ಅಭ್ಯರ್ಥಿಗಳ ಜುಟ್ಟು ಹೆಂಗಸರ ಕೈಯಲ್ಲಿ
ಮಂಡ್ಯ: ಸ್ಥಳೀಯ ಸಂಸ್ಥೆ ಚುನಾವಣೆ ಪ್ರಚಾರ ಬಿರುಸಿನಿಂದ ಸಾಗಿದ್ದರೆ, ಮತ್ತೊಂದೆಡೆ ಮಹಿಳಾ ಮತದಾರರನ್ನು ಓಲೈಸುವ ಕಾರ್ಯವೂ ಅಭ್ಯರ್ಥಿಗಳಿಂದ ಶುರುವಾಗಿದೆ.
ಪ್ರತಿ ಚುನಾವಣೆಯಲ್ಲೂ ಮಹಿಳೆಯರು ಪ್ರಮುಖ ಪಾತ್ರ ನಿರ್ವಹಿಸುತ್ತಲೇ ಬಂದಿದ್ದಾರೆ. ಈ ಬಾರಿಯ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಹಿಳೆಯರ ಪಾತ್ರವೇ ಗಣನೀಯ. ಈ ಉದ್ದೇಶದಿಂದಲೇ ಅಭ್ಯರ್ಥಿಗಳು ಮಹಿಳಾ ಮತದಾರರ ಮನವೊಲಿಸುವ ಕಸರತ್ತು ನಡೆಸುತ್ತಿದ್ದಾರೆ.
ಮಂಡ್ಯ ನೆಲದ ರಾಜಕೀಯದ ಗುಣವೇ ಭಿನ್ನ. ಇಲ್ಲಿ ಪುರುಷರು ಮಾತ್ರವಲ್ಲ, ಪುರುಷರನ್ನೇ ಮೀರಿಸುವಷ್ಟರ ಮಟ್ಟಿಗೆ ಮಹಿಳೆಯರು ಹೆಚ್ಚು ರಾಜಕೀಯ ಪ್ರಜ್ಞೆ ಉಳ್ಳವರು. ಗ್ರಾಪಂ, ತಾಪಂ, ಜಿಪಂ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡಿರುವುದೂ ಮಹಿಳೆಯರೇ.
ಈಗಿನ ಚುನಾವಣೆಯಲ್ಲೂ ಮಹಿಳೆಯರು ಅಭ್ಯರ್ಥಿಗಳ ಹಣೆ ಬರಹ ಬರೆಯುವ ಶಕ್ತಿ ಹೊಂದಿದ್ದಾರೆ. ಮಂಡ್ಯ ನಗರಸಭೆ 35 ವಾರ್ಡ್ಗಳ ಮತದಾರರ ಪಟ್ಟಿ ಅವಲೋಕಿಸಿದರೆ 18 ವಾರ್ಡ್ಗಳಲ್ಲಿ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.
ನಗರಸಭೆ 35 ವಾರ್ಡ್ಗಳಲ್ಲಿ ಒಟ್ಟು 1,00,512 ಮತದಾರರ ಪೈಕಿ 50,192 ಪುರುಷರು ಹಾಗೂ 50,320 ಮಂದಿ ಮಹಿಳಾ ಮತದಾರರು ಇದ್ದಾರೆ. ಈ ಕಾರಣದಿಂದಾಗಿಯೇ ಅಭ್ಯರ್ಥಿಗಳು ಸ್ತ್ರೀಶಕ್ತಿ ಸಂಘಗಳ ಮಹಿಳೆಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೊಂದಿಗೆ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ.
ಮಹಿಳೆಯರು ಹೆಚ್ಚಿರುವ ವಾರ್ಡ್ಗಳು: ಮಹಿಳಾ ಮತದಾರರು ಹೆಚ್ಚಿರುವ ವಾರ್ಡ್ಗಳ ಪೈಕಿ 5ನೇ ವಾರ್ಡ್ ಪ.ಪಂಗಡ, 20ನೇ ವಾರ್ಡ್ ಪ.ಜಾತಿ, 21ನೇ ವಾರ್ಡ್ ಸಾಮಾನ್ಯ, 22ನೇ ವಾರ್ಡ್ ಹಿಂದುಳಿದ ವರ್ಗ -ಎ, 31ನೇ ವಾರ್ಡ್ ಸಾಮಾನ್ಯ ಹಾಗೂ 32, 33 ನೇ ವಾರ್ಡ್ ಹಿಂದುಳಿದ ವರ್ಗ -ಎ ಮಹಿಳೆಗೆ ಮೀಸಲಾಗಿವೆ.
ಇನ್ನು ನಗರಸಭೆ 3ನೇ ವಾರ್ಡ್ನಲ್ಲಿ ಒಟ್ಟು 3898 ಮತದಾರರಲ್ಲಿ 1934 ಪುರುಷರು- 1964 ಮಂದಿ ಮಹಿಳೆಯರು ಇದ್ದಾರೆ. 4ನೇ ವಾರ್ಡ್ನಲ್ಲಿ 3414 ಮತದಾರರ ಪೈಕಿ 1729, 5ನೇ ವಾರ್ಡ್ನ 3080 ಮತದಾರರಲ್ಲಿ 1547, 12ನೇ ವಾರ್ಡ್ನಲ್ಲಿ 3311 ಮತದಾರರ ಪೈಕಿ 1693 ಮಹಿಳಾ ಮತದಾರರಿದ್ದಾರೆ.
