ಕೋಲಾರ

ಬಂಡಿ ಉರುಳಿ ಗಾಯ: ಕಾರ್ಯಕ್ರಮ ಸ್ಥಗಿತ

Published On :

ಕೋಲಾರ: ಎತ್ತುಗಳು ಬೆದರಿದ ಪರಿಣಾಮ ಬಂಡಿ ಉರುಳಿ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ ಕೆಳಕ್ಕುರುಳಿ ಸ್ವಲ್ಪ ಗಾಯಗಳಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಗುರುವಾರ ನಗರದಲ್ಲಿ ಜರುಗಿದೆ.
ದಸಂಸ ಕರ್ನಾಟಕ ಮತ್ತು ಕಲಾವಿದರ ಬಳಗ ಜಂಟಿಯಾಗಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಜಾನಪದ ಶೈಲಿಯಲ್ಲಿಯೇ ಅಲಂಕೃತ ಎತ್ತಿನ ಬಂಡಿಯ ಮೂಲಕ ಜಾನಪದ ಅಕಾಡೆಮಿ ಅಧ್ಯಕ್ಷ ಪಿಚ್ಚಳ್ಳಿ ಶ್ರೀನಿವಾಸ್ರ ಮೆರವಣಿಗೆ ಆಯೋಜಿಸಲಾಗಿತ್ತು.
ನಗರದ ಪ್ರವಾಸಿ ಮಂದಿರದಿಂದ ಆರಂಭವಾದ ಮೆರವಣಿಗೆ ಪ್ರಮುಖ ರಸ್ತೆಗಳಲ್ಲಿ ವಿವಿಧ ಜಾನಪದ ತಂಡಗಳೊಂದಿಗೆ ಸಾಗಿ ಬಂದು ಕಾರ್ಯಕ್ರಮ ಆಯೋಜಿಸಿದ್ದ ನಚಿಕೇತ ನಿಲಯ ಆವರಣಕ್ಕೆ ಬರಬೇಕಾಗಿತ್ತು. ಈ ಸಂದರ್ಭದಲ್ಲಿ ಎತ್ತಿನ ಬಂಡಿಗೆ ಕಟ್ಟಿದ್ದ ಎತ್ತುಗಳು ಬೆದರಿ ನಚಿಕೇತ ನಿಲಯದ ರಸ್ತೆಯಲ್ಲಿ ಇಳಿಯದೆ ಎಡ ಭಾಗದ ಹಳ್ಳಕ್ಕೆ ಎಳೆದಿದ್ದರಿಂದ ಬಂಡಿ ಉರುಳಿ ಬಿದ್ದಿದೆ.
ಇದರಿಂದ ಬಂಡಿಯಲ್ಲಿದ್ದ ಪಿಚ್ಚಳ್ಳಿ ಶ್ರೀನಿವಾಸ್ ಆಯ ತಪ್ಪಿ ಕೆಳಗೆ ಬಿದ್ದಿದ್ದಾರೆ. ಅವರ ಕೈಗೆ ಸ್ವಲ್ಪ ಗಾಯಗಳಾಗಿವೆ.
ತಕ್ಷಣವೇ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ವೈದ್ಯರ ಚಿಕಿತ್ಸೆ ಮತ್ತು ಸಲಹೆ ಮೇರೆಗೆ ಅವರಿಗೆ ವಿಶ್ರಾಂತಿ ನೀಡಲಾಯಿತು. ಇದರಿಂದ ನಚಿಕೇತ ನಿಲಯದಲ್ಲಿ ಜಾನಪದ ಶೈಲಿಯಲ್ಲಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ಸ್ಥಗಿತಗೊಳ್ಳುವಂತಾಯಿತು.


