ಕೋಲಾರ

'ದೈವ ಕೃಪೆಯಿಂದ ನೀರಿನ ಸಮಸ್ಯೆ ನಿವಾರಣೆ ಸಾಧ್ಯ'

Published On :

ಪಾ.ಶ್ರೀ. ಅನಂತರಾಮ್
ಕೋಲಾರ: ನಗರವನ್ನು ಕಾಡುತ್ತಿರುವ ನೀರಿನ ಸಮಸ್ಯೆ ದೈವ ಕೃಪೆಯಿಂದ ನಿವಾರಣೆ ಸಾಧ್ಯ ಎಂದು ನಗರಸಭೆ ಅಧ್ಯಕ್ಷ ಮುಬಾರಕ್ ಅಭಿಪ್ರಾಯಪಟ್ಟಿದ್ದಾರೆ.
ಕುಡಿಯುವ ನೀರಿನ ನಿವಾರಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ಗುರುವಾರ ಅವರು ಕನ್ನಡಪ್ರಭದೊಂದಿಗೆ ಮಾತನಾಡಿ, ತಾವು ಅಧಿಕಾರ ವಹಿಸಿಕೊಂಡ ನಂತರ ನೀರಿನ ಸಮಸ್ಯೆ ನೀಗಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ, ಅಂತರ್ಜಲ ಕುಸಿತದಿಂದ ನೀರಿನ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದ್ದು ನಗರಸಭೆಯಿಂದ ಏನೇ ಪರ್ಯಾಯ ವ್ಯವಸ್ಥೆ ಮಾಡಿದರೂ ದೈವ ಕೃಪೆ ಇಲ್ಲದಿದ್ದರೆ ಶಾಶ್ವತ ಪರಿಹಾರ ಕಷ್ಟವೆಂದು ನುಡಿದರು. ಕೋಲಾರ ನಗರದಲ್ಲಿ ಸುಮಾರು 300 ಕೊಳವೆ ಬಾವಿಗಳು ನಗರಸಭೆ ವ್ಯಾಪ್ತಿಗೆ ಬರುತ್ತವೆ. ಈ ಪೈಕಿ 113ರಲ್ಲಿ ಮಾತ್ರ ನೀರಿನ ಲಭ್ಯತೆ ಇದ್ದು, 75ಕ್ಕೂ ಹೆಚ್ಚು ಕೊಳವೆ ಬಾವಿಗಳು ಸಂಪೂರ್ಣವಾಗಿ ಬತ್ತಿವೆ ಎಂದರು.
ಕೆಲವು ಕೊಳವೆ ಬಾವಿಗಳಲ್ಲಿ ನೀರಿನ ಸಾಮರ್ಥ್ಯ ಕಡಿಮೆ ಇರುವುದರಿಂದ ಪಂಪು-ಮೋಟಾರ್ ಅಳವಡಿಸಲು ಕಷ್ಟವಾಗುತ್ತದೆ. ವರುಣನ ಕೃಪೆಯಿಂದ ಅಂತರ್ಜಲ ವೃದ್ಧಿಸಿದಲ್ಲಿ ಕೊಂಚ ಮಟ್ಟಿಗೆ ನೀರಿನ ಬವಣೆ ತಪ್ಪುತ್ತದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು. ತಾವು ಅಧ್ಯಕ್ಷರಾದ ನಂತರ ಸಿ.ಆರ್.ಎಫ್ ಅನುದಾನದಲ್ಲಿ ಬಿಡುಗಡೆಯಾದ 2 ಕೋಟಿ ರು.ಗಳಲ್ಲಿ ನಗರದ 35 ವಾರ್ಡುಗಳ ವ್ಯಾಪ್ತಿಯಲ್ಲಿ ಹಾಗೂ ನೀರು ಒದಗಿಸುತ್ತಿರುವ ಕೆರೆಗಳಲ್ಲಿ ಹೊಸದಾಗಿ 44 ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು ಈ ಪೈಕಿ 36ರಲ್ಲಿ ನೀರು ಸಿಕ್ಕಿದೆ. ತುರ್ತಾಗಿ 25ಕ್ಕೆ ಪಂಪು-ಮೋಟಾರ್ ಅಳವಡಿಸಲಾಗುತ್ತಿದೆ ಎಂದು ನೀರಿನ ಸಮಸ್ಯೆ ನಿವಾರಣೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.
ರಾಜ್ಯ ಸರ್ಕಾರ ಬರಪೀಡಿತ ಕೋಲಾರಕ್ಕೆ ಹೆಚ್ಚಿನ ಅನುದಾನ ನೀಡಿದಲ್ಲಿ ಜನರ ದಾಹ ತೀರಿಸಲು ಅನುಕೂಲವಾಗುತ್ತದೆ. ಕೊಳವೆ ಬಾವಿಗಳಲ್ಲಿ ನೀರಿನ ಪ್ರಮಾಣ ಇಳಿಮುಖವಾಗಿರುವುದರಿಂದ ಪ್ರತಿನಿತ್ಯ ನಗರಸಭೆ ಮತ್ತು ಖಾಸಗಿ ಟ್ಯಾಂಕರ್‌ಗಳ ಮೂಲಕ 300 ಲೋಡ್ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಜನಸಂಖ್ಯೆ ಹೆಚ್ಚಳ ಹಾಗೂ ಬೇಡಿಕೆ ಹೆಚ್ಚಿರುವುದರಿಂದ ಅಗತ್ಯಕ್ಕೆ ತಕ್ಕಂತೆ ನೀರು ಕೊಡಲಾಗುತ್ತಿಲ್ಲವೆಂದರು. ಅಮ್ಮೇರಹಳ್ಳಿ ಮತ್ತು ಮಡೇರಹಳ್ಳಿ ಕೆರೆಯಲ್ಲಿ ಒಟ್ಟು 36 ಕೊಳವೆ ಬಾವಿಗಳ ಪೈಕಿ 9ರಲ್ಲಿ ಮಾತ್ರ ನೀರಿದೆ,ಹೊಸದಾಗಿ ಕೊರೆದಿರುವ 4ರ ಪೈಕಿ 2ರಲ್ಲಿ ನೀರು ಸಿಕ್ಕಿದೆ, ಕೋಲಾರಮ್ಮ ಕೆರೆಯಲ್ಲಿ 30ರಲ್ಲಿ 15ರಿಂದ 18 ಸ್ಪಲ್ಪ ಪ್ರಮಾಣದಲ್ಲಿ ನೀರು ಸಿಗುತ್ತಿದೆ. ಹೊಸದಾಗಿ 9 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ, ಕೋಡಿಕಣ್ಣೂರು ಕೆರೆಯಲ್ಲಿ 4 ಹಳೆ ಬಾವಿಗಳಿದ್ದು ಹೊಸದಾಗಿ 2 ಕೊರೆಸಲಾಗಿದ್ದು 1ರಲ್ಲಿ ಶಿಲ್ಟ್ ಸೇರಿಕೊಂಡಿದ್ದು ಮತ್ತೊಂದಕ್ಕೆ ಪಂಪು ಮೋಟಾರ್ ಅಳವಡಿಸಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.