ಕೋಲಾರ

ದಳ ಅಭ್ಯರ್ಥಿ ಗೊಂದಲ ಇಂದು ನಿರ್ಧಾರ

Published On :

ಕೋಲಾರ: ಏಪ್ರಿಲ್ 17 ರಂದು ನಡೆಯುವ ಕೋಲಾರ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಮಾ. 27 ನಾಮಪತ್ರಗಳ ಪರಿಶೀಲನೆ ನಡೆಯಲಿದೆ.
ನಾಮಪತ್ರ ಸಲ್ಲಿಸಲು ಬುಧವಾರ ಕೊನೆ ದಿನವಾಗಿದ್ದರಿಂದ ವಿವಿಧ ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರಗಳ ಮಹಾಪೂರವೇ ಹರಿದು ಬಂದಿತು. ನಾಮಪತ್ರ ಸಲ್ಲಿಕೆಗೆ ಅಭ್ಯರ್ಥಿಗಳಲ್ಲಿ ನೂಕುನುಗ್ಗಲು ಉಂಟಾದ್ದರಿಂದ ಪೊಲೀಸರು ನಿಯಂತ್ರಿಸಲು ಪರದಾಡಿದರು. ಅಭ್ಯರ್ಥಿಗಳು ಮತ್ತು ಸೂಚಕರ ಸಂಖ್ಯೆ ಹೆಚ್ಚಾಗಿದ್ದರಿಂದ ಜಿಲ್ಲಾ ಚುನಾವಣಾಧಿಕಾರಿಗಳು ಅಭ್ಯರ್ಥಿಗಳಿಗೆ ಟೋಕನ್ ನೀಡಿ ಸಂಖ್ಯೆಗೆ ಅನುಗುಣವಾಗಿ ಬಂದು ನಾಮಪತ್ರ ಸಲ್ಲಿಸುವಂತೆ ಸೂಚಿಸಿದರು. ಪಕ್ಷೇತರ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಾಗಿತ್ತು. ಇವರಲ್ಲಿ ಕೆಲವರಿಗೆ ನಾಮಪತ್ರ ಸಲ್ಲಿಸಿದ ನಂತರ ಪ್ರಮಾಣ ವಚನವನ್ನು ಓದಲು ಸಹ ಬಾರದೆ ನಗೆಪಾಟಲಿಗೆ ಗುರಿಯಾದರು.
ಪಕ್ಷೇತರ ಅಭ್ಯರ್ಥಿಗಳಾಗಿ ಎಚ್.ಎನ್. ವಿನಾಯಕ ಪ್ರಸಾದ್, ಎನ್. ನಾರಾಯಣಸ್ವಾಮಿ, ಕೈವಾರ ನಾರಾಯಣಸ್ವಾಮಿ, ಎಸ್. ಮುನಿಯಪ್ಪ, ಲಕ್ಷ್ಮೀನಾರಾಯಣ ಹಾಗೂ ಆರ್‌ಪಿಐ ವೆಂಕಟಸ್ವಾಮಿ ಸೇರಿದಂತೆ ಇನ್ನು ಅನೇಕರು ತಮ್ಮ ಬೆಂಬಲಿಗರೊಂದಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಮತ್ತೊಮ್ಮೆ ನಾಮಪತ್ರ ಸಲ್ಲಿಕೆ: ಬಿಜೆಪಿಯ ಅಭ್ಯರ್ಥಿ ಬೇತಮಂಗಲದ ನಾರಾಯಣಸ್ವಾಮಿ ತಮ್ಮ ಮಗಳ ಜತೆ ಆಗಮಿಸಿ 1 ಸೆಟ್ ನಾಮಪತ್ರ ಸಲ್ಲಿಸಿದರೆ,  ಕಾಂಗ್ರೆಸ್‌ನ ಕೆ.ಎಚ್. ಮುನಿಯಪ್ಪ ತಮ್ಮ ಸೂಚಕರಾದ ಕುಮಾರ್ ಮೂಲಕ ನಾಮಪತ್ರ ಸಲ್ಲಿಕೆ ಮಾಡಿಸಿದರು. ಡಿಸಿಸಿ ಅಧ್ಯಕ್ಷ ಅನಿಲ್‌ಕುಮಾರ್, ಜಿಪಂ ಮಾಜಿ ಅಧ್ಯಕ್ಷ ವೆಂಕಟಮುನಿಯಪ್ಪ ಇದ್ದರು. ಇನ್ನು ಜೆಡಿಎಸ್‌ನ ಕೆ. ಕೇಶವ ನಗರಸಭೆ ಅಧ್ಯಕ್ಷ ಬಿ.ಎಂ. ಮುಬಾರಕ್ ಮೂಲಕ ಮತ್ತೊಂದು ನಾಮಪತ್ರ ಸಲ್ಲಿಕೆ ಮಾಡಿದವರಲ್ಲಿ ಪ್ರಮುಖರಾಗಿದ್ದಾರೆ.
