ಮಂಡ್ಯ

'ಸಿನಿಕತನ ಮನೋಭಾವದಿಂದ ಜನರ ಹೊರತನ್ನಿ'

Published On :

ಮಂಡ್ಯ:  ಸಮಾಜದಲ್ಲಿ ಸಿನಿಕತನ ಹೆಚ್ಚಾಗುತ್ತಿರುವ ಈಗಿನ ದಿನಗಳಲ್ಲಿ ಜನಸಮೂಹವನ್ನು ಎಚ್ಚರಗೊಳಿಸುವಲ್ಲಿ ಸಮೂಹ ಮಾಧ್ಯಮದ ಪಾತ್ರ ಹೆಚ್ಚಾಗಿದೆ ಎಂದು ಪತ್ರಕರ್ತ ಬಿ.ಎಂ. ಹನೀಫ್ ಶುಕ್ರವಾರ ಹೇಳಿದರು.
ನಗರದ ಗಾಂಧಿಭವನದಲ್ಲಿ ಹಳೇ ಮೈಸೂರು ದಿನಪತ್ರಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿದ ಅವರು, ಮಾಧ್ಯಮಗಳು ಬಹುಸಂಖ್ಯಾತರ ನಿಲುವು, ವ್ಯಕ್ತಿತ್ವ ಹಾಗೂ ಒಳನೋಟವನ್ನು ಅರಿತು ಕೆಲಸ ಮಾಡಬೇಕು ಎಂದು ತಿಳಿಸಿದರು.
ಜನರಲ್ಲಿ ಪತ್ರಿಕೆಗಳನ್ನು ಕೊಂಡು ಓದುವ ಮನಸ್ಥಿತಿ ಬದಲಾಗಿದೆ. ಅಂದು ಪತ್ರಿಕಾ ವೃತ್ತಿಯಿತ್ತು. ಇಂದು ಉದ್ಯಮವಾಗಿ ಮಾರ್ಪಟ್ಟಿದೆ. ಶಬ್ದಗಳ ಮೇಲೆ ಪತ್ರಿಕೆ ನಡೆಸುತ್ತೇವೆ ಎಂಬುದು ಸರಿಯಲ್ಲ. ಬದಲಿಗೆ ಪತ್ರಿಕೆಯನ್ನು ಜನಮುಖಿ ಹಾಗೂ ಜನಪರವಾಗಿ ನಡೆಸಬೇಕು ಎಂದು ಸಲಹೆ ನೀಡಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅತ್ಯಂತ ಕೆಟ್ಟ ದಿನಗಳು ಹಾದು ಹೋಗುತ್ತಿವೆ. ಜನಪರ ಚಳವಳಿಗೆ ಜನರ ಸ್ಪಂದನೆ ಸಿಗುತ್ತಿಲ್ಲ. ಪತ್ರಿಕೆಯನ್ನು ಸಮಾಜ ಸೇವೆಗಾಗಿ ಮಾಡದೆ ಅದನ್ನು ಉದ್ಯಮವಾಗಿಯೇ ಮಾಡುವುದು ಸೂಕ್ತ. ಅದರ ಜತೆಗೆ ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಎಚ್ಚರಿಸುವ ಕೆಲಸವನ್ನು ಪತ್ರಿಕೆ ಮಾಡಬೇಕು ಎಂದು ಹೇಳಿದರು.
ಪತ್ರಿಕೆ ಬಿಡುಗಡೆ ಮಾಡಿದ ಜಾನಪದ ವಿದ್ವಾಂಸ ಡಾ.ಹಿ.ಶಿ.ರಾಮಚಂದ್ರೇಗೌಡ ಮಾತನಾಡಿ, ಕಳೆದು ಹೋಗುತ್ತಿರುವ ಮೌಲ್ಯಗಳಿಗೆ ಈಗಿನ ಮೌಲ್ಯಗಳಿಗೆ ಪ್ರತಿಕ್ರಿಯೆಯಾಗಿ ಮಾಧ್ಯಮಗಳು ಕೆಲಸ ಮಾಡಬೇಕು ಎಂದರು.
ಜಾಗತೀಕರಣದ ಪ್ರಭಾವದಲ್ಲಿ ಕೊಳ್ಳೆ ಹೊಡೆಯುವ ಸ್ಥಿತಿ ಹೆಚ್ಚಾಗಿದೆ. ವ್ಯಕ್ತಿಗಳು ಇದ್ದಾರೆ, ವ್ಯಕ್ತಿತ್ವ ಇಲ್ಲ. ತಾತ್ವಿಕ ರಾಜಕಾರಣ, ರಾಜಕಾರಣಿಗಳು ಮಾಯವಾಗಿದ್ದಾರೆ. ಮನುಷ್ಯರೊಳಗೆ ಮನುಷ್ಯರನ್ನು ಹಾಗೂ ಮೌಲ್ಯಗಳನ್ನು ಹುಡುಕುವ ಸ್ಥಿತಿ ಬಂದಿದೆ ಎಂದು ತಿಳಿಸಿದರು.
ಜಿಲ್ಲಾ ರೈತ ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಡಾ.ಜಿ.ಮಾದೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ಪ್ರೊ. ಎಚ್.ಎಲ್. ಕೇಶವಮೂರ್ತಿ, ಶಾಸಕ ಎಂ.ಶ್ರೀನಿವಾಸ್, ಪತ್ರಕರ್ತ ಕೆ.ಎನ್.ರವಿ,  ದಸಂಸ ಮುಖಂಡ ಗುರುಪ್ರಸಾದ್ ಕೆರಗೋಡು, ಜನವಾದಿ ಮಹಿಳಾ ಸಂಘಟನೆ ರಾಜ್ಯ ಸಹಕಾರ್ಯದರ್ಶಿ ಸಿ.ಕುಮಾರಿ, ಪತ್ರಿಕೆ ಸಂಪಾದಕ ಎಂ.ಬಿ.ನಾಗಣ್ಣಗೌಡ, ಜಿಲ್ಲಾ ಯುವ ಬರಹಗಾರರ ಬಳಗ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.