ಕೋಲಾರ

ನಾಮಪತ್ರ ಓಕೆ: ಕೇಶವ ಖುಷ್!

Published On :

ಜಾತಿಪತ್ರ ವಿವಾದದಲ್ಲಿ ಸಿಕ್ಕಿಹಾಕಿಕೊಂಡಿದ್ದ ಜೆಡಿಎಸ್ ಅಭ್ಯರ್ಥಿ  ಟಿ  ಪ್ರಕರಣ ಇತ್ಯರ್ಥ
ಕೇಶವ ಪರ ಅಶೋಕ ಹಾರ್ನಳ್ಳಿ, ನಾರಾಯಣಸ್ವಾಮಿ ಪರ ಶಶಿಕಾಂತ ವಾದ ಮಂಡನೆ



ಕನ್ನಡಪ್ರಭ ವಾರ್ತೆ, ಕೋಲಾರ, ಮಾ.27
ತೀವ್ರ ಕುತೂಹಲ ಕೆರಳಿಸಿದ್ದ ಜೆಡಿಎಸ್ ಅಭ್ಯರ್ಥಿ ಕೆ. ಕೇಶವ ಅವರ ಜಾತಿ ಪ್ರಮಾಣ ಪತ್ರದ ವಿವಾದ ಇತ್ಯರ್ಥವಾಗಿದೆ.
ನಾಮಪತ್ರಗಳ ಪರಿಶೀಲನೆ ದಿನವಾದ ಗುರುವಾರ ಬಿಜೆಪಿಯ ಅಭ್ಯರ್ಥಿ ಎಂ. ನಾರಾಯಣಸ್ವಾಮಿ ಅವರು ಜೆಡಿಎಸ್ ಅಭ್ಯರ್ಥಿ ಕೆ. ಕೇಶವ ಅವರು ಮೂಲತಃ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮದನಪಲ್ಲಿ ತಾಲೂಕಿನ ಮಾಲೇಪಾಡು ಗ್ರಾಮದ ವಡ್ಡೆ ಎಂಬ ಹಿಂದುಳಿದ ಜಾತಿಗೆ ಸೇರಿದ್ದು, ಒಂದನೆ ತರಗತಿಯಿಂದ 10ನೇ ತರಗತಿಯವರಿಗೆ ಅಂದರೆ ತನ್ನ ಮೂಲ 10 ವರ್ಷದ ಶಿಕ್ಷಣವನ್ನು ಹಿಂದುಳಿದ ವರ್ಗಗಳ ಕೋಟಾದಡಿ ಆಂಧ್ರದಲ್ಲಿ ಮುಗಿಸಿದ್ದು, 1994ರಲ್ಲ ಮಾಲೂರು ತಾಲೂಕು ತಹಸೀಲ್ದಾರ್ ಬಳಿ ನಾಗನಾಯಕನಹಳ್ಳಿಯ ನಿವಾಸಿ ಹಾಗೂ ಭೋವಿ ಜನಾಂಗಕ್ಕೆ ಸೇರಿರುವುದಾಗಿ ಸುಳ್ಳು ಪ್ರಮಾಣ ಪತ್ರ ಪಡೆದಿರುವುದರಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಸಲ್ಲಿಸಿರುವ ನಾಮಪತ್ರ ತಿರಸ್ಕಾರ ಮಾಡುವಂತೆ ಅಕ್ಷೇಪಣೆ ಸಲ್ಲಿಸಿದರು.
