ಕೋಲಾರ

ಮೇವಿಗೆ ಬಂತು ಬರಗಾಲ!

Published On :

ಕ.ಪ್ರ. ವಾರ್ತೆ    ಬಂಗಾರಪೇಟೆ    ಮಾ.26
ಬೇಸಿಗೆ ತನ್ನ ತೀವ್ರತೆಯನ್ನು ಪಡೆದುಕೊಳ್ಳುತ್ತಿದ್ದಂತೆ ಗ್ರಾಮೀಣಪ್ರದೇಶದಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಶುರುವಾಗಿದೆ. ಬಂಗಾರಪೇಟೆ ತಾಲೂಕಿನಲ್ಲಿ ಈ ಸಮಸ್ಯೆ ತೀವ್ರವಾಗಿದ್ದು, ದುಪ್ಪಟ್ಟು ಬೆಲೆ ನೀಡಿ ಮೇವು ಖರೀದಿಸಬೇಕಾದ ಸ್ಥಿತಿ ಎದುರಾಗಿದೆ.
ತಾಲೂಕಿನಲ್ಲಿ ಕಳೆದ 9 ವರ್ಷಗಳಿಂದ ಕೆರೆ ಕುಂಟೆಗಳು ಸಂಪೂರ್ಣವಾಗಿ ತುಂಬಿಲ್ಲ. ಇದರಿಂದಾಗಿ ಮನುಷ್ಯರು ಮಾತ್ರವಲ್ಲದೆ ಜಾನುವಾರುಗಳಿಗೂ ಕುಡಿಯುವ ನೀರಿಗೆ ತತ್ವಾರ ಬಂದಿದೆ. ಬತ್ತ, ರಾಗಿ, ಜೋಳ, ಸಜ್ಜೆಯಂಥ ಬೆಳೆಯುವುದು ಗಣನೀಯವಾಗಿ ಕಡಮೆಯಾಗಿರುವುದರಿಂದ ಜಾನುವಾರುಗಳಿಗೆ ಮೇವು ಸಿಗುತ್ತಿಲ್ಲ. ಅನಿವಾರ್ಯವಾಗಿ ಅವುಗಳನ್ನು ಖಸಾಯಿಖಾನೆಗೆ ನೂಕುವ ಸ್ಥಿತಿ ಎದುರಾಗಿದೆ.ಹೈನುಗಾರಿಕೆ ನಂಬಿ ಕುಳಿತ ರೈತರು ವರ್ಷಕ್ಕೊಮ್ಮೆ ಮಳೆಗಾಲದಲ್ಲಿ ರಾಗಿ ಬೆಳೆ ಬೆಳೆದು ಅದರ ಹುಲ್ಲನ್ನು ಸಂಗ್ರಹಿಸಿಕೊಂಡು ಜಾನುವಾರುಗಳಿಗೆ ವರ್ಷವಿಡಿ ಒದಗಿಸುತ್ತಾರೆ. ಆದರೆ, ಹಸಿ ಮೇವು ಇಲ್ಲದ ಕಾರಣ ಹಸುಗಳು ಹಾಲು ಕೊಡುವುದು ಕಮ್ಮಿ. ಅದರಲ್ಲೂ ಬೇಸಿಗೆಯಲ್ಲಿ ಜಾಸ್ತಿಯಾಗುತ್ತದೆ. ಜತೆಗೆ ನೀರಿನ ಕೊರತೆ ಇರುವುದರಿಂದ ಕುಡಿಯುವ ನೀರು ಜಾನುವಾರುಗಳಿಗೆ ಸರಿಯಾಗಿ ಸಿಗುತ್ತಿಲ್ಲ. ತಾಲೂಕಿನಲ್ಲಿ ಅಂತರ್ಜಲ ಕುಸಿದಿದೆ. 1500 ಅಡಿ ಆಳಕ್ಕೆ ಕೊಳವೆ ಬಾವಿ ಕೊರೆದರೂ ನೀರು ಸಿಗುತ್ತಿಲ್ಲ.



