ಕೋಲಾರ

ಅಂಕಿ ಅಂಶಗಳೇ ಬೇರೆ, ವಾಸ್ತವ ಚಿತ್ರಣವೇ ಬೇರೆ!

Published On :

ಚಿಕ್ಕಬಳ್ಳಾಪುರ: ಕುಡಿಯುವ ನೀರು ಪೂರೈಕೆ ವಿಷಯದಲ್ಲಿ ಅಧಿಕಾರಿಗಳು ನೀಡುತ್ತಿರುವ ಅಂಕಿ ಅಂಶಗಳೇ ಬೇರೆ. ವಾಸ್ತವ ಚಿತ್ರಣವೇ ಬೇರೆ. ಕಡತಗಳಲ್ಲಿ ತ್ವರಿತ ಪರಿಹಾರ, ಗ್ರಾಮಗಳಲ್ಲಿ ಹೆಚ್ಚುತ್ತಿರುವ ನೀರಿನ ಹಾಹಾಕಾರ.
- ಇದು ಜಿಲ್ಲಾ ಉಸ್ತುವಾರಿ ಸಚಿವ ರೋಷನ್ ಬೇಗ್ ನೇತೃತ್ವದಲ್ಲಿ ನಡೆದ ತುರ್ತು ಬರ ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಎಲ್ಲರಿಗೂ ಮನವರಿಕೆಯಾದುದು.
ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಒಂದು ರೀತಿಯಲ್ಲಿ ಸಚಿವರಿಗೆ ಮಾಹಿತಿಯನ್ನು ನೀಡುತ್ತಿದ್ದರೆ, ತಾಲೂಕು ಮಟ್ಟದಲ್ಲಿ ಅಧಿಕಾರಿಗಳು ಶಾಸಕರಿಗೆ ನೀಡಿರುವ ಅಂಕಿ ಅಂಶಗಳೇ ಬೇರೆ ಬೇರೆಯಾಗಿತ್ತು. ಅಲ್ಲದೇ ಅಂಕಿ ಅಂಶಗಳಿಗೂ ವಾಸ್ತವ ಚಿತ್ರಣಕ್ಕೂ ತಾಳೆಯಾಗಲಿಲ್ಲ. ಇದರಿಂದ ಸಚಿವರು, ಜಿ.ಪಂ.ಅಧ್ಯಕ್ಷರು ಮತ್ತು ಶಾಸಕರು ಸೇರಿದಂತೆ ಜನಪ್ರತಿನಿಧಿಗಳು ಅಧಿಕಾರಿಗಳ ಕಾರ್ಯ ವೈಖರಿಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಪದೇ ಪದೇ ಸಭೆಗಳಲ್ಲಿ ಕೇಳಿ ಬರುತ್ತಿದ್ದ ಕೊಳವೆ ಬಾವಿಗಳನ್ನು ಸಮರ್ಪಕ ರೀತಿಯಲ್ಲಿ ಬಳಕೆ ಮಾಡಿಕೊಳ್ಳದ ದೂರು ಮತ್ತೆ ಈ ಸಭೆಯಲ್ಲಿ ಪ್ರಸ್ತಾಪವಾಯಿತು. ಜೆ.ಕೆ.ಕೃಷ್ಣಾರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ 208 ಕೊಳವೆ ಬಾವಿಗಳಲ್ಲಿ 151 ಸಫಲ, 57 ವಿಫಲವಾಗಿವೆ. 121 ಕ್ಕೆ ಮೋಟಾರ್ ಅಳವಡಿಸಿದ್ದು 35 ಕ್ಕೆ ಅಳವಡಿಸಿಲ್ಲ. 8 ಕೋಟಿಗೆ 90 ಲಕ್ಷ ಮಾತ್ರ ಬಿಡುಗಡೆಯಾಗಿದೆ. ಸರ್ಕಾರ ನೀರಿನ ಸಮಸ್ಯೆ ನಿವಾರಣೆಗೆ ಯಾವುದೇ ಹಣದ ಕೊರತೆಯಿಲ್ಲ ಎಂದು ಹೇಳುತ್ತಿದ್ದರೂ ಸಹ ಸಕಾಲಕ್ಕೆ ಹಣ ಬಿಡುಗಡೆಯಾಗುತ್ತಿಲ್ಲ ಎಂದು ಆರೋಪಿಸಿದರು.
ಎಂ.ರಾಜಣ್ಣ ಮಾತನಾಡಿ, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಆಡಿದ್ದೇ ಆಟವಾಗಿದೆ. ಕೊಳವೆ ಬಾವಿಗಳಿಗೆ ಗುತ್ತಿಗೆದಾರರು ಪಂಪು ಮೋಟಾರ್ ಅಳವಡಿಸದಿದ್ದರೂ ಸಹ ಅಧಿಕಾರಿಗಳು ಸುಮ್ಮನಿದ್ದು ಕೇಳಿದರೆ ನೋಟೀಸ್ ಕೊಡಲಾಗಿದೆ ಎಂದು ತಿಳಿಸುತ್ತಾರೆ. ಗುತ್ತಿಗೆದಾರರಿಗೆ ನೋಟೀಸ್ ಮೇಲೆ ನೋಟೀಸ್ ಕೊಡುತ್ತಿದ್ದರೂ ಏನೂ ಪ್ರಯೋಜನವಾಗಿಲ್ಲ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಜಿಲ್ಲಾಧಿಕಾರಿಗಳಿಗೆ ಟೆಂಡರ್ ಕರೆಯದೇ ನೇರವಾಗಿ ನೀರನ್ನು ಪೂರೈಸಲು ಕ್ರಮ ಕೈಗೊಳ್ಳುವಂತೆ ಸೂಚಿಸಲಾಗುವುದು ಎಂದರು. ಚಿಕ್ಕಬಳ್ಳಾಪುರ ನಗರಸಭಾ ಅಧ್ಯಕ್ಷೆ ಲೀಲಾವತಿ ಶ್ರೀನಿವಾಸ್ ತಮ್ಮ ಸಮಸ್ಯೆ ಹೇಳಿಕೊಂಡರು.
