'ಕಾಂಗ್ರೆಸ್ ಬೆಂಬಲಿಸಿ'
ಮಳವಳ್ಳಿ: ಈ ಬಾರಿಯ ಪುರಸಭಾ ಚುನಾವಣೆಯಲ್ಲಿ ಎಲ್ಲಾ ವಾರ್ಡ್ಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ. ಇದನ್ನು ತಡೆಯೊಡ್ಡಲು ಕೆಲ ದುಷ್ಟಶಕ್ತಿಗಳು ಅಲ್ಲಲ್ಲಿ ಇನ್ನಿಲ್ಲದ ಕುತಂತ್ರ ನಡೆಸುತ್ತಿದ್ದಾರೆ. ಈ ತಂತ್ರಗಳಿಗೆ ಅವಕಾಶ ನೀಡದಂತೆ ಎಲ್ಲಾ ಕಾಂಗ್ರೆಸ್ಸಿಗರು ಎಚ್ಚರ ವಹಿಸಬೇಕು ಎಂದು ಶಾಸಕ ಪಿ.ಎಂ. ನರೇಂದ್ರಸ್ವಾಮಿ ಕರೆ ನೀಡಿದ್ದಾರೆ. ಪುರಸಭಾ ಚುನಾವಣೆ ಹಿನ್ನೆಲೆಯಲ್ಲಿ ನೂತನ ಕಾಂಗ್ರೆಸ್ ಕಚೇರಿ ಉದ್ಘಾಟಿಸಿದ ನಂತರ ನೆರೆದಿದ್ದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ದುರಾವಸ್ಥೆ ಆಗರವಾಗಿದ್ದ ಒಳಚರಂಡಿಯ ಇಡೀ ಯೋಜನೆಯನ್ನು ಪುನರ್ ರೂಪಿಸಿ ಹೊಸದಾಗಿ 7 ಕೋಟಿ ವೆಚ್ಚದಲ್ಲಿ ಮರು ಪೈಪ್ಗಳ ಜೋಡ ಕಾಮಗಾರಿ ನಡೆಸಿರುವ ಜೊತೆಗೆ ತಂಬಡಹಳ್ಳಿ ರಸ್ತೆ ಬಳಿ ನಿರ್ಮಿಸಲಾಗುತ್ತಿದ್ದ ಸಂಸ್ಕರಣಾ ಘಟಕವನ್ನು ಚೋಳನಹಳ್ಳಿ ಬಳಿಗೆ ಸ್ಥಳಾಂತರಿಸಲಾಗಿದೆ. ಜನಸಾಮಾನ್ಯರಿಗೆ ಯಾವುದೇ ಹೊರೆಯಾಗದಂತೆ ಪುರಸಭೆ ಮೂಲಕ ಎಲ್ಲಾ ಮನೆಗಳಿಗೂ ಒಳಚರಂಡಿ ಸಂಪರ್ಕ ಕಲ್ಪಿಸಲಾಗಿದೆ. ಮೈಸೂರು ಮುಖ್ಯ ರಸ್ತೆ ಅಗಲೀಕರಣಗೊಳಿಸಿ ಚತುಷ್ಕೋನ ರಸ್ತೆ ನಿರ್ಮಿಸಿ ಪಟ್ಟಣಕ್ಕೆ ಹೊಸ ರೂಪ ನೀಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷ ಕೆ.ಎಸ್. ಪ್ರಕಾಶ್, ಹಿರಿಯ ಕಾಂಗ್ರೆಸ್ ಮುಖಂಡರಾದ ಆರ್.ಎಂ. ನಂಜುಂಡಸ್ವಾಮಿ, ಸುರೇಶ್, ಮಾಜಿ ತಾ.ಪಂ. ಅಧ್ಯಕ್ಷರಾದ ದೇವರಾಜು, ಸುಬ್ಬಣ್ಣ, ಚಿಕ್ಕಮೊಗಣ್ಣ, ರಮೇಶ್, ಮುಂತಾದವರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಇದಕ್ಕೂ ಮೊದಲು ಶುಕ್ರವಾರ ಬೆಳಿಗ್ಗೆ ಪಟ್ಟಣದ ಲಕ್ಷ್ಮಿನರಸಿಂಹಸ್ವಾಮಿ, ಕೋಟೆಯ ಗಂಗಾಧರೇಶ್ವರಸ್ವಾಮಿ ದೇವಾಲಯದಲ್ಲಿ ತಮ್ಮ ನೂರಾರು ಬೆಂಬಲಿಗರೊಂದಿಗೆ ವಿಶೇಷ ಪೂಜೆ ಸಲ್ಲಿಸಿದ ಪಿ.ಎಂ. ನರೇಂದ್ರಸ್ವಾಮಿ ಕಳೆದ 5 ವರ್ಷಗಳ ನಂತರ ಇದೇ ಪ್ರಥಮವಾಗಿ ಕಾಂಗ್ರೆಸ್ ಬಾವುಟವನ್ನು ಹೆಗಲಿಗೇರಿಸಿ ಪಟ್ಟಣದ 1 ರಿಂದ 6 ನೇ ವಾರ್ಡ್ವರೆಗೆ ಪಾದಯಾತ್ರೆ ನಡೆಸಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸಿದರು.
ಕಾರಿಗೆ ಲಾರಿ ಡಿಕ್ಕಿ: ಐವರಿಗೆ ಗಾಯ
ಮಳವಳ್ಳಿ: ವೇಗವಾಗಿ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿ ಕಾರಿಗೆ ಡಿಕ್ಕಿಹೊಡೆದ ಪರಿಣಾಮ ಚಾಲಕ ಸೇರಿದಂತೆ ಒಂದೇ ಕುಟುಂಬದ ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಪಟ್ಟಣದ ಹೊರವಲಯದ ಬುಗತಹಳ್ಳಿ ಬಳಿ ಜರುಗಿದೆ. ತೀವ್ರವಾಗಿ ಗಾಯಗೊಂಡಿದ್ದ ನಾಲ್ವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಸ್ಥಾಳಾಂತರಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ನಿವೃತ್ತ ಉಪನ್ಯಾಸಕ ಬಸವರಾಜ್, ಗಾಯತ್ರಮ್ಮ, ಮಂಜುನಾಥ್, ಚಾಲಕ ನಾಗರಾಜ್ ಎನ್ನಲಾಗಿದೆ.
ವ್ಯಕ್ತಿ ಮೇಲೆ ಚಿರತೆ ದಾಳಿ: ತೀವ್ರ ಗಾಯ
ಮಳವಳ್ಳಿ: ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಕೆಂಪೇಗೌಡನದೊಡ್ಡಿಯಲ್ಲಿ ಶುಕ್ರವಾರ ಸಂಜೆ 6 ಗಂಟೆ ವೇಳೆಗೆ ಸಾಂತರಾಜು ಎಂಬುವರ ಮೇಲೆ ಚಿರತೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿರುವ ಘಟನೆನಡೆದಿದೆ. ಗಾಯಾಳುಗೆ ಹಲಗೂರು ಆಸ್ಪತ್ರೆ, ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