ಜಿಪಂ ಸದಸ್ಯ ಎಸ್.ಬಿ.ಎಂ ನಾಮಪತ್ರ: ಜಿ.ಪಂ.ಸದಸ್ಯ ಎಸ್.ಬಿ. ಮುನಿವೆಂಕಟಪ್ಪ ಜೆಡಿಎಸ್ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು ವಿಶೇಷವಾಗಿತ್ತು. ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್  ನಾಯಕರಾದ ಮಾಜಿ ಸಚಿವ ಕೆ. ಶ್ರೀನಿವಾಸಗೌಡ, ಮತ್ತು ಮಾಲೂರು ಶಾಸಕ ಮಂಜುನಾಥ್‌ಗೌಡರ ಸೂಚನೆ ಮೇರೆಗೆ ನಾಮಪತ್ರ ಸಲ್ಲಿಕೆ ಮಾಡಲಾಗುತ್ತಿದೆ ಎಂದರು. ಮಾ.27 ರಂದು ನಾಮಪತ್ರ ಪರಿಶೀಲನೆ ನಡೆಯುವ ಸಂದರ್ಭದಲ್ಲಿ ಜೆಡಿಎಸ್ ಅಭ್ಯರ್ಥಿ ಕೆ. ಕೇಶವ ಜಾತಿ ಪ್ರಮಾಣ ಗೊಂದಲ ನಿವಾರಣೆಯಾದ ಮೇಲೆ ಕಣದಲ್ಲಿ ಅಂತಿಮವಾಗಿ ಉಳಿಯವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಹೇಳಿದರು.
ತಾವು ಕಳೆದ 25 ವರ್ಷಗಳಿಂದ ಜನರ ಮಧ್ಯ ಕೆಲಸ ಮಾಡಿಕೊಂಡು ಬಂದಿದ್ದು ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮೂಲಕ ಒಳ್ಳೆಯ ಹೆಸರನ್ನು ಗಳಿಸಿರುವುದರಿಂದ ಅಭ್ಯರ್ಥಿಯಾಗಲು ಬಯಸಿದೆ. ಆದರೆ ವರಿಷ್ಠರು ತೆಗೆದುಕೊಂಡು ತೀರ್ಮಾನದಿಂದ ಬಿ.ಫಾರಂ ಸಿಗಲಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಈಗಾಗಲೇ ಎರಡು ನಾಮಪತ್ರ ಸಲ್ಲಿಸಿರುವ ಬಿಜೆಪಿಯ ನಾರಾಯಣಸ್ವಾಮಿ, ಇಂದು ತಮ್ಮ ತೃತೀಯ ಪುತ್ರಿ ಉಷಾರಾಣಿ ಜತೆ ಆಗಮಿಸಿ 2 ಸೆಟ್ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಲವು ಸಂಪ್ರದಾಯಗಳನ್ನು ಪಾಲಿಸುತ್ತಾ ಬಂದಿರುವುದರಿಂದ 3ನೇ ಪುತ್ರಿ ಉಷಾರಾಣಿ ಸೂಚಕರಾಗಿರುವ ಪ್ರಮಾಣ ಪತ್ರವನ್ನು ಸಲ್ಲಿಸಿರುವುದಾಗಿ ಹೇಳಿದರು.
ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪರ ಒಳ್ಳೆ ಅಲೆಯಿದೆ ಮತ್ತು ಯುವಕರ ದಂಡು ಸ್ವಯಂಪ್ರೇರಿತರಾಗಿ ಬಂದು ಪಕ್ಷಕ್ಕಾಗಿ ದುಡಿಯುತ್ತಿರುವುದರಿಂದ ಈ ಬಾರಿ ಪಕ್ಷಕ್ಕೆ ಉತ್ತಮ ಭವಿಷ್ಯವಿದೆ ಎಂದು ತಿಳಿಸಿದರು. ಜೆಡಿಎಸ್ ಅಭ್ಯರ್ಥಿ ಕೆ. ಕೇಶವ ಪರವಾಗಿ ನಗರಸಭೆ ಅಧ್ಯಕ್ಷ ಬಿ.ಎಂ. ಮುಬಾರಕ್ ನಾಮಪತ್ರ  ಸಲ್ಲಿಸಿದ ವೇಳೆ ಬೆಂಗಳೂರಿನ ವಕೀಲ ಹನುಮಂತು ಉಪಸ್ಥಿತರಿದ್ದರು. ನಾಮಪತ್ರ ಸ್ವೀಕಾರ ಪ್ರಕ್ರಿಯೆ ಸಂಜೆ 7 ಗಂಟೆಯಾದರೂ ಪೂರ್ಣಗೊಂಡಿರಲಿಲ್ಲ. ಸುಮಾರು 21 ಮಂದಿ ನಾಮಪತ್ರ ಸಲ್ಲಿಸಲು ಟೋಕನ್ ಪಡೆದಿದ್ದಾರೆ. ಮಂಗಳವಾರದವರೆಗೂ ಒಟ್ಟು 12 ಮಂದಿ 18 ನಾಮಪತ್ರ ಸಲ್ಲಿಸಿದ್ದರು.
