ಕೋಲಾರ

ಬಡ್ತಿ ಕೌನ್ಸೆಲಿಂಗ್‌ಗೆ ಆಯುಕ್ತರ ಆದೇಶ

Published On :

ಕ.ಪ್ರ.ವಾರ್ತೆಕೋಲಾರ ಮೇ 20  
ಪಿಂಚಣಿ, ಬಡ್ತಿ, ವೇತನ ವಿಳಂಬ, ವರ್ಗಾವಣೆ ಹೀಗೆ ಹತ್ತು ಹಲವು ಸಮಸ್ಯೆಗಳ ಪ್ರಸ್ತಾಪಕ್ಕೆ ಮಂಗಳವಾರ ಡಿಡಿಪಿಐ ಕಚೇರಿಯಲ್ಲಿ ನಡೆದ ಶಿಕ್ಷಣ ಅದಾಲತ್ ವೇದಿಕೆಯಾಗಿತ್ತು.
ಆಯುಕ್ತ ಮೊಹಮ್ಮದ್ ಮೌಸೀನ್ ಹಾಗೂ ನಿರ್ದೇಶಕಿ ಯಶೋದ ಬೋಪಣ್ಣ ಅವರು ನಡೆಸಿಕೊಟ್ಟ ಅದಾಲತ್‌ನಲ್ಲಿ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಜಿಲ್ಲೆ 7ನೇ ಸ್ಥಾನ ಪಡೆಯುವ ಮೂಲಕ ಗುಣಾತ್ಮಕ ಫಲಿತಾಂಶ ಹೊಂದಿರುವುದಕ್ಕೆ ಆಯುಕ್ತರು ಮತ್ತು ನಿರ್ದೇಶಕಿ ಸಂತಸ ವ್ಯಕ್ತಪಡಿಸಿದರು.
ಫಲಿತಾಂಶ ವೃದ್ಧಿಸಲು ಇಲಾಖೆಯಿಂದ ಪ್ರಕಟಿತವಾದ ಸ್ಫೂರ್ತಿ ಮಾರ್ಗದರ್ಶಿ ಕಾರಣವೆಂದು ನೋಡೆಲ್ ಅಧಿಕಾರಿ ನಾಗೇಂದ್ರ ಪ್ರಸಾದ್ ತಿಳಿಸಿದಾಗ ಮುಂದೆಯೂ ಇದೇ ರೀತಿಯ ಕಾರ್ಯಕ್ರಮಗಳು ಮುಂದುವರಿಯಲಿ, ಸರ್ಕಾರಿ ಶಾಲೆಗಳ ಫಲಿತಾಂಶ ಇನ್ನಷ್ಟು ಹೆಚ್ಚಿಸಿ ಎಂದು ಸಲಹೆ ನೀಡಿದರು.
ಅನಧಿಕೃತ ಗೈರು: ಕೆಜಿಎಫ್ ಶೈಕ್ಷಣಿಕ ವಲದಲ್ಲಿ ಶಿಕ್ಷಕರಾದ ಪ್ರಸಾದ್  ಎಂಬುವವರು ಕಳೆದ 6 ತಿಂಗಳಿಂದ ಅನಧಿಕೃತ ಗೈರಾಗಿರುವ ಕುರಿತ ಪ್ರಸ್ತಾಪಕ್ಕೆ, ಕೂಡಲೇ ಷೋಕಾಸ್ ನೋಟಿಸ್ ಜಾರಿ ಮಾಡಿ ಸದರಿ ಶಿಕ್ಷಕನನ್ನು ಅಮಾನತುಗೊಳಿಸಿ ಎಂದರು. ಜೆಓಸಿಯಿಂದ ವಿಶೇಷ ನೇಮಕಾತಿಯಡಿ ಇಲಾಖೆಗೆ ಬಂದಿರುವ ಸಿಬ್ಬಂದಿಗೆ ಕಳೆದ 3 ತಿಂಗಳಿಂದ ವೇತನ ಪಾವತಿಸಿಲ್ಲ ಎಂಬ ದೂರಿನ ಹಿನ್ನಲೆಯಲ್ಲಿ ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಿದರು. ಸಿಆರ್‌ಪಿ ಎಂ.ನಾಗರಾಜ್, ಬಡ್ತಿ ನೀಡಿ ನಂತರ ವಾಪಸು  ಪಡೆಯಲಾಗಿದೆ. ಹೈಸ್ಕೂಲ್‌ಗೆ ಮತ್ತು ಪ್ರಾಥಮಿಕ ಶಾಲೆಗೆ ಪ್ರತ್ಯೇಕ ಬಡ್ತಿ ನಿಯಮಗಳು ಸರಿಯೇ ಎಂದು ಪ್ರಶ್ನಿಸಿ ನ್ಯಾಯ ಒದಗಿಸಲು ಆಗ್ರಹಿಸಿದರು.
