ಕೋಲಾರ

10 ಲಕ್ಷ ಮೌಲ್ಯದ ರಕ್ತ ಚಂದನ ಮರದ ತುಂಡುಗಳ ವಶ

Published On :

ಚನ್ನಪಟ್ಟಣ: ಅಕ್ರಮವಾಗಿ ದಾಸ್ತಾನಿಡಲಾಗಿದ್ದ  10 ಲಕ್ಷ ರು. ಮೌಲ್ಯದ ರಕ್ತ ಚಂದನ ಮರದ ತುಂಡುಗಳನ್ನು ಎಎಸ್ಪಿ ಕುಲದೀಪ್ಕುಮಾರ್ ಜೈನ್ ನೇತೃತ್ವದಲ್ಲಿ ಪೊಲೀಸರು ದಾಳಿ ನಡೆಸಿ ವಶಪಡಿಸಿ ಕೊಂಡಿರುವ ಘಟನೆ ಗುರುವಾರ ತಡ ರಾತ್ರಿ ನಡೆದಿದೆ. ಪಟ್ಟಣದ ಅಬೀದ್ಪುರ ಮೊಹಲ್ಲಾದ ಕರಕುಶಲ ವಸ್ತುಗಳ ತಯಾರಿಕಾ ಕಾರ್ಖಾನೆಯಲ್ಲಿ ಅಕ್ರಮವಾಗಿ ರಕ್ತಚಂದನ ಮರವನ್ನ ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ ಪೊಲೀಸರು 500 ಕೆ.ಜಿಗಳಷ್ಟು ರಕ್ತ ಚಂದನ ಮರವನ್ನು ವಶಪಡಿಸಿಕೊಂಡು,  ಮಾಲೀಕ ನಸೀರುದ್ದೀನ್ ಮತ್ತು ಸಲಾವುದ್ದೀನ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ತಮ್ಮ ಕಾರ್ಖಾನೆಯಲ್ಲಿ ಅರಣ್ಯ ಇಲಾಖೆಯಿಂದ ಯಾವುದೇ ಅನುಮತಿ ಪಡೆಯದೆ ಈ ಮರಗಳನ್ನು ದಾಸ್ತಾನಿಡಲಾಗಿತ್ತು.  ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಜೂಜು ಕೋರರ ಸೆರೆ: ಪಟ್ಟಣದ ಬೀಡಿ ಕಾರ್ಮಿಕರ ಕಾಲೋನಿಯ ಜೂಜು ಅಡ್ಡೆಯ ಮೇಲೆ ದಾಳಿಮಾಡಿದ ಎಎಸ್ಪಿ ಕುಲದೀಪ್ ಕುಮಾರ್ ಜೈನ್ ನೇತೃತ್ವದ ತಂಡ 5 ಮಂದಿ ಜೂಜುಕೋರರನ್ನು ಬಂಧಿಸಿ ಜೂಜಾಟದಲ್ಲಿ ಪಣಕ್ಕಿಟ್ಟಿದ್ದ 4 ಸಾವಿರ ರು. ಹಣವನ್ನು ವಶಪಡಿಸಿ ಕೊಂಡಿದ್ದಾರೆ. ಬಂಧಿತ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.
ಮನೆಯ ಬಾಗಿಲು ಒಡೆದು ಚಿನ್ನಾಭರಣ ಕಳವು
ಚನ್ನಪಟ್ಟಣ: ಪಟ್ಟಣದ ಮಹಾಲಕ್ಷ್ಮೀ ಬಡಾವಣೆಯ ಮನೆಯ ಬಾಗಿಲು ಒಡೆದು ಚಿನ್ನಾಭರಣ ಕಳವು ಮಾಡಿರುವ ಘಟನೆ  ಗುರುವಾರ ರಾತ್ರಿ ನಡೆದಿದೆ. ಇಲ್ಲಿನ ಲಂಕೇಶ್ ಎಂಬುವರು ಮನೆಗೆ ಬೀಗಹಾಕಿ ಕುಟುಂಬ ಸಮೇತ ಬೇರೆಡೆ ಹೋಗಿದ್ದರು, ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಾತ್ರಿ ಪಡಿಸಿಕೊಂಡ ಕಳ್ಳರು ಬಾಗಿಲು ಒಡೆದು ಬೀರುವಿನಲ್ಲಿಟ್ಟಿದ್ದ 1ಲಕ್ಷ ರು. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ. ಈ ಸಂಬಂಧ ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕ್ಯಾಂಟರ್ ಡಿಕ್ಕಿ: ಸ್ಥಳದಲ್ಲೇ ಪಾದಚಾರಿ ಸಾವು
ಚನ್ನಪಟ್ಟಣ: ಪಾದಚಾರಿಗೆ ಕ್ಯಾಂಟರ್ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವಿಗೀಡಾಗಿರುವ ಘಟನೆ ತಾಲೂಕಿನ ಚಿಕ್ಕಮಳೂರು ಗ್ರಾಮದ ಬಳಿ ನಡೆದಿದೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ಪಾದಚಾರಿಗೆ ಕ್ಯಾಂಟರ್ ಡಿಕ್ಕಿ ಹೊಡೆದಿದ್ದು, ಡಿಕ್ಕಿ ಹೊಡೆದ ರಭಸಕ್ಕೆ ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಮೃತ ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಾಗಿದೆ.
ಅಕ್ರಮ ಸಾಗಣೆ: 10 ಟನ್ ಅಕ್ಕಿ ವಶ
ಚನ್ನಪಟ್ಟಣ: ಅಕ್ರಮವಾಗಿ ಸಾಗಾಣಿಕೆ ಮಾಡಲಾಗುತ್ತಿದ್ದ 10 ಟನ್ ಅಕ್ಕಿಯನ್ನು ಗ್ರಾಮಾಂತರ ಪೊಲೀಸರು ವಶಪಡಿಸಿ ಕೊಂಡಿರುವ ಘಟನೆ ಇಲ್ಲಿನ ದೊಡ್ಡಮಳೂರು ಬಳಿ ನಡೆದಿದೆ. ಯಾವುದೇ ದಾಖಲಾತಿ ಇಲ್ಲದೆ ಅಕ್ಕಿ ಸಾಗಾಣಿಕೆಯಾಗುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ದಾಳಿನಡೆಸಿದ ಗ್ರಾಮಾಂತರ ಪೊಲೀಸರು ಲಾರಿಯಲ್ಲಿದ್ದ  50 ಕೆಜಿ ತೂಕದ 200 ಮೂಟೆ ಅಕ್ಕಿಯನ್ನು ವಶಪಡಿಸಿ ಕೊಂಡು ವಾಹನ ಚಾಲಕ ಮತ್ತು  ಕ್ಲೀನರ್ಅನ್ನು ಬಂಧಿಸಿದ್ದಾರೆ. ಇದು ಅನ್ನಭಾಗ್ಯದ ಅಕ್ಕಿಯೇ, ಇಲ್ಲ ಚುನಾವಣೆಯಲ್ಲಿ ಮತದಾರರಿಗೆ ಆಮಿಷವೊಡ್ಡಲು ತೆಗೆದುಕೊಂಡು ಹೋಗುತ್ತಿದ್ದ ಅಕ್ಕಿಯೇ ಎಂಬುದು ಇನ್ನೂ ಖಚಿತವಾಗದಿದ್ದು ಈ ಸಂಬಂಧ ಗ್ರಾಮಾಂತರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.