ಕೋಲಾರ

ಬಾಕಿ ಹಣ ನೀಡದಿದ್ದರೆ ಉಪವಾಸ

Published On :

ಕೋಲಾರ: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರಿಗೆ ಬರಬೇಕಾಗಿರುವ ಬಾಕಿ ಹಣ ಕೂಡಲೇ ಪಾವತಿ ಮಾಡಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಳೆದ ಎರಡು ತಿಂಗಳಿಂದ ಕೂಲಿಕಾರರಿಗೆ ಹಣ ನೀಡಿಲ್ಲ, ಇದರಿಂದಾಗಿ ಬಡವರು ಜೀವನ ಮಾಡುವುದು ಕಷ್ಟವಾಗಿದೆ, ಸರ್ಕಾರ ಹಣ ತಕ್ಷಣ ಬಿಡುಗಡೆ ಮಾಡದಿದ್ದರೆ, ಯುಗಾದಿ ಹಬ್ಬವನ್ನು ಉಪವಾಸ ಹಬ್ಬವನ್ನಾಗಿ ಆಚರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವರು ಬಾಕಿ ಕೂಲಿ ಹಣ ಪಾವತಿಗಾಗಿ ಕೇಂದ್ರದಿಂದ ಅನುದಾನ ತರಿಸಿ ಯುಗಾದಿ ಹಬ್ಬಕ್ಕೆ ಮುಂಚಿತವಾಗಿ ಕೂಲಿ ಹಣ ಪಾವತಿ ಮಾಡಬೇಕು, ಇಲ್ಲದಿದ್ದರೆ ಹಬ್ಬದ ದಿನ ಸಮಸ್ತ ಕೂಲಿಕಾರರು ಉಪವಾಸ ಆಚರಣೆ ಮಾಡುವುದು ಖಚಿತವೆಂದರು.
ಕೋಲಾರ ಜಿಲ್ಲೆಯಲ್ಲಿ ಕಳೆದ ಎರಡು ತಿಂಗಳನಿಂದ ಕೂಲಿ ಕೆಲಸ ಮಾಡಿರುವ ಕಾರ್ಮಿಕರಿಗೆ ಸುಮಾರು ರು. 12 ಕೋಟಿ ಬರಬೇಕಾಗಿದ್ದು,ಈ ಬಗ್ಗೆ ಹಲವಾರು ಬಾರಿ ಕೋಲಾರ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್ ಸರ್ಕಾರದ ಜನಪ್ರಿಯ ಯೋಜನೆಯೆಂದು ಬಿಂಬಿಸುತ್ತಿರುವ ನರೇಗಾಕ್ಕೆ ಹಣವಿಲ್ಲದೆ ಇರುವುದನ್ನು ನೋಡಿದರೆ ಇವರು ಬಡವರ ಮೇಲೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ ಎಂದು ಟೀಕಿಸಿದರು.
ರಾಜ್ಯಕ್ಕೆ ಸುಮಾರು ರು. 450 ಕೋಟಿ, ಆಂಧ್ರಪ್ರದೇಶಕ್ಕೆ ರು. 300 ಕೋಟಿ ಹೀಗೆ ದೇಶದ ಬಹುತೇಕ ರಾಜ್ಯಗಳಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ ಅನ್ವಯ ಕೆಲಸ ಮಾಡಿರುವ ಲಕ್ಷಾಂತರ ಬಡ ಕೃಷಿ ಕೂಲಿಕಾರ್ಮಿಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನೀಡಬೇಕಿರುವ ಕೂಲಿ ಬಾಕಿ ಹಣದ ಮೊತ್ತ ಮಾ.31ಮತ್ತಷ್ಟು ಹೆಚ್ಚಾಗಬಹುದೆಂದರು.
ಕೇಂದ್ರ ಸಚಿವರ ವಿರುದ್ಧ ಗರಂ: ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಕಾಯ್ದೆಯ ಜಾರಿಗಾಗಿ ಕಾದಿರಿಸಿದ್ದ ಹಣವನ್ನು ಬೇರೆ ಕಾರ್ಯಕ್ರಮಗಳಿಗೆ ಮರು ನಿಯೋಜನೆ ಮಾಡಿದ್ದರೆಂಬ ವರದಿ ಅತಂಕಕಾರಿಯಾಗಿದೆ. ಇದಕ್ಕೆ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಅಧಿಕಾರಿಗಳಿಂದ ಹಿಡಿದು ಕೇಂದ್ರ ಸಚಿವ ರಮೇಶ್ ಜಯರಾಂ ಹೊಣೆಯಾಗಿರುತ್ತಾರೆ ಎಂದು ದೂರಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೂಡಲೇ ಈ ಬಗ್ಗೆ ಪರ್ಯಾಯ ವ್ಯವಸ್ಥೆ ಮಾಡದಿದ್ದರೆ ಕೇಂದ್ರ ಸಚಿವ ಕೆ.ಎಚ್. ಮುನಿಯಪ್ಪ ಮನೆ ಮುಂದೆ ಅಥವಾ ಮಹಾತ್ಮಗಾಂಧಿ ವನದಲ್ಲಿ ಯುಗಾದಿ ಹಬ್ಬವನ್ನು ಹಸಿವಿನ ಉಪವಾಸ ಕಾರ್ಯಕ್ರಮವನ್ನಾಗಿ ಹಮ್ಮಿಕೊಳ್ಳಲು ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು. ಸಂಘದ ಜಿಲ್ಲಾ ಕಾರ್ಯದರ್ಶಿ ಟಿ.ಎಂ. ವೆಂಕಟೇಶ್, ಶ್ರೀರಾಮ್, ನಾರಾಯಣರೆಡ್ಡಿ ಗೋಷ್ಠಿಯಲ್ಲಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.