ಜಿಲ್ಲಾದ್ಯಂತ ಶಾಲೆಗಳು ಶುರು ಇಂದಿನಿಂದ
ಕೋಲಾರ: ಜಿಲ್ಲಾದ್ಯಂತ ಮೇ.30ರಂದು ಶುಕ್ರವಾರ ಸರ್ಕಾರಿ ಶಾಲೆಗಳು ಪುನಾರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ಶಾಲಾ ಮುಖ್ಯಸ್ಥರು ಹಾಗೂ ಸಿಬ್ಬಂದಿ ಮಕ್ಕಳನ್ನು ಸಂಭ್ರಮದಿಂದ ಬರಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ.
ಈ ಸಾಲಿನ ಶೈಕ್ಷಣಿಕ ಚಟುವಟಿಕೆಗಳನ್ನು ಹಬ್ಬದಂತೆ ಪ್ರಾರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್. ವಿ. ಪದ್ಮನಾಭ್ ಎಲ್ಲಾ ಶಾಲೆಗಳ ಮುಖ್ಯಸ್ಥರಿಗೆ ಬಿಇಒಗಳ ಮೂಲಕ ಆದೇಶಿಸಿದ್ದಾರೆ.
ಈ ಸಾಲಿನಲ್ಲಿ ಸಮಗ್ರ ಹಾಗೂ ಗುಣಮಟ್ಟದ ಶಿಕ್ಷಣದ ಮೂಲಕ ಶಾಲೆಗಳ ಅಭಿವೃದ್ಧಿಗೆ ಅನುಸರಿಸಬೇಕಾದ ಮಾರ್ಗಸೂಚಿಯನ್ನು ತಿಳಿಸಿರುವ ಡಿಡಿಪಿಐ, ಶಾಲಾ ಪ್ರಾರಂಭದ ದಿನವನ್ನು ಮಕ್ಕಳ ಮನಸ್ಸಿನಲ್ಲಿ ಸ್ಥಿರವಾಗಿ ಉಳಿಸಬೇಕು ಹಾಗೂ ಆಹ್ಲಾದಕರ ವಾತಾವರಣ ಸೃಷ್ಟಿಸುವಂತೆ ತಿಳಿಸಿದ್ದಾರೆ.
ಶಾಲಾ ಆವರಣ, ಕೊಠಡಿಗಳನ್ನು ಸ್ವಚ್ಚಗೊಳಿಸುವುದು, ಕುಡಿಯಲು ನೀರು ಒದಗಿಸುವುದು, ಶೌಚಾಲಯವನ್ನು ಸುಸ್ಥಿತಿಯಲ್ಲಿಡುವುದು, ಬಿಸಿಯೂಟದ ವ್ಯವಸ್ಥೆ ಹಾಗೂ ಶಾಲೆಯನ್ನು ತಳಿರು ತೋರಣಗಳಿಂದ ಅಲಂಕರಿಸುವ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಮೆರಗು ನೀಡುವಂತೆ ಸೂಚಿಸಿದ್ದಾರೆ. ಜಿಲ್ಲಾದ್ಯಂತ ಮೇ.30 ರಿಂದ ಜೂ.6 ರವರೆಗೂ ಶಿಕ್ಷಣ ಇಲಾಖೆಗಳ ಅಧಿಕಾರಿಗಳು ಪ್ರತಿ ಶಾಲೆಗೆ ಭೇಟಿ ಸಿದ್ಧತೆಗಳ ಪರಿಶೀಲನೆ ನಡೆಸಿ ಶೈಕ್ಷಣಿ ಚಟುವಟಿಕೆಗಳ ಕುರಿತು ಮಾಹಿತಿ ದಾಖಲಿಸುವ ಕಾರ್ಯ ನಡೆಸಲಿದ್ದಾರೆಂದು ತಿಳಿಸಿದ್ದಾರೆ. ಮಿಂಚಿನ ಸಂಚಾರದ ಜಿಲ್ಲಾ ತಂಡದಲ್ಲಿ ಶಿಕ್ಷಣಾಧಿಕಾರಿಗಳಾದ ಕೆ.ಎಂ.ಜಯರಾಮ ರೆಡ್ಡಿ, ಎ.ಎನ್.ನಾಗೇಂದ್ರಪ್ರಸಾದ್, ವಿಷಯ ಪರೀಕ್ಷಕರಾದ ಹೆಚ್.ವೆಂಕಟಸ್ವಾಮಿ, ಬಾಬು ಜನಾರ್ಧನನಾಯ್ಡು, ಸಿ.ಆರ್.ಅಶೋಕ್, ರಾಜಣ್ಣ, ಮಲ್ಲಿಕಾರ್ಜುನಾಚಾರಿ, ಶಿವಮಾದಯ್ಯ ಮತ್ತಿತರರು ಇದ್ದಾರೆ. ತಾಲೂಕು ಮಟ್ಟದ ತಂಡಗಳಲ್ಲಿ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ನೇತೃತ್ವ ವಹಿಸಲಿದ್ದಾರೆ.
