ಕುರಿಗಾರನಿಗೆ ಬೆಳಕಾಯ್ತು ಚೈಲ್ಡ್ಲೈನ್
ಕುಕನೂರು: ಕುರಿ ಕಾಯುವ ಬಾಲ ಕಾರ್ಮಿಕನೋರ್ವ ಕಲಿಯಬೇಕೆನ್ನುವ ಮಹದಾಸೆಯಿಂದ ಕುರಿ ಮಾಲೀಕನ ಅಣತಿಗೂ ಕಾಯದೆ ಅಲ್ಲಿಂದ ತಪ್ಪಿಸಿಕೊಂಡು ನೇರ ಶಾಲೆಗೆ ತೆರಳಿ, ಮುಖ್ಯೋಪಾಧ್ಯಾಯರಲ್ಲಿ ತನ್ನ ಇಂಗಿತವನ್ನು ಹೇಳುವ ಮೂಲಕ ಶಿಕ್ಷಣ ಪಡೆಯುತ್ತಿದ್ದಾನೆ.
ಈ ಪೋರನಿಗೆ 11 ವರ್ಷ. ಹೆಸರು ಮಹೇಶ ಶೇಖಪ್ಪ ಮೇಟಿ. ಕುಕನೂರು ಸಮೀಪದ ದ್ಯಾಂಪುರ ಗ್ರಾಮದ ಈ ಬಾಲಕನಿಗೆ ಅಕ್ಷರ ಕಲೆಯಬೇಕೆನ್ನುವ ಹಂಬಲ. ಆದರೆ, ಮನೆಯಲ್ಲಿ ಕಿತ್ತು ತಿನ್ನುವ ಬಡತನ. ಅಚಲ ನಿರ್ಧಾರಕ್ಕೆ ಬಂದ ಈ ಪೋರ ಕುಕನೂರಿನ ಜೆಜೆ ನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಎನ್ನುವವರ ಬಳಿ ತನ್ನ ಮನದಿಂಗಿತ ಹೇಳಿಕೊಂಡಿದ್ದಾನೆ. ತಕ್ಷಣ ಕಾರ್ಯ ಪ್ರವೃತ್ತರಾದ ಮುಖ್ಯೋಪಾಧ್ಯಾಯ ಯುನಿಸೆಫ್ ಮೂಲಕ ಚೈಲ್ಡ್ ಲೈನ್ 1098 ಪಿಎಸ್ಐ ಸೇವಾ ಸದನಕ್ಕೆ ಫೋನಾಯಿಸಿದಾಗ ತಕ್ಷಣಕ್ಕೆ ತಂಡದ ಸದಸ್ಯರಾದ ಜಾರ್ಜ್ ಪಟ್ಟದಕಲ್ಲ, ನಿಂಗಪ್ಪ ಗೋಡೆಕಾರ ಸ್ಥಳಕ್ಕೆ ಧಾವಿಸಿ ಬಾಲಕನನ್ನು ಸರ್ಕಾರಿ ಬಿಸಿಎಂ ಹಾಸ್ಟೆಲ್ಗೆ ಸೇರಿಸಿದ್ದಾರೆ. ಬಳಿಕ ಜೆಜೆ ನಗರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹೆಸರು ನೋಂದಾಯಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈಗ ಬಾಲಕ ಮಹೇಶ 5ನೇ ತರಗತಿಯಲ್ಲಿ ಶಿಕ್ಷಣ ಪಡೆಯುತ್ತಿದ್ದಾನೆ.
ತಾಯಿ ಸಮ್ಮತಿಸಲಿಲ್ಲ: ಮೊದಮೊದಲಿಗೆ ಬಾಲಕನ ತಾಯಿ ರೇಣಮ್ಮ ತನ್ನ ಮಗ ಶಾಲೆಗೆ ಹೋಗುವುದನ್ನು ತೀವ್ರ ವಿರೋಧಿಸಿದ್ದಳು. ಆ ತಾಯಿಯ ಮನವೊಲಿಸುವಲ್ಲಿ ಚೈಲ್ಡ್ಲೈನ್ ತಂಡದ ಸದಸ್ಯ ನಿಂಗಪ್ಪ ಗೋಡೆಕಾರ ಸಫಲರಾಗಿದ್ದಾರೆ.
ಸಮವಸ್ತ್ರ: ಶಾಲಾ ಶಿಕ್ಷಕರು ಈ ಬಾಲಕನಿಗೆ ಸಮವಸ್ತ್ರ, ಪಠ್ಯ ಪುಸ್ತಕ ಒದಗಿಸಿ ಬಾಲಕನಿಗೆ ಅಭ್ಯಾಸ ಮಾಡಲು ಸ್ಫೂರ್ತಿ ತುಂಬಿದ್ದಾರೆ.
ಪೂರ್ಣ ನೆರವು: ಬಾಲಕನಿಗೆ 18 ವರ್ಷ ತುಂಬುವವರೆಗೂ ಎಲ್ಲ ರೀತಿಯ ಶೈಕ್ಷಣಿಕ ಸೌಲಭ್ಯವನ್ನು ಸರ್ಕಾರದಿಂದ ಕೊಡಿಸುವುದಾಗಿ ಚೈಲ್ಡ್ಲೈನ್ 1098 ಪಿಎಸ್ಐ ಸೇವಾ ಸದನದ ಸಂಯೋಜಕ ಜಾರ್ಜ್ ಪಟ್ಟದಕಲ್ಲ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ. ಪ್ರತಿವಾರ ಬಾಲಕನ ಯೋಗಕ್ಷೇವು ವಿಚಾರಿಸುವುದಾಗಿಯೂ ಹೇಳಿದ್ದಾರೆ.
ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದೆ. ಹೀಗಾಗಿ, ಮಗನನ್ನು ಕುರಿ ಕಾಯಲು ಬೇರೊಬ್ಬರ ಬಳಿ ಕಳಿಸಿದ್ದೆ. ಈಗ ನನ್ನ ಮಗ ನಾಲ್ಕಕ್ಷರ ಕಲಿತು ಇತರರಂತೆ ಶಿಕ್ಷಣವಂತನಾದರೆ ಅದಕ್ಕಿಂತ ಸಂತೋಷ ಬೇರೆ ಇಲ್ಲ. ಮಗನ ಶಿಕ್ಷಣಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಬಾಲಕನ ತಾಯಿ ರೇಣಮ್ಮ ತಿಳಿಸಿದ್ದಾರೆ.
ಮಹೇಶನಿಗೆ ವಿದ್ಯೆ ಪಡೆಯಬೇಕೆಂಬ ಹಂಬಲವಿದೆ. ವ್ಯವಸ್ಥೆ ಇರಲಿಲ್ಲ. ಈಗ ಚೈಲ್ಡ್ಲೈನ್ 1098 ಪಿಎಸ್ಐ ಸೇವಾ ಸದನ ನೆರವಿಗೆ ಬಂದಿದೆ. ಬಾಲಕನ ಸಂಪೂರ್ಣ ಜವಾಬ್ದಾರಿ ಹೊತ್ತಿದೆ ಎನ್ನುತ್ತಾರೆ ಹಾಸ್ಟೆಲ್ ಮೇಲ್ವಿಚಾರಕ ವಿಜಯಕುಮಾರ.
-ಅಲ್ಲಾವುದ್ದೀನ ಯಮ್ಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

