ಕೋಲಾರ

ಕೋಲಾರಕ್ಕೆ ವರುಣನ ಕೃಪೆ

Published On :

ಕೋಲಾರ: ಬೇಸಿಗೆಯ ತಾಪದಿಂದ ನಲುಗಿದ್ದ ಜನರು ಗುರುವಾರ ನಗರದಲ್ಲಿ ಕೊಂಚ ಮಳೆಯ ದರ್ಶನ ಪಡೆದರು. ಒಂದೆರಡು ದಿನದಿಂದ ಮೋಡ ಮುಸುಕಿದ ತಂಪಿನ ವಾತಾವರಣ ಉಂಟಾಗಿ ಮಳೆಯ ಸೂಚನೆ ಕಂಡು ಬಂದು ರೈತರು ಸೇರಿದಂತೆ ನಗರ ವಾಸಿಗಳು ಸಹ ಮಳೆಯ ನಿರೀಕ್ಷೆಯಲ್ಲಿ ಆಕಾಶ ನೋಡುತ್ತಿದ್ದರು. ಮಳೆಯಿಂದಾಗಿ ಗಿಡ-ಮರಗಳು, ಮನೆ- ಅಂಗಡಿ ಮುಂಗಟ್ಟುಗಳ ಮೇಲಿದ್ದ ಧೂಳು ಹೋಗಿತಾದರೂ ರಸ್ತೆಗಳು ಕೆಸರು ಗದ್ದೆಯಾಗಿದ್ದರಿಂದ ಸಂಚಾರಕ್ಕೆ ಅಡ್ಡಿಯಾಯಿತು. ಈ ಮಳೆಯಿಂದ ಜಾನುವಾರುಗಳಿಗೆ ಒಂದಿಷ್ಟು ಮೇವು ಸಿಗುವಂತಾಗಲಿ ಎಂಬುದು ಗೋಪಾಲಕರ ಆಸೆಯಾಗಿತ್ತು.  ಗಾಳಿ ಇಲ್ಲದ ಈ ಮಳೆಯಿಂದ ಈಗಾಗಲೇ ಬೆಳೆದು ನಿಂತಿರುವ ಮಾವು ಬೆಳೆಗೆ ಯಾವುದೆ ಭಾದಕವಿಲ್ಲ ಎಂದು ರೈತರು ನಿಟ್ಟುಸಿರು ಬಿಟ್ಟಿದ್ದಾರೆ. ನಿರೀಕ್ಷೆ ಇಲ್ಲದೆ ಬಂದ ಈ ಮಳೆಯಿಂದ ಜನರಲ್ಲಿ ಒಂದಷ್ಟು ಗಲಿಬಿಲಿಯಾಗಿ ಮನೆಯ ಮೂಲೆ ಸೇರಿದ್ದ ಕೊಡೆಗಳು ಈಗ ಕೈಗೆ ಬರುವಂತಾಯಿತು.

