ಪಂಕ್ತಿಭೇದ ನಿಷೇಧಕ್ಕೆ ಸಿಪಿಐಎಂ ಆಗ್ರಹ
ಕೋಲಾರ: ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಪಂಕ್ತಿಭೇದ ಪದ್ಧತಿ ನಿಷೇಧಿಸಲು ಒತ್ತಾಯಿಸಿ ಸೋಮವಾರ ನಗರದಲ್ಲಿ ಸಿಪಿಎಂನಿಂದ ಪ್ರತಿಭಟನೆ ನಡೆಯಿತು. ಮಠದಲ್ಲಿ ಕಾನೂನು ಬಾಹಿರ ಪಂಕ್ತಿಭೇದ ನಡೆಯುತ್ತಿದ್ದರೂ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಓಟಿನ ರಾಜಕಾರಣಕ್ಕಾಗಿ ಮೌನ ವಹಿಸಿವೆ, ಸರ್ಕಾರ ಪಂಕ್ತಿ ಭೇದವನ್ನು ಕಾನೂನು ರೀತಿಯಲ್ಲಿ ನಿಷೇಧ ಮಾಡದಿದ್ದರೆ ಹೋರಾಟ ಮುಂದುವರೆಸುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಸಿಪಿಐಎಂನ ಜಿ. ಅರ್ಜುನನ್, ಪಿ. ಶ್ರೀನಿವಾಸ್, ವಿ. ಗೀತಾ, ನವೀನ್ ಕುಮಾರ್, ಟಿ.ಎಂ. ವೆಂಕಟೇಶ್, ಅಚ್ಚುತ್, ಗಂಗಮ್ಮ, ಶ್ರೀರಾಮ್, ಸಂಪಂಗಿ, ರಮಣ ಇದ್ದರು.
ಕಾರು ಡಿಕ್ಕಿ: 15 ಕುರಿ ಸಾವು
ಕೋಲಾರ: ರಾಷ್ಟ್ರೀಯ ಹೆದ್ದಾರಿ 4ರ ಕೋಲಾರ-ಮುಳಬಾಗಲು ರಸ್ತೆಯ ಅಜ್ಜಪ್ಪನಹಳ್ಳಿ ಬಳಿ ಸೋಮವಾರ ರಾತ್ರಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ 15 ಕುರಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ವೆಂಕಟೇಶಪ್ಪ ಎಂಬುವರ ಪತ್ನಿ ಕುರಿಗಳನ್ನು ಮನೆಗೆ ಕರೆದೊಯ್ಯುತ್ತಿದ್ದಾಗ ಕಾರು ವೇಗವಾಗಿ ಬಂದು ಡಿಕ್ಕಿ ಹೊಡೆದಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ. ಸುಮಾರು 90 ಸಾವಿರ ರು.ನಷ್ಟ ಉಂಟಾಗಿರಬಹುದೆಂದು ಅಂದಾಜು ಮಾಡಲಾಗಿದೆ.
