ಮಂಡ್ಯ

ರಥಸಪ್ತಮಿ: ವಿವಿಧೆಡೆ ಸಂಭ್ರಮದ ರಥೋತ್ಸವ

Published On :

ಮಂಡ್ಯ:  ರಥಸಪ್ತಮಿ ದಿನವಾದ ಭಾನುವಾರ ಜಿಲ್ಲೆಯ ಶ್ರೀರಂಗಪಟ್ಟಣ, ಮೇಲುಕೋಟೆ, ಕೆ.ಆರ್.ಪೇಟೆಯ ಹೇಮಗಿರಿಯಲ್ಲಿ ಬ್ರಹ್ಮ ರಥೋತ್ಸವ ಅತ್ಯಂತ ಶ್ರದ್ಧಾಭಕ್ತಿಯಿಂದ ನೆರವೇರಿದವು.
ಶ್ರೀರಂಗಪಟ್ಟಣದ ಶ್ರೀರಂಗನಾಥ ಸನ್ನಿಧಿ, ಮೇಲುಕೋಟೆಯ ಚಲುವನಾರಾಯಣ ಸನ್ನಿಧಿ ಹಾಗೂ ಹೇಮಗಿರಿಯ ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿಯ ಬ್ರಹ್ಮ ರಥೋತ್ಸವ ಅತ್ಯಂತ ವಿಜೃಂಭಣೆಯಿಂದ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.
ಶ್ರೀರಂಗಪಟ್ಟಣ ವರದಿ: ಪಟ್ಟಣದ ಶ್ರೀರಂಗನಾಥನ ಬ್ರಹ್ಮರಥೋತ್ಸವಕ್ಕೆ ಸಹಸ್ರಾರು ಭಕ್ತರು ಸಾಕ್ಷಿಯಾಗಿದ್ದರು. ಜಿಲ್ಲಾಧಿಕಾರಿ ಕೃಷ್ಣಯ್ಯ ಮಾಘಮಾಸದ ರಥಸಪ್ತಮಿ ದಿನ ಭಾನುವಾರ ರಥೋತ್ಸವಕ್ಕೆ ಅಧಿಕೃತ ಚಾಲನೆ ನೀಡಿ ರಂಗನಾಥನ ಜಾತ್ರೆಗೆ ಶುಭ ಹಾರೈಸಿದರು.
ಮಧ್ಯಾಹ್ನ 1.30ರ ವೇಳೆಗೆ ಸೂರ್ಯನ ರಥ ಏರಿದ ಶ್ರೀರಂಗನಾಥನ ಉತ್ಸವ ಮೂರ್ತಿಯನ್ನು ದೇವಸ್ಥಾನದ ಸುತ್ತಲೂ ಮೆರವಣಿಗೆಯಲ್ಲಿ ತೆಗೆದುಕೊಂಡು ಹೋಗಲಾಯಿತು. ವೇದಬ್ರಹ್ಮ ಭಾನುಪ್ರಕಾಶ್ ಶರ್ಮ, ದೇವಾಲಯದ ಮುಖ್ಯ ಅರ್ಚಕ ವಿಜಯಸಾರಥಿ ಅವರು ಮೆರವಣಿಗೆಗೂ ಮುನ್ನ ದೇವರಿಗೆ ವೇದಘೋಷ, ಪೂಜಾ ಪುರಸ್ಕಾರ ಸಲ್ಲಿಸಿ ಮೆರವಣಿಗೆಗೆ ಅವಕಾಶ ಮಾಡಿಕೊಟ್ಟರು. ನಂತರ ಸಹಸ್ರಾರು ಗೋವಿಂದ, ಗೋವಿಂದ ಎಂಬ ಜಯಘೋಷದೊಂದಿಗೆ ರಥವನ್ನು ಶ್ರದ್ಧಾಭಕ್ತಿಯಿಂದ ಎಳೆದುಕೊಂಡು ದೇವರ ಸೇವೆ ಸಲ್ಲಿಸಿದರು.
