ಮಾಹಿತಿಗೆ ತಡಬಡಾಯಿಸಿದ ಇಓ ವಿರುದ್ಧ ಜಿಪಂ ಅಧ್ಯಕ್ಷರ ಗರಂ
ಬಾಗೇಪಲ್ಲಿ: ಸರಿಯಾಗಿ ಮಾಹಿತಿ ನೀಡದೆ ತಡಬಡಾಯಿಸಿದ ಇಲ್ಲಿನ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ್ ವಿರುದ್ಧ ಜಿ.ಪಂ ಅಧ್ಯಕ್ಷ ಚಿನ್ನಪ್ಪ ಕಿಡಿಕಾರಿದರು.
ಪಟ್ಟಣದ ತಾ.ಪಂ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಲೂಕಿನಲ್ಲಿ ತಲೆದೋರಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೋಟ್ಯಂತರ ರು.ಗಳ ಅನುದಾನ ಬಿಡುಗಡೆ ಮಾಡಿದೆ. ಈ ಸಂಬಂಧ ತಾಲೂಕಿನಲ್ಲಿ ಎಷ್ಟು ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಬಗೆಹರಿಸಲಾಗಿದೆ. ಎಷ್ಟು ಗ್ರಾಮಗಳಿಗೆ ಕೊಳವೆಬಾವಿಗಳನ್ನು ಕೊರಸಲಾಗಿದೆ ಹಾಗೂ ಎಷ್ಟು ಗ್ರಾಮಗಳಲ್ಲಿ ಟ್ಯಾಂಕರ್ ಗಳ ಮೂಲಕ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎನ್ನುವುದರ ಬಗ್ಗೆ ತಾಲೂಕು ಕಾರ್ಯ ನಿರ್ವಹಣಾಧಿಕಾರಿಗಳನ್ನು ಮಾಹಿತಿ ನೀಡುವಂತೆ ಜಿ.ಪಂ ಅಧ್ಯಕ್ಷ ಚಿನ್ನಪ್ಪ ಕೇಳಿದರು. ಆಗ ಅಧಿಕಾರಿ ಪಿಡಿಓ ರವರಿಗೆ ದೂರವಾಣಿ ಮೂಲಕ ಮಾಹಿತಿಯನ್ನು ಪಡೆಯುತ್ತಿದ್ದಾಗ ಕೆರಳಿದ ಜಿ.ಪಂ.ಅಧ್ಯಕ್ಷರು, ಸಾಕು ನಿಲ್ಲಿಸಿ, ನೀವು ಒಬ್ಬ ಜವಾಬ್ದಾರಿಯುತ ತಾಲೂಕು ಮಟ್ಟದ ಅಧಿಕಾರಿಯಾಗಿದ್ದು ಮಾಹಿತಿ ಇಲ್ಲ ಎಂದರೆ ಹೇಗೆ, ಕಳೆದ ಒಂದು ವಾರದ ಹಿಂದೆಯಷ್ಟೇ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ನಡೆಸಿದ ಅಧಿಕಾರಿಗಳ ಸಭೆಯಲ್ಲಿ ಸುದೀರ್ಘವಾದ ಚರ್ಚೆ ನಡೆದಿದೆ. ಇಂದು ಸಭೆಯಲ್ಲಿ ಕುಡಿಯುವ ನೀರಿನ ವಿಚಾರದ ಬಗ್ಗೆ ಚರ್ಚೆ ಮಾಡುತ್ತಾರೆ, ಈ ಸಂಬಂಧ ಮಾಹಿತಿ ನೀಡಬೇಕೆಂಬ ಪರಿಜ್ಞಾನ ಇಲ್ಲವೇ ಈ ಮಾತ್ರಕ್ಕೆ ನಾವು ಅಲ್ಲಿಂದ ಇಲ್ಲಿಗೆ ಬಂದು ಸಭೆ ನಡಸಬೇಕೆ ಎಂದು ತರಾಟೆಗೆ ತಗೆದುಕೊಂಡರು. ತಕ್ಷಣ ಜಿ.ಪಂ. ಸದಸ್ಯರು, ಎಲ್ಲೂ ಟ್ಯಾಂಕರ್ಗಳ ಮೂಲಕ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ ಎಂದರು. ಇದಕ್ಕೆ ಉತ್ತರಿಸಿದ ಅಧಿಕಾರಿ, ಒಂದು ದಿನ ನೀರು ನೀಡಿಲ್ಲ ಎಂದ ಮಾತ್ರಕ್ಕೆ ನೀರೇ ಸರಬರಾಜು ಮಾಡಿಲ್ಲ ಎಂದಲ್ಲ ಎಂದು ಹಾರಿಕೆ ಉತ್ತರ ನೀಡಿದಾಗ, ನೀವು ಕುಡಿಯುವ ನೀರಿನ ವಿಚಾರದಲ್ಲಿ ನಮಗೆ ಸರಿಯಾದ ಮಾಹಿತಿ ನೀಡಿಲ್ಲ. ನೀವು ಹೇಳಿದ ಬಹುತೇಕ ಗ್ರಾಮಗಳಲ್ಲಿ ಟ್ಯಾಂಕರ್ಗಳ ಮೂಲಕ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ. ಈ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಸರಿನಲ್ಲಿ ಕೋಟ್ಯಂತರ ರು. ಅನುದಾನ ದುರುಪಯೋಗವಾಗುತ್ತಿದೆ ಎಂಬ ಅನುಮಾನ ಕಾಡುತ್ತಿದೆ. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಜಿ.ಪಂ.ಅಧ್ಯಕ್ಷರು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