ಕಳ್ಳತನಕ್ಕೆ ಯತ್ನಿಸಿ ಸಿಕ್ಕಿಬಿದ್ದ ಕಳ್ಳರು
ಗುಡಿಬಂಡೆ: ಮನೆಯೊಂದರಲ್ಲಿ ಕಳುವು ಮಾಡಲು ಯತ್ನಿಸಿದ ಸಮಯದಲ್ಲಿ ಗ್ರಾಮದ ಯುವಕರ ಕೈಗೆ ಸಿಕ್ಕಿಬಿದ್ದ ಇಬ್ಬರು ಕಳ್ಳರು ಧರ್ಮದೇಟು ತಿಂದ ಘಟನೆ ಮಂಡಿಕಲ್ ಗ್ರಾಮದಲ್ಲಿ ನಡೆದಿದೆ. ಭಾನುವಾರ ಬೆಳಗಿನ ಜಾವ ಗ್ರಾಮದ ವೆಕಟರೆಡ್ಡಿ ಎಂಬುವರ ಮನೆಯಲ್ಲಿ ಕಳುವಿಗೆ ಯತ್ನಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಮದ ಕೆಲ ಯುವಕರು ಗಮನಿಸಿ ಹಿಡಿಯಲು ಮುಂದಾದಾಗ ಕಳ್ಳರು ತಮ್ಮ ಬಳಿ ಇದ್ದ ಕಬ್ಬಿಣದ ರಾಡ್ ತೋರಿಸಿ ಬೆದರಿಸಿದ್ದಾರೆ. ಆದರೂ ಭಯ ಪಡದ ಯವಕರು ಮುನ್ನುಗ್ಗಿ ಕಳ್ಳರನ್ನು ಹಿಡಿದು ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ದಾರಿಯಲ್ಲಿ ಜಾನುವಾರುಗಳ ತಲೆಗಳು ಪತ್ತೆ
ಕೋಲಾರ: ನಗರದಿಂದ ಬಂಗಾರಪೇಟೆ ತಾಲೂಕಿನ ಬೇತಮಂಗಲಕ್ಕೆ ಹೋಗುವ ಮಾರ್ಗದಲ್ಲಿ ರಾಶಿಗಟ್ಟಲೆ ಪಶುಗಳ ತಲೆಗಳು ಚಿಲ್ಲಪಿಲ್ಲಿಯಾಗಿ ಬಿದ್ದಿದ್ದು ಜನತೆಯಲ್ಲಿ ಆತಂಕಕ್ಕೆ ಎಡೆ ಮಾಡಿತ್ತು. ವಿಷಯ ತಿಳಿದ ಗ್ರಾಮಾಂತರ ಪಿಎಸ್ಐ ದೇವೇಂದ್ರಪ್ಪ ಜನತೆ ಜಮಾಯಿಸುವ ಮುನ್ನ ತಾವೇ ಖುದ್ಧು ರಸ್ತೆಯಲ್ಲಿ ಬಿದ್ದಿದ್ದ ಪಶುಗಳ ತಲೆಗಳನ್ನು ವಿಲೇವಾರಿ ಮಾಡಿದರು. ಕಸಾಯಿಖಾನೆಯಿಂದ ಪಶುಗಳ ಮೂಳೆಗಳನ್ನು ಸಾಗಿಸುತ್ತಿದ್ದಾಗ ಲಾರಿಯಿಂದ ತಲೆಗಳು ಉರುಳಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಪಂಕ್ತಿಭೇದ ನಿಷೇಧಕ್ಕೆ ಒತ್ತಾಯಿಸಿ ಧರಣಿ
ಚಿಕ್ಕಬಳ್ಳಾಪುರ: ಎಲ್ಲರನ್ನು ಸಮಾನವಾಗಿ ಕಾಣಬೇಕಾದ ಉಡುಪಿಯ ಶ್ರೀ ಕೃಷ್ಣ ಮಠದ ಭೋಜನ ಶಾಲೆಯಲ್ಲಿ ಊಟಕ್ಕೆ ಕುಳಿತ ಬ್ರಾಹ್ಮಣೇತರ ಮಹಿಳೆಯನ್ನು ಜಾತಿ ಹಿನ್ನೆಲೆಯಲ್ಲಿ ಎಬ್ಬಿಸಿ ಅವಮಾನ ಮಾಡಿರುವುದು ಹೇಯ ಕೃತ್ಯ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನಿವೆಂಕಟಪ್ಪ ಟೀಕಿಸಿದರು.