ಜೆಡಿಎಸ್‌ನಲ್ಲಿ ಕುತೂಹಲ:  ನಾಮಪತ್ರಗಳ ಪರಿಶೀಲನೆ ಗುರುವಾರ ನಡೆಯಲಿದ್ದು ಜೆಡಿಎಸ್ ಅಭ್ಯರ್ಥಿ ಕೇಶವ ಅವರ ಜಾತಿ ಪ್ರಮಾಣ ಪತ್ರದ ಸ್ವೀಕಾರದ ಬಗ್ಗೆ ಕುತೂಹಲ ಉಂಟಾಗಿದೆ. ಕೇಶವ ಜಾತಿ ಪ್ರಮಾಣ ಪತ್ರದ ಗೊಂದಲವಿರುವುದರಿಂದ ಮಾ.27 ಜೆಡಿಎಸ್ ಅಭ್ಯರ್ಥಿಗೆ ಅಗ್ನಿ ಪರೀಕ್ಷೆಯಾಗಿದ್ದು ಇದರಲ್ಲಿ ತೇರ್ಗಡೆಯಾದಲ್ಲಿ ಚುನಾವಣೆ ರಂಗೇರುವ ಎಲ್ಲಾ ಲಕ್ಷಣಗಳು ಕಾಣಬರುತ್ತಿದೆ. ಜಾತಿ ನಾಮಪತ್ರ ಗೊಂದಲ ಮತ್ತು ಆತಂಕದಿಂದ ಪಕ್ಷದ ವರಿಷ್ಠರು ಜಿ.ಪಂ. ಸದಸ್ಯ ಎಸ್.ಬಿ. ಮುನಿವೆಂಕಟಪ್ಪ ಕೈಯಲ್ಲಿ ನಾಮಪತ್ರವನ್ನು ಮುಂಜಾಗ್ರತವಾಗಿ ಸಲ್ಲಿಕೆ ಮಾಡಿದ್ದು, ನಾಳೆ ಇದಕ್ಕೆ ಸ್ಪಷ್ಟ ಉತ್ತರ ಸಿಗಲಿದೆ.
ಬೆಂಗಳೂರು ಉತ್ತರ ತಾಲೂಕಿನ ತಹಸೀಲ್ದಾರ್ ಅವರು ಕೇಶವರವರ ಡಿಜಿಟಲ್ ಕಂಪ್ಯೂಟರಿಕೃತ ಜಾತಿ ಪ್ರಮಾಣ ಪತ್ರವನ್ನು ರದ್ದು ಮಾಡಿದ್ದು ಇದಕ್ಕೆ ಕೇಶವ ಅವರು ಬೆಂಗಳೂರು ಎಸಿ ಕೋರ್ಟಿನಿಂದ ತಡೆಯಾಜ್ಞೆ ತಂದಿದ್ದಾರೆ. ಇದನ್ನು ಜಿಲ್ಲಾ ಚುನಾವಣಾಧಿಕಾರಿಗಳು ಒಪ್ಪುತ್ತಾರೆಯೇ ಇಲ್ಲವೇ ಉರ್ಜಿತಗೊಳಿಸಿ ಕೇಶವ ನಾಮಪತ್ರವನ್ನು ಅಂಗೀಕರಿಸುತ್ತಾರೆಯೇ ಎಂಬುದು ಜಿಜ್ಞಾಸೆ ಮೂಡಿಸಿದ್ದು ಜೆಡಿಎಸ್ ಮುಖಂಡರು, ಕಾರ್ಯಕರ್ತರು ಮಾತ್ರವಲ್ಲದೆ ವಿರೋಧ ಪಕ್ಷಗಳಲ್ಲೂ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.