ಕಂಗಾಲಾಗಿದ್ದ ಕೃಷಿಕರ ಕೈ ಹಿಡಿದ ಕಾಮಧೇನು!
ಮಂಡ್ಯ: ಜಿಲ್ಲೆಯಲ್ಲಿ ಹೈನೋದ್ಯಮ ಪ್ರಗತಿಯಾದ ನಂತರ ನಿರುದ್ಯೋಗ ಸಮಸ್ಯೆ ಸ್ವಲ್ಪ ಮಟ್ಟಿಗಾದರೂ ತಗ್ಗಿದೆ. ಈ ಉದ್ಯಮದ ಬೇರು ಭದ್ರವಾಗುತ್ತಿದ್ದಂತೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಜಿಲ್ಲೆಯಲ್ಲಿ ಸುಮಾರು 5 ಸಾವಿರ ಮಂದಿಗೆ ಉದ್ಯೋಗ ದೊರಕಿಸಿ ಕೊಟ್ಟಿದೆ ಎಂದರೆ ಇದು ಸಣ್ಣ ಸಾಧನೆ ಅಲ್ಲ.
ಮಂಡ್ಯ ಹಾಲು ಒಕ್ಕೂಟಕ್ಕೆ ಮೂರು, ನಾಲ್ಕು ದಶಕದ ಇತಿಹಾಸವಿದೆ. ಏಳು- ಬೀಳುಗಳ ಸರಮಾಲೆ ಕಂಡಿರುವ ಈ ಒಕ್ಕೂಟಕ್ಕೆ ದಕ್ಷ ಅಧಿಕಾರಿಗಳು ಬಂದಾಗಲೆಲ್ಲಾ ಸುವರ್ಣ ಯುಗ ಕಾಣಬಹುದು. ಅಷ್ಟೇ ಪ್ರಾಮಾಣಿಕವಾಗಿ ಅಧಿಕಾರಿಗಳಿಗೆ ಸ್ಪಂದಿಸುವ ಆಡಳಿತ ಮಂಡಳಿಯೂ ಇರಬೇಕು. ಇವೆರಡರ ಸಮ್ಮಿಲನದ ಕಾರಣಕ್ಕಾಗಿ ಒಕ್ಕೂಟ ಇಂದು 5 ಸಾವಿರ ಮಂದಿಗೆ ಉದ್ಯೋಗ ನೀಡಿ ರೈತರಿಗೂ ಸಾಕಷ್ಟು ರೀತಿಯಲ್ಲಿ ನೆರವಾಗಿದೆ.
ಜಿಲ್ಲೆಯಲ್ಲಿ 1030 ಹಾಲು ಶೇಖರಣೆ ಮಾಡುವ ಸಂಘಗಳಿವೆ. ಈ ಸಂಘಗಳಲ್ಲಿ ನಿರ್ವಹಣೆ, ನಿರ್ಧಾರ ಕೈಗೊಳ್ಳುವ ಅಧಿಕಾರ ಸ್ಥಳೀಯ ಪ್ರತಿನಿಧಿಗಳೇ ಹೊಂದಿರುತ್ತಾರೆ. ಹಾಲು ಉತ್ಪಾದಕನ ಹಿತರಕ್ಷಣೆ ಮಾಡುವ ಈ ಸಂಘಗಳಲ್ಲಿ ಅಂದಾಜು 3 ಸಾವಿರ ಮಂದಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆ. ಈ ಎಲ್ಲಾ ಸಂಘಗಳಲ್ಲಿ 2 ಲಕ್ಷ ರೈತರು ಹಾಗೂ ಹಾಲು ಉತ್ಪಾದಕರು ಸದಸ್ಯರಾಗಿದ್ದಾರೆ. ನಿತ್ಯವೂ ಅಂದಾಜು 85 ಸಾವಿರ ಮಂದಿ ಹಾಲು ಉತ್ಪಾದಕರು ಡೈರಿಗೆ ಹಾಲು ನೀಡುತ್ತಾರೆ.
ಗೆಜ್ಜಲಗೆರೆಯಲ್ಲಿರುವ ಮಂಡ್ಯ ಹಾಲು ಒಕ್ಕೂಟದಲ್ಲಿ 293 ಮಂದಿ ಕಾಯಂ ನೌಕರರು ಇದ್ದಾರೆ. ವರ್ಷ 12 ತಿಂಗಳ ಸಾಕಷ್ಟು ಕೆಲಸ ಡೈರಿಯಲ್ಲಿ ನಡೆಯುತ್ತಲೇ ಇರುತ್ತದೆ. ಕಾಯಂ ನೌಕರರ ಜೊತೆಗೆ ಹೊರ ಗುತ್ತಿಗೆ ಆಧಾರದ ಮೇಲೆ ಸುಮಾರು 250 ಮಂದಿ ದಿನಗೂಲಿ ನೌಕರರೂ ಕೆಲಸ ಮಾಡುತ್ತಾರೆ. ಮಾರುಕಟ್ಟೆ ವಿಭಾಗದಲ್ಲಿ ಪರೋಕ್ಷವಾಗಿ 300 ಮಂದಿ ಹಾಲು ಸಾಗಾಣಿಕೆ ಕೆಲಸ ಮಾಡುತ್ತಾರೆ. ಇವರುಗಳಲ್ಲದೇ ಸುಮಾರು 800 ಮಂದಿ ರಿಟೇಲರ್ ವ್ಯಾಪಾರಸ್ಥರು ಕೂಡ ಡೈರಿಯ ಒಂದು ಭಾಗವಾಗಿ ನೌಕರಿ ಮಾಡುತ್ತಾರೆ.