ಅನಧಿಕೃತ ಕಾಲೇಜುಗಳಿಗೆ ಪ್ರವೇಶ ಬೇಡ: ದೊರೆಸ್ವಾಮಿ ಎಚ್ಚರಿಕೆ
ಕೋಲಾರ: ಜಿಲ್ಲೆಯಲ್ಲಿ ಅನಧಿಕೃತವಾಗಿ ತಲೆಯೆತ್ತಿರುವ ಪದವಿ ಪೂರ್ವ ಕಾಲೇಜುಗಳ ಮೇಲೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ಜಿ. ದೊರೆಸ್ವಾಮಿ ನೇತೃತ್ವದ ತಂಡ ದಾಳಿ ಮುಂದುವರೆಸಿದೆ.
ಜಿಲ್ಲೆಯಲ್ಲಿ ಕೆಲವು ಶಿಕ್ಷಣ ಸಂಸ್ಥೆಗಳು ಸರ್ಕಾರದಿಂದ ಅನುಮತಿ ಪಡೆಯದೆ ಪಿಯು ಕಾಲೇಜು ಸ್ಥಾಪನೆಯ ನಾಮಫಲಕ ಹಾಕಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳುತ್ತಿವೆ ಎಂಬ ದೂರಿನ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಡಿ.ಕೆ. ರವಿ ಅವರು ಅನಧಿಕೃತ ಕಾಲೇಜುಗಳ ಮೇಲೆ ದಾಳಿ ಮಾಡುವಂತೆ ಸೂಚಿಸಿದ್ದರು.
ಕಳೆದ ಎರಡು ದಿನಗಳಿಂದ ದಾಳಿ ನಡೆಸುತ್ತಿರುವ ಪಿಯು ಡಿಡಿ ದೊರೆಸ್ವಾಮಿ ಹಾಗೂ ಇಲಾಖೆಯ ಸಿಬ್ಬಂದಿ ಗುರುವಾರ ನಗರ ಹೊರ ವಲಯದ ಖಾಸಗಿ ಶಿಕ್ಷಣ ಸಂಸ್ಥೆಯೊಂದು ಪಿಯು ಕಾಲೇಜು ನಾಮಫಲಕ ಹಾಕಿಕೊಂಡು ಪ್ರಚಾರ ನಡೆಸಿರುವುದನ್ನು ಪತ್ತೆ ಮಾಡಿ ಪ್ಲೆಕ್ಸ್ ತೆರವು ಮಾಡಿದರಲ್ಲದೆ. ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳದಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಇದೇ ರೀತಿ ಎಸ್‌ಎಫ್‌ಎಸ್, ಮಿಲತ್, ಮಹೇಶ್ ಪಿಯು ಶಿಕ್ಷಣ ಸಂಸ್ಥೆಗಳಿಗೆ ನೋಟಿಸ್ ನೀಡಿ ಸರ್ಕಾರದ ಅನುಮತಿ ಸಿಗುವವರೆಗೂ ಕಾಲೇಜು ಆರಂಭದ ಪ್ರಚಾರವಾಗಲಿ, ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳುವುದಾಗಲಿ ಅಪರಾಧವಾಗುತ್ತದೆ ಎಂದು ಎಚ್ಚರಿಸಿದ್ದಾರೆ. ನಗರದ ಸಹ್ಯಾದ್ರಿ, ಮಹಿಳಾ ಸಮಾಜ, ಜೀನಿಯಸ್, ಬಿಜಿಎಸ್, ವಿದ್ಯಾಜ್ಯೋತಿ ಮತ್ತಿತರ ಕಾಲೇಜುಗಳಿಗೂ ಭೇಟಿ ನೀಡಿದ್ದ ಡಿಡಿ ನೇತೃತ್ವದ ತನಿಖಾ ತಂಡ ಕಾಲೇಜಿನ ಸೂಚನಾ ಫಲಕದಲ್ಲಿ ಶುಲ್ಕದ ವಹಿ ಪ್ರಕಟಿಸದ ಕೆಲವು ಕಾಲೇಜುಗಳ ಆಡಳಿತ ಮಂಡಳಿಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ನೋಟಿಸ್ ಜಾರಿ ಮಾಡಿದ್ದಾರೆ. ಕೆಲವು ಕಡೆ ಸ್ಥಳದಲ್ಲೇ ಇದ್ದು ಶುಲ್ಕದ ಮಾಹಿತಿ ಸೂಚನಾ ಫಲಕದಲ್ಲಿ ಪ್ರಕಟಿಸಿದ ನಂತರ ಪರಿಶೀಲನೆ ನಡೆಸಿತು.
ಈಗಾಗಲೇ ಎಲ್ಲಾ ಅಧಿಕೃತ ಕಾಲೇಜುಗಳು ತಾವು ವಿದ್ಯಾರ್ಥಿಗಳಿಂದ ವಸೂಲಿ ಮಾಡುವ ಶುಲ್ಕಗಳ ಮಾಹಿತಿ ಕಡ್ಡಾಯವಾಗಿ ಸೂಚನಾ ಫಲಕದಲ್ಲಿ ಪ್ರಕಟಿಸಿರಬೇಕು, ತಪ್ಪಿದಲ್ಲಿ ಶಿಕ್ಷಣ ಕಾಯಿದೆಯಡಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ತಂಡದಲ್ಲಿ ಮದನಹಳ್ಳಿ ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ಎಂ.ವಿ. ಸೂರ್ಯನಾರಾಯಣ, ಮಾಲೂರಿನ ಮಾರುತಿ ಪಿಯು ಕಾಲೇಜು ಪ್ರಾಂಶುಪಾಲ ರಾಮಚಂದ್ರಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

