ಕೋಲಾರ

ಮತ್ತೆ ಯುಪಿಎ ಅಧಿಕಾರಿಕ್ಕೆ ತನ್ನಿ

Published On :

ಚಿಂತಾಮಣಿ: ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳನ್ನು ಜನರು ಸ್ವೀಕರಿಸಿ, ಮತ್ತೊಮ್ಮೆ ಯುಪಿಎ ಸರ್ಕಾರವನ್ನು ಅಧಿಕಾರಕ್ಕೆ ತರಬೇಕೆಂದು ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಸುಧಾಕರ್ ಹೇಳಿದರು. ನಗರದ ಹೊರ ವಲಯ ಬೂರಮಾಕಲಹಳ್ಳಿ ಸಂಜೀವಿ ಸಮುದಾಯ ಭವನದ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಸಭೆಯಲ್ಲಿ ಮಾತನಾಡಿದ ಅವರು, 'ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ ಅವರನ್ನು ಬಹುತಮದೊಂದಿಗೆ, 7ನೇ ಬಾರಿಗೆ ಆಯ್ಕೆ ಮಾಡಬೇಕು' ಎಂದು ಮನವಿ ಮಾಡಿದರು. ಬಿಜೆಪಿ ಕೋಮುವಾದಿ. ಜಾತಿ-ಧರ್ಮಗಳ ನಡುವೆ ವಿಷ ಬೀಜ ಬಿತ್ತಿ, ದೇಶವನ್ನು ಒಡೆಯುತ್ತಿದೆ. ಪ್ರಜಾಪ್ರಭುತ್ವವನ್ನೇ  ಗಾಳಿಗೆ ತೂರಿ, ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುತ್ತಿದೆ ಎಂದು ಆರೋಪಿಸಿದರು. ಬಳಿಕ ಮಾತನಾಡಿದ ನಾಯಕ ವಿ.ಆರ್.ಸುದರ್ಶನ್, ಬಡವರ ಹಸಿವು ನೀಗಿಸಲು ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದೆ. ಕೇಂದ್ರ ಸರ್ಕಾರ ಆಹಾರ ಭದ್ರತೆಯನ್ನು ಜಾರಿಗೆ ತಂದಿದೆ. ಕಾಂಗ್ರೆಸ್ ಅಭ್ಯರ್ಥಿ ಮುನಿಯಪ್ಪ ಅವರು ಕೋಲಾರ ಕ್ಷೇತ್ರಕ್ಕೆ ಅನೇಕ ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ ಎಂದು ತಿಳಿಸಿದರು. ಮುಖಂಡರಾದ ರಾಯಲ್‌ರಾಮಕೃಷ್ಣ ರೆಡ್ಡಿ, ಡಾ.ಶ್ರೀನಿವಾಸ್, ಅಲ್ತಾಪ್ ಪಾಷ, ಪಿ.ವಿ.ವೆಂಕಟರವಣಪ್ಪ, ಜೆ.ವಿ.ನಾರಾಯಣಸ್ವಾಮಿ, ಸಿ.ಎಂ. ಇಬ್ರಾಹಿಂ, ಕಮಲಮ್ಮ, ಶ್ರೀರಾಮರೆಡ್ಡಿ, ಬುಲೆಟ್ ರಮೇಶ್, ಟಿ.ಮುರುಳಿ, ಕುರುಟಹಳ್ಳಿ ರಾಧಾಕೃಷ್ಣ, ಅತವುಲ್ಲಾ, ಆನೂರು ಸುಬ್ಬಣ್ಣ ಸೇರಿದಂತೆ ಸಾವಿರಾರು ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.
ಉದ್ಘಾಟನೆ ನಾಳೆ
ಶಿಡ್ಲಘಟ್ಟ: ಕೋಲಾರ ಮೀಸಲು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಂಗಾರಪೇಟೆ ನಾರಾಯಣಸ್ವಾಮಿ ಅವರು ಮಾ.28ರಂದು ಪ್ರಚಾರ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಪಟ್ಟಣದ ಚಿಂತಾಮಣಿ ರಸ್ತೆಯ ಈ ಹಿಂದಿನ ಕೆಜೆಪಿ ಕಟ್ಟಡದಲ್ಲಿ ಬಿಜೆಪಿಯ ಪ್ರಚಾರ ಕಚೇರಿ ತೆರೆಯಲಾಗುತ್ತಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಕಂಬದಹಳ್ಳಿ ಸುರೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆರ್ಥಿಕ ಸಹಾಯ
