ಡಿಸಿಸಿ ಬ್ಯಾಂಕ್ ಕಾಯಕಲ್ಪಕ್ಕೆ ಸಂಕಲ್ಪ
ಪಾ.ಶ್ರೀ. ಅನಂತರಾಮ್
ಕೋಲಾರ: ಹದಿನೈದು ವರ್ಷಗಳ ಕಾಲ ಗ್ರಹಣಕ್ಕೆ ಸಿಲುಕಿದ್ದ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿಗೆ ಹೊಸ ಆಡಳಿತ ಮಂಡಳಿ ರಚನೆಗೊಂಡ ನಂತರ ನವಚೇತನ ಕಂಡು ಬಂದಿದೆ.
ವೈದ್ಯನಾಥನ್ ವರದಿ ಅನುಷ್ಠಾನಕ್ಕೆ ಬಂದ ಮೇಲೆ 183 ವಿವಿಧ ಸಹಕಾರ ಸಂಘಗಳ ಪೈಕಿ 130 ಪುನಶ್ಚೇತನಗೊಂಡಿದ್ದರಿಂದ ಡಿಸಿಸಿ ಬ್ಯಾಂಕು ಬೆಂಕಿಯಲ್ಲಿ ಅರಳಿದ ಹೂವಿನಂತೆ ಕಂಗೊಳಿಸಲಾರಂಭಿಸಿತು. ಕಳೆದ ವರ್ಷವೇ ಬ್ಯಾಂಕಿನ ಆಡಳಿತ ಮಂಡಳಿಯ ಚುನಾವಣೆ ನಡೆಸಿತ್ತು, ಅಧ್ಯಕ್ಷರ ಚುನಾವಣೆಯು ನಡೆದಿತ್ತಾದರೂ ನ್ಯಾಯಾಲಯದ ಸೂಚನೆ ಮೇರೆಗೆ ಫಲಿತಾಂಶ ಪ್ರಕಟಿಸಲು ಸಾಧ್ಯವಾಗಿರಲಿಲ್ಲ. ಮಾ.3 ರಂದು ನಡೆದ ಮತ ಎಣಿಕೆಯ ನಂತರ ಲಾಟರಿಯಲ್ಲಿ ಅಧ್ಯಕ್ಷ ಸ್ಥಾನದ ಅದೃಷ್ಟ ಗಿಟ್ಟಿಸಿಕೊಂಡ ಬ್ಯಾಲಹಳ್ಳಿ ಎಂ. ಗೋವಿಂದಗೌಡರು ಆಡಳಿತ ಮಂಡಳಿಯ ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ ಬ್ಯಾಂಕಿಗೆ ಕಾಯಕಲ್ಪ ನೀಡಲು ಪ್ರಯತ್ನಿಸುತ್ತಿದ್ದಾರೆ.
ಕೇವಲ 20 ದಿನಗಳಲ್ಲಿ ಡಿಸಿಸಿ ಬ್ಯಾಂಕಿನಲ್ಲಿ ಅನೇಕ ಬದಲಾವಣೆಗಳು ಆಗಿವೆ. ರೈತರು, ಸಾರ್ವಜನಿಕರು ಮತ್ತೆ ಬ್ಯಾಂಕಿನ ಕಡೆಗೆ ತಲೆ ಹಾಕುವುದಕ್ಕೆ ಬೇಕಾದ ಎಲ್ಲಾ ರೀತಿಯ ವ್ಯವಸ್ಥೆಗಳು ಭರದಿಂದ ಸಾಗುತ್ತಿದೆ.
ಆಡಳಿತ ಮಂಡಳಿಯ ಆಶಯಗಳನ್ನು ಪೂರೈಸಲು ಬ್ಯಾಂಕಿನ ಎಂಡಿ ವೆಂಕಟೇಶಪ್ಪ ಹಾಗೂ ಸಿಬ್ಬಂದಿ ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿರುವುದರಿಂದ ಇನ್ನು ಕೆಲವೇ ದಿನಗಳಲ್ಲಿ ರಾಷ್ಟ್ರೀಕೃತ ಬ್ಯಾಂಕಿನಂತೆ ಎಲ್ಲಾ ರೀತಿಯ ಸೌಲಭ್ಯಗಳೊಂದಿಗೆ ಅಭಿವೃದ್ಧಿ ಸಾಧಿಸಲು ಡಿಸಿಸಿ ಬ್ಯಾಂಕು ಭರವಸೆ ಮೂಡಿಸುತ್ತಿದೆ.
