವ ಪ್ರಶಸ್ತಿ ಒಪ್ಪಿರುವುದು ಸಂತಸದ ವಿಚಾರ, ಇಂತಹ ವ್ಯಕ್ತಿಗೆ ಅಭಿನಂದನೆ ಸಲ್ಲಿಸುವುದು ನನ್ನ ಸೌಭಾಗ್ಯವಾಗಿದೆ ಎಂದರು. ಹುಸಿ ಬೌದ್ಧಿಕತೆಯ ಪ್ರಗತಿಯನ್ನು ರಾಮಕೃಷ್ಣರವರು ತೋರಿಸಿದವರಲ್ಲ. ಅವರ ದಿಟ್ಟ ಪ್ರಭಾವಕ್ಕೆ ತಾನು ಒಳಗಾಗಿದ್ದು ನಂಬಿದ ತತ್ವಕ್ಕೆ ಬದ್ಧರಾಗಿ ಬಂದವರು ಎಂದು ತಿಳಿಸಿದರು. ವ್ಯಂಗ್ಯ ಅವರ ಶಕ್ತಿ ಆದರೂ ಅದು ಯಾರಿಗೂ ನೋವುಂಟು ಮಾಡುವುದಲ್ಲ, ಅವರ ಮಾರ್ಕ್ಸ್ವಾದಿ ಚಿಂತನೆ ಏಕಮುಖಿಯಾಗಿರದೆ ಬಹುಮುಖಿಯಾದುದು ಎಂದರು. ಪ್ರಶಸ್ತಿ ನೀಡಿ ಮಾತನಾಡಿದ ಕಾಮರೂಪಿಯವರು, ಅವರ ಪುಸ್ತಕಗಳು ಓದಿದ ನನಗೆ ಹಿತವಾಗಿತ್ತು ಅವರಿಗೆ ಪ್ರಶಸ್ತಿ ನೀಡಿರುವ ಸಂಸ್ಥೆಗೆ ಧನ್ಯವಾದ ಮತ್ತು ತನಗೆ ಸಂತೋಷವಾಗಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ.ಜಿ. ರಾಮಕೃಷ್ಣರವರು, ದೇಶ ಬಲಿಷ್ಠವಾಗಬೇಕಾದರೆ ಅಂಬೇಡ್ಕರ್ ವಾದ ಮತ್ತು ಮಾರ್ಕ್ಸ್ವಾದ ಎರಡೂ ಸಮೀಕರಣಗೊಂಡಾಗ ಮಾತ್ರ ಸಾಧ್ಯವಾಗುತ್ತದೆ ಎಂದರು. ನಮ್ಮ ಮುಂದೆ ಪ್ರಸ್ತುತವಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರತಿಯೊಬ್ಬರು ನಿರಾಸೆಯಿಂದ ಹೊರ ಬಂದು ಜನ ಮತ್ತು ಜೀವನಕ್ಕೆ ಪೂರಕವಾದ ಸೈದ್ಧಾಂತಿಕ ಹೋರಾಟ ಪ್ರಬಲಗೊಳಿಸಿದಾಗ ಸಾಧನೆ ಮಾಡಲು ಸಾಧ್ಯವಾಗುತ್ತದೆ, ರಾಜಕಾರಣ ಜನರ ಸೇವೆಗಾಗಿ ಬಳಕೆ ಮಾಡಿದಾಗ ಪ್ರಜಾಪ್ರಭುತ್ವದ ಆಶಯಗಳು ಈಡೇರುತ್ತದೆ, ಈ ನಿಟ್ಟಿನಲ್ಲಿ ಸಾಹಿತಿಗಳು, ಲೇಖಕರು ಒಗ್ಗೂಡಿ ಕೆಲಸ ಮಾಡಬೇಕಾಗಿದೆ ಎಂದರು.
ಇದಕ್ಕೂ ಮುನ್ನ ಶೈಲಜ ಅವರ ಅಧ್ಯಕ್ಷತೆಯಲ್ಲಿ ಕನ್ನಡ ವಿಚಾರ ಸಾಹಿತ್ಯಕ್ಕೆ ಡಾ.ಜಿ.ಆರ್. ಕೊಡುಗೆ ಎಂಬ ವಿಚಾರದ ಬಗ್ಗೆ ಡಾ.ಚಂದ್ರಶೇಖರ ನಂಗಲಿ ಹಾಗೂ ಡಾ.ಜಿ.ಆರ್ ಅವರ ಭೌತವಾದಿ ತಾತ್ವಿಕ ಚಿಂತನೆಗಳು ಕುರಿತು ಕೆ.ಸಿ. ರಘು ಮಾತನಾಡಿದರು. 2ನೇ ಗೋಷ್ಠಿಯಲ್ಲಿ ಡಾ.ಜಿ.ಆರ್. ವ್ಯಕ್ತಿತ್ವ ಮತ್ತು ಹೋರಾಟದ ಬದುಕು ಕುರಿತು ಎನ್. ಗಾಯಿತ್ರಿ ಹಾಗೂ ಅನುವಾದಗಳು ಮತ್ತು ವ್ಯಕ್ತಿಚಿತ್ರಗಳು ಬಗ್ಗೆ ಡಾ. ರಾಮಲಿಂಗಪ್ಪ ಟಿ. ಬೇಗೂರು ವಿಚಾರ ಮಂಡಿಸಿದರು. ಸಿದ್ಧನಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ.ಬಿ. ಚಂದ್ರಮೋಹನ್ ವಹಿಸಿದ್ದರು. ಬಸವರಾಜು ಅವರ ಪತ್ನಿ ವಿಶಾಲಾಕ್ಷಿ ಬಸವರಾಜು, ಹೇಮಾರೆಡ್ಡಿ, ಪುರುಷೋತ್ತಮ್, ಜಿಲ್ಲಾ ಕಸಾಪ ಅಧ್ಯಕ್ಷ ಜೆ.ಜಿ. ನಾಗರಾಜ್ ಇದ್ದರು. ಡಾ.ಎಲ್. ಬಸವರಾಜು ಪ್ರತಿಷ್ಠಾನದ ಸದಸ್ಯ ಲಕ್ಷ್ಮೀಪತಿ ಕೋಲಾರ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