ಶಿಕ್ಷಕರ ಬಡ್ತಿ ಕೌನ್ಸಿಲಿಂಗ್: ಪ್ರಾಥಮಿಕ ಶಾಲೆಗಳಿಂದ ಪ್ರೌಢಶಾಲೆಗಳಿಗೆ ಬಡ್ತಿ ಹೊಂದಬೇಕಾದ ಶಿಕ್ಷಕರ ಕೌನ್ಸಿಲಿಂಗ್ ಅನ್ನು ಮೇ 29ರೊಳಗೆ ಪೂರ್ತಿಗೊಳಿಸಿ ಎಂದು ಡಿಡಿಪಿಐ ಅವರಿಗೆ ಆದೇಶಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವೇತನ ಪ್ರತಿ ತಿಂಗಳ 15 ನೇ ತಾರೀಖು ಕಳೆದರೂ ಸಿಗುತ್ತಿಲ್ಲ ಎಂದು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ  ವೆಂಕಟಶಿವಪ್ಪ ದೂರಿದರು.
ನೌಕರರ ಸಂಘದ ಉಪಾಧ್ಯಕ್ಷ ಖಾದರ್ ಇಲಾಹಿ ಬಡ್ತಿ ನೀಡಿಕೆಯಲ್ಲೂ ವಿಳಂಬವಾಗಿದೆ ಎಂದು ಆಯುಕ್ತರ ಗಮನ ಸೆಳೆದರು. ಆಯುಕ್ತರ ಸೂಚನೆಗೆ ಉತ್ತರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಜಗದೀಶ್, ಬಡ್ತಿಯ 324 ಪ್ರಕರಣಗಳಿದ್ದು, ಸಾಕಷ್ಟು ವಿಲೇವಾರಿ ಆಗಿದೆ. ವೇತನ ಬಿಲ್ಲುಗಳನ್ನು ಪ್ರತಿ ತಿಂಗಳ 25ರೊಳಗೆ ಖಜಾನೆಗೆ ಸಲ್ಲಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಶಾಲೆಗಳಿಗೆ ನೀರು, ಶೌಚಾಲಯ ಸೌಲಭ್ಯಕ್ಕೆ ಆದ್ಯತೆ
ಕೋಲಾರ: ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಿಗೆ ಕುಡಿಯವ ನೀರು ಮತ್ತು ಶೌಚಾಲಯ ಸೌಲಭ್ಯ ಒದಗಿಸಲು ಕಾರ್ಯದರ್ಶಿ ಅವರಿಗೆ ಪತ್ರ ಮುಖೇನ ಹಾಗೂ ಖುದ್ದಾಗಿ ಮನವಿ ಮಾಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಮೊಹಮ್ಮದ್ ಮೌಸೀನ್ ತಿಳಿಸಿದರು.