ನಗರದ ಶಿಡ್ಲಘಟ್ಟ ವೃತ್ತದಲ್ಲಿ ಪಂಕ್ತಿಭೇದ ಪದ್ದತಿ ನಿಷೇಧಿಸಬೇಕೆಂದು ಒತ್ತಾಯಿಸಿ ಸಿಪಿಎಂ ಕೈಗೊಂಡಿರುವ ಅಹೋ ರಾತ್ರಿ ಧರಣಿ ನೇತೃತ್ವ ವಹಿಸಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದಲೂ ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಆಚರಣೆಯಲ್ಲಿರುವ ಪಂಕ್ತಿ ಭೇದ ಪದ್ದತಿಯನ್ನು ಸಿಪಿಎಂ ವಿರೋಧಿಸಿಕೊಂಡು ಬಂದಿದೆ. 2012 ರಲ್ಲಿ ಮಠದ ಎದುರು ಪ್ರತಿಭಟನೆ ನಡೆಸಿದಾಗ ಬಿಜೆಪಿ ಸರ್ಕಾರದ ಕುಮ್ಮಕ್ಕಿನಿಂದ ಪೊಲೀಸ್ ಲಾಠಿ ಪ್ರಹಾರ ನಡೆಸಿ ಗಾಯಗೊಳಿಸಿದರು. ಅಲ್ಲದೇ ಕಾರ್ಯಕರ್ತರನ್ನೇ ಬಂಧಿಸಿ ಪ್ರಕರಣ ದಾಖಲಿಸಿದರು. ಈ ಮೂಲಕ ಕಾನೂನು ರಕ್ಷಣೆ ಮಾಡುವುದರ ಬದಲು ಕಾನೂನು ಬಾಹಿರ ಚಟುವಟಿಕೆಗೆ ಕಾರಣಕರ್ತರಾದರು ಎಂದರು. ಚನ್ನರಾಯಪ್ಪ, ಬಿ.ವಿ. ಗೋಪಿನಾಥ್, ರಘುರಾಮರೆಡ್ಡಿ, ಜಯರಾಮರೆಡ್ಡಿ, ಅಶ್ವತ್ಥಪ್ಪ, ಮುನಿಕೃಷ್ಣಪ್ಪ, ರಾಮಚಂದ್ರ ರೆಡ್ಡಿ ಇದ್ದರು.
ಪ್ರಯಾಣ ದರ ಏರಿಕೆ ವಿರೋಧಿಸಿ ಪ್ರದರ್ಶನ
ಬಾಗೇಪಲ್ಲಿ: ರಾಜ್ಯ ಸರ್ಕಾರ ಸಾರಿಗೆ ಬಸ್ ಪ್ರಯಾಣ ದರ ಏರಿಸಿರುವುದನ್ನು ಖಂಡಿಸಿ ಜೆಡಿಎಸ್ ಕಾರ್ಯಕರ್ತರು ಪಟ್ಟಣದ ಬಸ್ ನಿಲ್ದಾಣದ ಮುಂಭಾಗದಲ್ಲಿ ರಸ್ತೆ ತಡೆ ನಡೆಸಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಆರ್. ನರಸಿಂಹನಾಯ್ಡು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪದೇ ಪದೇ ಡೀಸೆಲ್, ಪೆಟ್ರೋಲ್, ಸೀಮೆಎಣ್ಣೆ ಮತ್ತು ಅಡುಗೆ ಅನಿಲಗಳ ಬೆಲೆ ಏರಿಸುತ್ತಿರುವುದರಿಂದ ಜನಸಾಮಾನ್ಯರಿಗೆ ಹೆಚ್ಚಿನ ಹೊರೆಯಾಗಿದೆ.
ಇದೀಗ ಕೇಂದ್ರ ಸರ್ಕಾರ ಡೀಸೆಲ್ ದರ ದಿಢೀರ್ ಏರಿಸಿರುವ ಪರಿಣಾಮ ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಏರಿಸಿದೆ. ಇದರಿಂದ ಕೂಲಿಕಾರ್ಮಿಕರು ಸಂಚರಿಸಬೇಕಾದರೆ ನೂರಾರು ರೂಪಾಯಿಗಳು ವ್ಯಯ ಮಾಡಬೇಕಾಗಿದೆ ಎಂದು ಆರೋಪಿಸಿದರು. ರಸ್ತೆ ತಡೆ ನಡೆಸಿದ ಪರಿಣಾಮ ಕೆಲ ಕಾಲ ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತ್ತು. ವೆಂಕಟಸ್ವಾಮಿರೆಡ್ಡಿ, ಶ್ರೀನಿವಾಸ್, ಜಿ.ಎಂ. ರಾಮಕೃಷ್ಣಪ್ಪ, ಮಹಮದ್ ಎಸ್ ನೂರುಲ್ಲಾ, ಆನಂದರೆಡ್ಡಿ, ಶ್ರೀನಿವಾಸ್, ಬುಜ್ಜಿ, ಮಂಜೂರ್ ಅಹಮದ್, ನರಸಿಂಹಪ್ಪ, ಅಪ್ಪಯ್ಯಬಾಬು, ಮಂಜುನಾಥ್ ಇದ್ದರು.