ಬಿಜೆಪಿಯ ಎಂ. ನಾರಾಯಣಸ್ವಾಮಿ ಪರ ಹಿರಿಯ ವಕೀಲ ಶಶಿಕಾಂತ್ ವಾದ ಮಂಡಿಸಿ, ಬಿಸಿಎಂಗೆ ಸೇರಿದ ಕೆ. ಕೇಶವ ಪರಿಶಿಷ್ಟ ಜಾತಿಗೆ ಮೀಸಲಾದ ಕೋಲಾರ ಕ್ಷೇತ್ರದಿಂದ ಭೋವಿ ಹೆಸರಿನಲ್ಲಿ ಸ್ಪರ್ಧಿಸಲು ಅವಕಾಶವಿಲ್ಲ, ಮಾಲೂರು ತಾಲೂಕಿನಲ್ಲಿ 1994ರಲ್ಲಿ ಪಡೆದಿರುವ ಜಾತಿ ಪತ್ರದ ಅಸಲಿ ಪ್ರಮಾಣ ಪತ್ರವನ್ನು ನಾಮಪತ್ರದೊಂದಿಗೆ ಲಗತ್ತಿಸಿಲ್ಲವೆಂದು ದೂರಿದರು.
ಇದಕ್ಕೆ ಉತ್ತರಿಸಿದ ಜೆಡಿಎಸ್ನ ಕೆ. ಕೇಶವ ಪರ ವಕೀಲರಾದ ಅಶೋಕ್ ಹಾರ್ನಹಳ್ಳಿ ಅವರು, 1951ರ ಪ್ರಜಾ ಪ್ರತಿನಿಧಿ ಕಾಯಿದೆ(ಪಿ.ಆರ್.ಸಿ)ಸೆ.36ರ ಅನ್ವಯ ಯಾವುದೇ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿ ತನ್ನ ಜಾತಿಗೆ ಸಂಬಂಧಿಸಿದ ಪ್ರಮಾಣ ಪತ್ರ ನೀಡಿದರೆ ಸಾಕಾಗುತ್ತದೆ. ಅದರಂತೆ ಕೇಶವ ಅವರು 1994ರಲ್ಲಿ ಮಾಲೂರು ತಹಸೀಲ್ದಾರ್ ಅವರಿಂದ ಪಡೆದಿರುವ ಜಾತಿ ಪ್ರಮಾಣ ಪತ್ರದಲ್ಲಿ ಭೋವಿ ಎಂದು ನಮೋದಿಸಿದ್ದಾರೆಂದು ವಾದಿಸಿದರಲ್ಲದೆ, ಒಬ್ಬ ನಾಗರಿಕ ದೇಶದ ಯಾವುದೇ ಭಾಗಕ್ಕೆ ಹೋಗಿ ನೆಲಸಿದರೂ ಅಲ್ಲಿನ ವ್ಯವಸ್ಥೆಗೆ ಅನುಗುಣವಾಗಿ ಜಾತಿ ಪ್ರಮಾಣ ಪತ್ರ ಪಡೆದಿರುತ್ತಾನೆ, ಹಾಗಾಗಿ ಇದರಲ್ಲಿ ತಪ್ಪು ಹುಡುಕುವ ಅಗತ್ಯವಿಲ್ಲವೆಂದರು.
ಕೇಶವ ಅವರು ಕೆಲ ವರ್ಷಗಳ ಕಾಲ ಮಾಲೂರು ತಾಲೂಕಿನ ನಾಗನಾಯಕನಹಳ್ಳಿಯಲ್ಲಿ ವಾಸ ಮಾಡಿದ್ದಾರೆ, ಇವರ ಬಂಧುಗಳಿಗೆ ಅಧಿಕಾರಿಗಳು ಭೋವಿ ಜನಾಂಗದವರೆಂದು ಪ್ರಮಾಣ ಪತ್ರ ನೀಡಿದ್ದಾರೆ, ಹಾಗಾಗಿ 1994ರಲ್ಲಿ ಕೇಶವ ಅವರು ತನ್ನ ಬಂಧುಗಳಿಗೆ ನೀಡಿರುವ ರೀತಿಯಲ್ಲೇ ತಾನು ಭೋವಿ ಜಾತಿಗೆ ಸೇರಿದವನಾಗಿರುವುದರಿಂದ ಅದೇ ರೀತಿ ಪ್ರಮಾಣ ಪತ್ರ ನೀಡುವಂತೆ ಕೋರಿ ಜಾತಿ ಪತ್ರ ಪಡೆದಿದ್ದು ಇದರ ಆಧಾರದ ಮೇಲೆ 2014ರ ಮಾ.6ರಂದು ಬೆಂಗಳೂರಿನಲ್ಲಿ ಪಡೆದ ಜಾತಿ ಪ್ರಮಾಣ ಪತ್ರವನ್ನು ಯಾವುದೇ ವಿಚಾರ,ಅಕ್ಷೇಪಣೆ ಇಲ್ಲದೆ ಬೆಂಗಳೂರು ಉತ್ತರ ತಹಸೀಲ್ದಾರ್ ಅವರು ರದ್ದು ಮಾಡಿದ ಕಾರಣ ಕೇಶವ ಅವರ ಬೆಂಗಳೂರು ಉಪವಿಭಾಗಾಧಿಕಾರಿಗಳಿಂದ ತಹಸೀಲ್ದಾರ್ ಆದೇಶಕ್ಕೆ ತಡೆಯಾಜ್ಞೆ ತಂದಿದ್ದಾರೆಂದು ಸ್ಪಷ್ಟಪಡಿಸಿದರು.
