ನನ್ನೀ ಮತಕ್ಕೆ ಅರ್ಹರ್ಯಾರು?
ಮಂಡ್ಯ: ಸ್ಥಳೀಯ ಸಂಸ್ಥೆಗಳ ಮಿನಿ ಮಾಹಾ ಚುನಾವಣಾ ಸಮರದಲ್ಲಿ ಮತದಾರರಿಗೆ ಹಾಗೂ ಕಣದಲ್ಲಿರುವ ಅಭ್ಯರ್ಥಿಗಳಿಗೆ ಮಾ.7 ಅಗ್ನಿ ಪರೀಕ್ಷೆಯ ದಿನ.
ಹೇಗಾದರೂ ಮಾಡಿ ಚುನಾವಣೆಯಲ್ಲಿ ಗೆಲ್ಲುವ ತವಕ, ಕನಸು ಪ್ರತಿ ಅಭ್ಯರ್ಥಿಗಳಲ್ಲಿದ್ದರೆ, ಕಣದಲ್ಲಿರುವ ಬಹುತೇಕ ಅಭ್ಯರ್ಥಿಗಳನ್ನೂ ಅಳೆದು, ತಕ್ಕಡಿಯಲ್ಲಿ ಹಾಕಿ ತೂಗಿದರೆ ಎಲ್ಲರೂ ಒಂದೇ. ಆಯ್ಕೆಯಾದ ನಂತರ ತೋರುವ ಅಪ್ರಾಮಾಣಿಕತೆ, ಭ್ರಷ್ಟತೆ, ಅಭಿವೃದ್ಧಿಯ ನಿರ್ಲಕ್ಷ್ಯ, ಹಣದಾಸೆಗಾಗಿ ಪಕ್ಷ ಹಾಗೂ ತಮ್ಮ ತನವನ್ನೇ ಮಾರಿಕೊಳ್ಳುವವರ ಸಂಖ್ಯೆಯೇ ಹೆಚ್ಚಿರುವಾಗ ಈಗ ಯಾರನ್ನು ಆಯ್ಕೆ ಮಾಡುವುದು ಎಂಬ ಗೊಂದಲದಲ್ಲಿ ಬಹುತೇಕ ಮತದಾರರು ಸಿಲುಕಿದ್ದಾರೆ.
ಇಲ್ಲಿ ಬಹುಸಂಖ್ಯಾತ ಮತದಾರರದ್ದೂ ಕೊಂಚ ತಪ್ಪಿದೆ. ಆಮಿಷಕ್ಕೆ ಬಲಿಯಾಗಿ ಮತ ಮಾರಿಕೊಳ್ಳುವ ಅಥವಾ ಖರೀದಿಗೆ ಮನಸ್ಸು ಕೊಡುವ ಮಂದಿಯಿಂದ ಉತ್ತಮ ಜನಪ್ರತಿನಿಧಿಗಳನ್ನು ಹೇಗೆ ತಾನೆ ಆಯ್ಕೆ ಮಾಡಲು ಸಾಧ್ಯ ಎಂಬುದನ್ನು ಒಂದು ಬಾರಿ ಯೋಚಿಸಲೇಬೇಕು. ವಿದ್ಯಾವಂತರು ಕಡ್ಡಾಯ ಮತದಾನ ಮಾಡಬೇಕು. ಬಡವರಿಗೆ ಆಮಿಷ ತೋರಿಸಿ ಗೆಲ್ಲುವ ಹುಚ್ಚು ನಿರ್ಧಾರವನ್ನೂ ಕೈ ಬಿಡಬೇಕು. ಅದೇ ರೀತಿಯಲ್ಲಿ ಆಯ್ಕೆ ಜನಪ್ರತಿನಿಧಿಗೆ ಬದ್ಧತೆ ಮತ್ತು ಪ್ರಾಮಾಣಿಕತೆ, ಕಾಳಜಿ ಇದ್ದರೆ ಆಯ್ಕೆ ಮಾಡಿರುವುದಕ್ಕೂ ಸಾರ್ಥಕ ಎನ್ನಿಸುತ್ತದೆ.