ಕೋಲಾರ ನಗರದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿದೇಶಕರ ಕಚೇರಿಯಲ್ಲಿ ಸೋಮವಾರ ಶಿಕ್ಷಣ ಅದಾಲತ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಗ್ರಾಪಂ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿಗಳ ಅನುದಾನದಲ್ಲಿ ನೀರು ಮತ್ತು ಶೌಚಾಲಯ ವ್ಯವಸ್ಥೆ ಕಲ್ಪಿಸಲು ಅವಕಾಶವಿರುವುದರಿಂದ ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೂ ತಿಳಿಸಲಾಗಿದೆ ಎಂದರು.
ಕೋಲಾರ ಜಿಲ್ಲೆಯ 1 ಅನುದಾನಿತ, 13 ಅನುದಾನ ರಹಿತ ಖಾಸಗಿ ಶಾಲೆಗಳು ಸೇರಿದಂತೆ ಕನಿಷ್ಠ 25 ಮಕ್ಕಳಿಗಿಂತ ಕಡಿಮೆ ಸಂಖ್ಯೆಯಲ್ಲಿನ ಖಾಸಗಿ ಶಾಲೆಗಳನ್ನು ಮುಚ್ಚಲು ಒಂದು ವರ್ಷ ಗಡುವು ನೀಡಲಾಗಿದೆ. ಜೂನ್‌ನಿಂದ ಶೈಕ್ಷಣಿಕ ವರ್ಷ ಆರಂಭಗೊಳ್ಳುತ್ತಿದ್ದು ಸರ್ಕಾರದ ನೀತಿ- ನಿಯಮಗಳಿಗೆ ಅನುಗುಣವಾಗಿ ಮಕ್ಕಳ ಪ್ರವೇಶ ಸಂಖ್ಯೆ ಇಲ್ಲದಿದ್ದಲ್ಲಿ ಅಂತಹ ಶಾಲೆಗಳನ್ನು ಮುಚ್ಚಿಸಲಾಗುತ್ತದೆ ಎಂದು ಹೇಳಿದರು. 25ಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಮಕ್ಕಳು ಇರುವ ಶಾಲೆಗಳನ್ನು ಪತ್ತೆ ಮಾಡಿ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ಅಧಿಕಾರಿಗಳನ್ನು ಜವಾಬ್ದಾರಿಯನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಕೋಲಾರ ಜಿಲ್ಲೆಯಲ್ಲಿ ಸರ್ಕಾರದ ನಿಯಮ ಮೀರಿ ಯಾವುದಾದರು ಖಾಸಗಿ ಶಾಲೆಗಳು ಹೆಚ್ಚಿನ ಡೊನೇಷನ್ ವಸೂಲಿ ಮಾಡುತ್ತಿದ್ದರೆ ಅಂಥ ಶಾಲೆಗಳ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.
ಶಿಸ್ತು ಉಲ್ಲಂಘನೆ ಪ್ರಕರಣಗಳು: ಕೋಲಾರ ಜಿಲ್ಲೆಯಲ್ಲಿ ಶಾಲೆಗೆ ಅನಧಿಕೃತ ಗೈರು, ದಾಖಲೆಗಳು ಇಲ್ಲದಿರುವುದು, ಹಣ ದುರುಪಯೋಗಕ್ಕೆ ಸಂಬಂಧಿಸಿದ ಏಳೆಂಟು ಪ್ರಕರಣಗಳಿಗೆ ಸಂಬಂಧಿಸಿದಂತೆ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲವೆಂಬುದು ಅದಾಲತ್‌ನಲ್ಲಿ ಗೊತ್ತಾಗಿದೆ. ಕೂಡಲೇ ಬಿಇಒಗಳಿಂದ ಕಡತಗಳನ್ನು ತರಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಡಿಡಿಪಿಐಗೆ ಸೂಚಿಸಲಾಗಿದೆ ಎಂದು ಆಯುಕ್ತರಾದ ಮೊಹಮ್ಮದ್ ಮೌಸೀನ್ ತಿಳಿಸಿದರು.
