ನಾಮಪತ್ರಕ್ಕೆ ಕಡೆ ದಿನ ಇಂದು
ಕೋಲಾರ: ಏ.17 ರಂದು ನಡೆಯುವ ಲೋಕಸಭಾ ಚುನಾವಣೆಗೆ ಉಮೇದುವಾರಿಕೆ ಸಲ್ಲಿಕೆಗೆ ಮಾ.26ರಂದು ಕಡೆ ದಿನವಾಗಿದ್ದು ಮತ್ತಷ್ಟು ನಾಮಪತ್ರಗಳು ಸಲ್ಲಿಕೆ ಆಗುವ ಸಾಧ್ಯತೆಗಳಿವೆ.
ಜೆಡಿಎಸ್ ಮುಖಂಡ ಜಿಪಂ ಸದಸ್ಯ ಎಸ್.ಬಿ. ಮುನಿವೆಂಕಟಪ್ಪ ಹಾಗೂ ಬೆಂಗಳೂರು ವಿವಿ ಪ್ರೊ. ಮೈಲಾರಪ್ಪ, ಬಿಎಸ್ಪಿ ಸೇರಿದಂತೆ ಇನ್ನಿತರರು ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ.
ಈಗಾಗಲೇ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಸಮಾಜವಾದಿ ಪಾರ್ಟಿ, ಅಮ್ ಆದ್ಮಿ ಪಕ್ಷ ಸೇರಿದಂತೆ ಒಟ್ಟು 12 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಟಿಕೆಟ್ ಸಿಗದ ಹಿನ್ನಲೆಯಲ್ಲಿ ಮುನಿಸಿಕೊಂಡಿರುವ ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯನವರು ತಮ್ಮ ಮಗ ಕೆ.ವಿ. ಸ್ವರೂಪ್ ಅವರನ್ನು ಚುನಾವಣಾ ಕಣಕ್ಕೆ ಇಳಿಸಲು ಉದ್ದೇಶಿಸಿದ್ದರಾದರೂ ಈ ಸಂಬಂಧ ಮಂಗಳವಾರ ಕೋಲಾರದಲ್ಲಿ ನಡೆದ ತಮ್ಮ ಬೆಂಬಲಿಗರ ಸಭೆಯಲ್ಲಿ ಅನೇಕರು ಪಕ್ಷ ಬಿಡದಂತೆ, ಮಗನಿಂದ ನಾಮಪತ್ರ ಸಲ್ಲಿಕೆಗೆ ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಬಿಜೆಪಿಯಲ್ಲೇ ಇದ್ದು ಅಭ್ಯರ್ಥಿ ನಾರಾಯಣಸ್ವಾಮಿ ಪರ ಕೆಲಸ ಮಾಡುವುದಾಗಿ ಪ್ರಕಟಿಸಿ ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಪಕ್ಷ ವಿರೋಧಿ ಚಟುವಟಿಕೆ ನಡೆಸಿದರೆ ಇನ್ನೂ ನಾಲ್ಕು ವರ್ಷಗಳ ಕಾಲವಿರುವ ವಿಧಾನ ಪರಿಷತ್ ಸದಸ್ಯತ್ವಕ್ಕೆ ಕುತ್ತು ಬರುತ್ತದೆ, ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಬಂದರೆ ಮತ್ತೆ ಯಾವುದೇ ಸ್ಥಾನ-ಮಾನ ಸಿಗಲಾರದು, ಬಿಜೆಪಿಯಲ್ಲಿ ಇದ್ದು ಗುರಿ ಸಾಧಿಸುವಂತೆ ಬೆಂಬಲಿಗರು ನೀಡಿದ ಸಲಹೆಗೆ ವೀರಯ್ಯ ತಲೆ ಬಾಗಿದ್ದಾರಲ್ಲದೆ, ನಾರಾಯಣಸ್ವಾಮಿ ಪರ ಕೆಲಸ ಮಾಡುವಂತೆ ಬೆಂಬಲಿಗರಿಗೆ ಸೂಚಿಸಿರುವುದರಿಂದ ಬಿಜೆಪಿಯಲ್ಲಿ ಬಂಡಾಯ ಶಮನವಾದಂತಾಗಿದೆ.
ಇನ್ನು ಜೆಡಿಎಸ್ನಿಂದ ಸ್ಪರ್ಧಿಸಲು ಕೆ. ಕೇಶವ ಅವರಿಗೆ ಟಿಕೆಟ್ ನೀಡಿರುವುದರಿಂದ ಅಸಮಾಧಾನಗೊಂಡಿರುವ ಜಿಪಂ ಸದಸ್ಯ ಎಸ್.ಬಿ. ಮುನಿವೆಂಕಟಪ್ಪ ಹಾಗೂ ಬೆಂಗಳೂರು ವಿವಿಯ ಪ್ರೊ. ಮೈಲಾರಪ್ಪನವರು ನಾಮಪತ್ರ ಸಲ್ಲಿಸಲು ಬಯಸಿದ್ದಾರೆ.
