ಕೋಲಾರ

ಕಣದಲ್ಲಿ ಎಚ್‌ಡಿಕೆ, ಬಚ್ಚೇಗೌಡ

Published On :

ಡಿಕೆ ಸಹೋದರರಿಗೆ ಹೆದರಿ ಪಲಾಯನ ಮಾಡಿದ ಕುಮಾರಸ್ವಾಮಿ: ಬಚ್ಚೇಗೌಡ
ಜನರ ಒತ್ತಡಕ್ಕೆ ಮಣಿದಿದ್ದೇನೆ ಯಾರಿಗೂ ಭಯಪಟ್ಟಿಲ್ಲ: ಕುಮಾರಸ್ವಾಮಿ ಸ್ಪಷ್ಟನೆ

ಚಿಕ್ಕಬಳ್ಳಾಪುರ: ಕೊನೆಯವರೆಗೂ ಕ್ಷೇತ್ರದ ಅಭ್ಯರ್ಥಿ ಘೋಷಣೆ ವಿಷಯದಲ್ಲಿ ಕುತೂಹಲ ಕಾಪಾಡಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್ ಪಕ್ಷದಿಂದ ಮತ್ತು ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ ತಮ್ಮ ನಾಮಪತ್ರಗಳನ್ನು ಬುಧವಾರ ಜಿಲ್ಲಾ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದರು.
ಇಬ್ಬರು ಅಭ್ಯರ್ಥಿಗಳು ಪೊಲೀಸ್ ಮತ್ತು ಅಧಿಕಾರಿಗಳಿದ್ದರೂ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ನಾಮಪತ್ರ ಸ್ವೀಕರಿಸುವ ಜಿಲ್ಲಾಡಳಿತದ ಕಚೇರಿ  ಆವರಣದಲ್ಲಿಯೇ ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಮಾಡಿದ ನಂತರ ಪ್ರತ್ಯೇಕವಾಗಿ ರ್ಯಾಲಿಗಳನ್ನು ನಡೆಸುವ ಮೂಲಕ ಚುನಾವಣಾ ರಣ ಕಹಳೆ ಊದಿದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಸಂಸದ ಡಿ.ಕೆ. ಸುರೇಶ್ ಅಣ್ಣ ತಮ್ಮಂದಿರನ್ನು ಸೋಲಿಸಲಾಗದೇ ಕುಮಾರಸ್ವಾಮಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಅವರೊಬ್ಬ ಪಲಾಯನವಾದಿ ಎಂದು ಬಚ್ಚೇಗೌಡ ಟೀಕಿಸಿದರೆ, ನಾನು ಹೇಡಿಯಲ್ಲ,ದೇವೇಗೌಡರ ಮಗ. ಯಾವ ಅಣ್ಣ ತಮ್ಮಂದಿರಿಗೂ ಭಯ ಬಿದ್ದು ಇಲ್ಲಿಗೆ ಬಂದಿಲ್ಲ. ಅಸಲಿಗೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ಹೊಂದಿರಲಿಲ್ಲ. ಆದರೆ, ಮೈಸೂರು ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ತಾವು ಸ್ಪರ್ಧಿಸಲೇಬೇಕೆಂದು ಕಾರ್ಯಕರ್ತರು ತೀವ್ರ ಒತ್ತಡ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಜನರಿಗೆ ತಲೆಬಾಗಿ ಇಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ನನಗೇನು ಬಚ್ಚೇಗೌಡರ ಸರ್ಟಿಫಿಕೆಟ್ ಬೇಕಾಗಿಲ್ಲ ಎಂದು ಕುಮಾರಸ್ವಾಮಿ ಪ್ರತಿ ಟೀಕೆ ಮಾಡಿದರು.