ಇಲಾಖೆಯ ನಿರ್ದೇಶಕಿ ಯಶೋದ ಬೋಪಣ್ಣ, ಡಿಡಿಪಿಐ ಪದ್ಮನಾಭ್, ಶಿಕ್ಷಣಾಧಿಕಾರಿಗಳಾದ ಜಯರಾಮರೆಡ್ಡಿ, ನಾಗೇಂದ್ರ ಪ್ರಸಾದ್ ಇದ್ದರು.

ಡೊನೇಷನ್ ತಡೆಗೆ ರೈತ ಸಂಘ ಒತ್ತಾಯ
ಕೋಲಾರ: ಖಾಸಗಿ ಶಾಲೆಗಳು ಸರ್ಕಾರ ನಿಗದಿಗೊಳಿಸಿರುವ ಶುಲ್ಕಕ್ಕಿಂತ ಹೆಚ್ಚಾಗಿ ಪಡೆಯುವ ಮೂಲಕ ಪೋಷಕರನ್ನು ಸುಲಿಯುತ್ತಿದ್ದಾರೆಂದು ರೈತ ಸಂಘದ ಮುಖಂಡರು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಮೊಹಮ್ಮದ್ ಮೌಸೀನ್ ಅವರಿಗೆ ದೂರು ನೀಡಿದರು.
ನಗರದಲ್ಲಿ ನಡೆದ ಶಿಕ್ಷಣ ಅದಾಲತ್‌ನಲ್ಲಿ ಪಾಲ್ಗೊಂಡಿದ್ದ ಆಯುಕ್ತರಿಗೆ ಮನವಿ ಸಲ್ಲಿಸಿದ ರೈತಸಂಘದ ಜಿಲ್ಲಾ ಸಂಚಾಲಕ ಕೆ.ಶ್ರೀನಿವಾಸಗೌಡ, 'ಡೊನೇಷನ್ ಹಾವಳಿಯಿಂದ ಪೋಷಕರು ತತ್ತರಿಸಿ ಹೋಗಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ಸರ್ಕಾರ ನಿಗದಿಪಡಿಸಿರುವ ಶುಲ್ಕವನ್ನು ಎಲ್ಲಾ ಶಾಲಾ ಕಾಲೇಜುಗಳ ಸೂಚನಾ ಫಲಕದಲ್ಲಿ ಪ್ರಕಟಿಸಬೇಕು' ಎಂದು ಆಗ್ರಹಿಸಿದರು.ಪ್ರಧಾನ ಕಾರ್ಯದರ್ಶಿ ಮೂರಾಂಡಹಳ್ಳಿ ಶಿವಾರೆಡ್ಡಿ ಮಾತನಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಒಂದು ಸಮಿತಿ ಇದ್ದು, ಅಲ್ಲಿ ದೂರು ನೀಡಬಹುದು.
ಅಲ್ಲದೆ, ಬಿಇಒಗಳು ಶಾಲೆಗಳಿಗೆ ಭೇಟಿ ನೀಡಿ ಸರ್ಕಾರದ ನಿಯಮದಂತೆ ಶುಲ್ಕದ ವಿವರಗಳನ್ನು ಸೂಚನಾ ಫಲಕದಲ್ಲಿ ಪ್ರಕಟಿಸುವಂತೆ ಆಡಳಿತ ಮಂಡಳಿಗಳಿಗೆ ಸೂಚಿಸಬೇಕೆಂದರು. ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ನಾರಾಯಣಗೌಡ ಸೇರಿ ಅನೇಕರಿದ್ದರು.

ಅನುಮತಿ ಇಲ್ಲದ ಕಾಲೇಜುಗಳಿಗೆ ವಿದ್ಯಾರ್ಥಿಗಳ ದಾಖಲೆಗೆ ಡಿಸಿ ಗರಂ
ಕೋಲಾರ: ಜಿಲ್ಲೆಯಲ್ಲಿ ಅನುಮತಿ ಇಲ್ಲದೆ ಕಾಲೇಜುಗಳನ್ನು ಸ್ಥಾಪಿಸಿ ವಿದ್ಯಾರ್ಥಿಗಳನ್ನು ಅಕ್ರಮವಾಗಿ ದಾಖಲು ಮಾಡಿಸಿಕೊಳ್ಳುತ್ತಿರುವ ಪಿಯು ಕಾಲೇಜುಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಡಿ.ಕೆ. ರವಿ ಸೂಚಿಸಿದ್ದಾರೆ.
