ತನಿಖೆ ನೆಪದಲ್ಲಿ ಕಾಮಗಾರಿ ಅಡ್ಡಿ ಸಲ್ಲ
ರಾಮನಗರ: ತನಿಖೆ ನೆಪದಲ್ಲಿ ಕಾಮಗಾರಿಗಳಿಗೆ ಅಡ್ಡಿಪಡಿಸುವ ಮತ್ತು ಬಿಲ್ ಮಂಜೂರಾತಿ ತಡೆ ವಿರುದ್ಧ ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಪಕ್ಷಾತೀತವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಜನಪ್ರತಿನಿಧಿಗಳ ಸೂಚನೆ ಮೇರೆಗೆ ಕೈಗೆತ್ತಿಕೊಂಡ ಕಾಮಗಾರಿಗಳನ್ನೂ ತನಿಖೆಗೆ ಒಳಡಪಡಿಸಿ, ಸಾರ್ವಜನಿಕರಿಗೆ ಅನಗತ್ಯ ಕಿರಿಕಿರಿ ಉಂಟು ಮಾಡುವ ಕೆಲಸ ನಿಲ್ಲಬೇಕು
ಎನ್ನುವ ಸದಸ್ಯರ ಆಗ್ರಹಕ್ಕೆ ಅಧ್ಯಕ್ಷ ಎಚ್.ಸಿ.ರಾಜು ಕೂಡ ಸಹಮತ ವ್ಯಕ್ತಪಡಿಸಿದರು.
ಹಿಂದಿನ ಸಾಮಾನ್ಯ ಸಭೆಗಳಲ್ಲಿ ಕಾಮಗಾರಿ ಗುಣಮಟ್ಟದ ಬಗ್ಗೆ ಆರೋಪ ವ್ಯಕ್ತವಾದ ಸಂಬಂಧ ತನಿಖೆಗೆ ಆದೇಶಿಸಲಾಗಿತ್ತು. ಸಂಬಂಧಿಸಿದ ಅಧಿಕಾರಿಗಳು ತನಿಖೆ ನಡೆಸಿ, ವರದಿ ಸಲ್ಲಿಸಲು ವಿಳಂಬ ಮಾಡುತ್ತಿರುವ ಬಗ್ಗೆ ಟೀಕಾರೋಪ ಕೇಳಿ ಬಂದಿತು.
ಧನಂಜಯ ತಕರಾರು: ಮಾಗಡಿ ತಾಲೂಕಿನ ತಿಪ್ಪಸಂದ್ರ ಗ್ರಾಪಂ ವ್ಯಾಪ್ತಿಯ ಅಂಚೆಪಾಳ್ಯದ ತಾಳೇಕೆರೆ ಗ್ರಾಮದ ಜಮೀನಿನಲ್ಲಿ ಕೊಳವೆ ಬಾವಿ ಕೊರೆಸಿ, ಕುಣಿಗಲ್ ತಾಲೂಕಿನಲ್ಲಿ ಕಾರ್ಖಾನೆ ಪ್ರಾರಂಭಿಸಲಾಗಿದೆ. ಪರವಾನಗಿ ನವೀಕರಿಸಿಲ್ಲ. ತೆರಿಗೆಯನ್ನೂ ಪಾವತಿಸಿಲ್ಲ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಧನಂಜಯ ತಕರಾರು ಎತ್ತಿದರು.
ಅದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಎಂ.ವಿ.ವೆಂಕಟೇಶ್, ಪ್ರಕರಣದ ಬಗ್ಗೆ ಸ್ಥಳೀಯ ಗ್ರಾಪಂ ಅಧಿಕಾರಿಯನ್ನು ಕರೆಸಿ ವಿವರಣೆ ಕೇಳಲಾಗುವುದು. ಸಂಬಂಧಿಸಿದ ಕಾರ್ಖಾನೆಗೆ ಪರವಾನಗಿ ನವೀಕರಿಸಿಕೊಳ್ಳಲು ನೋಟಿಸ್ ಜಾರಿಗೊಳಿಸಿ, ತೆರಿಗೆ ವಸೂಲಿಗೆ ಸೂಚಿಸಲಾಗುವುದು ಎಂದರು.
