ಕೋಲಾರ

ಬೈಕ್ ಪರಸ್ಪರ ಡಿಕ್ಕಿ: ಸ್ಥಳದಲ್ಲೇ ಸವಾರ ಸಾವು

Published On :

ಮಂಡ್ಯ: ಗೂಡ್ಸ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಎರಡು ಬೈಕ್ಗಳು ಪರಸ್ಪರ ಡಿಕ್ಕಿ ಹೊಡೆದು ಸವಾರನೊಬ್ಬ ಸ್ಥಳದಲ್ಲಿಯೇ ಮೃತಪಟ್ಟು ಮತ್ತೊಬ್ಬ ಗಾಯಗೊಂಡಿರುವ ಘಟನೆ ಕೆ.ಆರ್.ಪೇಟೆ ತಾಲೂಕು ಅಗಸರಹಳ್ಳಿ ಗೇಟ್ ಬಳಿ ಮೈಸೂರು - ಕೆ.ಆರ್.ಪೇಟೆ ರಸ್ತೆಯಲ್ಲಿ ನಡೆದಿದೆ. ಹೊಳೆನರಸೀಪುರ ತಾ. ಹಳ್ಳಿ ಮೈಸೂರು ಗ್ರಾಮದ ಮಂಜುನಾಥ್(36) ಮೃತಪಟ್ಟವರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮತ್ತೊಂದು ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯನ್ನು ಮೈಸೂರು ಕೆ.ಆರ್. ಆಸ್ಪತ್ರೆಗೆ ಸೇರಿಸಲಾಗಿದೆ. ಮಂಜುನಾಥ್ ಸ್ವಗ್ರಾಮ ಹಳ್ಳಿ ಮೈಸೂರಿನಿಂದ ತಮ್ಮ ತಾಯಿ ಅವರೊಂದಿಗೆ ಬೈಕಿನಲ್ಲಿ ಕೆ.ಆರ್.ಪೇಟೆ ಮಾರ್ಗವಾಗಿ ತೆಂಡೇಕೆರೆ ಕಡೆಗೆ ಹೋಗುತ್ತಿದ್ದರು. ಇದೇ ಮಾರ್ಗವಾಗಿ ಹಿಂದಿನಿಂದ ಬರುತ್ತಿದ್ದ ಗೂಡ್ಸ್ ವಾಹನ ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ಬೈಕ್ ಮುಂದೆ ಹೋಗುತ್ತಿದ್ದ ಮತ್ತೊಂದು  ಬೈಕಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಮಂಜುನಾಥ್ ಆಯತಪ್ಪಿ ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇನ್ನೊಂದು ಬೈಕಿನ ಸವಾರ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಅಪಘಾತದಲ್ಲಿ ವ್ಯಕ್ತಿ ಸಾವು
ಮಂಡ್ಯ: ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಕೆ.ಆರ್. ಪೇಟೆ ತಾಲೂಕು ಬೊಮ್ಮೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕತ್ತರಘಟ್ಟ ಗ್ರಾಮದ ಕುಮಾರೇಗೌಡ ಮತ್ತು ಯಶೋದಮ್ಮ ದಂಪತಿ ಪುತ್ರ ಸದಾಶಿವ (23) ಮೃತಪಟ್ಟವರು. ಹರಿಹರಪುರದಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದ ಸಮಯದಲ್ಲಿ ಅಪರಿಚಿತ ವಾಹನ ಬೈಕ್ಗೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ. ಘಟನಾ ಸ್ಥಳಕ್ಕೆ ಎಸ್ಐ ಜನಾರ್ದನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೆ.ಆರ್.ಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ಸೇವಾದಳ ತಾ. ಘಟಕ ಅಧ್ಯಕ್ಷರ ನೇಮಕ
ಕೆ.ಆರ್.ಪೇಟೆ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸೇವಾದಳದ ತಾಲೂಕು ಘಟಕ ಅಧ್ಯಕ್ಷರಾಗಿ ಕೆ.ಎಸ್.ಕುಮಾರ್, ಸಾಕ್ಷಿಬೀಡು ಎಸ್.ಆರ್.ಶ್ರೀನಿವಾಸ್ ಅವರನ್ನು ನೇಮಕ ಮಾಡಿ ಸೇವಾ ದಳದ ರಾಜ್ಯಾಧ್ಯಕ್ಷ ಭೀಮ ಶಂಕರ್ ಆದೇಶ ಹೊರಡಿಸಿದ್ದಾರೆ. ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಜಿಲ್ಲಾ ಕಾಂಗ್ರೆಸ್ ಸೇವಾದಳ ಅಧ್ಯಕ್ಷ ಗುಣಶೇಖರ್ ಶಿಫಾರಸ್ಸಿನ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. ತಾಲೂಕಿನಲ್ಲಿ ಕಾಂಗ್ರೆಸ್ನ್ನು ಸದೃಢವಾಗಿ ಕಟ್ಟಲು ನೂತನ ಅಧ್ಯಕ್ಷರು ಕ್ರಿಯಾಶೀಲರಾಗಿ ಕೆಲಸ ಮಾಡಬೇಕು ಎಂದು ತಿಳಿಸಿದ್ದಾರೆ. ನೂತನ ಅಧ್ಯಕ್ಷ ಕೆ.ಎಸ್.ಕುಮಾರ್ ಮತ್ತು ಎಸ್.ಆರ್.ಶ್ರೀನಿವಾಸ್ ಅವರನ್ನು ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಎಂ.ಡಿ.ಕೃಷ್ಣಮೂರ್ತಿ, ರುಕ್ಮಾಂಗದ, ಯುವ ಕಾಂಗ್ರೆಸ್ ಅಧ್ಯಕ್ಷ ಚಿಕ್ಕೋನಹಳ್ಳಿ ಸಿ.ಬಿ.ಚೇತನ್ಕುಮಾರ್ ಇತರರು ಅಭಿನಂದಿಸಿದ್ದಾರೆ.
ರಕ್ತದಾನ
ಶಿಬಿರ ಇಂದು
ಮಂಡ್ಯ: ಸರ್ಕಾರಿ ಮಹಾವಿದ್ಯಾಲಯದ ಎನ್ಎಸ್ಎಸ್ ಹಾಗೂ ಎನ್ಸಿಸಿ ಘಟಕ, ಲಯನ್ಸ್, ಪದ್ಮನಾಭನಗರ ಲಯನ್ಸ್, ಮಿಮ್ಸ್ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ಮಾ.28 ರಂದು ನಗರದ ಸರ್ಕಾರಿ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ ಜರುಗಲಿದೆ. ಜಿಲ್ಲಾ ಅಪರ ಪೊಲೀಸ್ ವರಿಷ್ಠಾಧಿಕಾರಿ ಎಂ.ಪುಟ್ಟಮಾದಯ್ಯ ಶಿಬಿರ ಉದ್ಘಾಟಿಸುವರು. ಪ್ರಾಂಶುಪಾಲ ಪ್ರೊ. ಡಿ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸ್ಥೆಯ ಪೋಷಕ ಕೆ.ಟಿ.ಹನುಮಂತು, ಅಧ್ಯಕ್ಷ ಜೆ.ಶಿವಣ್ಣ, ಭಾರತಿಕೃಷ್ಣಪ್ಪ, ಚಂದ್ರು, ಮಹಾದೇವ್ ಪ್ರಸಾದ್, ಸುನೀತಾ, ಡಾ.ಎ.ರಘು, ಎ.ಎಲ್.ಸುರೇಶ್, ಎಚ್.ಟಿ.ಆನಂದ್, ವಿ.ರೇಣುಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.