ತಮ್ಮನ್ನು ಭೇಟಿಯಾದ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಕೋಲಾರ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ 17 ಪಿಯು ಕಾಲೇಜುಗಳು ಅನುಮತಿ ಇಲ್ಲದೆ ಕಾಲೇಜುಗಳನ್ನು ಪ್ರಾರಂಭಿಸಿದ್ದು, ಅದರಂತೆ ವಿದ್ಯಾರ್ಥಿಗಳ ದಾಖಲು ಮಾಡಿಕೊಳ್ಳುತ್ತಿದ್ದಾರೆಂಬ ದೂರು ಕೇಳಿ ಬಂದ ಹಿನ್ನಲೆಯಲ್ಲಿ ಕ್ರಮಕ್ಕೆ ಸೂಚಿಸಿದ್ದೇನೆಂದರು.
ಅಕ್ರಮ ದಾಖಲಾತಿಯ ಜೊತೆಗೆ ವಿದ್ಯಾರ್ಥಿಗಳ ಬಳಿ ಹೆಚ್ಚಿನ ಡೊನೇಷನ್ ವಸೂಲಿ ಮಾಡುತ್ತಿದ್ದಾರೆಂಬ ಆರೋಪವಿರುವುದರಿಂದ ಕಟ್ಟುನಿಟ್ಟಿನ ಕ್ರಮಕ್ಕೆ ತಿಳಿಸಿದ್ದೇನೆ. ಕಾಲೇಜುಗಳ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಲು ಯಾಕೆ ಹಿಂದೆ ಸರಿಯುತ್ತಿದ್ದೀರಿ. ಪಿಯು ಕಾಯ್ದೆಯ ಪ್ರಕಾರ ಅವರ ವಿರುದ್ಧ ಕ್ರಮಕೈಗೊಳ್ಳಲು ನಿಮಗೆ ಅಧಿಕಾರವಿಲ್ಲವೆ ಎಂದು ಪ್ರಶ್ನೆ ಮಾಡಿರುವುದಾಗಿ ತಿಳಿಸಿದರು.
ಕಾಲೇಜುಗಳ ಮಾಲೀಕರು ಕಳೆದ ವರ್ಷ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕಾಲೇಜುಗಳಿಗೆ ಇನ್ನು ಅನುಮತಿ ದೊರೆತಿಲ್ಲ ಎಂದು ಡಿಡಿ ದೊರೆಸ್ವಾಮಿ ಉತ್ತರಿಸಿದ್ದಾರೆ. ಅನುಮತಿ ಇಲ್ಲದ ಕಾಲೇಜುಗಳಿಗೆ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವುದು ತಪ್ಪಾಗುವುದರಿಂದ ಇಂತಹ ಕಾಲೇಜುಗಳ ವಿರುದ್ಧ ಕ್ರಮಕೈಗೊಳ್ಳಲು ಸಮಿತಿ ರಚನೆ ಮಾಡಿ ಅಗತ್ಯ ಕ್ರಮಕೈಗೊಳ್ಳುವಂತೆ ತಾಕೀತು ಮಾಡಿದ್ದೇನೆ. ಒಂದು ವೇಳೆ ಡಿಡಿಯವರು ಅಸಹಾಯಕತೆ ಅಥವಾ ನಿರ್ಲಕ್ಷ್ಯ ತೋರಿದರೆ ನಾನೇ ಅವರ ಕೆಲಸ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವೈದ್ಯಕೀಯ ಬಿಲ್ಲು ಬಾಕಿ ಪಾವತಿಗೆ ಶಿಕ್ಷಣ ಇಲಾಖೆ ಆಯುಕ್ತರ ಸೂಚನೆ
ಕೋಲಾರ: ಜಿಲ್ಲೆಯ ಆರು ಶೈಕ್ಷಣಿಕ ವಲಯಗಳ ವ್ಯಾಪ್ತಿಯಲ್ಲಿ 300ಕ್ಕೂ ಹೆಚ್ಚು ವೈದ್ಯಕೀಯ ಬಿಲ್ಲುಗಳು ಬಾಕಿ ಇದ್ದು, ಕೂಡಲೇ ಹಣ ಬಿಡುಗಡೆ ಮಾಡಿಸುವಂತೆ ಶಿಕ್ಷಕರು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಮೊಹಮ್ಮದ್ ಮೌಸೀನ್ ಅವರಿಗೆ ಮನವಿ ಸಲ್ಲಿಸಿದರು.
