ತೆರಿಗೆ ಪಾವತಿಸದ ಕಾರ್ಖಾನೆ ವಿರುದ್ಧ ಕ್ರಮಕ್ಕೆ ನಿರ್ಧಾರ
ಮದ್ದೂರು: ತಾಲೂಕಿನ ಗೆಜ್ಜಲಗೆರೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೈಗಾರಿಕಾ ಪ್ರದೇಶದಲ್ಲಿನ ಪರಿಷ್ಕೃತ ತೆರಿಗೆ ಪಾವತಿಸದ ಮತ್ತು ಪರವಾನಗಿ ಪಡೆಯದ ಕಾರ್ಖಾನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಗ್ರಾಮ ಪಂಚಾಯ್ತಿ ತೀರ್ಮಾನಿಸಿದೆ.
ಗ್ರಾಮ ಪಂಚಾಯ್ತಿ ಸಭಾಂಗಣದಲ್ಲಿ ಅಧ್ಯಕ್ಷ ಜಿ.ಎಲ್.ರಾಮಲಿಂಗಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ತೆರಿಗೆ ಪಾವತಿಸದ ಕಾರ್ಖಾನೆಗಳ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಯಿತು.
ಗ್ರಾಪಂ ವ್ಯಾಪ್ತಿಯಲ್ಲಿನ ಕೈಗಾರಿಕಾ ಪ್ರದೇಶದ ಶಾಹಿ ಎಕ್ಸ್ಪೋರ್ಟ್, ವೆಲ್ಸ್ಪನ್, ಕ್ಲೀನ್ಟ್ಯಾಕ್ಸ್, ಮದ್ದೂರು ರ್ಯಾಕ್ಸ್ಟ್ರೈನ್ ಕಾರ್ಖಾನೆಗಳಿಂದ 2012 ಮತ್ತು 13ನೇ ಸಾಲಿನಲ್ಲಿ 22 ಲಕ್ಷ ಪರಿಷ್ಕೃತ ತೆರಿಗೆ ಬಾಕಿ ಬರಬೇಕಾದ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು.
ಪರಿಷ್ಕೃತ ತೆರಿಗೆ ಪಾವತಿಸದ ಬಗ್ಗೆ ಕಾರ್ಖಾನೆ ಮಾಲೀಕರಿಗೆ ಗ್ರಾಮ ಪಂಚಾಯ್ತಿಯಿಂದ 3 ಬಾರಿ ನೋಟಿಸ್ ನೀಡಲಾಗಿದೆ. ಆದರೆ, ಮಾಲೀಕರು ನೋಟಿಸ್ಗೆ ಸ್ಪಂದಿಸದ ಬಗ್ಗೆ ಸಭೆ ಗಂಭೀರವಾಗಿ ಪರಿಗಣಿಸಿತಲ್ಲದೇ ಇಂತಹ ಕಾರ್ಖಾನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ತೀರ್ಮಾನ ಕೈಗೊಳ್ಳಲಾಯಿತು.
ತೆರಿಗೆ ಪಾವತಿಸದ ಹಾಗೂ ಪರವಾನಗಿ ನವೀಕರಣಗೊಳಿಸದ ಕಾರ್ಖಾನೆಗಳ ವಿರುದ್ಧ ಕರ್ನಾಟಕ ಗ್ರಾಮ ಪಂಚಾಯ್ತಿ ಅಧಿನಿಯಮ 1993ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲು ಸರ್ವಾನುಮತದ ತೀರ್ಮಾನ ಕೈಗೊಂಡ ಸಭೆ ಪ್ರಥಮ ಹಂತದಲ್ಲಿ ವಿದ್ಯುತ್ ಕಡಿತ ಮಾಡುವಂತೆ ಚೆಸ್ಕಾಂಗೆ ಸೂಚನೆ ನೀಡುವುದು. ಕಾರ್ಖಾನೆ ಮಾಲೀಕರು ಇದಕ್ಕೆ ಸ್ಪಂದಿಸದಿದ್ದಲ್ಲಿ ಗ್ರಾಪಂ ಸದಸ್ಯರು ಕಾರ್ಖಾನೆ ಮುಂದೆ ಕರವಸೂಲಿ ಚಳವಳಿ ನಡೆಸಲು ತೀರ್ಮಾನಿಸಲಾಯಿತು.
ಗೆಜ್ಜಲಗೆರೆ ಕೈಗಾರಿಕಾ ಪ್ರದೇಶದ ಕಾರ್ಖಾನೆಗಳಿಂದ ತೆರಿಗೆ ಮತ್ತು ಲೈಸನ್ಸ್ ನೀಡುವ ವಿಚಾರದಲ್ಲಿ ಗ್ರಾಪಂಗೆ ಯಾವುದೇ ಅಧಿಕಾರ ಇಲ್ಲ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಸುಜ್ಞಾನಮೂರ್ತಿ ಅಧ್ಯಕ್ಷರು ಮತ್ತು ಸದಸ್ಯರಿಗೆ ದೂರವಾಣಿಯಲ್ಲಿ ಬೇಜವಾಬ್ದಾರಿ ಉತ್ತರ ನೀಡಿದ ಬಗ್ಗೆ ಸದಸ್ಯರು ಒಕ್ಕೊರಲಿನಿಂದ ಖಂಡಿಸಿದರು.
ತೆರಿಗೆ ಪರಿಷ್ಕರಣೆ ವಿಚಾರದಲ್ಲಿ ಕಾರ್ಖಾನೆ ಮಾಲೀಕರು ಕಚೇರಿಗೆ ಭೇಟಿ ನೀಡಿ ಅಧ್ಯಕ್ಷ ಮತ್ತು ಸದಸ್ಯರೊಂದಿಗೆ ಮುಕ್ತವಾಗಿ ಮಾತುಕಡೆ ನಡೆಸುವ ಸಮಸ್ಯೆ ಬಗೆಹರಿಸಿಕೊಳ್ಳಲು ಕಾಲಾವಕಾಶ ನೀಡುವ ಬಗ್ಗೆ ಸಭೆ ಅಂತಿಮವಾಗಿ ತೀರ್ಮಾನ ಕೈಗೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