ಪಶು ಇಲಾಖೆಯಲ್ಲಿ ಅವ್ಯವಹಾರ: ಪಶುಸಂಗೊಪನಾ ಇಲಾಖೆಯು ಪಶುಗಳ ಕೃತಕ ಗರ್ಭದಾರಣೆಗೆ ನೀಡುವ ದ್ರವಸಾರ ದ್ರಾವಣವನ್ನು ಬಮೂಲ್ನಿಂದ ಖರೀದಿಸುತ್ತಿದ್ದು,
ವಾರ್ಷಿಕವಾಗಿ ರು.30 ಲಕ್ಷ ವೆಚ್ಚವಾಗುತ್ತಿದೆ. ಇದರಲ್ಲಿ ಅವ್ಯವಹಾರ ನಡೆಯುತ್ತಿರುವ ಬಗ್ಗೆ ಕಾಂಗ್ರೆಸ್ ಸದಸ್ಯ ರಂಗಸ್ವಾಮಿ ಶಂಕೆ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ದೇವರಾಜು, ಇಲಾಖೆಯು ರಾಜ್ಯಾದ್ಯಂತ ಬಮೂಲ್ನಿಂದಲೇ ದ್ರಾವಣ ಖರೀದಿಸುತ್ತಿದೆ. ಇಲಾಖೆಯು ನಿಯಮಾನುಸಾರವೇ ಖರೀದಿಸುತ್ತಿದ್ದು, ಇದರಲ್ಲಿ ಯಾವುದೇ ಅವ್ಯವಹಾರ ನಡೆಯುತ್ತಿಲ್ಲ ಎಂದರು.
ಈ ಉತ್ತರಕ್ಕೆ ತೃಪ್ತರಾಗದ ರಂಗಸ್ವಾಮಿ ಬಮೂಲ್ ಮತ್ತು ಪಶು ಸಂಗೋಪನಾ ಇಲಾಖೆ ಅಧಿಕಾರಿಗಳು ಶಾಮೀಲಾಗಿ
ಬೋಗಸ್ ನಡೆಸುತ್ತಿದ್ದಾರೆ ಎಂದು ಆರೋಪ ಮುಂದುವರಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಸಿಇಒ ವೆಂಕಟೇಶ್ ಅಧಿಕಾರಿಗಳ ವಿರುದ್ಧ ಆಧಾರ ರಹಿತ ಆರೋಪ ಮಾಡುವುದು ಸರಿಯಲ್ಲ ಎಂದರು.
ಔಷಧ ಕಳಪೆ ಎನ್ನುವುದಕ್ಕೆ ನಿಮ್ಮ ಬಳಿ ಸಾಕ್ಷಿ ಇದೆಯೆ? ಎಂದು ಪ್ರಶ್ನಿಸಿದ ಅವರು, ನಿರಾಧಾರ ಆರೋಪ ಮಾಡುವುದರಿಂದ ಅಧಿಕಾರಿಗಳ ಆತ್ಮಸ್ಥೈರ್ಯ ಕುಸಿದು ಹೋಗಲಿದೆ ಎಂದು ಚರ್ಚೆಗೆ ತೆರೆ ಎಳೆದರು.
ಕಳಪೆ ಕಾಮಗಾರಿ: ಮಾಗಡಿಯ ತಿಪ್ಪಸಂದ್ರ ಗ್ರಾಮದ ಕಸ್ತೂರಿ ಬಾ ಗಾಂಧಿ ಬಾಲಕಿಯರ ವಿದ್ಯಾರ್ಥಿ ನಿಲಯ ಕಟ್ಟಡದ ಕಾಮಗಾರಿ ಕಳಪೆ ಮಟ್ಟದ್ದಾಗಿದೆ. ಜಿಪಂನಿಂದ ನೇಮಕಗೊಂಡ ಅಧಿಕಾರಿಗಳ ಸಮಿತಿಯೂ ಕೂಡ ವರದಿಯಲ್ಲಿ ಕಾಮಗಾರಿ ಕಳಪೆಯಾಗಿರುವುದನ್ನು ದೃಢೀಕರಿಸಿದೆ. ಆದ್ದರಿಂದ ಬಿಲ್ ಪಾವತಿ ಮಾಡಬಾರದು ಎಂದು ಸದಸ್ಯ ಧನಂಜಯ ಆಗ್ರಹಿಸಿದರು.