ನಗರದ ಡಿಡಿಪಿಐ ಕಚೇರಿಯಲ್ಲಿ ಮಂಗಳವಾರ ನಡೆದ ಶಿಕ್ಷಣ ಇಲಾಖೆಯ ಅದಾಲತ್‌ನಲ್ಲಿ ವೈದ್ಯಕೀಯ ಬಿಲ್ಲುಗಳ ಬಾಕಿಯ ಬಗ್ಗೆ ಶಿಕ್ಷಕರು ದೂರು ನೀಡಿದಾಗ ಡಿಡಿಪಿಐ ಕಚೇರಿಯಲ್ಲಿನ ಶಿಕ್ಷಣಾಧಿಕಾರಿ ಕೆ.ಎಂ.ಜಯರಾಮರೆಡ್ಡಿ ಮಧ್ಯ ಪ್ರವೇಶಿಸಿ ಮಾತನಾಡಿ, 'ಕೋಲಾರ ತಾಲೂಕೊಂದರಲ್ಲೇ 62 ವೈದ್ಯಕೀಯ ಬಿಲ್ಲುಗಳು ಬಾಕಿ ಇವೆ. ಉಳಿದಂತೆ ಜಿಲ್ಲೆಯ ಎಲ್ಲಾ ಶಿಕ್ಷಣ ವಲಯಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಕಡತಗಳು ಅನುದಾನವಿಲ್ಲದೇ ವಿಲೇವಾರಿಯಾಗಿಲ್ಲ' ಎಂದರು.
ವೈದ್ಯಕೀಯ ಬಿಲ್ಲುಗಳಿಗೆ ಶಿಕ್ಷಕರ ವೇತನ ಅನುದಾನದಲ್ಲಿ ಹಣ ಪಾವತಿಗೆ ಅವಕಾಶವಿಲ್ಲದ ಕಾರಣ ತೊಂದರೆಯಾಗಿದ್ದು ಸುಮಾರು 2 ಕೋಟಿ ಅನುದಾನ ಅಗತ್ಯವಿದೆ ಎಂದರು.

  ಜಿಪಂ ಸಿಇಒ ಭರವಸೆ
ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ವೈದ್ಯಕೀಯ ಬಿಲ್ಲುಗಳು ಬಾಕಿ ಉಳಿಸಿಕೊಳ್ಳುವುದರಿಂದ ಶಿಕ್ಷಕರಿಗೆ ತೊಂದರೆ ಆಗುತ್ತದೆ. ಸಂಬಂಧಪಟ್ಟ ಕಡತಗಳನ್ನು ತರಿಸಿಕೊಂಡು ಹಣ ಬಿಡುಗಡೆ ಮಾಡಿಸಿ ಎಂದು ಅದಾಲತ್‌ನಲ್ಲಿ ಹಾಜರಿದ್ದ ಕೋಲಾರ ಜಿಪಂ ಸಿಇಒ ವಿನೋತ್ ಪ್ರಿಯಾ ಅವರಿಗೆ ಸೂಚಿಸಿದರು. ಬಿಲ್ಲು ಬಾಕಿ ಪಾವತಿ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಶೀಘ್ರವಾಗಿ ಅನುದಾನ ಬಿಡುಗಡೆಗೊಳಿಸುವುದಾಗಿ ಸಿಇಒ  ಭರವಸೆ ನೀಡಿದರು.