ಮೇವು ಬೆಲೆ ಭಾರಿ ತುಟ್ಟಿ


ಕೃಷಿಯನ್ನೇ ಅವಲಂಬಿಸಿದ್ದ ರೈತರು ಅದರಿಂದ ವಿಮುಖರಾಗುತ್ತಿದ್ದಾರೆ. ಇದ್ದ ಬದ್ದ ಜಾನುವಾರುಗಳಿಗೆ ಸರಿಯಾದ ಮೇವಿಲದೇ ಸೊರುಗುಂತಾಗಿದೆ.
ಮೇವು ಖರೀದಿಸಿ ಹಾಕಬೇಕೆಂದರೇ ಅದು ಗಗನಕ್ಕೆ ಏರಿದೆ. ನಿತ್ಯ ಮೇವು ಖರೀದಿಸಿ, ಹಸುಗಳನ್ನು ಸಾಕಿ ಹಾಲು ಕರೆಯುವವರಿಗೆ ಕಷ್ಟವಾಗುತ್ತಿದೆ. ಕಳೆದ ಆರು ತಿಂಗಳಿಂದ ಸೀಮೆ ಹಸುಗಳಿಗೆ ಮೇವು ಖರೀದಿ ಮಾಡಲು ಆಗದೇ ಎಷ್ಟೋ ಮಂದಿ ಮಾರಾಟ ಮಾಡಿಲಾಗಿದೆ ಎನ್ನುತ್ತಾರೆ ಪೊಲೇನಹಳ್ಳಿ ರೈತ ರಮೇಶ್ಕುಮಾರ್. ಪಟ್ಟಣದಲ್ಲಿ 10ಗೆ ಮಾರಾಟವಾಗುತ್ತಿದ್ದ ಜೋಳದ ದಂಟಿನ ಕಟ್ಟಿನ ಬೆಲೆ ಈಗ 20ಕ್ಕೆ ಏರಿದೆ. ತಾಲೂಕಿನಲ್ಲಿ ಎಲ್ಲಿಯೂ ರಾಗಿ, ಬತ್ತದ ಒಣ ಹುಲ್ಲು ಸಿಗುತ್ತಿಲ್ಲ. ಇದರಿಂದ ರೈತರ ತಮಿಳುನಾಡಿನ ಕೃಷ್ಣಗಿರಿ, ಧರ್ಮಪುರಿ, ಜಿಲ್ಲೆಗಳ ಗ್ರಾಮೀಣ ಭಾಗ ಹಾಗೂ ಆಂಧ್ರಪ್ರದೇಶದ ಕಾಳಹಸ್ತಿಯಲ್ಲಿ ದುಬಾರಿ ಬೆಲೆ ನೀಡಿ ಖರೀದಿ ಮಾಡಿ ಜಾನುವಾರುಗಳಿಗೆ ಒದಗಿಸುತ್ತಿದ್ದಾರೆ.
 ತಾಲೂಕನ್ನು ಬರಪೀಡಿತ ಪಟ್ಟಿಗೆ ಇದುವರೆಗೂ 5 ಬಾರಿ ಸೇರಿಸಿ ಸರ್ಕಾರವೇ ಬರಪೀಡಿತ ತಾಲೂಕು ಎಂದು ಹಣೆಪಟ್ಟಿ ನೀಡಿದೆ. ಆದರೆ, ಇದುವರೆಗೂ ಮೇವು ಬ್ಯಾಂಕ್ ಆಗಲಿ, ಜಾನುವಾರುಗಳಿಗೆ ಕುಡಿಯುವ ನೀರು ವ್ಯವಸ್ಥೆ ಕೇಂದ್ರಗಳನ್ನು ತೆರೆದಿಲ್ಲ. ಈ ಸಮಸ್ಯೆಗಳನ್ನು ಬಗೆಹರಿಸಬೇಕಿದ್ದ ಜಿಲ್ಲಾಡಳಿತ ಕುಂಭಕರ್ಣ ನಿದ್ದೆಗೆ ಜಾರಿದೆ ಎನ್ನುವುದು ರೈತರ ಆರೋಪ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.