ಬಾಗೇಪಲ್ಲಿ: ರಸ್ತೆ ಅಫಘಾತಕ್ಕೀಡಾದ ಹಾಲು ಉತ್ಪಾದಕ ನೌಕರರ ಸಂಘದ ಕಾರ್ಯದರ್ಶಿಯೊಬ್ಬರಿಗೆ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರು ಸಹಾಯಹಸ್ತ ಚಾಚುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಇತ್ತೀಚಿಗೆ ಸಂಘದ ಕಾರ್ಯದರ್ಶಿ ಡಿ.ಸಿ. ವಿನಯ್ ಕುಮಾರ್ ಅಪಘಾತವೊಂದರಲ್ಲಿ ತೀವ್ರ ಗಾಯಗೊಂಡಿದ್ದರು. ಈ ಸಂಬಂಧ ತಾಲೂಕಿನ ಹಾಲು ಉತ್ಪಾದಕರ ಸಂಘ ಹಾಗೂ ನೌಕರರ ಸಂಘದ ಅಧ್ಯಕ್ಷರು, ನಿರ್ದೇಶಕರು, ಗಡಿದಂ ಎಂ.ಪಿ.ಸಿ.ಎಸ್. ಅಧ್ಯಕ್ಷ ಷಾಮೀರ್, ಕುರುಬವಾಂಡ್ಲಪಲ್ಲಿ ಎಂ.ಪಿ.ಸಿ.ಎಸ್ ಉಪಾಧ್ಯಕ್ಷೆ ಕೆ. ಮಂಜುಳಮ್ಮ, ನಿರ್ದೇಶಕರಾದ ಆರ್. ಓಬಳರೆಡ್ಡಿ, ಎನ್. ರಂಗನಾಥ್, ಕೆ.ಎಸ್. ನರಸಿಂಹರೆಡ್ಡಿ, ಎಂ.ಎಲ್. ಗುರ್ರಪ್ಪ, ಮನೋಹರ, ಬಿ. ಮುನಿಸ್ವಾಮಿಗೌಡ ಸೇರಿದಂತೆ ತಾಲೂಕಿನ ಹಾಲು ಉತ್ಪಾದಕ ಸಹಕಾರ ಸಂಘದ ಕಾರ್ಯದರ್ಶಿಗಳು ಕೈ ಜೋಡಿಸಿ ವಂತಿಗೆ ನೀಡಿದ್ದರು. ಆ ವಂತಿಗೆ ಹಣವನ್ನು ಡಿ.ಸಿ. ವಿನಯ್ ಕುಮಾರ್ ಮನೆಗೆ ತೆರಳಿ ಚೆಕ್ ಮೂಲಕ ವಿತರಿಸಿದರು.
ಅರ್ಜಿ ಆಹ್ವಾನ
ಕೆಜಿಎಫ್: ಕೆಜಿಎಫ್ ಪೊಲೀಸ್ ಜಿಲ್ಲೆಯಲ್ಲಿ ಖಾಲಿ ಇರುವ 46 ಸಿಪಿಸಿ ಮತ್ತು 11 ಮಹಿಳಾ ಪೇದೆಗಳಿಗೆ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮಾ.27 ಕೊನೆ ದಿನ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಜಯ್‌ಹಿಲೋರಿ ತಿಳಿಸಿದ್ದಾರೆ. ಶುಲ್ಕವ ಪಾವತಿಸಲು ಮಾ.28 ಕೊನೆ ದಿನವಾಗಿದೆ. ಅರ್ಹ ಅಭ್ಯರ್ಥಿಗಳು ಸದುಪಯೋಗಪಡಿಸಿಕೊಳ್ಳಲು ಅವರು ಕೋರಿದ್ದಾರೆ. ವಿವರಗಳಿಗೆ ವೆಬ್‌ಸೈಟ್ ಅಧಿಸೂಚನೆ ಅಥವಾ ಜಿಲ್ಲಾ ಪೊಲೀಸ್ ಕಚೇರಿ ಸೂಚನಾ ಫಲಕದಲ್ಲಿರುವ ಪ್ರಕಟಣೆ ಗಮನಿಸುವಂತೆ ತಿಳಿಸಿದ್ದಾರೆ. ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರುವವರು ಮಾ.27ಕ್ಕೆ ಕನಿಷ್ಠ 19 ವರ್ಷ ತುಂಬಿರುವವರು ಅರ್ಜಿ ಸಲ್ಲಿಸಲು ಅರ್ಹರಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್‌ಹಿಲೋರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.