13ನೇ ವಾರ್ಡ್ನ 2722 ಮತದಾರರಲ್ಲಿ 1432, 18ನೇ ವಾರ್ಡ್ನಲ್ಲಿ 2414 ಮತದಾರರ ಪೈಕಿ 1224, 20ನೇ ವಾರ್ಡ್ನ 2124 ಮತದಾರರಲ್ಲಿ 1090, 21ನೇ ವಾರ್ಡ್ನಲ್ಲಿ 2185 ಮತದಾರರ ಪೈಕಿ 1098, 22ನೇ ವಾರ್ಡ್ನಲ್ಲಿ 2311 ಮತದಾರರಲ್ಲಿ 1215, 23ನೇ ವಾರ್ಡ್ನಲ್ಲಿ 2650 ಮತದಾರರ ಪೈಕಿ 1373 ಮಂದಿ ಮಹಿಳೆಯರು ಮತದಾನದ ಹಕ್ಕು ಹೊಂದಿದ್ದಾರೆ.
24ನೇ ವಾರ್ಡ್ನ 2464 ಮತದಾರರಲ್ಲಿ 1252, 28ನೇ ವಾರ್ಡ್ನಲ್ಲಿ 3035 ಮಂದಿಯಲ್ಲಿ 1527, 29 ನೇ ವಾರ್ಡ್ನ 1696 ಮತದಾರರ ಪೈಕಿ 856, 30ನೇ ವಾರ್ಡ್ನ 3876 ಮತದಾರರಲ್ಲಿ 1984, 31ನೇ ವಾರ್ಡ್ನಲ್ಲಿ 3526 ಮಂದಿಯಲ್ಲಿ 1807 ಮಹಿಳೆಯರು ಇದ್ದಾರೆ.
32ನೇ ವಾರ್ಡ್ನಲ್ಲಿ 2914 ಮತದಾರರಲ್ಲಿ 1490, 33ನೇ ವಾರ್ಡ್ನಲ್ಲಿ 2521 ಮತದಾರರ ಪೈಕಿ 1306 ಹಾಗೂ 35ನೇ ವಾರ್ಡ್ನಲ್ಲಿ 2338 ಮತದಾರರಲ್ಲಿ 1171 ಮಂದಿ ಮಹಿಳಾ ಮತದಾರರಿದ್ದಾರೆ.
ಉಳಿದ ವಾರ್ಡ್ಗಳಲ್ಲು ಮಹಿಳೆಯರು ನಿರ್ಣಾಯಕ ಪಾತ್ರ ವಹಿಸಲಿರುವುದರಿಂದ ಮಂಡ್ಯದ ಸ್ಥಳೀಯ ಸಂಸ್ಥೆ ವಿಚಾರದಲ್ಲಿ ಮಹಿಳೆಯರಿಗೇ ಹೆಚ್ಚು ಗೌರವ. ಅಲ್ಲದೆ ಚುನಾವಣೆಯಲ್ಲಿ ಮಹಿಳೆಯರ ಓಟಿಗಾಗಿ ಆಮಿಷ ಒಡ್ಡುವುದು ಭಾರೀ ಪ್ರಮಾಣದಲ್ಲಿ ನಡೆದರೂ ಅಚ್ಚರಿಯಿಲ್ಲ.
ಚುನಾವಣೆ ಸಮಯದಲ್ಲಿ ಹಣ ಪಡೆದ ಪುರುಷರನ್ನು ನಂಬೋ ಹಾಗಿಲ್ಲ. ಎಲ್ಲರ ಹತ್ತಿರವೂ ಹಣ ಪಡೆದು ನಿಮಗೇ ಓಟು ಅಂತಾರೆ. ಆದರೆ, ಮಹಿಳೆಯರು ಕೊಟ್ಟ ಮಾತಿಗೆ ಪುರುಷರಿಗಿಂತ ಹೆಚ್ಚು ಬದ್ಧರಾಗಿರುತ್ತಾರೆ ಎಂಬ ಕಾರಣಕ್ಕೆ ಈಗಾಲೇ ಕೆಲವೆಡೆ ಅಭ್ಯರ್ಥಿಗಳು, ಓಟಿಗಾಗಿ ಮಹಿಳೆಯರ ಕೈಗೆ ನೇರವಾಗಿ ಹಣ ನೀಡುತ್ತಿದ್ದಾರೆ.
ಈ ಚುನಾವಣೆಯಲ್ಲಿ ಅಭ್ಯರ್ಥಿಗಳ ಜುಟ್ಟು ಸ್ತ್ರೀಯರ ಕೈಯಲ್ಲಿ ಇರುವ ಕಾರಣದಿಂದಾಗಿಯೇ ರಾಜಕೀಯ ಪಕ್ಷಗಳ ಮುಖಂಡರಿಗೆ ಹಾಗೂ ಅಭ್ಯರ್ಥಿಗಳಿಗೆ ಮಹಿಳೆಯರ ಮೇಲೆಯೇ ಹೆಚ್ಚಿನ ನಂಬಿಕೆ ಸಹಜವಾಗಿದೆ.
-ಎಂ. ಅಫ್ರೋಜ್ ಖಾನ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