ಶಂಕರಾಚಾರ್ಯರ ವಿಶೇಷ ಮೆರವಣಿಗೆ
ಕೆಜಿಎಫ್: ಶಂಕರ ಜಯಂತಿ ಅಂಗವಾಗಿ ನಗರದ ಶಂಕರ ಸೇವಾ ಮಂಡಳಿ ವತಿಯಿಂದ ಶಂಕರಾಚಾರ್ಯರ ವಿಶೇಷ ಮೆರವಣಿಗೆ ಏರ್ಪಡಿಸಲಾಗಿತ್ತು.
ನಗರದ ಶ್ರೀ ಶಂಕರಮಠದಿಂದ ಆರಂಭವಾದ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಜಯಂತಿ ಪ್ರಯುಕ್ತ ಶಂಕರಮಠದಲ್ಲಿ ಶಂಕರ ವಿಜಯ, ಅರುಣ ಪಾರಾಯಣ, ಅಭಿಷೇಕ, ಅನ್ನ ಸಂತರ್ಪಣೆ, ಉಪನಯನ, ಶ್ರೀ ಶಂಕರ ಭಗವತಾಚಾರ್ಯ ಮತ್ತು ಶ್ರೀ ಶಾರದಾಂಬೆಯವರ ಪ್ರಾಕಾರೋತ್ಸವ ವೇದ ಪಾರಾಯಣಗಳೊಂದಿಗೆ ನಡೆಯಿತು. ಈ ವೇಳೆ ಶಂಕರ ಸೇವಾ ಮಂಡಳಿಯ ಡಿ.ಆರ್.ಶ್ರೀನಿವಾಸ್, ಎಸ್. ನಾರಾಯಣಮೂರ್ತಿ, ರವಿಶಂಕರ್, ಕೃಷ್ಣಮೂರ್ತಿ, ರಾಮಮೂರ್ತಿ, ಹರಿನಾಥ್ ಇದ್ದರು.
ಬಿಲ್ ಕಲೆಕ್ಟರ್ ಹುದ್ದೆ ನೇಮಕಕ್ಕೆ ಒತ್ತಾಯ
ಕೋಲಾರ: ಗ್ರಾಪಂಗಳಲ್ಲಿ ಖಾಲಿ ಇರುವ ಬಿಲ್ ಕಲೆಕ್ಟರ್ ಹುದ್ದೆಗಳಿಗೆ ಗ್ರಾಪಂ ನೌಕರರನ್ನೇ ನೇಮಿಸಬೇಕು, ಕನಿಷ್ಠ ವೇತನ ಜಾರಿಗೆ ತರಬೇಕು, ಅರ್ಹ ನೌಕರರಿಗೆ ಬಡ್ತಿ, ಭವಿಷ್ಯ ನಿಧಿ ಜಾರಿ ಸೇರಿದಂತೆ ಇತರೇ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ನಗರದಲ್ಲಿ ಗ್ರಾಪಂ ನೌಕರರು ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರದಿಂದ ಜಿಪಂ ಕಚೇರಿಯವರೆಗೆ ನೌಕರರು ಮೆರವಣಿಗೆ ನಡೆಸಿ ಬೇಡಿಕೆ ಈಡೇರಿಸಲು ಜಿಪಂ ಸಿಇಒ ವಿನೋತ್ ಪ್ರಿಯಾ ಅವರಿಗೆ ಮನವಿ ಸಲ್ಲಿಸಿದರು.
