ಕೋಲಾರ

ಮತ ಎಣಿಕೆಗೆ ಕ್ಷಣಗಣನೆ: ಅಭ್ಯರ್ಥಿಗಳಿಗೆ ಢವ ಢವ

Published On :

ಚಿಂತಾಮಣಿ, ಶಿಡ್ಲಘಟ್ಟದಲ್ಲಿ ಜೆಡಿಎಸ್ ಪರ ಬೆಟ್ಟಿಂಗ್
ನಾರಾಯಣಸ್ವಾಮಿ, ಮುನಿಯಪ್ಪಗೂ ಗೆಲವಿನ ನಿರೀಕ್ಷೆ


ಟಿ ಪಾ.ಶ್ರೀ.ಅನಂತರಾಮ್
ಕೋಲಾರ: ಲೋಕ ಸಮರದ ಫಲಿತಾಂಶ ತಿಳಿಯಲು ಕ್ಷಣ ಗಣನೆ ಆರಂಭವಾಗಿದೆ.
ಕೋಲಾರ ಮೀಸಲು ಕ್ಷೇತ್ರದ ಮತ ಎಣಿಕೆ ಕಾರ್ಯ ಕೋಲಾರ ನಗರದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಮೇ 16ರಂದು ನಡೆಯಲಿದ್ದು, ಜಿಲ್ಲಾ ಚುನಾವಣಾಧಿಕಾರಿಗಳು ಸಕಲ ಸಿದ್ಧತೆ ನಡೆಸಿದ್ದಾರೆ. ಆರು ಬಾರಿ ಸಂಸತ್ ಪ್ರವೇಶಿಸುವ ಮೂಲಕ ಸೋಲಿಲ್ಲದ ಸರದಾರನೆಂದು ಬಿರುದು ಪಡೆದಿರುವ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ, ಏಳನೇ ಬಾರಿ ಲೋಕಸಭೆ ಪ್ರವೇಶದ ಭರವಸೆ ಹೊಂದಿದ್ದಾರೆ.
ಬಿಜೆಪಿಯ ಎಂ.ನಾರಾಯಣಸ್ವಾಮಿ ಅವರು ನರೇಂದ್ರ ಮೋದಿ ಅಲೆ ಹಾಗೂ ಮುನಿಯಪ್ಪ ಮೇಲಿನ ಅಸಮಾಧಾನ ತಮಗೆ ವರದಾನವಾಗಲಿದೆ ಎಂದು ನಂಬಿದ್ದಾರೆ.
ಚುನಾವಣೆ ನಂತರ ಬೆಂಗಳೂರು ಸೇರಿ ತಮ್ಮ ವ್ಯಾಪಾರ-ವಹಿವಾಟುಗಳ ಕಡೆ ಗಮನ ಹರಿಸಿರುವ ಜೆಡಿಎಸ್ ಕೇಶವ್, ಖಾಸಗಿ ಸಂಸ್ಥೆ ಕೋಲಾರದಲ್ಲಿ ಜೆಡಿಎಸ್ ಗೆಲ್ಲುತ್ತದೆ ಎಂದು ಅಭಿಪ್ರಾಯಿಸಿರುವ ಹಿನ್ನಲೆಯಲ್ಲಿ ದೆಹಲಿಗೆ ಹಾರುವ ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಮೂರು ಪಕ್ಷಗಳ ಅಭ್ಯರ್ಥಿಗಳು ಗೆಲುವಿನ ಬಗ್ಗೆ ಆತ್ಮವಿಶ್ವಾಸ ಹೊಂದಿದ್ದು, ಮೇ 16ರಂದು ಈ ಮೂವರ ಹಣೆ ಬರಹ ನಿರ್ಧಾರವಾಗಲಿದೆ.


ಜೆಡಿಎಸ್‌ಗೆ ಗೆಲ್ಲುವ ವಿಶ್ವಾಸ
ಖಾಸಗಿ ಸಂಸ್ಥೆ ಜೆಡಿಎಸ್ ಗೆಲ್ಲಲಿದೆ ಎಂದು ಅಭಿಪ್ರಾಯಪಟ್ಟ ಬೆನ್ನಲ್ಲೇ ಚಿಂತಾಮಣಿ ಹಾಗೂ ಶಿಡ್ಲಘಟ್ಟದಲ್ಲಿ ಜೆಡಿಎಸ್ ಪರವಾಗಿ ಬೆಟ್ಟಿಂಗ್ ಜೋರಾಗಿದೆ. ಮಾಲೂರಿನಲ್ಲೂ ಪಕ್ಷದ ಕಾರ್ಯಕರ್ತರು ಗೆಲುವಿನ ಭರವಸೆಯಿಂದ ಬೀಗುತ್ತಿದ್ದಾರೆ. ಜೆಡಿಎಸ್‌ಗೆ ಚಿಂತಾಮಣಿ, ಶಿಡ್ಲಘಟ್ಟದಲ್ಲಿ ಕನಿಷ್ಠ 50ರಿಂದ 60 ಸಾವಿರ ಲೀಡ್ ಸಿಗುವುದರಿಂದ ಕೇಶವ ಗೆಲುವು ನಿಶ್ಚಿತವೆಂಬುದು ಕೆಲವರ ವಾದ.


