ನೋಡ ಬನ್ನಿ ಟೇಕಲ್ ಸಂತೆಯ ಸೊಬಗು!
ಯುಗಾದಿಗೆ 3 ತಿಂಗಳ ಮೊದಲೇ ಆಗಮಿಸುವ ಬಟ್ಟೆ ವ್ಯಾಪಾರಿಗಳು
ಮೂಲ ಸೌಕರ್ಯಗಳ ಕೊರತೆಯಿಂದ ನಲುಗುತ್ತಿರುವ ಸಂತೆ ಮೈದಾನ
ಟಿ ಟೇಕಲ್ ಲಕ್ಷ್ಮೀಶ್
ಟೇಕಲ್: ಗ್ರಾಮೀಣ ಸೊಗಡಿನ ಒಂದು ಬಾಗವೇ ಸಂತೆಗಳು ಎನ್ನಬಹುದು. ಆದರೆ ಜಾಗತೀಕರಣದ ಭರಾಟೆಯಲ್ಲಿ ಹಲವಾರು ಮಾದರಿಯ ಮಾಲ್ಗಳು ನಗರಗಳಾದ್ಯಂತ ನಾಯಿಕೊಡೆಗಳಂತೆ ತಲೆ ಎತ್ತಿದ ಪರಿಣಾಮ ಸಣ್ಣ ವ್ಯಾಪಾರಸ್ಥರು ಮೂಲೆಗುಂಪಾಗುವಂತಾಯಿತು. ಈ ಮಾಲ್ಗಳ ಸಂಸ್ಕೃತಿ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸಿದ ಪರಿಣಾಮ ಸಂತೆಗಳು ತನ್ನ ಅಸ್ಥಿತ್ವ ಕಳೆದುಕೊಳ್ಳುತ್ತಿವೆ ಎನ್ನಬಹುದು.
ಆದರೆ ಇದಕ್ಕೆ ಅಪವಾದ ಎನ್ನುವಂತೆ ಇಲ್ಲಿನ ಗ್ರಾಮೀಣ ಸಂತೆಗೆ ಪ್ರತಿಸಲದಂತೆ ಯುಗಾದಿ ಹಬ್ಬದ ಸಂಭ್ರಮಕ್ಕೆ ಫೆಬ್ರವರಿಯಿಂದಲೇ 100 ಕ್ಕೂ ಹೆಚ್ಚು ಬಟ್ಟೆ ಅಂಗಡಿಗಳು ಇತರೆ ರಾಜ್ಯಗಳಿಂದ ಬಂದು ಗ್ರಾಹಕರ ಕೈಗೆಟಕುವ ಬೆಲೆಗೆ ಬಟ್ಟೆ ಒದಗಿಸುವುದು ಇಲ್ಲಿ ಪ್ರಮುಖವಾಗಿದೆ.
ಕೆ.ಜಿ. ಹಳ್ಳಿ ಗ್ರಾಪಂ ವ್ಯಾಪ್ತಿಯ ಟೇಕಲ್ ಸಂತೆ ಪ್ರತಿ ಸೋಮವಾರ ನಡೆಯುತ್ತದೆ. ಮುಂಜಾನೆ 5 ಗಂಟೆಯಿಂದ 7 ಗಂಟೆಯವರೆಗೂ ತರಕಾರಿ ಸಂತೆ ನಂತರ ವಾಣಿಜ್ಯ ವ್ಯವಹಾರಗಳು, ಬಿಡಿ ತರಕಾರಿ, ದವಸ ಧಾನ್ಯ ಸಂತೆಯಲ್ಲಿ ಲಭ್ಯ. ರೈಲು ನಿಲ್ದಾಣದ ಸಮೀಪದಲ್ಲೆ ಸಂತೆ ಮೈದಾನವಿರುವುದರಿಂದ ಬೆಂಗಳೂರು, ಮಾಲೂರು, ಕೆ.ಜಿ.ಎಫ್, ಬಂಗಾರಪೇಟೆಯಿಂದ ಬರುವ ಜನರು ಈ ಸಂತೆಯಲ್ಲಿ ವ್ಯಾಪಾರ ಮಾಡಿ ಹೋಗುವುದು ವಾಡಿಕೆ. ತಮಿಳುನಾಡಿನ ಹೊಸೂರು, ಈರೋಡ್, ಕೊಯಮತ್ತೂರು, ಕೃಷ್ಣಗಿರಿ, ಸೇಲಂ, ಆಂಧ್ರಪ್ರದೇಶದ ಕುಪ್ಪಂ ಮುಂತಾದ ಸ್ಥಳಗಳಿಂದ ಜನರು ವಿವಿಧ ರೀತಿಯ ಬಟ್ಟೆಯನ್ನು ಮೂರು ನಾಲ್ಕು ತಿಂಗಳ ಹಿಂದೆಯೇ ತಂದು ಪ್ರತಿ ಸೋಮವಾರ ಸಂತೆ ಮೈದಾನದಲ್ಲಿ ಚಿಕ್ಕ ಪುಟ್ಟ ಬಿಡಾರ ಹೂಡಿ ಬಟ್ಟೆ ವ್ಯಾಪಾರ ಮಾಡುತ್ತಾರೆ.
ಸರಿಯಾದ ವ್ಯವಸ್ಥೆ ಇಲ್ಲ: ಸಂತೆ ಮೈದಾನಕ್ಕೆ ಮೂರು ಷೆಡ್ಗಳಿದ್ದು ಗ್ರಾಪಂನಿಂದ ಇದಕ್ಕೆ ಯಾವುದೇ ಮೂಲ ಸೌಕರ್ಯಗಳು ಇಲ್ಲ. ಸ್ವಚ್ಛತೆ, ಕುಡಿಯುವ ನೀರು ಮುಂತಾದ ಸೌಲಭ್ಯಗಳಿಲ್ಲದೆ ಪರದಾಡುವಂತಾಗಿದೆ. ಮುಖ್ಯವಾಗಿ ಮನೆಗಳ ಮಧ್ಯೆ ಸಂತೆಗೆ ಇರುವ ದಾರಿಯ ಇಕ್ಕೆಲಗಳಲ್ಲಿ ಬಟ್ಟೆ ಅಂಗಡಿಗಳನ್ನು ಇಟ್ಟು ಮಾರಾಟ ಮಾಡುವುದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದೆ. ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದಕ್ಕೆ ಸರಿಯಾದ ವ್ಯವಸ್ಥೆ ಮಾಡದಿರುವುದು ವ್ಯಾಪಾರಸ್ಥರಲ್ಲಿ ನೋವಿನ ಸಂಗತಿಯಾಗಿದೆ. ಈ ಬಗ್ಗೆ ಗ್ರಾಪಂ ಅಧಿಕಾರಿಗಳು ಕ್ರಮ ಕೈಗೊಂಡರೆ ಟೇಕಲ್ ಸಂತೆ ಜಿಲ್ಲೆಯಲ್ಲಿಯೇ ಪ್ರಥಮ ಎನ್ನಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

