ಮಂಡ್ಯ

ದುಡುಕಿನ ನಿರ್ಧಾರ ತಳೆಯದಿರಿ: ಎಚ್.ಡಿ. ಕುಮಾರಸ್ವಾಮಿ ಮನವಿ

Published On :

ಮಂಡ್ಯ-ಭಾರತೀನಗರ:  ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ಮದ್ದೂರು ಶಾಸಕಿ ಕಲ್ಪನಾ ಸಿದ್ದರಾಜು ಹಾಗೂ ಅವರ ಬೆಂಬಲಿಗರಿಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಭಾನುವಾರ ಮನವಿ ಮಾಡಿದರು.
ಭಾರತೀನಗರದ ಕೇಂಬ್ರಿಡ್ಜ್ ಶಾಲೆ ಆವರಣದಲ್ಲಿ ನಡೆದ ಡಿ.ಸಿ. ತಮ್ಮಣ್ಣ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜೆಡಿಎಸ್ ಮುಂದೆ ಸಾಕಷ್ಟು ಸವಾಲುಗಳು ಇವೆ. ಪಕ್ಷವನ್ನು ಹೇಗಾದರೂ ಮಾಡಿ ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು. ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂಬ ಉದ್ದೇಶದಿಂದ ನಾವು ಹಲವಾರು ದಿಟ್ಟ ಕ್ರಮಗಳನ್ನು ಕೈಗೊಂಡಾಗ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಅವುಗಳನ್ನು ಪರಿಹರಿಸಿಕೊಳ್ಳಲು ಮಾರ್ಗೋಪಾಯಗಳು ಇವೆ. ತಾಳ್ಮೆ ಬೇಕು ಅಷ್ಟೆ ಎಂದು ಹೇಳಿದರು.
ಮಾಜಿ ಶಾಸಕ ಡಿ.ಸಿ. ತಮ್ಮಣ್ಣನವರನ್ನು ಜೆಡಿಎಸ್‌ಗೆ ಸೇರ್ಪಡೆ ಮಾಡಿಕೊಳ್ಳುವುದರ ಮೂಲಕ ನಮ್ಮ ಕುಟುಂಬದ ಒಳಗಿನ ಬಿರುಕು ಮುಚ್ಚುವ ಪ್ರಯತ್ನ ಮಾಡಲಾಗಿದೆ. ಈ ಸಂಗತಿಯನ್ನು ಬಹಿರಂಗಗೊಳಿಸಲು ಯಾವುದೇ ಮುಜುಗರವಿಲ್ಲ. 1 ವರ್ಷದಿಂದ ತಮ್ಮಣ್ಣರನ್ನು ಜೆಡಿಎಸ್‌ಗೆ ಸೇರಿಸಿಕೊಳ್ಳುವ ವಿಚಾರ ಕುಟುಂಬವಲಯದಲ್ಲಿ ಸಾಕಷ್ಟು ಚರ್ಚೆ ನಡೆದು ಅಂತಿಮವಾಗಿ ಗೌಡರ ಅನುಮತಿ ಪಡೆದು ತಮ್ಮಣ್ಣ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದರು.
ಮದ್ದೂರು ಕ್ಷೇತ್ರ ಹಾಗೂ ಮಂಡ್ಯ ಜಿಲ್ಲೆ ಜನ ಯಾವತ್ತೂ ಹಣಕ್ಕೆ ಆಸೆ ಪಟ್ಟವರಲ್ಲ. ಈ ಜಿಲ್ಲೆಗೆ ಹಣ ತಂದು ನಾನು ಪಕ್ಷ ಕಟ್ಟಿಲ್ಲ. ಕೇವಲ ಪ್ರೀತಿ ವಿಶ್ವಾಸ ಮತ್ತು ಆತ್ಮೀಯತೆ ಧಾರೆ ಎರೆದು ಪಕ್ಷ ಕಟ್ಟಿದ್ದೇನೆ. ಇದರ ಉಪಯೋಗ ನನಗೆ ಮಾತ್ರ ಆಗುವುದಿಲ್ಲ. ನನ್ನ ಪಕ್ಷದ ಸಾಮಾನ್ಯ ಕಾರ್ಯಕರ್ತರು, ನಾಯಕರು ಹಾಗೂ ಈ ರಾಜ್ಯದ ಜನರಿಗೆ ಆಗಬೇಕು ಎನ್ನುವುದು ಆಶಯ. ಇದಕ್ಕೆ ಎಲ್ಲರ ಸಹಕಾರ ಮುಖ್ಯ ಎಂದರು.
