ಯಳಗೊಂಡಹಳ್ಳಿ ಸುತ್ತಮುತ್ತ ನೊಣಗಳ ಹಾವಳಿ!
ಮುಳಬಾಗಲು: ತಾಲೂಕಿನ ಆವಣಿ ಹೋಬಳಿಯ ಯಳಗೊಂಡಹಳ್ಳಿ, ಮಿಣಜೇನಹಳ್ಳಿ, ಪಿಚ್ಚಗುಂಟ್ಲಹಳ್ಳಿ ಗ್ರಾಮದ ನಿವಾಸಿಗಳಿಗೆ ನೋಣ ಹೊಡೆಯುವುದು ನಿತ್ಯ ಕಾಯಕ!
ಯಳಗೊಂಡಹಳ್ಳಿ ಹೊರವಲಯದ ಕೆರೆ ಸಮೀಪದಲ್ಲಿ ಖಾಸಗಿ ಕೋಳಿಫಾರಂನಲ್ಲಿ ಉತ್ಪತ್ತಿಯಾಗುತ್ತಿರುವ ನೊಣಗಳು ಸುತ್ತಮುತ್ತಲ ನಿವಾಸಿಗಳಿಗೆ ವಿಪರೀತ ಕಿರಿಕಿರಿ ಮಾಡುತ್ತಿವೆ. ಹಗಲು ರಾತ್ರಿ ಎನ್ನದೆ ನೊಣಹೊಡೆಯುವ ಕೆಲಸದಿಂದ ಬೇಸತ್ತಿದ್ದಾರೆ. ಈ ಬಗ್ಗೆ ಕೋಲಾರ ಜಿಲ್ಲಾಧಿಕಾರಿಗಳಿಗೆ ಗ್ರಾಮಸ್ಧರು ನೀಡಿದ ದೂರಿನ ಹಿನ್ನಲೆಯಲ್ಲಿ ತಹಸೀಲ್ದಾರ್ ಕೆ.ಏಕೇಶಬಾಬು, ತಾ.ಪಂ. ಅಧಿಕಾರಿ ಟೆ. ವಿ. ಅರುಣಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ. ನಾರಾಯಣ ಸ್ವಾಮಿ ಮತ್ತಿತರರು ಸೋಮವಾರ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಾರದ ಹಿಂದೆ ಔಷಧಿ ಸಿಂಪಡಿಸಲಾಗಿತ್ತಾದರೂ, ನೊಣಗಳ ಕಾಟ ಪೂರ್ತಿ ಕಡಿಮೆಯಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ನೊಣಗಳ ಹಾವಳಿಯಿಂದ ತೀವ್ರ ಹಿಂಸೆ ಅನುಭವಿಸಬೇಕಾಗಿದೆ. ಕ್ರಮ ತೆಗೆದುಕೊಂಡ ಸ್ವಲ್ಪ ಕಾಲ ನಿಯಂತ್ರಣಕ್ಕೆ ಬಂದಿದ್ದ ನೊಣ ಮತ್ತೆ ಕಳೆದ ಐದಾರು ದಿವಸಗಳಿಂದ ಹೆಚ್ಚಳವಾಗಿ ಬದುಕು ಅಸಹನೀಯವಾಗಿದೆ ಎಂದು ಗ್ರಾಮದ ಲಕ್ಷ್ಮಮ್ಮ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಕೋಳಿ ಫಾರಂ ಇರುವ ಸುತ್ತಮುತ್ತಲ ಗ್ರಾಮಗಳಿಗೆ ಭೇಟೆ ನೀಡಿದಾಗ ನೊಣಗಳ ಹಾವಳಿ ಕಂಡು ಬಂದಿತು. ಸ್ಧಳವನ್ನು ಸರ್ವೆ ಇಲಾಖೆಯಿಂದ ಅಳತೆ ಮಾಡಿಸಿದ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಕೆ.ಏಕೇಶಬಾಬು ತಿಳಿಸಿದ್ದಾರೆ.
ಕೋಳಿಫಾರಂಗೆ ದೇವರಾಯಸಮುದ್ರಂ ಗ್ರಾ.ಪಂ.ನಿಂದ ನೀಡಿದ್ದ ಪರವಾನಗಿ ಅವಧಿ ಮುಗಿದಿದೆ. ಪರವಾನಗಿ ನವೀಕರಣ ಮಾಡದಂತೆ ಪಿಡಿಒಗೆ ಸೂಚನೆ ನೀಡಲಾಗುವುದು. ದಾಖಲೆ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಾ.ಪಂ. ಇಒ ಟೆ.ವಿ.ಅರುಣಕುಮಾರ್ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