ಗುಡಿಬಂಡೆಯ ರೈತರ ಮೊಗದಲ್ಲಿ ಸಂತಸ
ಗುಡಿಬಂಡೆ:
ಸತತವಾಗಿ ಕಳೆದೆರಡು ತಿಂಗಳಿಂದ ಬಿಸಿಲನ್ನು ಕಂಡ ರೈತರು ಮುಂಗಾರು ಮಳೆ ಎಲ್ಲಿ ಕೈ ಕೊಡುವುದೋ ಎಂಬ ಭೀತಿಯಲ್ಲಿದ್ದ. ಆದರೆ ಗುರುವಾರ ಮಧ್ಯಾಹ್ನ ಬಿದ್ದ ಮಳೆಯಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ. ಬಯಲು ಸೀಮೆ ಪ್ರದೇಶಗಳಲ್ಲಿ ಒಂದಾದ ಗುಡಿಬಂಡೆ ತಾಲೂಕು ಸತತವಾಗಿ ಮಳೆಯ ಅಭಾವವನ್ನು ಅನುಭವಿಸುತ್ತಾ ಬರಗಾಲಕ್ಕೆ ತುತ್ತಾಗಿದೆ. ಕಳೆದ ಸಾಲಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಬೆಳೆ ಪ್ರಮಾಣ ಕಡಿಮೆಯಾಗಿದೆ. ಪ್ರಸ್ತುತ ಸಾಲಿನಲ್ಲೂ ಸಹ ಜವರಾಯ ಕೈಕೊಡುವನೆಂಬ ಭೀತಿಯಲ್ಲಿದ್ದ ರೈತರಿಗೆ ಸದ್ಯ ಆ ಭೀತಿ ದೂರವಾಗಿದೆ. ಒಟ್ಟಿನಲ್ಲಿ ಹೇಳುವುದಾದರೇ ಕಳೆದ ಸಾಲಿನಲ್ಲಿ ಮಳೆಯ ಕೊರತೆಯಿಂದ ತಾಲೂಕಿನಲ್ಲಿನ ಕರೆ-ಕುಂಟೆಗಳು ಭತ್ತಿ ಹೋಗಿವೆ. ಇದರಿಂದ ತಾಲೂಕಿನಲ್ಲಿ ನೀರಿನ ಅಭಾವ ತಾಂಡವವಾಡುತ್ತಿದೆ. ಈ ಬಾರಿ ಜವರಾಯ ತಾಲೂಕಿಗೆ ವರವಾಗುವನೋ ಶಾಪವಾಗುವನೋ ಎಂಬುದನ್ನ ಮುಂದಿನ ದಿನಗಳಲ್ಲಿ ತಿಳಿಯಬಹುದಾಗಿದೆ.

10ರಿಂದ ಟೇಕಲ್ ಲಕ್ಷ್ಮೀವರದರಾಜಸ್ವಾಮಿಗೆ ಬ್ರಹ್ಮರಥೋತ್ಸವ
ಟೇಕಲ್:
ಐತಿಹಾಸಿಕ ಕ್ಷೇತ್ರ ತೇಕಂಚಿ ಕ್ಷೇತ್ರವೆಂದೆ ಬಿಂಬಿತವಾಗಿರುವ ಟೇಕಲ್ ಗ್ರಾಮದಲ್ಲಿ ಸ್ಥಾಪಿತವಾದ ಲಕ್ಷ್ಮೀವರದರಾಜಸ್ವಾಮಿಗೆ ವೈಶಾಖ ಶುದ್ಧ ಪೌರ್ಣಮಿ ಮೇ 10 ರಿಂದ ಬ್ರಹ್ಮರಥೋತ್ಸವ ಅಂಗವಾಗಿ ಕಾರ್ಯಕ್ರಮಗಳು ನಡೆಯಲಿವೆ.
ಶನಿವಾರದಿಂದ ವೈಖಾನಸ ಆಗಮೋಕ್ತ ನವಾಹ್ನಿಕ ಪ್ರಕಾರವಾಗಿ ನಡೆಯುವ ಉತ್ಸವಾಧಿಗಳ ಕೈಂಕರ್ಯಗಳಿಗೆ 10ರಂದು ಸಂಜೆ ಧ್ವಜಾರೋಹಣ, 11ರಂದು ಅಭಿಷೇಕ ಮತ್ತು ಸಿಂಹವಾಹನೋತ್ಸವ, 12 ರಂದು ಕಲ್ಯಾಣೋತ್ಸವ, 13ರಂದು ರಾತ್ರಿ ಗಜೇಂದ್ರಮೋಕ್ಷ ನಡೆಯುತ್ತಿದ್ದು ಅತೀ ಮುಖ್ಯವಾಗಿ 14 ಬುಧವಾರ ಬೆಳಿಗ್ಗೆ 11-45ಕ್ಕೆ ಘನ ಸರ್ಕಾರದ ವತಿಯಿಂದ ಬ್ರಹ್ಮರಥೋತ್ಸವ ಏರ್ಪಡಿಸಲಾಗಿದೆ ಎಂದು ಪ್ರಧಾನ ಅರ್ಚಕ ಟಿ.ವಿ. ರಮೇಶಾಚಾರ್ ತಿಳಿಸಿದ್ದು, ರಥೋತ್ಸವದ ತರುವಾಯ ದಿನಾಂಕ 17 ರವರೆಗೂ ಕಾರ್ಯಕ್ರಮಗಳು ಇರುತ್ತದೆ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.