ಕೇಶವ ಅವರು ಸಲ್ಲಿಸಿರುವ ಜಾತಿ ಪ್ರಮಾಣ ಪತ್ರದ ಬಗ್ಗೆ ಗೊಂದಲಗಳು ಇರುವುದರಿಂದ ನಾಮಪತ್ರ ಪರಿಶೀಲನೆ ಮಾಡುವ ಸಂದರ್ಭದಲ್ಲಿ ರದ್ದು ಆದಲ್ಲಿ ಜೆಡಿಎಸ್ನಿಂದ ಅಭ್ಯರ್ಥಿಗಳು ಇಲ್ಲದಂತಾಗುತ್ತದೆ, ಎಸ್.ಬಿ. ಮುನಿವೆಂಕಟಪ್ಪ ಇಲ್ಲವೇ ಮೈಲಾರಪ್ಪ ಇಬ್ಬರಲ್ಲಿ ಒಬ್ಬರು ಸ್ಪರ್ಧಿಸಿದರೂ ಪಕ್ಷದ ಮಾರ್ಯದೆ ಉಳಿಸಿಕೊಳ್ಳಬಹುದು ಎಂಬ ಕಾರ್ಯಕರ್ತರ ಅಭಿಪ್ರಾಯದ ಹಿನ್ನಲೆಯಲ್ಲಿ ಈ ಇಬ್ಬರು ನಾಳೆ ನಾಮಪತ್ರ ಸಲ್ಲಿಕೆ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ಕೆ. ಕೇಶವ ಅವರು ತನ್ನ ಜಾತಿ ಪ್ರಮಾಣ ಪತ್ರದ ಬಗ್ಗೆ ಎದ್ದಿರುವ ಗೊಂದಲಗಳ ನಿವಾರಣೆಗಾಗಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ತನ್ನ ಪತ್ನಿಯನ್ನು ಕಣಕ್ಕೆ ಇಳಿಸುವ ಕುರಿತು ಗಂಭೀರ ಚಿಂತನೆ ಮಾಡಿದ್ದರೂ ಪಕ್ಷದ ವರಿಷ್ಠರು ಧೈರ್ಯ ಹೇಳಿರುವ ಹಿನ್ನಲೆಯಲ್ಲಿ ಮಾ.26ರ ಮಧ್ಯಾಹ್ನ 1 ಗಂಟೆಯವರೆಗೆ ಕಾದು ನೋಡಲು ತೀರ್ಮಾನಿಸಿದ್ದಾರೆ. ಕೇಶವ ಅವರ ಜಾತಿ ಪ್ರಮಾಣ ಪತ್ರ ಈಗ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳ ಅಂಗಳ ತಲುಪಿದ್ದು ಎಲ್ಲರ ಚಿತ್ತ ಜಿಲ್ಲಾಧಿಕಾರಿ ಡಿ.ಕೆ. ರವಿಯವರತ್ತ ನೆಟ್ಟಿದೆ.
ಖಡಕ್ ಅಧಿಕಾರಿ ಆಗಿರುವ ಡಿ.ಕೆ. ರವಿಯವರು ಕಾನೂನು ಪ್ರಕಾರವೇ ತಮ್ಮ ತೀರ್ಪು ನೀಡಲಿರುವುದರಿಂದ ಕೇಶವ ಅವರ ಬೆಂಬಲಿಗರಲ್ಲಿ ನಡುಕ ಉಂಟಾಗಿದ್ದರೆ, 1994ರಲ್ಲಿ ಮಾಲೂರು ತಹಸೀಲ್ದಾರ್ ಅವರು ನೀಡಿರುವ ಜಾತಿ ಪ್ರಮಾಣ ಪತ್ರವನ್ನೇ ಅಂಗೀಕರಿಸುವ ಬಗ್ಗೆ ಜೆಡಿಎಸ್ ಮುಖಂಡರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏನೇ ಆದರೂ ಜೆಡಿಎಸ್ ಅಭ್ಯರ್ಥಿಯ ಬಗ್ಗೆ ಇರುವ ಜಿಜ್ಞಾಸೆ ಮಾ.28ರಂದು ಬಗೆಹರಿಯುವ ಲಕ್ಷಣಗಳಿದ್ದು ಅಲ್ಲಿಯವರೆಗೆ ಪಕ್ಷದ ಕಾರ್ಯಕರ್ತರು,ಸಾರ್ವಜನಿಕರು ಚಾತಕ ಪಕ್ಷಿಯಂತೆ ಕಾಯುವುದು ಅನಿವಾರ್ಯವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