ಹೀಗಾಗಿ, ಪ್ರತಿಯೊಬ್ಬ ಮತದಾರರು ಮತದಾನ ಮಾಡಿ ಜವಾಬ್ದಾರಿ ಕಳೆದುಕೊಂಡರೆ ಮುಗಿಯಿತು ಎನ್ನುವ ಹಾಗಿಲ್ಲ. ಅದೊಂದು ದಿನ ಮತದಾರರು ಎಡವಿದರೆ, ಮುಂದಿನ ಐದು ವರ್ಷಗಳ ಕಾಲ ಆಯ್ಕೆಯಾದವರು ನಡೆಸುವ ದರ್ಬಾರು, ಅಭಿವೃದ್ಧಿಯ ನಿರ್ಲಕ್ಷ್ಯ ಧೋರಣೆಗಳಿಂದ ಮತದಾರನೇ ಪರಿತಪ್ಪಿಸಬೇಕಾಗುತ್ತದೆ ಎಂಬ ಎಚ್ಚರಿಕೆ ಗಮನದಲ್ಲಿದ್ದರೆ ಸಾಕು.
ಮತವನ್ನು ಯಾರಿಗೆ ಬೇಕಾದರೂ ಹಾಕಿ. ಆದರೆ ಮಂಡ್ಯದ ಅಭಿವೃದ್ಧಿಯ ಕಲ್ಪನೆ ಇರುವ, ಸ್ವಲ್ಪವಾದರೂ ಬದ್ದತೆ, ಪ್ರಾಮಾಣಿಕನಾಗಿರುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಹೊಣೆ ಮತದಾರನದ್ದು. ಚುನಾವಣೆಗೆ ಸ್ಪರ್ಧಿಸಿದ ವ್ಯಕ್ತಿಗಳಲ್ಲೇ ಈತ ಪರ್ವಾಗಿಲ್ಲ ಎನ್ನುವವರನ್ನು ಆಯ್ಕೆ ಮಾಡಿ. ಇಲ್ಲದೇ ಹೋದರೆ ಕಳೆದ ಬಾರಿ ರೀತಿಯಲ್ಲಿ ಜನತೆಗೆ ಮತ್ತು ನಗರಕ್ಕೆ ಹಾಗೂ ಜನರಿಗೆ ಮೋಸ ಮಾಡಿ ಆಡಳಿತ ನಡೆಸಿ, ಬಂದಷ್ಟು ಬಾಚಿ ಕೊಂಡು ಹೋದಂತಹ ಕೆಲವು ಮಾದರಿ ಜನಪ್ರತಿನಿಧಿಗಳು ನಮಗೆ ಈ ಬಾರಿಯೂ ನಮಗೆ ಬೇಕಾ ಎನ್ನುವುದನ್ನು ಕೊಂಚ ಯೋಚಿಸಿ, ನಿರ್ಧಾರ ಮಾಡುವ ದಿನ ಮಾರ್ಚ್ 7.
ಸ್ಥಳೀಯ ಸಂಸ್ಥೆ ಚುನಾವಣೆಯ ಮತದಾನಕ್ಕೆ ಇನ್ನು ಕೇವಲ ಬಾಕಿ 6 ದಿನಗಳು ಬಾಕಿ ಉಳಿದಿವೆ. ಮಂಡ್ಯ ನಗರಸಭೆ ಸೇರಿದಂತೆ ಮದ್ದೂರು, ಶ್ರೀರಂಗಪಟ್ಟಣ, ಕೆ. ಆರ್. ಪೇಟೆ ಹಾಗೂ ಮಳವಳ್ಳಿ ಪುರಸಭೆ ಹಾಗೂ ನಾಗಮಂಗಲ, ಪಾಂಡವಪುರ ಪಟ್ಟಣ ಪಂಚಾಯ್ತಿಗಳ 161 ಅಭ್ಯರ್ಥಿಗಳ ಹಣೆಬರಹವನ್ನು ಅಂದಾಜು 2 ಲಕ್ಷ ಮತದಾರರು ನಿರ್ಧರಿಸಲಿದ್ದಾರೆ.
ಮಂಡ್ಯ ಸೇರಿದಂತೆ ಜಿಲ್ಲೆಯ ಎಲ್ಲಾ ಪಟ್ಟಣಗಳಲ್ಲೂ ಸಂಸ್ಥೆಯ ಆಡಳಿತ ಅವ್ಯವಸ್ಥೆಯಿಂದ ಕೂಡಿದೆ. ಅಭಿವೃದ್ಧಿಯ ಮಾತೇ ಇಲ್ಲ. ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕಾದ ಸ್ಥಳೀಯ ಸಂಸ್ಥೆಗಳು ಬರುವ ಸಂಪನ್ಮೂಲಗಳನ್ನು ಯಾವ ರೀತಿ ಬಳಕೆ ಮಾಡಿಕೊಳ್ಳುತ್ತವೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