ಕೆಜಿಎಫ್ ಗಣಿ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದಿಂದ ನಡೆಯುತ್ತಿದ್ದ ಬಿಜಿಎಂಎಲ್ ಹೈಸ್ಕೂಲ್ ಹಾಗೂ ಪಾರ್ಕಿನ್‌ಸನ್ ಪ್ರಾಥಮಿಕ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಇದನ್ನು ರಾಜ್ಯ ಸರ್ಕಾರ ತನ್ನ ವಶಕ್ಕೆ ಶಾಲೆಗಳನ್ನು ಉಳಿಸಬೇಕೆಂದು ಶಾಲಾಭಿವೃದ್ಧಿ ಸಮಿತಿಯ ಲತಾ ಹಾಗೂ ಪದಾಧಿಕಾರಿಗಳು ಆಯುಕ್ತರಿಗೆ ಮನವಿ ಸಲ್ಲಿಸಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಆಯುಕ್ತರು ಭರವಸೆ ನೀಡಿದರು.

  ಮುಖ್ಯೋಪಾಧ್ಯಾಯರ ಮೇಲೆ ದೂರು
ಪಂಡಿತ್ ಮುನಿವೆಂಕಟಪ್ಪ ಎಂಬ ಸರ್ಕಾರಿ ಶಾಲೆಯ ಮುಖ್ಯೋಪಾಧ್ಯಾಯರು ಶಾಲೆಯ ಕೆಲಸ ಬಿಟ್ಟು ಬೇರೆ ಚಟುವಟಿಕೆಗಳಲ್ಲಿ ತಮ್ಮನ್ನು ತೋಡಗಿಸಿಕೊಂಡಿದ್ದಾರೆ. 2011ರಲ್ಲೇ ಈ ಸಂಬಂಧ ಶಿಕ್ಷಣ ಇಲಾಖೆಯ ಅಂದಿನ ಆಯುಕ್ತರಿಗೆ ದೂರು ನೀಡಲಾಗಿತ್ತು. ಶಾಲೆಗೆ ಬಾರದ ಪಂಡಿತ್ ಮುನಿವೆಂಕಟಪ್ಪ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಆಯುಕ್ತರು ಡಿಡಿಪಿಐಗೆ ಸೂಚಿಸಿದ್ದರೂ ಕ್ರಮ ಕೈಗೊಂಡಿಲ್ಲ. ಮುನಿವೆಂಕಟಪ್ಪನವರು ಡಿಡಿಪಿಐ ಕಚೇರಿಗೆ ತನ್ನ ಜನರನ್ನು ಕರೆತಂದು ಗಲಾಟೆ ಮಾಡಿಸುತ್ತಾರೆಂಬ ಭಯದಿಂದ ಡಿಡಿಪಿಐ ಮೌನವಾಗಿದ್ದಾರೆಂದು ದಲಿತ ಪ್ರಜಾ ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಆಂಜನಪ್ಪ ಆರೋಪಿಸಿದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತ ಮೊಹಮ್ಮದ್ ಮೌಸೀನ್ ಹಾಗೂ ನಿರ್ದೇಶಕಿ ಯಶೋದ ಬೋಪಣ್ಣನವರು ಸಂಬಂಧಪಟ್ಟ ಬಿಇಒರವರಿಂದ ವರದಿ ತರಿಸಿಕೊಂಡು ಮುಖ್ಯೋಪಾದ್ಯಾಯರನ್ನು ಅಮಾನತುಪಡಿಸಿ ಎಂದು ಸೂಚಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.