ವಿಶ್ವವಿದ್ಯಾಲಯಗಳ ಗುಣಮಟ್ಟ ಸುಧಾರಣೆ ಅಗತ್ಯ
ಬೆಂಗಳೂರು ವಿವಿ ಶಿಕ್ಷಣ ನಿಕಾಯ ವಿಭಾಗದ ಡೀನ್ ಡಾ.ಎಂ.ಎಸ್.ತಳವಾರ ಅಭಿಮತ
ಕೋಲಾರ: ಅಮೆರಿಕ ಮತ್ತು ಚೀನಾ ದೇಶಕ್ಕೆ ಹೊಲಿಕೆ ಮಾಡಿದರೆ ಭಾರತದಲ್ಲಿ ಅತಿ ಹೆಚ್ಚು ವಿಶ್ವವಿದ್ಯಾಲಯಗಳಿವೆ. ಆದರೆ, ಗುಣಮಟ್ಟದ ಶಿಕ್ಷಣ ಸಾಧ್ಯವಾಗದಿರುವುದರ ಬಗ್ಗೆ ಶಿಕ್ಷಣ ತಜ್ಞರು ಮತ್ತು ವಿದ್ಯಾರ್ಥಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಬೆಂಗಳೂರು ವಿವಿ ಶಿಕ್ಷಣ ನಿಕಾಯದ ಪ್ರಾಧ್ಯಾಪಕ ಮತ್ತು ಡೀನ್ ಡಾ.ಎಂ.ಎಸ್.ತಳವಾರ ಅಭಿಪ್ರಾಯಪಟ್ಟರು.
ತಾಲೂಕಿನ ಮಂಗಸಂದ್ರದಲ್ಲಿನ ಕೋಲಾರ ಸ್ನಾತಕೋತ್ತರ ಕೇಂದ್ರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 'ವಸಂತ ಕಲರವ 2013-14' ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ, ಭಾರತದಲ್ಲಿ ನಳಂದ ಮತ್ತು ತಕ್ಷಶೀಲದಂಥ ಶ್ರೇಷ್ಠ ವಿವಿಗಳು ಉನ್ನತ ಶಿಕ್ಷಣಕ್ಕೆ ಅಪಾರ ಕೂಡುಗೆ ನೀಡಿದ್ದವು. ಪ್ರಸ್ತುತ ಖಾಸಗಿ ವಿವಿಗಳು ಹೊರತು ಪಡಿಸಿ ದೇಶದಲ್ಲಿ 550ಕ್ಕೂ ಹೆಚ್ಚು ಸರ್ಕಾರಿ ವಿವಿಗಳು ಇದ್ದರೂ ಉತ್ತಮ ರೀತಿಯಲ್ಲಿ ಸಾಧನೆ ಮಾಡಲಾಗದಿರುವುದಕ್ಕೆ ಕಾರಣಗಳನ್ನು ಹುಡುಕಿ ಪ್ರಗತಿಯತ್ತ ದಾಪುಗಾಲು ಹಾಕಬೇಕಾಗಿದೆ' ಎಂದರು.
ಜನಸಂಖ್ಯೆಯಲ್ಲಿ ಭಾರತದಷ್ಟೇ ಪ್ರಾಬಲ್ಯ ಹೊಂದಿರುವ ಚೀನಾ ದೇಶದಲ್ಲಿ 40 ವಿವಿಗಳಿವೆ. ಅಮೆರಿಕದ ಸ್ಯಾನ್‌ಫೋರ್ಡ್ ವಿವಿಯು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿದೆ. ಇದೇ ರೀತಿಯಲ್ಲಿ ಭಾರತದ ಎಲ್ಲಾ ವಿವಿಗಳು ಅಭಿವೃದ್ಧಿಗೊಳ್ಳುವಂತಾದರೆ ಮಾತ್ರ ನಮ್ಮ ಯುವಕರ ಭವಿಷ್ಯ ಉಜ್ವಲವಾಗುತ್ತದೆ ಎಂದರು. ಕೋಲಾರ ಜಿಲ್ಲೆ ಅತ್ಯಂತ ಹಿಂದುಳಿದ ಜಿಲ್ಲೆ. ಹಾಗಾಗಿ ಇಲ್ಲಿ ಪಿಜಿ ಕೇಂದ್ರ ಸ್ಥಾಪಿಸಲಾಗಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಸಾಧಿಸಲಾಗದಿರುವುದು ವಿಷಾದನಿಯ ಎಂದೂ ಹೇಳಿದರು. ಬೆಂಗಳೂರು ವಿವಿಯ ಸಿಂಡಿಕೇಟ್ ಸದಸ್ಯ ಪ್ರೊ.ಕೆ. ರಮೇಶ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಲಾರ ಪಿಜಿ ಕೇಂದ್ರದ ನಿರ್ದೇಶಕ ಪ್ರೊ. ಸಿ.ನಾಗಭೂಷಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಡಾ.ಡಿ.ಡೊಮಿನಿಕ್, ವಾಣಿಜ್ಯ ವಿಭಾಗದ ಡಾ.ಕೆ.ಆರ್.ಜಲಜ, ಡಾ.ಆರ್.ಸರ್ವಮಂಗಳ, ಅರ್ಥಶಾಸ್ತ್ರದ ಡಾ.ಕುಮುದ, ಡಾ.ಜಿ.ಎಲ್.ಪಾರ್ವತಮ್ಮ ಇದ್ದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಡಾ.ಎಂ.ಎಸ್.ತಳವಾರ ಪ್ರಶಸ್ತಿಗಳನ್ನು ವಿತರಿಸಿದರು. ವಿದ್ಯಾರ್ಥಿ ರಾಜಪ್ಪ ನಿರೂಪಿಸಿ,ಗುಂಡಪ್ಪ ಸ್ವಾಗತಿಸಿದರು.