ಇಷ್ಟೊಂದು ಪ್ರಮಾಣದಲ್ಲಿ ಉದ್ಯೋಗ ಒದಗಿಸಿಕೊಟ್ಟಿರುವ ಹೈನೋದ್ಯಮದ ಪ್ರಗತಿಯನ್ನು ನಿರಂತರವಾಗಿ ಕಾಯ್ದುಕೊಳ್ಳಲು ಹಲವಾರು ಯೋಜನೆ ರೂಪಿಸಲಾಗಿದೆ. ಮಾತ್ರವಲ್ಲ ಬೆಂಗಳೂರಿನ ವಿಜಯನಗರ, ಚಂದ್ರ ಲೇಔಟ್, ಕುಮಾರಸ್ವಾಮಿ ಲೇಔಟ್, ಪದ್ಮನಾಭನಗರ, ಉತ್ತರಹಳ್ಳಿ ಸೇರಿದಂತೆ ಅನೇಕ ಪ್ರಮುಖ ಬಡಾವಣೆಗಳಲ್ಲಿ ಮಂಡ್ಯ ಹಾಲು ಒಕ್ಕೂಟವೇ ಉತ್ಪಾದಿಸುವ ಹಾಲನ್ನು ಮಾರಾಟ ಮಾಡುವ ಅವಕಾಶ ಸಿಕ್ಕಿರುವುದು ಒಕ್ಕೂಟದ ಭಾಗ್ಯವೇ ಸರಿ.
ನಾಗೇಗೌಡರ ಕೊಡುಗೆ: ಮಂಡ್ಯ ಹಾಲು ಒಕ್ಕೂಟ ಹಾಗೂ ರೈತರೊಂದಿಗೆ ನಿರಂತರ ಬಾಂಧವ್ಯ ಹೊಂದಿದ್ದ ಮಾಜಿ ಸಚಿವ ದಿ. ಕೆ. ಎನ್. ನಾಗೇಗೌಡರು, 1992- 93ನೇ ಸಾಲಿನಲ್ಲಿ ಪಶು ಸಂಗೋಪನಾ ಸಚಿವರಾಗಿದ್ದ ಬೆಂಗಳೂರಿನ ಮಾರುಕಟ್ಟೆ ಮಂಡ್ಯ ಒಕ್ಕೂಟಕ್ಕೆ ದೊರಕಿದರೆ ಸಾಕಷ್ಟು ರೀತಿಯಲ್ಲಿ ಲಭ್ಯವಾಗುವ ಹಾಲನ್ನು ವ್ಯಾಪಾರ ಮಾಡಲು ಸಾಧ್ಯವಾಗುತ್ತದೆ ಎಂಬ ದೂರದೃಷ್ಟಿ ಫಲವಾಗಿ ಇಂದು ಅದರ ಲಾಭವನ್ನು ಒಕ್ಕೂಟ ಮಾತ್ರವಲ್ಲ, ಜಿಲ್ಲೆಯ ಇಡಿ ಹಾಲು ಉತ್ಪಾದಕರ ಸಮೂಹ ಪಡೆಯುತ್ತದೆ ಎಂದರೆ ತಪ್ಪಾಗಲಾರದು.
ಖಾಸಗಿ ಡೈರಿಗಳ ತ್ವರಿತ ನಿರ್ಧಾರಗಳು ಮತ್ತು ರೈತರಿಗೆ ನೀಡುವ ಆಮಿಷಗಳ ನಡುವೆಯೂ ರಾಜ್ಯ ಸರ್ಕಾರ ಅಧೀನದ ಕೆಎಂ ಎಫ್‌ನ ಅಂಗ ಸಂಸ್ಥೆ ಮಂಡ್ಯ ಹಾಲು ಒಕ್ಕೂಟ ರೈತರ ಹಿತರಕ್ಷಣೆ ಮಾಡುವ ಅನಿವಾರ್ಯತೆ ಇದೆ. ಕಷ್ಟ ಬಂದಾಗ ಜಾರಿಕೊಳ್ಳದೇ ಸುಖ ಬಂದಾಗ ಹಿಗ್ಗದೆ ಒಂದೇ ಸಮನೆ ಹೈನೋದ್ಯಮದ ರಕ್ಷಣೆ ಮಾಡಿದರೆ ರೈತರ ಬದುಕು ಹಸನವಾಗಿರುತ್ತದೆ.
-ಕೆ. ಎನ್. ರವಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