ಜಿಪಂ ಸಿಇಓ ಜಯಣ್ಣ, ತಹಸೀಲ್ದಾರ್ ಅರುಳ್‌ಕುಮಾರ್, ಆಡಳಿತಾಧಿಕಾರಿ ಗೌರಮ್ಮ ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಇದಕ್ಕೂ ಮುನ್ನ ಭಾನುವಾರ ಬೆಳಗಿನ ಜಾವ 3.30ರ ವೇಳೆಗೆ ರಂಗನಾಥಸ್ವಾಮಿಗೆ ಎಣ್ಣೆ ಮಜ್ಜನ ಮಾಡಿ ನಂತರ ಕ್ಷೀರಾಭಿಷೇಕ, ವಿವಿಧ ಪುಷ್ಪಗಳಿಂದ ಅಲಂಕರಿಸಿ ಸಿಂಗರಿಸಲಾಯಿತು. 6.15ಕ್ಕೆ ಸೂರ್ಯನಿಗೆ ಮಂಡಲ ಪೂಜೆ ನೆರವೇರಿಸಿದ ನಂತರ 6.30 ವೇಳೆಗೆ ಪಟ್ಟಣದ ಸುತ್ತಲು ಸೂರ್ಯ ದೇವರನ್ನು ರಾಜ ಬೀದಿಗಳಲ್ಲಿ ಮೆರವಣಿಗೆ ಮಾಡಿ ಆದಿರಂಗನಾಥನ ಮುಂಭಾಗದಲ್ಲಿ ಪ್ರದಕ್ಷಿಣೆ ಮಾಡಿ ಮುಂದಿನ ರಥೋತ್ಸವಕ್ಕೆ ಅನುವು ಮಾಡಿಕೊಡಲಾಯಿತು.
ಮಜ್ಜಿಗೆ ಪಾನಕ ವಿತರಣೆ: ರಥಸಪ್ತಮಿ ಅಂಗವಾಗಿ ದೇವರ ಉತ್ಸವದಲ್ಲಿ ಪಾಲ್ಗೊಂಡಿದ್ದ ಎಲ್ಲ ಭಕ್ತರಿಗೂ ಪಟ್ಟಣದ ಪ್ರಮುಖ ಕಚೇರಿಗಳ ಬಳಿ ಬಂದ ಮಜ್ಜಿಗೆ, ಪಾನಕ ವಿತರಣೆ ಮಾಡಲಾಯಿತು. ದೇವರ ಹೆಸರಿನಲ್ಲಿ ಹರಕೆ ರೂಪದಲ್ಲಿ  ಭಕ್ತರು ಮಜ್ಜಿಗೆ, ಪಾನಕ, ಕೊಸಂಬರಿಗಳನ್ನು ವಿತರಣೆ ಮಾಡಿದರು. ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕುಸ್ತಿ ಪಂದ್ಯ ಉದ್ಘಾಟನೆ:  ರಥ ಸಪ್ತಮಿಯ ಅಂಗವಾಗಿ ಪಟ್ಟಣದ ಸಂದಲ್‌ಕೋಟೆ ಆವರಣದಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಗೆ ಶಾಸಕ ರಮೇಶ್ ಬಂಡಿಸಿದ್ದೇಗೌಡ ಉದ್ಘಾಟಿಸಿದರು. ಪಂದ್ಯಾವಳಿಯಲ್ಲಿ 25 ಜೊತೆ ಕಾಟ ಕುಸ್ತಿಪಟುಗಳು ಪಾಲ್ಗೊಂಡಿದ್ದರು.
ಗಂಜಾಂ ಫೈ. ಸುನೀಲ್ ಹಾಗೂ ಕೂಡ್ಲಿ ಪೈ., ಶಿವುಕ್ಯಾತ್ಮಾರನಹಳ್ಳಿ ಪೈ.ಮಂಜು ಹಾಗೂ ಪಾಲಹಳ್ಳಿ ಪೈ. ಸತೀಶ್ ಅವರ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.