ಮಂಡ್ಯ

ಕುಡಿಯುವ ನೀರಿನ ಸಮಸ್ಯೆ ಶೀಘ್ರ ಪರಿಹರಿಸಿ

Published On :

ಮೇಲುಕೋಟೆ: ಶಾಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವುದು, ಶೌಚಾಲಯಕ್ಕೆ ಪ್ರತಿವಾರ ಸ್ವಚ್ಛತೆಗಾಗಿ ಪೌರಕಾರ್ಮಿಕರ ನಿಯೋಜನೆ, ಉದ್ಯೋಗ ಖಾತರಿ ಯೋಜನೆಯಡಿ ಶಾಲಾ ಮುಂಭಾಗದ ಚರಂಡಿ ದುರಸ್ತಿ, ಕಾಂಪೌಂಡ್ ನಿರ್ಮಾಣ, ಶಾಲಾ ಆವರಣದಲ್ಲಿ ಪ್ಲಾಸ್ಟಿಕ್ ನಿಷೇಧ... ಇವು ಮೇಲುಕೋಟೆ ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಮಕ್ಕಳ ಗ್ರಾಮ ಸಭೆಯಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳು.
ಮಕ್ಕಳ ಸಮಸ್ಯೆ ಬಗೆಹರಿಸಲು ಮತ್ತು ಪಂಚಾಯತ್‌ರಾಜ್ ಇಲಾಖೆಯು ಗ್ರಾಮ ಸಭೆಯ ಮಹತ್ವ ಮಕ್ಕಳಿಗೆ ತಿಳಿಸುವ ಸಲುವಾಗಿ ಪಂಚಾಯಿತಿ ಆವರಣದಲ್ಲಿ ಆಯೋಜಿಸಿದ್ದ ಮಕ್ಕಳ ಗ್ರಾಮ ಸಭೆಯಲ್ಲಿ ಭಾಗವಹಿಸಿದ್ದ ಮಕ್ಕಳು ತಮ್ಮದೇ ಶೈಲಿಯಲ್ಲಿ ಶಾಲೆಯ ಸಮಸ್ಯೆ ಬಗೆಹರಿಸಲು ಮನವಿ ಮಾಡಿದರು.
ಶಾಲೆಗಳು ಎದುರಿಸುತ್ತಿರುವ ಹಲವು ಸಮಸ್ಯೆಗಳು ಬೆಳಕಿಗೆ ಬಂದವು. ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ವಿದ್ಯಾರ್ಥಿಗಳಾದ ಪುಷ್ಪಲತಾ ಮತ್ತು ಪ್ರಶಾಂತ್ ಮಾತನಾಡಿ, ಪಕ್ಕದ ಚುಂಚನಗಿರಿ ಮಠದಿಂದ ಕುಡಿಯಲು ನೀರು ತರುತ್ತಿದ್ದೇವೆ, ನೀರಿನ ಸಮಸ್ಯೆ ಇದೆ, ಇದರಿಂದ ಅಕ್ಷರದಾಸೋಹ, ಶೌಚಾಲಯ ನಿರ್ವಹಣೆ ಕಷ್ಟವಾಗಿದೆ ಎಂದರು.
ಯದುಶೈಲ ಪ್ರೌಢ ಶಾಲೆಯ ಸಹನಾ ಮತ್ತು ಪುನಿತ್ ಮಾತನಾಡಿ, ಪ್ರತಿ ವಾರ ಸ್ವಚ್ಛತೆಗೆ ಒಬ್ಬ ಪೌರಕಾರ್ಮಿಕರನ್ನು ನಿಯೋಜಿಸಿ ಶಾಲೆಗಳ ಶೌಚಾಲಯ ಸ್ವಚ್ಛವಾಗಿಡಲು ಸಹಕಾರ ನೀಡಿ ಎಂದರು. ಬಾಲಕಿಯರ ಶಾಲೆಯ ಮಕ್ಕಳು ಮಾತನಾಡಿ, ಶಾಲಾ ಮುಂಭಾಗದ ಚರಂಡಿ ಸ್ವಚ್ಛಗೊಳಿಸಿ ಶಾಲಾ ಕಟ್ಟಡಗಳಿಗೆ ಸುಣ್ಣ- ಬಣ್ಣ ಹೊಡೆಸುವಂತೆ ಒತ್ತಾಯಿಸಿದರು.
ಮೋರಾರ್ಜಿ ಶಾಲೆಯ ಮಕ್ಕಳು ಮಾತನಾಡಿ, ದೇವಾಲಯಕ್ಕೆ ಬರುವ ಭಕ್ತರು ಊಟದ ನಂತರ ಎಲೆಗಳನ್ನು ಶಾಲಾ ಆವರಣದಲ್ಲಿ ಬೀಸಾಡುವುದರಿಂದ ತೊಂದರೆಯಾಗಿದೆ. ದಯಮಾಡಿ ಇತ್ತ ಗಮನ ನೀಡಿ ಎಂದರು.
ಮಕ್ಕಳ ಸಮಸ್ಯೆ ಆಲಿಸಿ ಮಾತನಾಡಿದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಿ. ನಾರಾಯಣಸ್ವಾಮಿ, ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ ಸ್ವಚ್ಛತೆಯನ್ನು ಒಂದು ವಾರದೊಳಗೆ ಬಗೆಹರಿಸಲಾಗುತ್ತದೆ. ಇನ್ನುಳಿದ ಸಮಸ್ಯೆಗಳನ್ನು ಪಟ್ಟಿ ಮಾಡಿ ಜಿಲ್ಲಾ ಪಂಚಾಯಿತಿಗೆ ವರದಿ ಸಲ್ಲಿಸಲಾಗುವುದೆಂದರು.
ಅಧ್ಯಕ್ಷರ ಪರವಾಗಿ ಮಾತನಾಡಿದ ಗ್ರಾಪಂ ಉಪಾಧ್ಯಕ್ಷ ಬಿ.ಯೋಗಾನರಸಿಂಹೇಗೌಡ, ಬಡ ಮಕ್ಕಳು ಹಾಗೂ ಅಂಗವಿಕಲ ಮಕ್ಕಳ ಪಟ್ಟಿ ನೀಡಿದರೆ ಪಂಚಾಯಿತಿ ಅವರಿಗೆ ಸಹಾಯಹಸ್ತ ನೀಡುತ್ತದೆ. ಮಕ್ಕಳು ಪ್ರಸ್ತಾಪಿಸಿರುವ ಸಮಸ್ಯೆಯನ್ನು ಪಂಚಾಯಿತಿ ಸಭೆಯಲ್ಲಿ ಚರ್ಚಿಸಿ ತಕ್ಷಣ ಪರಿಹರಿಸಲಾಗುತ್ತದೆ ಎಂದರು.
ಗ್ರಾಪಂ ಸದಸ್ಯರಾದ ವಾಧ್ಯಾರ್ ಎನ್. ತಿರುಮಲೈ, ಜಿ.ಸಿ.  ಮಂಜುನಾಥ್, ಬಾಲಕಿಯರ ಶಾಲೆಯ ಮುಖ್ಯ ಶಿಕ್ಷಕ ಸಣ್ಣಬೋರೇಗೌಡ, ಬಾಲಕರ ಶಾಲೆಯ ಮುಖ್ಯ ಶಿಕ್ಷಕ ಸಂತಾನರಾಮನ್, ಯದುಶೈಲ ಪ್ರೌಢ ಶಾಲೆಯ ಶಿಕ್ಷಕರಾದ ನಾಯಕ್, ಮಹೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.