ಗ್ರಾಹಕರಿಗೆ ವಿಮೆ: ಗ್ರಾಹಕರು ಠೇವಣಿ ಇಡುವ ಹಣಕ್ಕೆ ಭದ್ರತೆ ಒದಗಿಸಲು ವಿಮೆ ಸೌಲಭ್ಯ ಈ ಬ್ಯಾಂಕಿನಲ್ಲಿಂಟು. ಅಪೆಕ್ಸ್ಬ್ಯಾಂಕ್ ಸೇರಿದಂತೆ ಇನ್ನಿತರ ಕಡೆ 1.56 ಕೋಟಿ ರು. ಷೇರುಗಳಿವೆ. ಪ್ರಸ್ತುತ ಬ್ಯಾಂಕಿನ ಪರಿಸ್ಥಿತಿ ಸದೃಢವಾಗಿದ್ದು, ಆಡಳಿತ ಮಂಡಳಿ ಈಗ ಕೈಗೊಂಡಿರುವ ಕ್ರಮಗಳನ್ನು ಮುಂದುವರೆಸಿಕೊಂಡು ಹೋಗುವುದಲ್ಲದೆ, ಗ್ರಾಹಕರನ್ನು ಸೆಳೆಯಲು ಅಕರ್ಷಕವಾದ ಯೋಜನೆಗಳನ್ನು ಹಾಗೂ ಸರ್ಕಾರ ಘೋಷಣೆ ಮಾಡಿರುವ ರೀತಿಯಲ್ಲಿ ರೈತರಿಗೆ ಶೂನ್ಯ ಬಡ್ಡಿ ದರಕ್ಕೆ 3ಲಕ್ಷ ರುವರೆಗೆ ಸಾಲ ಸೌಲಭ್ಯ ಕಲ್ಪಿಸಿ ಅದೇ ರೀತಿ ಕಟ್ಟುನಿಟ್ಟಾಗಿ ವಸೂಲಿ ಮಾಡಲು ಬದ್ಧತೆ ಪ್ರದರ್ಶಿಸಿದಲ್ಲಿ ಡಿಸಿಸಿ ಬ್ಯಾಂಕಿನ ಗತವೈಭವ ಮತ್ತೆ ಹೆಚ್ಚುವುದರಲ್ಲಿ ಅನುಮಾನವಿಲ್ಲ.
ಶಿಸ್ತು, ಸೌಲಭ್ಯ: ಡಿಸಿಸಿ ಬ್ಯಾಂಕಿನ ಸಿಬ್ಬಂದಿಯಲ್ಲಿ ಶಿಸ್ತು ಮೂಡಿಸಲು ಬಯೋ ಮೇಟ್ರಿಕ್ ಹಾಜರಾತಿ ಪದ್ಧತಿಯನ್ನು ಅಳವಡಿಸಲಾಗಿದೆ. ಎಲ್ಲಾ ಸಿಬ್ಬಂದಿಗೆ ಸಮವಸ್ತ್ರ ನೀಡಲಾಗುತ್ತಿದೆ. ಬ್ಯಾಂಕಿನ ಸಿಬ್ಬಂದಿಗೆ ಬಿಎಸ್ಎನ್ಎಲ್ ಸಿಮ್ ಇರುವ ಮೊಬೈ ಕೊಡಿಸಲಾಗಿದೆ.
