ರಂಗೇರುತ್ತಿದೆ ಸ್ಥಳೀಯ ಸಂಸ್ಥೆ ಹಣಾಹಣಿ
ಮಂಡ್ಯ: ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ವಿವಿಧ ರಾಜಕೀಯ ಪಕ್ಷಗಳಲ್ಲಿನ ಚಟುವಟಿಕೆ ಗರಿಗೆದರುತ್ತಿವೆ. ಸಧ್ಯಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಬಿಡುವಿಲ್ಲದೇ ಸಮಾಲೋಚನಾ ಸಭೆಗಳು, ಲೆಕ್ಕಾಚಾರಗಳನ್ನು ಹಾಕುತ್ತಿವೆ. ಈ ನಡುವೆಯೇ ಅನೇಕ ಆಕಾಂಕ್ಷಿಗಳು 'ಬಿ' ಫಾರಂಗಾಗಿ ಬಡಿದಾಟ ಆರಂಭಿಸಿದ್ದಾರೆ.
ಪಕ್ಷ ನಿಷ್ಠೆ ಉಳಿಸಿಕೊಂಡವರಿಗೆ ಟಿಕೆಟ್, ನಿಷ್ಠೆ ಮಾರಿಕೊಂಡವರು ಅತಂತ್ರ, ಆಂಡಿಮೆಂಟ್ ಪ್ರನೋಟ್ , ಚೆಕೆ ಸೇರಿದಂತೆ ಆಯ್ಕೆಗೂ ಮುನ್ನವೇ ರಾಜಿನಾಮೆ ಪತ್ರ ಪಡೆದು 'ಬಿ' ಫಾರಂ ಕೊಡುವ ನಿರ್ಧಾರ ಪ್ರಮುಖ ರಾಜಕೀಯ ಪಕ್ಷಗಳು ಮಾಡಿವೆ ಎಂಬ ವದಂತಿ ಈಗ ಎಲ್ಲೆಡೆ ಸುಳಿದಾಡುತ್ತಿದೆ.
ಚುನಾವಣೆಯಲ್ಲಿ ಗೆದ್ದ ನಂತರ ಬಾಲಬಿಚ್ಚಿ ಭ್ರಷ್ಟ ಹಾದಿ ತುಳಿದ ನಗರಸಭೆ ಕೆಲವು ಮಾಜಿ ಸದಸ್ಯರು ಬಹುತೇಕ ರಾಜಕೀಯ ಪಕ್ಷಗಳಿಗೆ ಕಳೆದ ಬಾರಿ ಚೆನ್ನಾಗಿ ಪಾಠ ಕಲಿಸಿ ಹೋಗಿರುವ ಅನುಭವದಿಂದ ಇಂತಹ ನಿರ್ಧಾರ ಮಾಡಿದ್ದರೂ ತಪ್ಪಿಲ್ಲ ಎನಿಸುತ್ತದೆ.
