'ತತ್ವ ಮರೆತ ಕಾಂಗ್ರೆಸ್, ಬಿಜೆಪಿ, ಜೆಡಿಎಸ್'
ನಾಗಮಂಗಲ: ರಾಜ್ಯದಲ್ಲಿರುವ ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಪಕ್ಷಗಳು ತತ್ವ, ಸಿದ್ಧಾಂತ, ರೀತಿ- ನೀತಿಗಳೆ ಗೊತ್ತಿಲ್ಲದ ಪಕ್ಷಗಳಾಗಿವೆ ಎಂದು ಸಂಯುಕ್ತ ಜನತಾದಳದ ರಾಜ್ಯಾಧ್ಯಕ್ಷ ಡಾ.ಎಂ.ಪಿ. ನಾಡಗೌಡ ಭಾನುವಾರ ಟೀಕಿಸಿದರು.
ಪಟ್ಟಣದ ಟಿ.ಬಿ. ಬಡಾವಣೆಯಲ್ಲಿ ನೂತನವಾಗಿ ಪ್ರಾರಂಭಿಸಿರುವ ಜೆಡಿಯು ತಾಲೂಕು ಘಟಕದ ಕಚೇರಿ ಉದ್ಘಾಟಿಸಿ ಮಾತನಾಡಿ, ಈ ಪಕ್ಷಗಳಲ್ಲಿನ ನಾಯಕರು ಸ್ವಜನ ಪಕ್ಷಪಾತ, ಭ್ರಷ್ಟಾಚಾರ, ಜಾತಿ ಮತ್ತು ಕುಟುಂಬ ರಾಜಕಾರಣದಲ್ಲಿ ತೊಡಗಿದ್ದಾರೆ ಎಂದರು.
ಅಂದಿನ ಮಹಾಭಾರತದ ಧೃತರಾಷ್ಟ್ರ ಪುತ್ರ ವ್ಯಾಮೋಹದಿಂದ ಒಬ್ಬ ಮಗನಿಗೆ ಅಧಿಕಾರ ಕೊಡಿಸಲು ಹೋರಾಡಿದರೆ, ಇಂದಿನ ರಾಜಕಾರಣಿಗಳು ತಮ್ಮ ಕುಟುಂಬ ವ್ಯಾಮೋಹಕ್ಕೊಳಗಾಗಿ ಕುಟುಂಬದವರಿಗೆಲ್ಲಾ ಅಧಿಕಾರ ಕೊಡಿಸಲು ಹೋರಾಡುತ್ತಿದ್ದಾರೆ ವಿಷಾದಿಸಿದರು.
ಜಯಪ್ರಕಾಶ್ ನಾರಾಯಣ ಅವರು ಸ್ಥಾಪಿಸಿದ ಜನತಾ ಪರಿವಾರದ ಒಂದು ಭಾಗವಾಗಿ ಉಳಿದುಕೊಂಡಿರುವ ಜೆಡಿಯು ಪಕ್ಷ ತನ್ನ ತತ್ವ ಸಿದ್ಧಾಂತಗಳನ್ನು ಎಂದಿಗೂ ಗಾಳಿಗೆ ತೂರಿಲ್ಲ. ಅವರ ತತ್ವಾದರ್ಶಗಳಲ್ಲಿಯೇ ಬೆಳೆದು ಬಂದಿದೆ ಎಂದರು.
ರಾಮಕೃಷ್ಣ ಹೆಗ್ಗಡೆ, ಎಸ್.ಆರ್. ಬೊಮ್ಮಾಯಿ, ಜೆ.ಎಚ್. ಪಟೇಲ್ ಹಾಗೂ ಅವರ ಮಾರ್ಗವನ್ನೇ ಅನುಸರಿಸುತ್ತಿರುವ ಶರದ್ ಪವಾರ್, ನಿತಿಶ್ಕುಮಾರ್ ಅವರಂತಹ ಮಹಾನ್ ನಾಯಕರು ತಮ್ಮ ಮಕ್ಕಳನ್ನಾಗಲಿ ಅಥವಾ ತಮ್ಮ ಸಂಬಂಧಿಕರನ್ನಾಗಲಿ ರಾಜಕೀಯಕ್ಕೆ ತರಲಿಲ್ಲ. ಇಂತಹ ತತ್ವಾದರ್ಶ ಉಳಿಸಿ ಬೆಳೆಸಿಕೊಂಡು ಬಂದಿರುವ ಜೆಡಿಯು ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ, ಅಲ್ಪಸಂಖ್ಯಾತ ವಿಭಾಗದ ರಾಜ್ಯಾಧ್ಯಕ್ಷ ಸಹೀದ್ ಮೆಹಬೂಬ್, ರಾಜ್ಯ ಉಪಾಧ್ಯಕ್ಷ ದೊಡ್ಡಣ್ಣಯ್ಯ, ಕೌಡ್ಲೆ ಚನ್ನಪ್ಪ, ಬಿ.ಎಂ. ಜವರೇಗೌಡ, ರಾಮಪ್ಪ, ಸೀತಾರಾಮ, ಹಾಸನ ಜಿಲ್ಲಾಧ್ಯಕ್ಷ ಡಿ.ಎಚ್. ಸತೀಶ್, ಮಂಡ್ಯ ಜಿಲ್ಲಾಧ್ಯಕ್ಷ ರಮೇಶ್ಗೌಡ, ಮುಖಂಡ ಪಿ.ಎಸ್. ಗೌಡ ಉಪಸ್ಥಿತಿರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