ಬಿಲ್ ಕಲೆಕ್ಟರ್ ಹಾಗೂ ಕಂಪ್ಯೂಟರ್ ಆಪರೇಟರ್ಗಳಿಗೆ ಕನಿಷ್ಠ 7122.40 ರು., ಪಂಪ್ ಸೆಟ್ ಆಪರೇಟರ್ಗಳಿಗೆ 7011.90, ಜವಾನರಿಗೆ 6790.90, ಸ್ವೀಪರ್ಗಳಿಗೆ 5687.20 ರು. ನೀಡಬೇಕು, ಎಲ್ಲಾ ಸಿಬ್ಬಂದಿಗೆ ಸೇವಾ ಪುಸಕ್ತ ಜಾರಿಗೊಳಿಸಬೇಕು, ಗ್ರಾಪಂ ನೌಕರರ ವೇತನಕ್ಕಾಗಿ ಪ್ರತ್ಯೇಕ ಖಾತೆ ತೆರೆಯಬೇಕು, ಕಂಪ್ಯೂಟರ್ ಆಪರೇಟರ್ಗಳನ್ನು ಗ್ರಾಪಂ ನೌಕರರೆಂದು ಪರಿಗಣಿಸಬೇಕೆಂದು ಗ್ರಾಪಂ ನೌಕರರು ಒತ್ತಾಯಿಸಿದರು.
ಸಿಐಟಿಯು ಪ್ರಾಯೋಜಿತ ರಾಜ್ಯ ಗ್ರಾಪಂ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಸಂಘದ ಗೌರವಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಕೇಶವರಾವ್, ಅಶ್ವತ್ಥಪ್ಪ, ವೆಂಕಟರಾಮೇಗೌಡ, ರಾಜೇಂದ್ರ, ಸತ್ಯನಾರಾಯಣ, ಎಲ್ಲಪ್ಪ, ಶ್ರೀರಾಮ, ಮುನಿಯಪ್ಪ, ನಾಗೇಶ್, ಶಂಕರಪ್ಪ, ಈಶ್ವರ್ ಇದ್ದರು.
ಶಾಸಕ ರಮೇಶ್ ಕುಮಾರ್ ವಿರುದ್ಧ ಪ್ರತಿಭಟನೆ
ಕೋಲಾರ: ಕುಡಿಯುವ ನೀರಿನ ಯೋಜನೆಗಳಿಗೆ ಅಡ್ಡಿಯುಂಟು ಮಾಡುವ ಬೆಸ್ಕಾಂ ಜಾಗೃತ ದಳದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಕಟ್ಟಿಹಾಕಿ ಎಂದು ಶ್ರೀನಿವಾಸಪುರ ಶಾಸಕ ರಮೇಶ್ ಕುಮಾರ್ ಅವರು ಇತ್ತೀಚೆಗೆ ಜಿಪಂನಲ್ಲಿ ನೀಡಿದ ಹೇಳಿಕೆಯನ್ನು ಖಂಡಿಸಿ ಸೋಮವಾರ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿಭಟನಾ ರ್ಯಾಲಿ ನಡೆಸಿದರು.
