24 ಅಭ್ಯರ್ಥಿಗಳಿಂದ 33 ಉಮೇದುವಾರಿಕೆ ಸ್ವೀಕಾರ
ತುಮಕೂರು: ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ತುಮಕೂರು ಕ್ಷೇತ್ರದಿಂದ ಸ್ಪರ್ಧೆ ಬಯಸಿ ಒಟ್ಟು 24 ಅಭ್ಯರ್ಥಿಗಳಿಂದ 33 ನಾಮಪತ್ರಗಳು ಸ್ವೀಕೃತಗೊಂಡಿವೆ.
ನಾಮಪತ್ರ ಸ್ವೀಕರಿಸಲು ಕೊನೆಯ ದಿನವಾದ ಬುಧವಾರ 14 ಅಭ್ಯರ್ಥಿಗಳಿಂದ ನಾಮಪತ್ರ ಸ್ವೀಕೃತಗೊಂಡಿವೆ ಎಂದು ಜಿಲ್ಲಾಧಿಕಾರಿ ಸತ್ಯಮೂರ್ತಿ ತಿಳಿಸಿದರು. ಗುರುವಾರ ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲೆಗೆ ಆಗಮಿಸಿರುವ ವೀಕ್ಷಕ ನಾನಿಮಾಲಿ ಅವರ ಸಮಕ್ಷಮದಲ್ಲಿ ಚುನಾವಣಾ ಆಯೋಗದ ಸೂಚನೆ ಮೇರೆಗೆ ಇವಿಎಂ ಯಂತ್ರಗಳ ಪರಿಶೀಲನೆ ಮತ್ತು ರ್ಯಾಂಡಮೈಸೇಷನ್ ಕಾರ್ಯ ಜರುಗಲಿದೆ. ತದನಂತರ 11 ಗಂಟೆಗೆ ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಈ ಕುರಿತಂತೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಲ್ಲಾ ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಗೆ ಆಗಮಿಸಿರುವಂತಹ ಅರುಣಾಚಲ ಪ್ರದೇಶ ರಾಜ್ಯದ ನಾನಿಮಾಲಿ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಜಿಲ್ಲೆಯ ಚುನಾವಣಾ ಪ್ರಕ್ರಿಯೆಯನ್ನು ವೀಕ್ಷಿಸಲು ತಾವು ಕ್ಷೇತ್ರಾದ್ಯಂತ ಸಂಚರಿಸಿ ಎಂಸಿಸಿ ಉಲ್ಲಂಘನೆ ಮತ್ತು ಸಾರ್ವಜನಿಕರ ದೂರುಗಳನ್ನು ಆಲಿಸುವುದಾಗಿ ತಿಳಿಸಿದರು.
ಸ್ಥಿತಪ್ರಜ್ಞತೆಯಿರಲಿ: ಮಾಧ್ಯಮಗಳು ಯಾವುದೇ ಅಭ್ಯರ್ಥಿ ಅಥವಾ ಪಕ್ಷದ ಪರ ಕರ್ತವ್ಯ ನಿರ್ವಹಿಸಬಾರದು, ಬದಲಿಗೆ ಚುನಾವಣಾ ಆಯೋಗದ ಆಶಯದಂತೆ ಸ್ಥಿತಪ್ರಜ್ಞರಾಗಿ ಸಮಾಜದ ಕಲ್ಯಾಣವನ್ನು ದೃಷ್ಟಿಯಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸಬೇಕು ಮತ್ತು ಮುಕ್ತ ಮತ್ತು ಪಾರದರ್ಶಕ ಚುನಾವಣೆ ನಡೆಸಲು ಜಿಲ್ಲಾಡಳಿತದೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕು ಎಂದು ಮನವಿ ಮಾಡಿದರು.
ದೂರು ನೀಡಿ: ತಾವು ತುಮಕೂರು ನಗರದ ರೈಲ್ವೇನಿಲ್ದಾಣದ ಸಮೀಪದ ಪ್ರವಾಸಿ ಮಂದಿರದ ಕೊಠಡಿ ಸಂಖ್ಯೆ 1ರಲ್ಲಿ ತಂಗಿದ್ದು, ಸಾರ್ವಜನಿಕರು ಚುನಾವಣಾ ಅಕ್ರಮ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ತಮ್ಮನ್ನು ಭೇಟಿಯಾಗಿ ದೂರು ನೀಡಬಹುದಾಗಿದ್ದು, ತಮ್ಮ ದೂರವಾಣಿ ಸಂಖ್ಯೆ 9481284673 ಆಗಿದ್ದು ಮತ್ತು
ತಮಗೆ ಸಹಕಾರ ನೀಡಲು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯನ್ನು ನಿಯೋಜಿಸಲಾಗಿದ್ದು, ಅವರ ದೂರವಾಣಿ ಸಂಖ್ಯೆ 8197109987 ಆಗಿರುತ್ತದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ, ಜಿಲ್ಲಾಧಿಕಾರಿ ಕಚೇರಿ ಅಧಿಕಾರಿ ಹಡಪ್ಪದ್ ಅವರು ಉಪಸ್ಥಿತರಿದ್ದರು.
