ಸಹಬಾಳ್ವೆಗೆ ಮೊದಲ ಆದ್ಯತೆ
ಕಪ್ರ ವಾರ್ತೆ ಕೋಲಾರ ಮಾ.30
ನೆಲದ್ರೋಹದ ರಾಜಕಾರಣದಿಂದ ಛಿದ್ರಗೊಂಡಿರುವ ಜನ ಸಮುದಾಯಗಳ ಎದೆಗಳಲ್ಲಿ ಸಹಬಾಳ್ವೆಯ ಜ್ಯೋತಿ ಬೆಳಗಿಸುವುದು ನನ್ನ ಮೊದಲ ಆದ್ಯತೆಯಾಗಿದೆ ಎಂದು ಆಮ್ ಆದ್ಮಿ ಅಭ್ಯರ್ಥಿ ಕೋಟಿಗಾನಹಳ್ಳಿ ರಾಮಯ್ಯ ತಿಳಿಸಿದ್ದಾರೆ.
ಅವರು ತಮ್ಮ ಸ್ವಯಂ ಪ್ರಣಾಳಿಕೆಯಲ್ಲಿ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ದ್ರೋಹ ರಾಜಕಾರಣ ಮಾಡಿರುವುದರಿಂದ ಜನತೆಯಲ್ಲಿ ಸಹಬಾಳ್ವೆ ಇಲ್ಲದಂತಾಗಿದೆ ಎಂದು ಆರೋಪಿಸಿದ್ದಾರೆ.
ನಮ್ಮ ನೆಲದ ಪರಂಪರಾನುಗತ ಜಲದ ಕಣ್ಣುಗಳಾದ ಕೆರೆ, ಕುಂಟೆ, ಕಲ್ಯಾಣಿಗಳ ಹೂಳೆತ್ತಿಸಿ, ಮಳೆ ನೀರನ್ನು ಸಂಗ್ರಹಿಸಿ ಸ್ಥಳೀಯ ಆದ್ಯತೆಗೆ ತಕ್ಕಂತೆ ಸ್ವಾವಲಂಬಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿಕೊಳ್ಳುವುದು, ಜಲಶಿಕ್ಷಣವನ್ನೇ ಪ್ರಾಥಮಿಕ ಶಿಕ್ಷಣದ ಅಧಿಕೃತ ಪಠ್ಯವಾಗಿಸಿ ಪ್ರಾತ್ಯಕ್ಷಿಕ ಕಲಿಕೆಗಳ ಮೂಲಕ ಮುಂದೊಮ್ಮೆ ಹನಿ ನೀರನ್ನೂ ಪೋಲು ಮಾಡದಂತೆ ಸಾಕ್ಷರಗೊಳಿಸುವುದು ತನ್ನ ಉದ್ದೇಶವೆಂದು ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ, ರಾಜ್ಯದ ನೀರಾವರಿ ಯೋಜನೆಗಳಲ್ಲಿ ನಮ್ಮ ನೆಲದ ಅಗತ್ಯಗಳಿಗೆ ಆದ್ಯತೆ ಬರುವಂತೆ ಜಿಲ್ಲೆಯ ರಾಜಕಾರಣವನ್ನು ಪಕ್ಷಾತೀತ ನೆಲೆಗಳಲ್ಲಿ ಒಗ್ಗೂಡಿಸಿ ಒಮ್ಮತದ ಲಾಬಿ ನಿರ್ಮಿಸುವುದು. ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿರುವ ಹಾಗೂ ಮುಂದೆ ಮೂಲೆಗುಂಪಾಗಲಿರುವ ನಮ್ಮ ನೆಲದ ಕುಡಿಗಳಿಗೆ ಹೆಮ್ಮೆ ತರುವಂತಹ ಜೈವಿಕ ವಿಜ್ಞಾನ, (ಬಯೋಟೆಕ್ ರಾಜಕೀಯ ವಿಜ್ಞಾನ, ಮಾನವೀಕ ವಿಜ್ಞಾನಗಳ ಮೂರು ಉನ್ನತ ಶಿಕ್ಷಣದ ಅಂತಾರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾನಿಲಯಗಳನ್ನು ನರ್ಸರಿಯಿಂದಲೇ ತಳಹದಿ ನಿರ್ಮಿಸಿ ಸ್ಥಾಪಿಸುವುದು.
ಕಾಂಗ್ರೆಸ್, ಜೆಡಿಎಸ್, ಬಿಜೆಪಿಯ ಲಾಭಕೋರ ವಂಚಕರ ಜನಪ್ರಿಯ ಬಣ್ಣದ ಘೋಷಣೆಗಳ ಮಂಕುಬೂದಿಯಿಂದ ಮಂಕಾಗಿರುವವರನ್ನು ಬಿಡುಗಡೆಗೊಳಿಸುವುದು ಹಾಗೂ ಭ್ರಷ್ಟಾಚಾರವನ್ನು ಗುಡಿಸಿ ನಿಯಂತ್ರಿಸುವುದು ನನ್ನ ಮೊದಲ ಗುರಿ.
ಭಾರತದ ಸಂವಿಧಾನದ ರೀತಿ ಪ್ರತಿಯೊಬ್ಬ ಪ್ರಜೆಗೂ ಸ್ವಂತ ಮನೆ, ಭೂಮಿ ಕೊಡುವುದು ನಮ್ಮ ಪಕ್ಷದ ಧ್ಯೇಯವಾಗಿದ್ದು, ತಮ್ಮ ಭಾಗಕ್ಕಿದ್ದ ಸ್ವಂತವಾದ ಅಂಗೈಅಗಲದ ನೆಲ ಇದ್ದಲ್ಲಿ ಅದು ಕೈ ತಪ್ಪಿ ಹೋಗದಂತೆ ರಾಷ್ಟ್ರೀಯ ನೀತಿ ರೂಪಿಸಿ ಜಾರಿಗೆ ತರುವುದು. ನೀರು ಬಣ್ಣವಿಲ್ಲದಿದ್ದರೂ ಕಣ್ಣಿಗೆ ಕಾಣುವಂತದು. ಅದು ಎಲ್ಲರ ಹಕ್ಕು. ಅಂತಹ ನೀರು ಈಗ ಖಾಸಗೀಕರಣದ ಫಲವಾಗಿ ಉಳ್ಳವರ ಸ್ವತ್ತಾಗಿದೆ. ಅಂತಹ ಅಗತ್ಯವಿರುವ ನೀರನ್ನು ಸಾರ್ವತ್ರಿಕ ಉಚಿತ ಸ್ವತ್ತಾಗಿಸುವುದಕ್ಕೆ ಶ್ರಮಿಸುವುದಾಗಿ ಅವರು ತಮ್ಮ ಪ್ರಣಾಳಿಕೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