ಶೀಘ್ರವೇ ಎಟಿಎಂ ಸೌಲಭ್ಯ ಒದಗಿಸಲು ಪ್ರಯತ್ನ ನಡೆಯುತ್ತಿದೆ. ಡಿಸಿಸಿ ಬ್ಯಾಂಕಿನ ಅಧ್ಯಕ್ಷರಿಗೆ ಕಾರು ಒದಗಿಸಲು ಅಪೆಕ್ಸ್ಬ್ಯಾಂಕ್ 20 ಲಕ್ಷ ರು.ಸಾಲ ನೀಡಿದೆ. ಡಿಸಿಸಿ ಬ್ಯಾಂಕಿನ ಹೊಸ ಆಡಳಿತ ಮಂಡಳಿಯ ಆಹ್ವಾನ ಹಾಗೂ ಭರವಸೆ ಮೇರೆಗೆ ಕೋಚಿಮುಲ್ ಡಿಸಿಸಿ ಬ್ಯಾಂಕಿನಲ್ಲಿ 1.50 ಕೋಟಿ ರೇವಣಿ ಇಟ್ಟಿದೆ. ಆಡಳಿತ ಮಂಡಳಿಯ ಕಟ್ಟು ನಿಟ್ಟಿನ ಕ್ರಮಗಳಿಂದಾಗಿ ಪ್ರಸ್ತುತ ಬ್ಯಾಂಕಿನಲ್ಲಿ ಸಾಲ ವಸೂಲಾತಿ ಶೇ.94 ದಾಟಿದೆ. ಗೋಲ್ಡನ್ ಸಾಲ ವಸೂಲಾತಿ ಶೇ.100 ಹಾಗೂ ಸ್ವಸಹಾಯ ಸಂಘಗಳಿಗೆ ನೀಡಿದ ಸಾಲ ವಸೂಲಾತಿಯಲ್ಲಿ ಶೇ.94 ಗುರಿ ಸಾಧನೆ. ಆಡಳಿತ ಮಂಡಳಿ ಇದೇ ರೀತಿ ಕೆಲಸ ಮಾಡಿದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಉತ್ತಮ ಸೇವೆ ನೀಡಲು ಸಾಧ್ಯ.
ಆನ್ಲೈನ್ ಬ್ಯಾಂಕಿಂಗ್
ಡಿಸಿಸಿ ಬ್ಯಾಂಕಿನ ವ್ಯಾಪ್ತಿಗೆ ಬರುವ ಒಟ್ಟು 13 ಬ್ಯಾಂಕುಗಳನ್ನು ಆನ್ ಲೈನ್ ಬ್ಯಾಂಕಿಂಗ್ ಆಗಿ ಮಾರ್ಪಡಿಸಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆ ನಡೆದಿದೆ, ಸಿಬ್ಬಂದಿಗೆ ಕಂಪ್ಯೂಟರ್ ತರಬೇತಿ ನೀಡಲು ಪರಿಣಿತರನ್ನು ನೇಮಿಸಿಕೊಳ್ಳಲಾಗಿದೆ.
ಪ್ರಸ್ತುತ ಕೋಲಾರ ಮತ್ತು ಚಿಕ್ಕಬಳ್ಳಾಪುರ ಎರಡೂ ಜಿಲ್ಲೆ ಸೇರಿದಂತೆ ಡಿಸಿಸಿ ಬ್ಯಾಂಕಿನ ವ್ಯಾಪ್ತಿಗೆ ಸಾಲ ಪಡೆದವರು ಮತ್ತು ಠೇವಣಿ ಇಟ್ಟಿರುವ ಒಟ್ಟು 83 ಸಾವಿರ ಖಾತೆದಾರರು ಇದ್ದಾರೆ. ಎರಡೂ ಜಿಲ್ಲೆಗಳ ಸಹಕಾರ ಬ್ಯಾಂಕುಗಳಲ್ಲಿ ಒಟ್ಟು 161 ಮಂದಿ ಸಿಬ್ಬಂದಿ ಇರಬೇಕಾಗಿತ್ತು. ಪ್ರಸ್ತುತ 35 ಮಂದಿ ಹಿರಿಯ ಸಹಾಯಕರು, 5 ಕಿರಿಯ ಸಹಾಯಕರು, 4 ಮಂದಿ ವ್ಯವಸ್ಥಾಪಕರು, 3 ಮಂದಿ ಚಾಲಕರು, 9 ಮಂದಿ ಜವಾನರು ಸೇರಿದಂತೆ 59 ಮಂದಿ ಸಿಬ್ಬಂದಿ ಇದ್ದಾರೆ.
ಬ್ಯಾಂಕಿನಲ್ಲಿ ಸಾರ್ವಜನಿಕರ 50.05 ಕೋಟಿ ಠೇವಣಿ ಇದೆ, ಕಿಸಾನ್ ಕ್ರೆಡಿಟ್ ಕಾರ್ಡ್ಗಳನ್ನು ಹೊಂದಿರುವ ರೈತರಿಗೆ 35 ಕೋಟಿ ಹಾಗೂ ಚಿನ್ನದ ಮೇಲೆ 12 ಕೋಟಿ ರು. ಸಾಲ ನೀಡಲಾಗಿದೆ. 16.41 ಕೋಟಿ ರು.ಗಳನ್ನು ಅಪೆಕ್ಸ್ಬ್ಯಾಂಕಿನಲ್ಲಿ ಹೂಡಿಕೆ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