ಬಾಗೇಪಲ್ಲಿ, ಗೌರಿಬಿದನೂರು ಮತ್ತು ಗುಡಿಬಂಡೆ ಕಡೆ ಕುಡಿಯುವ ನೀರಿನ ಸಮಸ್ಯೆ ಕಡಿಮೆ ಇದೆ ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದರು.
ಮುಖ್ಯಮಂತ್ರಿ ಜತೆ ಸಭೆ: ಬೇಗ್
ಚಿಕ್ಕಬಳ್ಳಾಪುರ: ವಿದ್ಯುತ್ ಸಮಸ್ಯೆ ಮತ್ತು ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ರೋಷನ್ ಬೇಗ್ ತಿಳಿಸಿದರು.
  ಅಂತರ್ಜಲ ಮಟ್ಟ ಕುಸಿದಿರುವುದರ ಜೊತೆಗೆ ಕೊಳವೆ ಬಾವಿಗಳನ್ನು ಕೊರೆಸಿದರೂ ನೀರು ಲಭ್ಯವಾಗುತ್ತಿಲ್ಲ.ಈ ಹಿನ್ನೆಲೆಯಲ್ಲಿ ವಿಶೇಷ ಆದ್ಯತೆ ನೀಡಲು ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು. ಬರ ಪರಿಹಾರ ಕಾರ್ಯಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದಾಗ ಅಂಕಿ ಅಂಶಗಳು ಮತ್ತು ವಾಸ್ತವ ಚಿತ್ರಣ ಬೇರೆಯಾಗಿರುವುದು ತಿಳಿದು ಬಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಕುಡಿಯುವ ನೀರಿಗಾಗಿ ಟ್ಯಾಂಕರುಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ.ಆದರೆ,ಇದರಲ್ಲಿ ಟ್ಯಾಂಕರುಗಳ ಮಾಫಿಯಾ ನಡೆಯುವುದಕ್ಕೆ ಅವಕಾಶ ನೀಡದಿರಲು ಸೂಚನೆ ನೀಡಲಾಗಿದೆ ಎಂದರು.
ತಾಪಂ ಇಒಗೆ ಬಹಿರಂಗ ಸವಾಲು
ಚಿಂತಾಮಣಿ ತಾಲೂಕಿನಲ್ಲಿ ಬರ ಪರಿಹಾರ ಕಾರ್ಯಗಳ ಬಗ್ಗೆ ಅಧಿಕಾರಿಗಳು ಸುಳ್ಳು ಮಾಹಿತಿಯನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ ಜಿ.ಪಂ.ಅಧ್ಯಕ್ಷ ಎಸ್.ಎನ್.ಚಿನ್ನಪ್ಪ, ಸಚಿವರ ಮುಂದೆ ಟ್ಯಾಂಕರುಗಳ ಮೂಲಕ ನೀರು ಒದಗಿಸುತ್ತಿರುವುದರ ಬಗ್ಗೆ ಅಂಕಿ ಅಂಶಗಳನ್ನು ಮುಂದಿಟ್ಟ ತಾಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಬಹಿರಂಗ ಸವಾಲು ಹಾಕಿದರು.  ತಳಗವಾರ ಗ್ರಾ.ಪಂ.ಯಲ್ಲಿ ಖಾಸಗಿ ಟ್ಯಾಂಕರುಗಳು ಪ್ರತಿದಿನ ನೀರು ಪೂರೈಕೆ ಮಾಡಲಾಗುತ್ತಿದೆ ಎನ್ನುವುದು ಶುದ್ಧ ಸುಳ್ಳು. ಸಚಿವರು ಮತ್ತು ಮಾಧ್ಯಮದವರನ್ನು ಕರೆದುಕೊಂಡು ಹೋಗೋಣ. ಅಲ್ಲಿ ನಿಜ ಗೊತ್ತಾಗುತ್ತದೆ. ಒಂದು ಟ್ಯಾಂಕರು ನೀರು ಸಹ ಪೂರೈಕೆ ಮಾಡಿಲ್ಲ ಎಂದು ಆರೋಪಿಸಿದರು. ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳೇ ಅನಿರೀಕ್ಷಿತ ಭೇಟಿ ನೀಡಿ ಮಾಹಿತಿಯನ್ನು ತಿಳಿದುಕೊಳ್ಳುತ್ತಿಲ್ಲ.ಅವರ ಕೊಟ್ಟ ಅಂಕಿ ಅಂಶಗಳನ್ನು ಸರ್ಕಾರಕ್ಕೆ ಕಳುಹಿಸುತ್ತಿದ್ದಾರೆ.ನಾವು ಅದನ್ನು ನಂಬಿ ಸುಮ್ಮನಾಗಬೇಕಾಗಿದೆ ಎಂದರು. ಸಭೆಯಲ್ಲಿ ಜಿ.ಪಂ.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲಾ ಮಂಜುನಾಥ್ ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.