ಮಂಡ್ಯ

ಟ್ರ್ಯಾಕ್ಟರ್ ಉರುಳಿ ಚಾಲಕ ಸಾವು

Published On :

ಕೆ.ಆರ್.ಪೇಟೆ: ಟ್ರ್ಯಾಕ್ಟರ್ ಉರುಳಿ ಚಾಲಕ ಸಾವನ್ನಪ್ಪಿರುವ ಘಟನೆ ತಾಲೂಕಿನ ಸಂತೇಬಾಚಹಳ್ಳಿ ಹೋಬಳಿ ಕೊರಟಿಕೆರೆ ಗ್ರಾಮದಲ್ಲಿ ಜರುಗಿದೆ. ತಾಲೂಕಿನ ಮಂಗನಹೊಸಹಳ್ಳಿ ಗ್ರಾಮದ ಮಂಜೇಗೌಡರ ಪುತ್ರ ಮಲ್ಲೇಶ್ (25) ಸಾವನ್ನಪ್ಪಿದರು. ಕೊರಟಿಕೆರೆ ಗ್ರಾಮದಿಂದ ಮರಳು ತುಂಬಿಕೊಂಡು ಹೋಗುತ್ತಿದ್ದ ವೇಳೆ ರಸ್ತೆಯ ತಿರುವಿನಲ್ಲಿ ಟ್ರ್ಯಾಕ್ಟರ್ ಮಗಚಿ ಬಿದ್ದಿದೆ. ಇದರಿಂದ  ಚಾಲಕ ಮಲ್ಲೇಶ್ ಸ್ಥಳದಲ್ಲೇ ಮೃತರಾದರು. ಟ್ರೈಲರ್ ಮೇಲೆ ಕುಳಿತಿದ್ದ ನಾಲ್ವರು ಕೂಲಿ ಕಾರ್ಮಿಕರು ಸಣ್ಣ ಪುಟ್ಟ ಗಾಯಗೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂಬಂಧ ಕಿಕ್ಕೇರಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಕ್ರಮ ಮರಳು: ಮೂವರ ಬಂಧನ
ಮದ್ದೂರು:  ತಾಲೂಕಿನ ಶಿಂಷಾ ನದಿ ಪಾತ್ರದ ಅಕ್ರಮ ಮರಳು ಗಣಿಗಾರಿಕೆ ಕೇಂದ್ರಗಳ ಮೇಲೆ ಗುರುವಾರ ರಾತ್ರಿ ದಿಢೀರ್ ದಾಳಿ ನಡೆಸಿದ ಕಂದಾಯ ಅಧಿಕಾರಿಗಳ ತಂಡ ಕಾರು, ಟ್ರ್ಯಾಕ್ಟರ್, ಲಾರಿ ಸೇರಿದಂತೆ ಅಪಾರ ಪ್ರಮಾಣದ ಮರಳನ್ನು ವಶಪಡಿಸಿಕೊಂಡು ಮೂವರನ್ನು ಬಂಧಿಸಿದ್ದಾರೆ. ತಹಸೀಲ್ದಾರ್ ಡಾ. ಎಚ್.ಎಲ್. ನಾಗರಾಜು ನೇತೃತ್ವದ ಕಂದಾಯ ಅಧಿಕಾರಿಗಳ ತಂಡ ಖಚಿತ ಮಾಹಿತಿ ಮೇರೆಗೆ 10 ಗ್ರಾಮಗಳ ಮರಳು ಅಡ್ಡೆಗಳ ಮೇಲೆ 13 ಗಂಟೆಗಳ ನಿರಂತರ ದಾಳಿ ನಡೆಸಿ 7 ಲಾರಿ, 4 ಟ್ರ್ಯಾಕ್ಟರ್, 1 ಟಾಟಾ ಇಂಡಿಕಾ ಕಾರು ಹಾಗೂ ಮರಳು ಗಣಿಗಾರಿಕೆಗೆ ಬಳಸುತ್ತಿದ್ದ ಉಪಕರಣಗಳನ್ನು ವಶಪಡಿಸಿಕೊಂಡು ಮೂವರು ಲಾರಿ ಚಾಲಕರನ್ನು ಬಂಧಿಸಿದ್ದಾರೆ. ಉಳಿದವರು ದಾಳಿ ಸಂದರ್ಭ ಸ್ಥಳದಿಂದ ಪರಾರಿಯಾಗಿದ್ದಾರೆ. ತಾಲೂಕಿನ ಹೆಮ್ಮನಹಳ್ಳಿ, ಹೂತಗೆರೆ, ದೊಡ್ಡ ಅಂಕನಹಳ್ಳಿ, ಮಾದಪ್ಪನಕೊಪ್ಪಲು, ಅರಗಿನಮೆಳೆ, ಹೆಬ್ಬೆರಳು, ಕೋಡಿಹಳ್ಳಿ, ಎಸ್.