ಒಟ್ಟು 48 ನಾಮಪತ್ರಗಳನ್ನು ಪರಿಶೀಲನೆ ಮಾಡಬೇಕಾಗಿದ್ದರಿಂದ ಜಿಲ್ಲಾ ಚುನಾವಣಾಧಿಕಾರಿಗಳು ಕೇಶವ ಅವರ ಪ್ರಕರಣದ ವಿಚಾರಣೆಯನ್ನು 1.30 ರಿಂದ 3ಗಂಟೆಗೆ ಮುಂದೂಡಿ, ಮತ್ತೆ ವಿಚಾರಣೆ ಮುಂದುವರೆಸಿ ಎರಡು ಕಡೆಯ ವಾದಗಳನ್ನು ಅಲಿಸಿದ ಬಳಿಕ 1951ರ ಪ್ರಜಾ ಪ್ರತಿನಿಧಿ ಕಾಯಿದೆಯನ್ವಯ ನಾಮಪತ್ರದ ಜೊತೆ ಅಭ್ಯರ್ಥಿ ಸಲ್ಲಿಸುವ ಜಾತಿ ಪತ್ರವನ್ನಷ್ಟೇ ಪರಿಗಣಿಸಬೇಕಾಗುತ್ತದೆ, ಅಭ್ಯರ್ಥಿಯ ಜಾತಿಯ ಬಗ್ಗೆ ತನಿಖೆ ನಡೆಸುವ ಅಧಿಕಾರ ಈ ಸಂದರ್ಭದಲ್ಲಿ ತಮಗಿಲ್ಲ, 1994ರಲ್ಲಿ ಪಡೆದಿರುವ ಜಾತಿ ಪತ್ರಕ್ಕೆ ಸಂಬಂಧಸಿದಂತೆ ದೃಢೀಕರಣ ಪತ್ರವನ್ನು ನೀಡಿತ್ತಾರೆ, ನಾಮಪತ್ರದ ಜೊತೆ ಇಷ್ಟು ದಾಖಲೆ ಇದ್ದರೆ ಸಾಕು ಎಂದು ತೀರ್ಪು ನೀಡಿ ಕೇಶವ ಅವರು ಸಲ್ಲಿಸಿರುವ ನಾಲ್ಕು ನಾಮಪತ್ರಗಳಿಗೆ 10 ಮಂದಿ ಸೂಚಕರ ಹೆಸರು, ಸಹಿ ಇರುವುದರಿಂದ ಆರ್.ಪಿ. ಕಾಯಿದೆ ಸೆಕ್ಷನ್ 36 ಅನ್ವಯ ಕ್ರಮಬದ್ಧವಾಗಿದೆ ಎಂದು ಪರಿಗಣಿಸಿ ಸ್ವೀಕರಿಸಲಾಗಿದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.