ನಾಮಪತ್ರ ವಿವರ: ತುಮಕೂರು ಲೋಕಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲಿಚ್ಛಿಸಿ ಮಾರ್ಚ್ 26 ಅಪರಾಹ್ನ 3 ಗಂಟೆಯವರೆಗೆ ಸ್ವೀಕರಿಸಲಾದ ಅಭ್ಯರ್ಥಿಗಳ ನಾಮಪತ್ರ ವಿವರ ಈ ಕೆಳಕಂಡಂತಿದೆ. ಇಂತಿಯಾಜ್ ಅಹಮದ್, ಜನತಾ ದಳ (ಸಂಯುಕ್ತ), ಅನ್ವರ್, ಪಕ್ಷೇತರ, ಎಲ್.ಪಿ. ಯದುನಂದನ, ಸಿದ್ದರಾಮೇಗೌಡ, ಪಕ್ಷೇತರ, ಎಂ.ಕೆ.ವರದರಾಜು, ಪಕ್ಷೇತರ, ಚಿನ್ನಪ್ಪ ವಿ. ಭಾರತೀಯ ಕಮ್ಯೂನಿಸ್ಟ್ ಪಕ್ಷ, ಗೋವಿಂದರಾಜು ಜೆ. ಪಕ್ಷೇತರ, ಜಿ.ಎಸ್. ಬಸವರಾಜು, ಪಕ್ಷೇತರ (ಎರಡು ನಾಮಪತ್ರ), ಶಿವಕುಮಾರ್, ಪಕ್ಷೇತರ, ನಿಲುಫರ್ ಜಮಾನಿ, ಬಹುಜನ ಸಮಾಜಪಕ್ಷ, ಎಸ್.ಪಿ. ಮುದ್ದಹನುಮೇಗೌಡ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್, ರಮೇಶ್ ಬಿ. ಪಕ್ಷೇತರ, ಎಸ್.ಬಿ. ಹನುಮಂತರಾಯಪ್ಪ, ಪಕ್ಷೇತರ, ಜಯರಾಮ್ ಅಖಿಲ ಭಾರತೀಯ ರೈತ ಪಾರ್ಟಿ.
ಮದ್ಯ ವಹಿವಾಟು ನಿಷೇಧ: ರಾಜ್ಯದ ಗಡಿಭಾಗದಲ್ಲಿ ಬರುವ ಹಿಂದೂಪುರ ಮತ್ತು ಮಡಕಸಿರಾದಲ್ಲಿ ಮಾ. 30 ರಂದು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವ ಸಂಬಂಧ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು, ತುಮಕೂರು, ಕರ್ನಾಟಕ ಅಬಕಾರಿ ಕಾಯ್ದೆ ಅನ್ವಯ ಹಾಗೂ ಪ್ರಜಾ ಪ್ರಾತಿನಿಧ್ಯ ಕಾಯ್ದೆಯಂತೆ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಅನಂತಪುರ ಜಿಲ್ಲೆಗೆ ಹೊಂದಿಕೊಂಡಿರುವ ಕರ್ನಾಟಕ ಗಡಿಪ್ರದೇಶದ ತುಮಕೂರು ಜಿಲ್ಲೆಯ 10 ಕಿ.ಮೀ. ತ್ರಿಜ್ಯದ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮದ್ಯದ ವಹಿವಾಟುಗಳನ್ನು ನಿಷೇಧಿಸಿ ಆದೇಶಿಸಿದ್ದಾರೆ. ಈ ಆದೇಶವು ಮಾರ್ಚ್ 28 ರ ಸಂಜೆ 6 ಗಂಟೆಯಿಂದ ಮಾರ್ಚ್ 30 ರ ಸಂಜೆ 6 ಗಂಟೆಯವರೆಗೆ ಮತ್ತು ಮತ ಎಣಿಕೆ ನಡೆಯುವ ಏಪ್ರಿಲ್ 2ರ ಬೆ.6 ರಿಂದ ಸಂಜೆ 6 ಗಂಟೆಯವರೆಗೆ ಜಾರಿಯಲ್ಲಿರುತ್ತದೆ ಎಂದು ಅವರು ಆದೇಶಿಸಿದ್ದಾರೆ.