ಐ.ಆಗಲಹಳ್ಳಿ, ಕೆ.ಬೆಳ್ಳೂರು ಹಾಗೂ ಕೂಳಗೆರೆ ಗ್ರಾಮಗಳ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಲಾರಿ ಚಾಲಕರನ್ನು ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದಾಳಿಯಲ್ಲಿ ಕಂದಾಯ ಅಧಿಕಾರಿಗಳಾದ ಸಿದ್ದೇಗೌಡ, ರಾಮಾರಾಧ್ಯ, ಗೋವಿಂದ ಶೆಟ್ಟಿ, ಗೃಹ ರಕ್ಷಕ ದಳದ ಘಟಕಾಧಿಕಾರಿ ಗಿರೀಶ್ ಭಾಗವಹಿಸಿದ್ದರು.
ಇಂದು ಮಧ್ಯಸ್ಥಿಕೆ ತರಬೇತಿ
ಮಂಡ್ಯ:  ಬೆಂಗಳೂರು ಮಧ್ಯಸ್ಥಿಕೆ ಕೇಂದ್ರ, ಮಂಡ್ಯ ಹಾಗೂ ರಾಮನಗರ ಜಿಲ್ಲಾ ಮಧ್ಯಸ್ಥಿಕೆ ಕೇಂದ್ರ ಮತ್ತು ವಕೀಲರ ಸಂಘದ ಸಹಯೋಗದಲ್ಲಿ ಮಾ.2ರಂದು ಬೆಳಿಗ್ಗೆ 9.30ಕ್ಕೆ ಮಂಡ್ಯ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ರಾಜ್ಯ ಉಚ್ಚನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಮಂಡ್ಯ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ರಾಮ್ಮೋಹನ ರೆಡ್ಡಿ ಅವರು ಮಧ್ಯಸ್ಥಿಕೆ ತರಬೇತಿಯನ್ನು ಉದ್ಘಾಟಿಸಲಿದ್ದಾರೆ.
ನಾಳೆ ಅಂಚೆ ಅದಾಲತ್
ಮಂಡ್ಯ:  ಅಂಚೆ ಅಧೀಕ್ಷಕರ ಕಚೇರಿ ಮಂಡ್ಯ ವಿಭಾಗ ವತಿಯಿಂದ ಮಾ.3ರಂದು ಬೆಳಿಗ್ಗೆ 11 ಗಂಟೆಗೆ ಮಂಡ್ಯ ವಿಭಾಗದ ಅಂಚೆ ಅಧೀಕ್ಷಕರ ಕಚೇರಿಯ ಆವರಣದಲ್ಲಿ ಅಂಚೆ ಅದಾಲತ್ ಏರ್ಪಡಿಸಲಾಗಿದೆ. ಸಾರ್ವಜನಿಕರು ಅಂಚೆ ಸೇವೆ ಬಗ್ಗೆ ಕುಂದುಕೊರತೆಗಳಿದ್ದಲ್ಲಿ ಮಾ.15 ರೊಳಗೆ ಅಂಚೆ ಅಧೀಕ್ಷಕರ ಕಚೇರಿಗೆ ಲಿಖಿತವಾಗಿ ತಲುಪಿಸುವಂತೆ ಕೋರಿದ್ದಾರೆ. ಸಾರ್ವಜನಿಕರು ಅಂಚೆ ಅದಾಲತ್ಗೆ ತಮ್ಮ ಸ್ವಂತ ಖರ್ಚಿನಲ್ಲಿ ಭಾಗವಹಿಸಬಹುದು ಎಂದು ಅಂಚೆ ಅಧೀಕ್ಷಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.