ಅದರಲ್ಲೂ ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಕಳೆದ ಬಾರಿ ನಗರಸಭೆ ಆಡಳಿತ ಅವಧಿಯಲ್ಲಿ ಸಾಕಷ್ಟು ಬುದ್ಧಿ ಕಲಿತಿವೆ. ಕೆಲವರಂತೂ ಚೆನ್ನಾಗಿ ಪಾಠ ಕಲಿಸಿ ಹೋಗಿದ್ದಾರೆ. ಈ ಕಾರಣಕ್ಕಾಗಿ ಈ ಬಾರಿ ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯ್ತಿ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಬಯಸಿದವರಿಗೆ, 'ಬಿ' ಫಾರಂ ಕೊಡುವ ಮುನ್ನವೇ ಸಾಕಷ್ಟು ಷರತ್ತುಗಳನ್ನು ವಿಧಿಸಿಕೊಂಡೇ ಮುಂದಿನ ನಿರ್ಧಾರ ಮಾಡುವ ಬಗ್ಗೆ ವಿವಿಧ ಪಕ್ಷದ ಮೂಲಗಳು ತಿಳಿಸಿವೆ. ಜೆಡಿಎಸ್, ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಂದ ಸ್ಪರ್ಧೆ ಮಾಡಲು ಸಾಕಷ್ಟು ಆಕಾಂಕ್ಷಿತರು ಮುಗಿ ಬಿದ್ದಿದ್ದಾರೆ. ಆದರೆ, ಪಕ್ಷಕ್ಕೆ ಬಂದವರಿಗೆಲ್ಲಾ ಟಿಕೆಟ್ ನೀಡುವುದಿಲ್ಲ. ಬದಲಿಗೆ ನಮ್ಮ ನಮ್ಮ ಪಕ್ಷಗಳದ್ದೇ ಕೆಲವು ಮಾನದಂಡಗಳು, ಷರತ್ತುಗಳಿಗೆ ಒಪ್ಪಿ ಬಂದರೆ ಮಾತ್ರ ಟಿಕೆಟ್ ಕೊಡುವ ಬಗ್ಗೆ ಚಿಂತನೆ ನಡೆಸುವುದಾಗಿ ಪ್ರಮುಖ ಪಕ್ಷಗಳ ನಾಯಕರು ಹೇಳಿದ್ದಾರೆ.
ನಿಷ್ಠೆ ಉಳಿಸಿಕೊಂಡವರಿಗೆ ಆದ್ಯತೆ: ಜೆಡಿಎಸ್ ಜಿಲ್ಲೆಯಲ್ಲಿ ಪ್ರಾಬಲ್ಯ ಹೊಂದಿದೆ. ಈ ಕಾರಣಕ್ಕಾಗಿ ಪಕ್ಷದ ಟಿಕೆಟ್ಗೆ ಬೇಡಿಕೆ ಸಹಜವಾಗಿ ಇದೆ. ನಂತರದ್ದು ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳನ್ನು ಆಕಾಂಕ್ಷಿತರು ಆಶ್ರಯಸಿದ್ದಾರೆ. ಇನ್ನು ಉಳಿದಂತೆ ಕೆಜೆಪಿ ಟಿಕೆಟ್ ಅನ್ನು ಬಹುತೇಕರು ಕ್ಯಾರೆ ಎನ್ನುವುದಿಲ್ಲ. ಬಿಎಸ್ಆರ್ ಬಿ ಫಾರಂಗೆ ಬೇಡಿಕೆ ಇಲ್ಲ ಎಂಬುದು ಸಧ್ಯದ ವರ್ತಮಾನ. ಜೆಡಿಎಸ್ ಟಿಕೆಟ್ ಬಯಸುವವರು ಪಕ್ಷಕ್ಕೆ ನಿಷ್ಠರಾಗಿರಬೇಕು. ಸಾಮಾಜಿಕ ಕ್ಷೇತ್ರದಲ್ಲಿ ಹೆಸರು ಮಾಡಿರಬೇಕು ಮತ್ತು ಜನರೊಂದಿಗೆ ನೇರ ಸಂಪರ್ಕ ಹೊಂದಿರಬೇಕು. ಜೊತೆಗೆ ಒಂದಷ್ಟು ಪ್ರಾಮಾಣಿಕತೆ ತೋರಿಸಿದರೆ ಸಾಕು ಟಿಕೆಟ್ ನೀಡುವ ಪಟ್ಟಿಗೆ ಆ ಆಕಾಂಕ್ಷಿಯ ಹೆಸರು ಸೇರಿಸಲಾಗುವುದು. ಕಳೆದ ಬಾರಿ ಸ್ಪರ್ಧಿಸಿದ್ದ ಜೆಡಿಎಸ್ನ ಬಹುತೇಕ ಸದಸ್ಯರಿಗೆ ಈ ಬಾರಿ ಅವರ ನಿಷ್ಠೆ ಮತ್ತು ಸೇವಾ ಬದ್ಧತೆ ಗಮನಿಸಿಕೊಂಡು ಟಿಕೆಟ್ ನೀಡಲಾಗುವುದು. ಹೊಸ ಮುಖಗಳಿಗೆ ಆದ್ಯತೆ ನೀಡಲಾಗುವುದು. ಕಳೆದ ಬಾರಿ ಮೋಸ ಮಾಡಿ, ಪಕ್ಷಕ್ಕೆ ಕೆಟ್ಟ ಹೆಸರು ತಂದವರನ್ನು ಮುಲಾಜಿಲ್ಲದೆ ಹೊರಗೆ ಹಾಕಲಾಗುವುದು. ಬಣಗಳನ್ನು ಸೃಷ್ಟಿಸಿ ನಾಯಕರಿಗೆ ಮುಜುಗುರ ಉಂಟು ಮಾಡುವ ವ್ಯಕ್ತಿ ಅಥವಾ ಗುಂಪುಗಳನ್ನು ಈ ಬಾರಿ ದೂರ ಇಡಲು ಪಕ್ಷ ಬಯಸಿದೆ ಎಂದು ಜೆಡಿಎಸ್ ಉನ್ನತ ಮೂಲಗಳು ಕನ್ನಡಪ್ರಭಕ್ಕೆ ತಿಳಿಸಿವೆ.
ಮಾರ್ಗದರ್ಶಿ ಸೂತ್ರ ರಚನೆ: ಕಾಂಗ್ರೆಸ್ ನಡೆ ಮಾತ್ರ ಕೊಂಚ ವಿಭಿನ್ನವಾಗಿದೆ. ಕೆಪಿಸಿಸಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಮಾರ್ಗದರ್ಶನದಂತೆ ನಡೆದುಕೊಳ್ಳುವ ಅನಿವಾರ್ಯತೆ ಇರುವ ಕಾರಣಕ್ಕಾಗಿ ಈಗಲೇ ಯಾವುದನ್ನೂ ನಿರ್ಧರಿಸಿಲ್ಲ. ಈಗ ಕೇವಲ ಆಕಾಂಕ್ಷಿತರ ಅರ್ಜಿ ಪಡೆದುಕೊಳ್ಳುತ್ತಿದ್ದೇವೆ. ಫೆ.18ರಂದು ಕೆಪಿಸಿಸಿ ಪ್ರತಿ ಜಿಲ್ಲೆಗಳಿಗೂ ಮಾರ್ಗದರ್ಶಿ ಸೂತ್ರಗಳನ್ನು ಕಳುಹಿಸಿಕೊಡಲಿದೆ. ಇದರ ಪ್ರಕಾರ ನಾವು ನಡೆದುಕೊಳ್ಳುತ್ತೇವೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಆತ್ಮಾನಂದ ತಿಳಿಸಿದ್ದಾರೆ.
ಜೆಡಿಎಸ್ ಉಚ್ಚಾಟಿತರು ಅಥವಾ ಆ ಪಕ್ಷ ನಿರ್ಲಕ್ಷ್ಯಿಸುವ ಯಾವುದೇ ವ್ಯಕ್ತಿಗೆ ಟಿಕೆಟ್ ಕೊಡುವ ಅಧಿಕಾರ ನಮಗೆ ಅಲ್ಲ. ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಒಂದು ಉಸ್ತುವಾರಿ ಸಮಿತಿ ರಚನೆ ಮಾಡಲಾಗುತ್ತಿದೆ. ಆ ಸಮಿತಿಗೆ ತನ್ನದೇ ಆದ ಮಾರ್ಗದರ್ಶಿ ಸೂತ್ರಗಳು ಇರುತ್ತವೆ. ಅದರಂತೆ ನಡೆದುಕೊಳ್ಳಲಾಗುವುದು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