ಬೆಸ್ಕಾಂನಲ್ಲಿ ಸಿಬ್ಬಂದಿಯ ಕೊರತೆ ಇದ್ದರೂ ಜನತೆಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಸಕ ರಮೇಶ್ ಕುಮಾರ್ ಅವರ ಪ್ರಚೋದನಾಕಾರಿ ಹೇಳಿಕೆಯಿಂದ ಆತಂಕಗೊಂಡಿದ್ದಾರೆ. ಶಾಸಕರು ತಮ್ಮ ಹೇಳಿಕೆ ಹಿಂದಕ್ಕೆ ಪಡೆದು ಬಹಿರಂಗ ಕ್ಷಮೆಯಾಚಿಸದಿದ್ದರೆ ಹೋರಾಟ ಮುಂದುವರೆಸುವುದಾಗಿ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರ ಕೂಡಲೇ ಖಾಲಿ ಇರುವ ಸಿಬ್ಬಂದಿಯನ್ನು ಭರ್ತಿ ಮಾಡಬೇಕು, ನೌಕರರಿಗೆ ನೆಮ್ಮದಿಯಿಂದ ಕೆಲಸ ಮಾಡಲು ಸೂಕ್ತ ರಕ್ಷಣೆ ಒದಗಿಸಬೇಕು, ಶಾಸಕರು ಕ್ಷಮೆಯಾಚಿಸದಿದ್ದರೆ ರಾಜ್ಯಪಾಲರು ಸದಸ್ಯತ್ವ ರದ್ದುಪಡಿಸಬೇಕೆಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯ ನೇತೃತ್ವವನ್ನು ಬೆಸ್ಕಾಂ ಅಧಿಕಾರಿ ಪ್ರಭುರಾಜ್, ಸುಧಾಕರರೆಡ್ಡಿ, ಫೈಯಾಜ್ ಅಹಮ್ಮದ್, ಅಶೋಕ್ ಕುಮಾರ್, ಲಕ್ಷ್ಮಣರೆಡ್ಡಿ, ವೆಂಕಟೇಶಪ್ಪ, ಸತೀಶ್ ಇದ್ದರು.
ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ವಿರುದ್ಧ ಪ್ರತಿಭಟನೆ
ಕೋಲಾರ: ದಲಿತರನ್ನು ತ್ಯುಚ್ಚವಾಗಿ ಕಾಣುವುದಲ್ಲದೆ ಸರ್ಕಾರದ ಸವಲತ್ತುಗಳನ್ನು ನೀಡಲು ಸತಾಯಿಸುವ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಶಿವಕುಮಾರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಜಿಲ್ಲಾ ದಲಿತ ಸಂಘಟನೆಗಳ ಮುಖಂಡರು ಸೋಮವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಶಿವಕುಮಾರ್ ಅವರು ಸಮಾಜ ಕಲ್ಯಾಣ ಇಲಾಖೆಯ ಕಚೇರಿಗೆ ಬರುವ ದಲಿತರನ್ನು ಅಗೌರವದಿಂದ ಕಾಣುತ್ತಿದ್ದಾರೆ, ಸರ್ಕಾರದ ಸವಲತ್ತುಗಳನ್ನು ಬೇಕಾಗಿಯೇ ತಡೆಯುತ್ತಿದ್ದಾರೆಂದು ಆರೋಪಿಸಿದ ಮುಖಂಡರು, ಕೂಡಲೇ ಈ ಅಧಿಕಾರಿಯನ್ನು ಅಮಾನತುಪಡಿಸಲು ಒತ್ತಾಯಿಸಿದರು. ಜಿಲ್ಲಾ ದಲಿತ ಸಂಘಟನೆಗಳ ಸಂಯುಕ್ತ ರಂಗದ ಅಧ್ಯಕ್ಷ ಎಂ. ಮುನಿರಾಜು,ಪ್ರಧಾನ ಕಾರ್ಯದರ್ಶಿ ಹಾರೋಹಳ್ಳಿ ವಿ.ನಾರಾಯಣಸ್ವಾಮಿ, ಕಾರ್ ಶ್ರೀನಿವಾಸ್, ಗೊಲ್ಲಹಳ್ಳಿ ವೆಂಕಟೇಶ್, ಮೆಕಾನಿಕ್ ಶ್ರೀನಿವಾಸ್, ದಲಿತ ನಾರಾಯಣಸ್ವಾಮಿ, ಗೋಪಿ, ಸೋಮಶೇಖರ್, ದೇವರಾಜ್, ಯುವರಾಜ್, ರಾಮಯ್ಯ, ಮಂಜು, ಬಾಬು, ಕಾಶಿ, ನಾರಾಯಣ, ರವಿ, ಸುರೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