ಆಹಾರ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ; ಗ್ರಾಮಸ್ಥರ ಆರೋಪ
ಶಿಡ್ಲಘಟ್ಟ: ಸರ್ಕಾರದ ಆದೇಶದಂತೆ ಆಹಾರ ಇಲಾಖೆ ಅಧಿಕಾರಿಗಳೊಂದಿಗೆ ಸಾಂಖಿಕ ಇಲಾಖೆ ಅಧಿಕಾರಿಗಳು ನಡೆಸುತ್ತಿರುವ ಪರಿಶೀಲನಾ ಕಾರ್ಯ ಲೋಪದೋಷಗಳಿಂದ ಕೂಡಿದೆ ಎಂದು ಸಾರ್ವಜನಿಕರಿಂದ ವ್ಯಾಪಕ ದೂರು ಕೇಳಿ ಬರುತ್ತಿದೆ.
ತಾಲೂಕಿನ ದೇವರಮಳ್ಳೂರು ಗ್ರಾಪಂ ವ್ಯಾಪ್ತಿಯ ಸೊಣ್ಣೇನಹಳ್ಳಿ ಹಾಗೂ ಕೊತ್ತನೂರು ಗ್ರಾಪಂ, ಹೇಮಾರ್ಲಹಳ್ಳಿ ಗ್ರಾಮಗಳಲ್ಲಿ ಆರ್ಥಿಕ ಸಾಂಖಿಕ ಇಲಾಖೆ ನಿರ್ದೇಶಕರ ಸೂಚನೆ ಮೇರೆಗೆ ಪ್ರಗತಿ ಪರಿಶೀಲನೆ ನಡೆಸುತ್ತಿರುವ ಅಧಿಕಾರಿಗಳು ಒಂದು ಹಳ್ಳಿಗೆ ಕೇವಲ 15 ಬಿಪಿಎಲ್ ಹಾಗೂ 5 ಎಪಿಎಲ್ ಕಾರ್ಡ್ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ನ್ಯಾಯಬೆಲೆ ಅಂಗಡಿಗಳ ಮಾಲೀಕರು ಸುಲಭವಾಗಿ ಕಾರ್ಡ್ದಾರರೊಂದಿಗೆ ಶಾಮೀಲಾಗಿ ಸುಳ್ಳು ಮಾಹಿತಿ ಒದಗಿಸುವಲ್ಲಿ ಯಶಸ್ವಿಯಾಗಿದ್ದು, ಅಧಿಕಾರಿಗಳು ಒಂದು ಮನೆಗೂ ಭೇಟಿಕೊಡದೆ ನ್ಯಾಯಬೆಲೆ ಅಂಗಡಿ ಮುಂದೆ ಕುಳಿತು ಮಾಹಿತಿ ಪಡೆದು ಕಾಟಾಚಾರಕ್ಕೆ ಅರ್ಜಿಗಳನ್ನು ಭರ್ತಿ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ದೂರಿದ್ದಾರೆ.
ಗಂಜಾಂ ಗ್ರಾಮದಲ್ಲಿ ವಿಶ್ವಜಲ ದಿನಾಚರಣೆ
ಶ್ರೀರಂಗಪಟ್ಟಣ: ತಾಲೂಕಿನ ಗಂಜಾಂ ಗ್ರಾಮದಲ್ಲಿ ವಿಶ್ವ ಜಲದಿನಾಚರಣೆ ಅಂಗವಾಗಿ ವಿಶೇಷ ಕಾರ್ಯಕ್ರಮ ನಡೆಯಿತು. ಆರ್ಸಿಎಡೆಡ್ ಶಾಲೆ ಸಭಾಂಗಣದಲ್ಲಿ ಮೈಸೂರಿನ ಓಡಿಪಿ ಸಂಸ್ಥೆ ಸಹಯೋಗದಲ್ಲಿ ಶಾಲಾ ಮಕ್ಕಳಿಂದ ಶುದ್ಧ ನೀರಿನ ಕಳಸವನ್ನು ತಲೆ ಮೇಲೆ ಹೊತ್ತು ತರುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದ ಸಂಜೋಜಕ ಓಡಿಪಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿ ಜಾನ್ ಕಾರ್ಯಕ್ರಮ ಕುರಿತು ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿದರು. ನಮ್ಮ ಸುತ್ತಲೂ ಉತ್ತಮ ಪರಿಸರ ಇದ್ದರೆ ನಮಗೆ ಮಳೆಯಾಗಿ ನೀರು ಬೆಳೆ ಆಹಾರ ದೊರೆಯುತ್ತದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಶಿಕ್ಷಕಿ ನಿಸರ್ಗ ಸೇರಿದಂತೆ ಶಿವಣ್ಣ, ಸ್ಟೆಲ್ಲಾ ಮೇರಿ, ಭಾಗ್ಯಶಂಕರ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

