ಕೋಲಾರ

ಶಿಕ್ಷಕಿ ಅಮಾನತು

Published On :

ಗುಡಿಬಂಡೆ: ಶಾಲೆಯಲ್ಲಿ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕಲಿಸಬೇಕಾದ ಜವಾಬ್ದಾರಿ ಶಿಕ್ಷಕರದ್ದು. ಆದರೆ ಅದನ್ನು ಮರೆತ ಶಿಕ್ಷಕಿಯೊಬ್ಬರು, ತಾವು ಕೆಲಸ ನಿರ್ವಹಿಸುತ್ತಿದ್ದ ಶಾಲೆಯ ಮುಖ್ಯ ಶಿಕ್ಷಕರನ್ನು ವಿನಾಕಾರಣ ನಿಂದಿಸಿದ ಹಿನ್ನೆಲೆಯಲ್ಲಿ ಅಮಾನತು ಶಿಕ್ಷೆಗೆ ಒಳಗಾದ ಘಟನೆ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ನಡೆದಿದೆ.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಎಸ್. ಪದ್ಮ ಎಂಬುವರು ಫೆ. 12 ರಂದು ಬೆಳಿಗ್ಗೆ ತಮ್ಮ ಶಾಲಾ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗ, ಅದೇ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿರುವ ಜಿ.ಎಲ್. ಸುಧಾ ಎಂಬಾಕೆ ಕಚೇರಿ ಒಳಗೆ ಧಾವಿಸಿ ಅಂಗವಿಕಲೆಯಾದ ಮುಖ್ಯ ಶಿಕ್ಷಕಿಯನ್ನು ಕಾರಣವಿಲ್ಲದೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ತನ್ನ ಪಾದರಕ್ಷೆಯಿಂದ ಮುಖ ಮತ್ತು ತಲೆಗೆ ಥಳಿಸಿ ಹೋಗಿದ್ದರು ಎನ್ನಲಾಗಿದೆ.
ಏಕಾಏಕಿ ನಡೆದ ಹಲ್ಲೆಯಿಂದ ತಲ್ಲಣಗೊಂಡ ಮುಖ್ಯ ಶಿಕ್ಷಕಿ ಸಹೋದ್ಯೋಗಿಗಳಿಗೆ ತಿಳಿಸಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ತೆರಳಿ ಹಲ್ಲೆ ನಡೆಸಿದ ಶಿಕ್ಷಕಿ ವಿರುದ್ಧ ಲಿಖಿತ ದೂರು ನೀಡಿದ್ದರು. ಈ ಸಂಬಂಧ ಪರಿಶೀಲನೆ ನಡೆಸಿದ ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಸಿ. ರವಿ ಕುಮಾರ್, ಶಾಲೆ ಮತ್ತು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಈಕೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಕೋರಿ ಮೇಲಧಿಕಾರಿಗಳಿಗೆ ವರದಿ ನೀಡಿದ್ದರು.
ನಂತರ ಶಿಕ್ಷಕಿಯನ್ನು ಪಟ್ಟಣದ ಬೇರೊಂದು ಶಾಲೆಗೆ ನಿಯೋಜನೆ ಮಾಡಲಾಗಿತ್ತು. ಆದರೆ ಈಕೆ ಅಲ್ಲಿನ ಶಾಲಾ ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರನ್ನು ಕೆಟ್ಟ ಭಾಷೆ ಬಳಸಿ ನಿಂದಿಸಿ ತಮ್ಮ ದುರ್ನಡತೆ ಮುಂದುವರೆಸಿದ್ದರು. ಹೀಗಾಗಿ ಅಲ್ಲಿನ ಮುಖ್ಯ ಶಿಕ್ಷಕಿ ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದರು ಎನ್ನಲಾಗಿದೆ. ಇವುಗಳ ಆಧಾರದ ಮೇರೆಗೆ ಅಧಿಕಾರಿ ನೀಡಿದ್ದ ವರದಿ ಮತ್ತು ಶಿಕ್ಷಕರು ಸಲ್ಲಿಸಿದ್ದ ದೂರುಗಳನ್ನು ಪರಿಶೀಲಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಅಜಿತ್ ಪ್ರಸಾದ್, ಶಿಕ್ಷಕಿ ಜಿ.ಎಲ್. ಸುಧಾರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಿ ಆಜ್ಞೆ ಹೊರಡಿಸಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.