ಗೊಂದಲ ಬೇಡ:  ತಮ್ಮಣ್ಣ ಸೇರ್ಪಡೆ ಕಾರ್ಯಕ್ರಮಕ್ಕೆ ಶಾಸಕಿ ಕಲ್ಪನಾ ಸಿದ್ದರಾಜು ಆಗಮಿಸಬೇಕಿತ್ತು. ನಾನು ಈ ಕಾರ್ಯಕ್ರಮಕ್ಕೆ ಬರುವ ಮುನ್ನ ಕೆಲವರು ನನ್ನ ವಿರುದ್ಧ ಕಪ್ಪು ಬಾವುಟ ಪ್ರದರ್ಶಿಸಿದರು. ಅದನ್ನು ಸಹಿಸಿಕೊಂಡಿದ್ದೇನೆ. ಆದರೆ, ಮುಂದಿನ ಚುನಾವಣೆ ಸಂದರ್ಭ ಹಣಕೋಸ್ಕರವಾಗಿ ತಮ್ಮಣ್ಣರಂತಹ ಶ್ರೀಮಂತರಿಗೆ ಜೆಡಿಎಸ್‌ಗೆ ಬರಮಾಡಿಕೊಂಡು ಅವಕಾಶ ಮಾಡಿಕೊಟ್ಟರು ಎಂದು ಅಪ ಪ್ರಚಾರ ಮಾಡುವುದು ಬೇಡ. ಪಕ್ಷದ ವಿರುದ್ಧ ಗೊಂದಲ ಸೃಷ್ಟಿಸುವುದು ಬೇಡ. ಈ ಕಾರಣಕ್ಕಾಗಿ ನಾನು ಎಲ್ಲವನ್ನು ನೇರವಾಗಿ ಹೇಳುವ ಧೈರ್ಯ ಮಾಡಿದ್ದೇನೆ ಎಂದು ಹೇಳಿದರು.
ಕಲ್ಪನಾ ಸಿದ್ದರಾಜು ಅವರಿಗೆ ತಂಗಿಯ ಸ್ಥಾನ ಕೊಟ್ಟು ಕಾಪಾಡಿದ್ದೇನೆ. ಯಾರೆ ಪಕ್ಷಕ್ಕೆ ಬರಲಿ ಹೋಗಲಿ ನಿನಗೆ ಅನ್ಯಾಯವಾಗಲು ಬಿಡುವುದಿಲ್ಲ. ಸಂದರ್ಭ ಮತ್ತು ಅವಕಾಶಗಳು ಹುಡುಕಿಕೊಂಡು ಬರುವ ಹಾಗೆ ಮಾಡುತ್ತೇನೆ. ಈಗ ಯಾರದೋ ನಾಲ್ಕು ಜನರ ಮಾತು ಕೇಳಿ ತಾಳ್ಮೆ ಕೆಡಿಸಿಕೊಂಡು ದುಡುಕಿ ನಿರ್ಧಾರ ತೆಗೆದುಕೊಂಡರೆ ಅದು ನನ್ನ ಮನಸ್ಸಿಗೆ ತೀರಾ ನೋವಿನ ಸಂಗತಿ ಎಂದು ಅರಿವು ಬರುವ ರೀತಿಯಲ್ಲಿ ಹೇಳಿದ್ದೇನೆ ಎಂದರು.
ಸಿದ್ದರಾಜು ನನಗೆ ತುಂಬ ಆತ್ಮೀಯರಾಗಿದ್ದರು. ಆ ವ್ಯಕ್ತಿ ನನ್ನ ಹೃದಯದಲ್ಲಿದ್ದರು. 2004ರಲ್ಲಿ 2 ಬಿ ಫಾರಂಗಳನ್ನು ಕೊಟ್ಟ ಸಂದರ್ಭದಲ್ಲಿ ಆಗಿರುವ ತಪ್ಪು ಕೂಡ ನನ್ನಿಂದಲೇ ಆಗಿದೆ. ಆದರೆ, ಆ ಕುಟುಂಬಕ್ಕೆ ನಾವು ಆರ್ಥಿಕವಾಗಿ ನೀಡಿದ ನೆರವು, ಸಹಾಯ ಅವೆಲ್ಲವನ್ನು ಮರೆತು ಈಗ ಸಡ್ಡು ಹೊಡೆದು ನಿಂತರೆ ಇದು ಯಾವ ನ್ಯಾಯ. ಹಣವೇ ಮುಖ್ಯವಲ್ಲ. ನಂಬಿಕೆ ಬಹಳ ಮುಖ್ಯ. ಅದನ್ನು ಉಳಿಸಿ ಹೋಗುವ ಪ್ರಯತ್ನವನ್ನು ಸಹೋದರಿ ಕಲ್ಪನಾ ಮಾಡಿದರೆ ಒಳಿತು ಎಂದು ಸಲಹೆ ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.