ಕೋಲಾರ

ಛತ್ರಕೋಡಿಹಳ್ಳಿ: ಎನ್ನೆಸ್ಸೆಸ್ ಶಿಬಿರ

Published On :

ಕೋಲಾರ: ರಾಷ್ಟ್ರೀಯ ಸೇವಾ ಯೋಜನಾ ಶಿಬಿರಗಳು ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಕಾಳಜಿಯನ್ನು ಹೆಚ್ಚಿಸುತ್ತವೆ ಎಂದು ವಕೀಲರ ಸಂಘದ ಅಧ್ಯಕ್ಷ ಎ.ವಿ. ಆನಂದ್ ತಿಳಿಸಿದರು.
ತಾಲೂಕಿನ ಛತ್ರಕೋಡಿಹಳ್ಳಿಯಲ್ಲಿ ನಗರದ ಸರ್ಕಾರಿ ಮಹಿಳಾ ಕಾಲೇಜು ವತಿಯಿಂದ ನಡೆಯುತ್ತಿರುವ ಎನ್ನೆಸ್ಸೆಸ್ ಶಿಬಿರದ ಕಾನೂನು ಅರಿವು-ನೆರವು ಕುರಿತು ಅವರು ಉಪನ್ಯಾಸ ನೀಡಿದರು.
ಹಳ್ಳಿಯ ಅನಕ್ಷರಸ್ಥರಿಗೆ ಕಾನೂನಿನ ಅರಿವು ಮೂಡಿಸುವ ಕೆಲಸವನ್ನು ಶಿಭಿರಾರ್ಥಿಗಳು ಮಾಡಬೇಕು, ಜನನ, ಮರಣ ಪ್ರಮಾಣಪತ್ರಗಳ ಅಗತ್ಯತೆ ಮತ್ತು ಮಹತ್ವದ ಕುರಿತು ಅರಿವು ಮೂಡಿಸಬೇಕು ಎಂದರು.
ಹಳ್ಳಿಯ ಅನಕ್ಷರಸ್ಥ ಜನರನ್ನು ಕಾಡುತ್ತಿರುವ ವರದಕ್ಷಿಣೆ, ಬಾಲ್ಯವಿವಾಹ ಮತ್ತಿತರ ಸಾಮಾಜಿಕ ಪಿಡುಗುಗಳ ಕುರಿತು ಜಾಗೃತಿ ಮೂಡಿಸಬೇಕು, ಮಹಿಳೆಯರ ಹಕ್ಕುಗಳ ಕುರಿತು ತಿಳಿಸಿಕೊಡಿ, ಮಹಿಳಾ ದೌರ್ಜನ್ಯವನ್ನು ತಡೆಯುವ ಕುರಿತು ನೀವು ಮೊದಲು ಅರಿತು ನಂತರ ಹಳ್ಳಿಗರಲ್ಲಿ ಜಾಗಣತಿ ಮೂಡಿಸಿ ಎಂದರು.
ಮುಖ್ಯ ಅತಿಥಿಗಳಾಗಿದ್ದ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಎಸ್. ವಿಜಯಕುಮಾರ್, ಎನ್ನೆಸ್ಸೆಸ್ ಶಿಬಿರಗಳಿಂದಾಗಿ ವಿದ್ಯಾರ್ಥಿಗಳಲ್ಲಿ ಸಮನ್ವಯತೆ, ಸಹಕಾರ ಮನೋಭಾವ ಬೆಳೆಯುತ್ತದೆ.  ಕಲಾ,ವಾಣಿಜ್ಯ, ವಿಜ್ಞಾನ ವಿಭಾಗಗಳೆಂಬ ಭೇದಭಾವಗಳು ಮರೆಯಾಗುತ್ತವೆ ಸ್ನೇಹ, ಹೊಂದಾಣಿಕೆ ಮೂಡುತ್ತದೆ, ವೇದಿಕೆಯ ಭಯ ಹೋಗಲಾಡಿಸಿ ಆತ್ಮಸ್ಥೈರ್ಯ ತುಂಬಿದಂತಾಗುತ್ತದೆ ಎಂದರು. ಅರ್ಥಶಾಸ್ತ್ರ ವಿಭಾಗದ ಸಹ ಪ್ರಾಧ್ಯಾಪಕ ರಾಜೇಂದ್ರ, ಮರಗಳು ಭೂಮಂಡಲದ ಶ್ವಾಸಕೋಶಗಳಾಗಿದ್ದು, ಇದನ್ನು ಕಾಪಾಡುವುದರಿಂದ ಉತ್ತಮ ಬದುಕು, ಪರಿಸರ ನಮ್ಮದಾಗುತ್ತದೆ ಎಂದರು.
ವಿದ್ಯಾರ್ಥಿಗಳು ಶಿಬಿರದಲ್ಲಿ ಪರಿಸರ ಸಂರಕ್ಷಣೆ, ಸ್ವಚ್ಛತೆ, ಪರಿಸರ ಮಾಲಿನ್ಯ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಗ್ರಾಮೀಣ ಜನತೆಗೆ ಅರಿವು ಮೂಡಿಸಬೇಕು, ಸಾಂಕ್ರಾಮಿಕ ರೋಗಗಳ ತಡೆಗೆ ಕೈಗೊಳ್ಳಬೇಕಾದ ಮುನ್ನಚ್ಚರಿಕಾ ಕ್ರಮಗಳ ಕುರಿತು ತಿಳಿಸಬೇಕೆಂದರು. ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಆರ್. ಶ್ರೀನಿವಾಸ್, ಉಪನ್ಯಾಸಕರಾದ ಸತೀಶ್, ಮುನಿಶಾಮಿಗೌಡ, ನಾಗರಾಜ್, ಎಸ್. ಕೃಷ್ಣಪ್ಪ, ಶಿವಪ್ಪ,ಮಧುಮತಿ, ಇಂದಿರಮ್ಮ, ಬೃಂದಾದೇವಿ ಉಪಸ್ಥಿತರಿದ್ದು, ಶಿಬಿರಾಧಿಕಾರಿ ಹಾಗೂ ಸಹಾಯಕ ಪ್ರಾಧ್ಯಾಪಕಿ  ವಸುಂಧರ ನೇತೃತ್ವ ವಹಿಸಿದ್ದರು.
ಶಿಬಿರಾರ್ಥಿಗಳಾದ ವಿಶಾಲಾಕ್ಷಿ, ಸುಷ್ಮಾ, ಸುಪ್ರೀಯಾ ಪ್ರಾರ್ಥಿಸಿ, ಕಾವ್ಯ ಸ್ವಾಗತಿಸಿ, ರಶ್ಮಿತಾ, ಮೇಘಾ ನಿರೂಪಿಸಿ, ಮಂಜುಳಾ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.