ಆಮಿಷಗಳಿಗೆ ಬಲಿಯಾಗಿ ಮತ ಮಾರಿಕೊಳ್ಳದಿರಿ
ಚಿಕ್ಕಬಳ್ಳಾಪುರ: ಮತದಾರರು ಚುನಾವಣೆಯಲ್ಲಿ ನಿರ್ಭೀತಿಯಿಂದ ಒಳ್ಳೆಯವರಿಗೆ ಮತ ನೀಡಬೇಕು. ಯಾರೂ ಆಮಿಷಗಳಿಗೆ ಬಲಿಯಾಗಿ ಮತವನ್ನು ಮಾರಿಕೊಳ್ಳಬಾರದೆಂದು ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಕರೆ ನೀಡಿದರು.
ನಗರದ ಸಿಟಿಜನ್ ಕ್ಲಬ್ನಲ್ಲಿ ಜಿಲ್ಲಾ ಪಂಚಾಯ್ತಿ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗ ಪ್ರಜಾಪ್ರಭುತ್ವದಲ್ಲಿ ಮತದಾನದ ಮಹತ್ವ ಕುರಿತು ಏರ್ಪಡಿಸಿದ್ದ ವಿಚಾರಗೋಷ್ಠಿ ಹಾಗೂ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನ ನೀಡಿರುವ ಮಹತ್ತರವಾದ ಹಕ್ಕು ಮತದಾನ. ಇದನ್ನರಿತುಕೊಂಡು ಪ್ರಾಮಾಣಿಕವಾಗಿ ಪ್ರತಿಯೊಬ್ಬರು ಮತ ಚಲಾಯಿಸಬೇಕು. ವಿಶೇಷವಾಗಿ ಮತದಾನದ ಮಹತ್ವವನ್ನು ಯುವಕ ಯುವತಿಯರು ಅರಿಯುವುದಲ್ಲದೇ ಇತರರಿಗೂ ತಿಳಿಸಿ ಜಾಗೃತಿ ಮೂಡಿಸಬೇಕು. ಇದರಿಂದ ಸುಲಭವಾಗಿ ಸದೃಢ ಪ್ರಜಾಪ್ರಭುತ್ವವನ್ನು ರಚನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಇಂದು ಈ ದೇಶಕ್ಕೆ ಒಳ್ಳೆಯ ನಾಯಕತ್ವದ ಪ್ರಜಾಪ್ರಭುತ್ವ ಸರ್ಕಾರದ ಅವಶ್ಯಕತೆ ಇದೆ. ಇದಕ್ಕೆ ಪ್ರಾಮಾಣಿಕ ಅರ್ಹ ವ್ಯಕ್ತಿಗಳನ್ನು ಆಯ್ಕೆಮಾಡುವುದು ನಮ್ಮ ಕೈಯಲ್ಲಿದೆ ಎಂದ ಅವರು, ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡಬೇಕು. ಈ ಬಗ್ಗೆ ದಿಟ್ಟ ಸಂಕಲ್ಪವನ್ನಿಟ್ಟುಕೊಳ್ಳುವುದರ ಜೊತೆಗೆ ತಮ್ಮ ಸಂಬಂಧಿಕರು ಸಹ ಮತದಾನ ಮಾಡಲು ಪ್ರೇರೇಪಿಸಬೇಕೆಂದರು. ಮತದಾನದ ಬಗ್ಗೆ ಜಾಗೃತಿ ಮೂಢಿಸಲು ಇಲಾಖೆಯಿಂದ ಅನೇಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ನಾಟಕ, ರ್ಯಾಲಿ, ಕರಪತ್ರ ಸೇರಿದಂತೆ ನಾನಾ ವಿಧಾನಗಳ ಮೂಲಕ ಮತದಾನ ಹಕ್ಕಿನ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎ.ಅಜಿತ್ ಪ್ರಸಾದ್ ಮಾತನಾಡಿ, ಈ ಹಿಂದಿನ ದಿನಗಳಲ್ಲಿ ಮತದಾನದ ಹಕ್ಕಿನ ಬಗ್ಗೆ ಸರಿಯಾಗಿ ಅರಿವು ಇರಲಿಲ್ಲ. ಆದರೆ, ಈಗ ಅದರ ಮಹತ್ವವನ್ನು ವ್ಯಾಪಕವಾಗಿ ತಿಳಿಸಲಾಗುತ್ತಿದೆ ಎಂದರು.
ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಎಂ. ನಾರಾಯಣಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿ, ನವಭಾರತ ನಿರ್ಮಾಣಕ್ಕಾಗಿ ನಾವೆಲ್ಲರೂ ಕಂಕಣಬದ್ಧರಾಗಬೇಕಾಗಿದೆ ಎಂದರು.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗಾಗಿ ನಡೆದ ರಂಗೋಲೆ, ರೂಪದರ್ಶಿ, ಕೇಶರಾಶಿ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಉಪನ್ಯಾಸಕರಾದ ವಿ.ಎಸ್. ದೀಪ, ಕೆ. ವೆಂಕಟೇಶ್, ನಟರಾಜ್, ವಿಚಾರಗೋಷ್ಠಿಯ ಸಂಯೋಜಕ ಟಿ.ನಾಗರಾಜಯ್ಯ, ಸಾಂಸ್ಕೃತಿಕ ಸಮಿತಿ ಸಂಚಾಲಕ ಮೊಹ್ಮದ್ ಹಮೀದ್, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಎನ್.ಕವನ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಎಂ.ಕೃಷ್ಣಪ್ಪ, ಮಹಿಳಾ ದಿನಾಚರಣೆ ಸಂಯೋಜಕಿ ಹೆಚ್. ಗೀತಾ ಮಾತನಾಡಿದರು.
ಉಪನ್ಯಾಸಕರಾದ ಧರ್ಮಶೆಟ್ಟಿ, ಬಿ.ಆರ್. ನರಸಿಂಹಮೂರ್ತಿ, ಹೇಮಾವತಿ, ವನಜ, ಶಶಿಕಲಾ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಬಿ.ಎಂ. ನೀನಾ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