ಕಾಂಗ್ರೆಸ್‌ಗೂ ನಿರೀಕ್ಷೆ
ಚಿಂತಾಮಣಿ ಮತ್ತು ಶಿಡ್ಲಘಟ್ಟದಲ್ಲಿ ಆಗಿರಬಹುದಾದ ಡ್ಯಾಮೇಜ್ ಅನ್ನು ಮುಳಬಾಗಲು,ಬಂಗಾರಪೇಟೆ, ಕೆಜಿಎಫ್‌ನಲ್ಲಿ ಇತ್ಯರ್ಥ ಮಾಡಿಕೊಂಡಿದ್ದೇವೆ. ಈ ಮೂರು ಕ್ಷೇತ್ರಗಳಲ್ಲಿ ಮುನಿಯಪ್ಪಗೆ ಕನಿಷ್ಠ 60ರಿಂದ 65 ಸಾವಿರ ಲೀಡ್ ಸಿಗಲಿದೆ. ಶ್ರೀನಿವಾಸಪುರದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ರಮೇಶ್‌ಕುಮಾರ್ ಅವರಿಗೆ ಸಿಕ್ಕಿದಷ್ಟೇ ಲೀಡ್ ಮುನಿಯಪ್ಪನವರಿಗೆ ಸಿಗುವ ವಿಶ್ವಾಸವಿದೆ. ಕೋಲಾರದಲ್ಲಿ 5ರಿಂದ 8 ಸಾವಿರ, ಬಂಗಾರಪೇಟೆಯಲ್ಲಿ 25 ರಿಂದ 30 ಸಾವಿರ, ಮುಳಬಾಗಿಲಿನಲ್ಲಿ 15 ಸಾವಿರ ಲೀಡ್ ದೊರೆಯುವುದರಿಂದ ಮುನಿಯಪ್ಪ ಗೆಲುವು ನಿಶ್ಚಿತ ಎಂಬ ಅಭಿಪ್ರಾಯ ಕಾಂಗ್ರೆಸ್‌ನದ್ದು.


ಬಿಜೆಪಿ ಲೆಕ್ಕಾಚಾರ ಹೇಗೆ?
ಬಿಜೆಪಿಯ ಎಂ.ನಾರಾಯಣಸ್ವಾಮಿ, ತಮ್ಮದೇ ಲೆಕ್ಕಾಚಾರಗಳ ಮೂಲಕ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಬಿಸಿ ಮತಗಳು ಬಿಜೆಪಿಗೆ ಹೆಚ್ಚಾಗಿ ಬಿದ್ದಿವೆ. ಮೋದಿ ಅಲೆಯು ಕ್ಷೇತ್ರದಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಯುವಕರು ಮೋದಿ ಪ್ರಧಾನಿ ಆಗುವುದನ್ನು ಬೆಂಬಲಿಸಿ ತಮಗೆ ಮತ ನೀಡಿದ್ದಾರೆ. ಜನ ಕಾಂಗ್ರೆಸ್ ಮತ್ತು ಜೆಡಿಎಸ್ ಜತೆ ಗುರುತಿಸಿಕೊಂಡಿದ್ದರೂ ರಹಸ್ಯವಾಗಿ ಬಿಜೆಪಿಗೇ ಮತಹಾಕಿದ್ದಾರೆ. ಹಾಗಾಗಿ ಗೆಲವು ತಮ್ಮದೇ ಎಂಬ ಲೆಕ್ಕಾಚಾರದಲ್ಲಿದ್ದಾರೆ ಅವರು.



ಎಎಪಿ ಮತ್ತು ಅಲ್ಪಸಂಖ್ಯಾತರು


ಅಮ್ ಆದ್ಮಿಯ ಕೋಟಿಗಾನಹಳ್ಳಿ ರಾಮಯ್ಯ ಬಲಗೈ ಜನಾಂಗದ ಮತಗಳನ್ನು ಹೆಚ್ಚಾಗಿ ಪಡೆದುಕೊಂಡಿದ್ದರೆ ಕಾಂಗ್ರೆಸ್‌ಗೆ ಹೊಡೆತ ಬೀಳುವ ಸಾಧ್ಯತೆ ಹೆಚ್ಚು ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯ. ಅಲ್ಪಸಂಖ್ಯಾತರು ಒಂದು ವೇಳೆ ಜೆಡಿಎಸ್‌ಗೆ  ಹೆಚ್ಚಿನ ಮತ ನೀಡಿದ್ದರೂ ಕಾಂಗ್ರೆಸ್ ಲೆಕ್ಕಾಚಾರ ತಲೆಕೆಳಗಾಗಲಿದೆ. ಮತ ಎಣಿಕೆಗಾಗಿ ಸಕಲ ಸಿದ್ಧತೆ ನಡೆದಿದ್ದು, ವಿಜಯದ ಮಾಲೆ ಯಾರ ಕೊರಳಿಗೆ ಬೀಳುತ್ತದೋ ಕಾದು ನೋಡಬೇಕಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.