ವಸಂತ ಕಲರವದಲ್ಲಿ ವಿವಾದದ ಚಿಲಿಪಿಲಿ
ಕೋಲಾರ: ಕೋಲಾರ ಪಿಜಿ ಕೇಂದ್ರದ ವಾರ್ಷಿಕೋತ್ಸವ ಪ್ರಯುಕ್ತ ಏರ್ಪಡಿಸಿದ್ದ ವಿವಿಧ ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಾಣಿಜ್ಯ ವಿಭಾಗ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಪಡೆದು ಚಾಂಪಿಯನ್‌ಶಿಪ್‌ಗೆ ಆರ್ಹರಾಗಿದ್ದರು. ಆದರೆ, ಆಡಳಿತ ಮಂಡಳಿ ನಮಗೆ ಪ್ರಶಸ್ತಿ ನೀಡದೆ, ತಾರತಮ್ಯವೆಸಗಿದ್ದಾರೆಂದು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಆರೋಪಿದರು.
ಕಾರ್ಯಕ್ರಮಕ್ಕೆ ಕನ್ನಡ ವಿಭಾಗ, ಅರ್ಥಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಹಾಜರಾಗಿದ್ದರೆ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಮಾತ್ರ ತರಗತಿಯಲ್ಲೇ ಉಳಿದಿದ್ದರು. ಆದರೆ, ಕೇಂದ್ರ ಮರ್ಯಾದೆಯನ್ನು ಗಮನದಲ್ಲಿಟ್ಟುಕೊಂಡು ಕೊನೆಗೂ ತಮ್ಮ ಬಲಗೈ ಮತ್ತು ತೋಳಿಗೆ ಕಪ್ಪು ಬಟ್ಟೆ ಧರಿಸಿ ಕಾರ್ಯಕ್ರಮಕ್ಕೆ ಹಾಜರಾದರು. ಕಳೆದ ವರ್ಷ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾಗಿ ಚಾಂಪಿಯನ್‌ಗಳಾಗಿರುವ ವಾಣಿಜ್ಯ ವಿಭಾಗಕ್ಕೆ ಪ್ರಶಸ್ತಿ ನೀಡಿಲ್ಲ. ವಾರ್ಷಿಕೋತ್ಸವ ಸಹ ಆಚರಿಸಲಿಲ್ಲ. ಈ ವರ್ಷವೂ ನಾವು ಅಂಕಗಳ ಆಧಾರದ ಮೇಲೆ ಚಾಂಪಿಯನ್ ಆಗಿದ್ದರೂ ಪ್ರಶಸ್ತಿ ಘೋಷಣೆ ಮಾಡದೆ ತಾರತಮ್ಯ ಮಾಡಲಾಗಿದೆ ಎಂದು ವಾಣಿಜ್ಯ ವಿಭಾಗದ ವಿದ್ಯಾರ್ಥಿ ಮುಖಂಡರಾದ ಸಲೀಂ ಪಾಷ, ಅಜಯ್, ಮುರುಗೇಶ್, ಮೋಹನ್ ರಾಜು, ಶಿವಕುಮಾರ್, ರಾಜೇಶ್, ವೇಣು ಇನ್ನಿತರರು ಪತ್ರಕರ್ತರ ಮುಂದೆ ತಮ್ಮ ಅಳಲು ತೋಡಿಕೊಂಡರು. ಒಲ್ಲದ ಮನಸ್ಸಿನಿಂದಲೇ ಕಳೆದ ಹಾಗೂ ಈ ಸಾಲಿನ ಬಹುಮಾನ ಸ್ವೀಕರಿಸಿದ ವಾಣಿಜ್ಯ ವಿದ್ಯಾರ್ಥಿಗಳು, ಚಾಂಪಿಯನ್‌ಶಿಪ್ ನೀಡದಿರುವುದಕ್ಕೆ ಕಾರಣ ತಿಳಿಸಿ ಎಂದು ಕೇಂದ್ರ ನಿರ್ದೇಶಕ ನಾಗಭೂಷಣ್ ಅವರನ್ನು ಒತ್ತಾಯಿಸಿದರು. ಪರಿಸ್ಥಿತಿ ಅರಿತ ಬೆಂಗಳೂರು ವಿವಿಯ ಶಿಕ್ಷಣ ನಿಕಾಯದ ಡೀನ್ ಡಾ.ಎಂ.ಎಸ್.ತಳವಾರ ಅವರು ವಿದ್ಯಾರ್ಥಿಗಳ ಜೊತೆ ಮಾತನಾಡಿ, ಕಳೆದ ಬಾರಿ ನೀವು ಚಾಂಪಿಯನ್ ಆಗಿದ್ದೀರಿ, ಈಗ ಅರ್ಥಶಾಸ್ತ್ರ ವಿಭಾಗದವರು ಚಾಂಪಿಯನ್‌ಗಳು ಆಗಿದ್ದಾರೆ. ಅವರು ಸಹ ನಿಮ್ಮ ಸಹಪಾಠಿಗಳೇ ಆಗಿದ್ದಾರೆಂದು ಸಮಾಧಾನ ಹೇಳಿ ವಿವಾದಕ್ಕೆ ತೆರೆ ಎಳೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