ಇದಕ್ಕೂ ಮುನ್ನಾ ಬಿ.ಎನ್. ಬಚ್ಚೇಗೌಡ ನಗರದ ದೇವಿ ಪ್ಯಾಲೇಸ್‌ನಿಂದ ತಮ್ಮ ಅಪಾರ ಬೆಂಬಲಿಗರೊಂದಿಗೆ ರ್ಯಾಲಿ ನಡೆಸಿದರು. ನಾಮಪತ್ರ ಸಲ್ಲಿಸಿದ ನಂತರ ಎಸ್‌ಎಲ್‌ವಿ ಕಲ್ಯಾಣ ಮಂಟಪದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾತನಾಡಿದರು. ದೇಶದಲ್ಲಿ ನರೇಂದ್ರ ಮೋದಿ ಅಲೆ ಬಿರುಗಾಳಿಯಂತೆ ಬೀಸುತ್ತಿದೆ. ಜನರು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಭ್ರಷ್ಟಾಚಾರ, ಹಗರಣ, ಜನ ವಿರೋಧಿ ನೀತಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿಗೆ ಎಲ್ಲೆಡೆ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ದೇಶವನ್ನು ಉಳಿಸಲು ನರೇಂದ್ರ ಮೋದಿಯೇ ಪ್ರಧಾನಿಯಾಗಬೇಕೆಂಬ ಭಾವನೆ ಹೊಂದಿರುವ ಹಿನ್ನೆಲೆಯಲ್ಲಿ ನನ್ನ ಗೆಲುವು ಖಚಿತ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಮತ್ತೊಂದೆಡೆ ಮಧ್ಯಾಹ್ನ 12.30 ಕ್ಕೆ ರಾಹುಕಾಲದಲ್ಲಿ ಕುಮಾರಸ್ವಾಮಿ ಜಿಲ್ಲಾಡಳಿತ ಭವನಕ್ಕೆ ಆಗಮಿಸಿದರು. ಮಧ್ಯಾಹ್ನ ಒಂದು ಗಂಟೆಗೆ ಜಿಲ್ಲಾ ಚುನಾವಣಾಧಿಕಾರಿಗಳಿಗೆ ತಮ್ಮ ನಾಮಪತ್ರ ಸಲ್ಲಿಸಿ ಹೊರ ಬಂದರು. ಇವರ ಜೊತೆಯಲ್ಲಿ ಮಾಜಿ ಸಚಿವ ಜಮೀರ್ ಅಹಮದ್, ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ ಇದ್ದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಚಿಕ್ಕಬಳ್ಳಾಪುರಕ್ಕೂ ನನಗೂ ಅವಿನವಭಾವ ಸಂಬಂಧವಿದೆ. ನಾನು ಹೊರಗಿನವನಲ್ಲ. ನನ್ನ ಹೆಂಡತಿ ಚಿಕ್ಕಬಳ್ಳಾಪುರದ ಮಗಳು ಮತ್ತು ನಾನು ಅಳಿಯ. ಅಲ್ಲದೇ ನಾನು ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ ಸಂದರ್ಭದಲ್ಲಿ ಕೋಲಾರ ಜಿಲ್ಲೆಯಿಂದ ಚಿಕ್ಕಬಳ್ಳಾಪುರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸುವ ಅವಕಾಶ ಸಿಕ್ಕಿತ್ತು ಎಂದರು. ತಮ್ಮ ಪ್ರತಿಸ್ಪರ್ಧಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಕುಮಾರಸ್ವಾಮಿಯಂತಹವರು 10 ಜನ ಬಂದರೂ ನನ್ನನ್ನು ಸೋಲಿಸಕ್ಕಾಗುವುದಿಲ್ಲ ಎಂದು ತಿಳಿಸಿದ್ದು ಆಮ್‌ಆದ್ಮಿ ಪಕ್ಷದ ಸಂಸ್ಥಾಪಕ ಅರವಿಂದ್ರ ಕೇಜ್ರಿವಾಲ್. ಮೊಯ್ಲಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಎಫ್‌ಐಆರ್ ದಾಖಲಾಗಿದೆ. ಬಚ್ಚೇಗೌಡರ ಬಗ್ಗೆ ಏನೂ ಹೇಳಬೇಕಾಗಿಲ್ಲ. ಅವರ ಇತಿಹಾಸ ಎಲ್ಲರಿಗೂ ಗೊತ್ತಿರುವಂತಹುದೇ ಎಂದು ವ್ಯಂಗ್ಯವಾಡಿದರು.
ಪ್ರಮುಖವಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಒಂದು ಸ್ಥಾನ ಸಹ ಗೆಲ್ಲುವುದಿಲ್ಲ ಎಂದು ಮುಖ್ಯಮಂತ್ರಿಗಳು ಹೇಳಿಕೆ ನೀಡಿರುವುದು ಬೇಜವಾಬ್ದಾರಿತನ ಮತ್ತು ಹುಚ್ಚುಮಾತುಗಳು ಎಂದು ಕಿಡಿಕಾರಿದ ಅವರು, ಚುನಾವಣೆಯಲ್ಲಿ ಜೆಡಿಎಸ್ 16 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.