ಹಂದಿ ಮಾಂಸದಂಗಡಿಗಳ ತೆರವು


ಗುಡಿಬಂಡೆ: ಪಟ್ಟಣದ ಹೊರವಲಯದ ಮುಖ್ಯರಸ್ತೆಯ ಅಕ್ಕಪಕ್ಕ ನಿರ್ಮಿಸಿಕೊಂಡಿದ್ದ ಹಂದಿ ಮಾಂಸದ ಅಂಗಡಿಗಳು ಮತ್ತು ಅಮಾನಿ ಬೈರಸಾಗರ ಕೆರೆಯ ಅಂಚಿನಲ್ಲಿ ನಿರ್ಮಿಸಿಕೊಂಡಿದ್ದ ಹಂದಿ ಗೂಡುಗಳು ಅನಧಿಕೃತವಾಗಿರುವ ಹಿನ್ನೆಲೆಯಲ್ಲಿ ಅವನ್ನು ಸ್ಥಳೀಯ ಪಪಂ ಸಿಬ್ಬಂದಿ ಪೊಲೀಸ್ ಜೊತೆಗೂಡಿ ತೆರವುಗೊಳಿಸಿದ ಘಟನೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪಪಂ ಹಿರಿಯ ಆರೋಗ್ಯ ನಿರೀಕ್ಷಕ ಶಿವಣ್ಣ, ಬೇಸಿಗೆ ಬೇಗೆ ಹೆಚ್ಚಾಗಿರುವುದರಿಂದ ನೀರಿನ ಅಭಾವ ತಪ್ಪಿಸಲು ಅಮಾನಿ ಬೈರಸಾಗರ ಕೆರೆಯ ನೀರನ್ನು ಪಟ್ಟಣದ ಜನತೆಗೆ ಪೂರೈಸಲಾಗುತ್ತಿದೆ. ಆದರೆ ಕೆರೆಯ ಸುತ್ತಮುತ್ತಲ ಪ್ರದೇಶದಲ್ಲಿ ಹಂದಿ ಮಾಂಸ ಮಾರಾಟಗಾರರು ನೀರನ್ನು ಕಲುಷಿಗೊಳಿಸುತ್ತಿದ್ದಾರೆ ಎಂಬ ಸಾರ್ವಜನಿಕರ ದೂರಿನ ಮೇರೆಗೆ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಕೆರೆಯ ನೀರನ್ನು ಮಲಿನಗೊಳಿಸಲು ಪ್ರಯತ್ನಿಸಿದರೇ ಅಂತಹವರ ವಿರುದ್ಧ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ನೀಡಿದರು.
ಪಪಂ ಕಿರಿಯ ಎಂಜಿನಿಯರ್ ತ್ಯಾಗರಾಜ್ ಮಾತನಾಡಿ, ಪಟ್ಟಣಕ್ಕೆ ನೀರು ಪೂರೈಸುತ್ತಿದ್ದ ಕೆಲವೊಂದು ಬೋರ್ವೆಲ್ಗಳು ಈಗಾಗಲೇ ಒಣಗಿಹೋಗಿದ್ದು, ಕೆಲವಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ. ಆದರೆ ಪಟ್ಟಣದ ಜನತೆಗೆ ತೊಂದರೆಯಾಗದಂತೆ ಸಮರ್ಪಕವಾಗಿ ನೀರು ಪೂರೈಸುವ ದೃಷ್ಟಿಯಿಂದ ಕೆರೆ ನೀರನ್ನು ಜನತೆಗೆ ಪೂರೈಸಲು ಪಪಂ ಮುಂದಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಕೆರೆಯಲ್ಲಿ ಬಟ್ಟೆ ಒಗೆಯುವುದಾಗಲೀ, ತಾಜ್ಯ ಹಾಕುವುದಾಗಲೀ ನಿಲ್ಲಿಸಿ ಕೆರೆಯ ನೀರನ್ನು ಮಲಿನಗೊಳಿಸದಂತೆ ಕಾಪಾಡಬೇಕೆಂದರು.
ಕಾರ್ಯಾಚರಣೆಯಲ್ಲಿ ಪೊಲೀಸ್ ಇಲಾಖೆಯ ಮುರಳಿ, ಗೃಹ ರಕ್ಷಕ ದಳದ ಕಮಾಡೆಂಟ್ ವೇಣುಗೋಪಾಲ್, ಪಪಂ ಸಿಬ್ಬಂದಿ ಅಶ್ವತ್ಥಪ್ಪ, ಪತಿ ಇದ್ದರು.


ಕ್ಯಾಟ್ ಫಿಶ್ ಸಾಗಿಸುತ್ತಿದ್ದ ಲಾರಿ ವಶ
ಶಿಡ್ಲಘಟ್ಟ: ನಿಷೇಧಿತ ಕ್ಯಾಟ್ ಫಿಶ್ ಅಥವಾ ಮಾರ್ವೇ ಮೀನು ಸಾಗಿಸುತ್ತಿದ್ದ ಲಾರಿಯನ್ನು ಶಿಡ್ಲಘಟ್ಟ ಚೆಕ್ ಪೋಸ್ಟ್ನಲ್ಲಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಡೀ ಲಾರಿಯನ್ನು ಪ್ಲಾಸ್ಟಿಕ್ ಶೀಟ್ ಬಳಸಿ ತೊಟ್ಟಿಯಂತೆ ಮಾಡಿ ಅದರ ತುಂಬಾ ನೀರು ತುಂಬಿಸಿ ಕ್ಯಾಟ್ ಫಿಶ್ ತುಂಬಿಸಿ ಸಾಗಾಣಿಕೆ ಮಾಡುತ್ತಿರುವುದನ್ನು ಚೆಕ್ಪೋಸ್ಚ್ನಲ್ಲಿದ್ದ ಪೊಲೀಸರು ಹಿಡಿದಿದ್ದಾರೆ. ಮಧ್ಯಪ್ರದೇಶದ ನೋಂದಣಿ ಇರುವ ಲಾರಿಯಲ್ಲಿ ತಾಲೂಕಿನ ಕ್ಯಾಟ್ ಫಿಶ್ ಸಾಕಾಣಿಕೆ ತೊಟ್ಟಿಯಿಂದ ಮೀನು ಬಾಂಬೆಗೆ ಸಾಗಿಸುತ್ತಿರುವುದಾಗಿ ಲಾರಿ ಚಾಲಕ ಅವತಾರ್ ಸಿಂಗ್ ತಿಳಿಸಿದ್ದು, ಇದನ್ನು ಖರೀದಿಸಿದವರು ಯಲಹಂಕದ ರಜಾಕ್ ಪಾಳ್ಯದ ನಿವಾಸಿ ಎಂದು ಪೊಲೀಸರು ತಿಳಿಸಿದ್ದಾರೆ. ಮೀನು ತುಂಬಿರುವ ಲಾರಿಯನ್ನು ಪೊಲೀಸರು ತಹಸೀಲ್ದಾರ್ ವಶಕ್ಕೆ ಒಪ್ಪಿಸಿದ್ದು, ಅವರು ಮೀನುಗಾರಿಕೆ ಇಲಾಖೆಗೆ ನೀಡಿದರು. ಮೀನುಗಾರಿಕೆ ಇಲಾಖೆಯವರು ಗುಂಡಿ ತೋಡಿ ಅದರಲ್ಲಿ ಮೀನು ಹಾಕಿ ನಾಶಪಡಿಸುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.