ಕಾಮಗಾರಿಗೆ ಮಾಡಿರುವ ವೆಚ್ಚದ ಬಗ್ಗೆ ರಾಜೀವ್ಗಾಂಧಿ ವಸತಿ ನಿಗಮದ ಅಧಿಕಾರಿಗಳು ಯಾವುದೇ ಮಾಹಿತಿ ಕೋರಿದರೂ ಕೊಡದೇ ಇರುವುದನ್ನು ಸದಸ್ಯರು ಆಕ್ಷೇಪಿಸಿದರು. ಕೂಡಲೇ ನಿಗಮದ ಮೇಲಧಿಕಾರಿಗಳಿಗೆ ಪತ್ರ ಬರೆದು ಮಾಹಿತಿ ತರಿಸಿಕೊಳ್ಳುವಂತೆ ಒಕ್ಕೊರಲಿನ ನಿರ್ಣಯ ಅಂಗೀಕರಿಸಿತು.
ಕಾಮಗಾರಿಗಳನ್ನು ಕೈಗೊಳ್ಳಲು ಟೆಂಡರ್ ಕರೆದಾಗ ಅನುಮೋದಿತ ಮೊತ್ತಕ್ಕಿಂತ ಕಡಿಮೆ ಮೊತ್ತಕ್ಕೆ ಗುತ್ತಿಗೆದಾರರು ಟೆಂಡರ್ ಹಾಕಿ ಕಾಮಗಾರಿ ನಿರ್ವಹಿಸುತ್ತಿರುವುದರಿಂದ ಕಾಮಗಾರಿಗಳ ಗುಣಮಟ್ಟ ಉತ್ತಮವಾಗಿರುವುದಿಲ್ಲ ಎಂದು ಸಭೆಯು ಅಭಿಪ್ರಾಯ ವ್ಯಕ್ತಪಡಿಸಿದಾಗ ಅಧ್ಯಕ್ಷ ಎಚ್.ಸಿ.ರಾಜು ಕಾಮಗಾರಿಗಳ ಗುಣಮಟ್ಟವನ್ನು ಪರಿಶೀಲಿಸಿದ ನಂತರವಷ್ಟೆ ಬಿಲ್ ಪಾವತಿಸುವಂತೆ ತಾಕೀತು ಮಾಡಿದರು. ಯಾವುದೇ ಕಾಮಗಾರಿಗಳ ಬಗ್ಗೆ ತನಿಖೆಗೆ ಆಗ್ರಹಿಸಿದಾಗ ತನಿಖೆ ಕೈಗೊಳ್ಳುವ ಅಧಿಕಾರಿಗಳು ಸಂಬಂಧಪಟ್ಟ ಸದಸ್ಯರಿಗೆ ಮಾಹಿತಿಯನ್ನೇ ನೀಡುವುದಿಲ್ಲ. ಸದಸ್ಯರಿಗೆ ತನಿಖಾ ಪ್ರಗತಿಯ ಮಾಹಿತಿಯೇ ಗೊತ್ತಾಗುವುದಿಲ್ಲವೆಂದು ಸದಸ್ಯ ಮುದ್ದುರಾಜ್ ಯಾದವ್ ಆರೋಪಿಸಿದರು.
ಇದಕ್ಕೆ ದನಿಗೂಡಿಸಿದ ಅಧ್ಯಕ್ಷರು, ಸಂಬಂಧಪಟ್ಟ ಸದಸ್ಯರು ಹಾಗೂ ಸ್ಥಳೀಯ ಜನ ಪ್ರತಿನಿಧಿಗಳೊಂದಿಗೆ ಅಧಿಕಾರಿಗಳು ಕಾಮಗಾರಿಗಳ ಸ್ಥಳ ಪರಿವೀಕ್ಷಣೆ ನಡೆಸಿ ಅವರೊಂದಿಗೆ ಚರ್ಚಿಸಿದ ಬಳಿಕ ವರದಿ ಸಲ್ಲಿಸುವಂತೆ ಸೂಚಿಸಿದರು.
ಜಿಪಂ ಉಪಾಧ್ಯಕ್ಷೆ ಎಸ್.ಬಿ.ಗೌರಮ್ಮ, ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು, ಜಿಲ್ಲಾ ಮಟ್ಟದ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

