ಕತ್ತು ಹಿಸುಕಿ ವೃದ್ಧೆ ಭೀಕರ ಕೊಲೆ
ಚಿಕ್ಕಬಳ್ಳಾಪುರ: ಮನೆಯಲ್ಲಿ ಒಂಟಿಯಾಗಿದ್ದ ವೃದ್ಧೆಯೊಬ್ಬರ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಗರದ ಕೊರಚರಪೇಟೆಯಲ್ಲಿ ನಡೆದಿದೆ.
ಮೃತ ಮಹಿಳೆ ಅಶ್ವತ್ಥಪ್ಪರವರ ಪತ್ನಿ ಕಾಂತಮ್ಮ (58). ಕೊರಚರಪೇಟೆಯಲ್ಲಿ ಸ್ವಂತ ಮನೆಯನ್ನು ಹೊಂದಿರುವ ಕಾಂತಮ್ಮ ಬುಧವಾರ ಮಧ್ಯಾಹ್ನ ಅಕ್ಕಪಕ್ಕದವರನ್ನು ಮಾತನಾಡಿ ಮನೆಯೊಳಗೆ ಹೋದವಳು ಮತ್ತೆ ಶವವಾಗಿ ಕಾಣಿಸಿಕೊಂಡಿದ್ದಾಳೆ. ಗುರುವಾರ ಬೆಳಿಗ್ಗೆ ನಗರದ ಹಳೆ ಬಸ್ ನಿಲ್ದಾಣದಲ್ಲಿರುವ ಹೂವಿನ ಅಂಗಡಿಯನ್ನು ತೆಗೆಯಲು ಬೇಕಾಗಿದ್ದ ಬೀಗದ ಕೈಯನ್ನು ತೆಗೆದುಕೊಳ್ಳಲು ಕಾಂತಮ್ಮಳ ಮೊಮ್ಮಗ ಆಕೆಯ ಮನೆಗೆ ಬಂದಾಗ ಕಾಂತಮ್ಮ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ. ತಕ್ಷಣ ಕೂಗಿಕೊಂಡ ಹಿನ್ನೆಲೆಯಲ್ಲಿ ಅಕ್ಕಪಕ್ಕದ ಜನರ ಬಂದು ನೋಡಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಘಟನೆ ಮಾಹಿತಿ ಪಡೆದುಕೊಂಡ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾಂತಮ್ಮ ಒಬ್ಬಂಟಿಯಾಗಿದ್ದಾಗ ದುಷ್ಕರ್ಮಿಗಳು ಮನೆ ಹೊಕ್ಕು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.ದುಷ್ಕೃತ್ಯದಲ್ಲಿ ಸಿಲುಕಿಕೊಳ್ಳಬಾರದೆಂಬ ಭಾವನೆಯಲ್ಲಿ ಕೈಗಳಿಗೆ ಗ್ಲೌಸ್ ಹಾಕಿಕೊಂಡು ಕತ್ತು ಹಿಸುಕಿರುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.ಅಲ್ಲದೇ ಕಾಂತಮ್ಮಳ ಕಣ್ಣಿನ ಭಾಗದಲ್ಲಿ ಗಾಯದ ಗುರುತು ಸಹ ಪತ್ತೆಯಾಗಿದೆ.ಇದರಿಂದ ಪರಿಚಿತರೇ ಸ್ವಯಂ ಇಲ್ಲಾ ಬೇರೆಯವರಿಗೆ ಸುಫಾರಿ ಕೊಟ್ಟು ಕೊಲೆ ಮಾಡಿಸಿರಬಹುದು ಎಂದು ಶಂಕಿಸಲಾಗಿದೆ. ಆಸ್ತಿ ವಿವಾದ ಹಿನ್ನೆಲೆಯಲ್ಲಿ ಕಾಂತಮ್ಮ ಮತ್ತು ಆಕೆಯ ಸೊಸೆಯ ನಡುವೆ ಗಲಾಟೆ ನಡೆದಿದ್ದು ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ನಂತರ ರಾಜಿಯಾದರೂ ಈ ವಿಷಯದಲ್ಲಿ ಆಗಾಗ ಗಲಾಟೆಗಳು ನಡೆಯುತ್ತಿದ್ದವು ಎಂದು ತಿಳಿದು ಬಂದಿದೆ. ಕಾಂತಮ್ಮ ಕೊಲೆಯಾದ ದಿನ ಸೊಸೆ ಊರಲ್ಲಿ ಇರಲಿಲ್ಲ. ಇನ್ನೂ ಕಾಂತಮ್ಮಳ ಸಮೀಪ ಬಂಧುವೊಬ್ಬರು ಕುಡಿದು ಮನೆಗೆ ಬಂದು ಮೃತಳನ್ನು ಮಾತನಾಡಿಸಿಕೊಂಡು ಹೋಗಿದ್ದನ್ನು ಸ್ಥಳೀಯರು ಕಂಡಿದ್ದಾರೆ. ಇದರಿಂದ ಮನೆಗೆ ಬಂದ ವ್ಯಕ್ತಿಯ ಮೇಲೆ ಅನುಮಾನ ಮೂಡಿದ್ದು ಇದಕ್ಕೆ ಪುಷ್ಟಿ ನೀಡುವಂತೆ ಶ್ವಾನದಳವು ಸಮೀಪದ ಬಾರಿನವರೆಗೂ ಸಾಗಿ ಆ ನಂತರ ಹಳೆಯ ಬಸ್ ನಿಲ್ದಾಣ ರಸ್ತೆಗೆ ಬಂದಿದೆ. ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಕಾಂತಮ್ಮಳಿಗೆ ಒಂದು ಗಂಡು ಮತ್ತು ಹೆಣ್ಣು ಸೇರಿದಂತೆ ಇಬ್ಬರು ಮಕ್ಕಳು. ಹಿಂದೆಯೇ ಮಗ ಮತ್ತು ಪತಿ ಮೃತಪಟ್ಟಿದ್ದಾರೆ. ಆಕೆಯ ಮನೆಯ ಮೇಲಂತಸ್ತಿನ ಮನೆಯನ್ನು ಸೊಸೆ ಬಾಡಿಗೆಗೆ ಕೊಟ್ಟಿದ್ದು ಕೆಳಗಿನ ಮನೆಯಲ್ಲಿ ಕಾಂತಮ್ಮ ವಾಸವಾಗಿದ್ದಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

