ಮಂಡ್ಯ

ಬಡವರ ಸೇವೆ ಬಯಸಿ ಜೆಡಿಎಸ್‌ಗೆ ಬಂದಿದ್ದೇನೆ: ಡಿ.ಸಿ.ತಮ್ಮಣ್ಣ ಅಭಿಮತ

Published On :

ಮಂಡ್ಯ-ಭಾರತೀನಗರ:  ತಾಯಿಯ ಪ್ರೇರಣೆಯಿಂದ ನಾನು ರಾಜಕಾರಣಕ್ಕೆ ಬಂದೆ. ಸಮಾಜ ಸೇವೆ ಮೂಲಕ ಬಡವರಿಗೆ ನೆರವಾಗಬೇಕು ಎಂಬ ಉದ್ದೇಶ ನನ್ನ ತಾಯಿಯದ್ದಾಗಿತ್ತು. ಅದೇ ಆಶಯದಿಂದಲೇ ರೈತರ ಪರವಾಗಿ ಸದಾ ಚಿಂತಿಸುವ ಮತ್ತು ದುಡಿಯುವ ದೇವೇಗೌಡರ ಸಾರಥ್ಯದ ಜೆಡಿಎಸ್‌ಗೆ ಸೇರುವ ನಿರ್ಧಾರ ಮಾಡಿದೆ ಎಂದು ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ಭಾನುವಾರ ತಿಳಿಸಿದರು.
ಜೆಡಿಎಸ್‌ಗೆ ಸೇರ್ಪಡೆಯಾದ ನಂತರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಸಂಖ್ಯಾತ ಅಭಿಮಾನಿಗಳು ಮತ್ತು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ರಾಜಕಾರಣದ ಆತ್ಮವಲೋಕನ ಮಾಡಿಕೊಂಡ ತಮ್ಮಣ್ಣ ಕಳೆದ 2 ತಿಂಗಳಿಂದ ನಾನು ಕ್ಷೇತ್ರದ ಎಲ್ಲಾ ಹೋಬಳಿಗಳಲ್ಲಿ ಸುತ್ತಿ ಜನರನ್ನು ಸಂಪರ್ಕಿಸಿ ಮುಂದಿನ ರಾಜಕೀಯ ನಿರ್ಧಾರ, ನಡೆ ಹೇಗಿರಬೇಕು ಎಂಬುದನ್ನು ಚರ್ಚೆ ಮಾಡಿ ಅಂತಿಮವಾಗಿ ಜೆಡಿಎಸ್ ಸೇರಲು ನಿರ್ಧರಿಸಿದೆ ಎಂದರು. ನನ್ನ ಕರಳು ಬಳ್ಳಿ (ಮಗಳು) ದೇವೇಗೌಡರ ಕುಟುಂಬದಲ್ಲಿ ಯಶಸ್ವಿಯಾಗಿ ಜೀವನ ಸಾಗಿಸುತ್ತಿದೆ. ನಾವು ಬಂಧುಗಳಾದರು ವೈರಿಗಳ ರೀತಿಯಲ್ಲಿರುವುದು ಸರಿಯಲ್ಲ ಎಂಬ ಕಾರಣವೂ ಕೂಡಾ ಜೆಡಿಎಸ್ ಸೇರಲು ಕಾರಣವಾಗಿದೆ. ಈ ನಿರ್ಧಾರ 2 ಕುಟುಂಬಗಳ ಮನಸ್ಸು ಮತ್ತು ಭಾವನೆಗಳನ್ನು ಇಮ್ಮಡಿಗೊಳಿಸುವಂತೆ ಮಾಡಿದೆ. ಮುಂದಿನ ದಿನಗಳಲ್ಲಿ ನನ್ನ ರಾಜಕೀಯ ಭವಿಷ್ಯ ಈ ಪಕ್ಷದಲ್ಲೆ ಭದ್ರವಾಗಿರುತ್ತದೆ ಎಂದು ಹೇಳಿದರು.
ಮಂಡ್ಯದವರಿಂದಲೇ ಅನ್ಯಾಯ:  ದೇವೇಗೌಡರು ಯಾವತ್ತೂ ಬೂಟಾಟಿಕೆಯ ನಡೆ ನುಡಿ ವ್ಯಕ್ತಪಡಿಸಿಲ್ಲ. ನಡೆದಂತೆ ನುಡಿದ್ದಾರೆ. ಕೃಷ್ಣ ಮತ್ತು ಕಾವೇರಿಯ ಯೋಜನೆಗಳನ್ನು ತಮ್ಮ 2 ಕಣ್ಣುಗಳ ರೀತಿಯಲ್ಲಿ ಕಾಪಾಡಿಕೊಂಡು ಬಂದಿದ್ದಾರೆ. ಮಂಡ್ಯ ಜಿಲ್ಲೆಯ ನಾಯಕರಿಂದಲೇ ಕಾವೇರಿ ವಿವಾದದಲ್ಲಿ ನಮ್ಮ ರೈತರಿಗೆ ಅನ್ಯಾಯವಾಗಿದೆ ಹೊರತು ಬೇರೆ ಯಾರಿಂದಲೂ ಅಲ್ಲ. ದೇವರಾಜು ಅರಸು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ವರುಣ ನಾಲೆ ನಿರ್ಮಾಣಕ್ಕೆ ಸುಸೂತ್ರವಾಗಿ ಅವಕಾಶ ಮಾಡಿಕೊಟ್ಟಿದ್ದರೆ ಇಂದಿರಾಗಾಂಧಿಯವರು ಬ್ರಿಟಿಷ್ ಅವಧಿಯಲ್ಲಿ ಮುಗಿದು ಹೋಗಿದ್ದ ಕಾವೇರಿ ನದಿ ನೀರಿನ ಹಂಚಿಕೆ ಒಪ್ಪಂದವನ್ನು ಮರು ಪರಿಶೀಲಿಸಿ ರಾಜ್ಯಕ್ಕೆ ನ್ಯಾಯ ಸಿಗುವಂತೆ ಕಾನೂನು ರೂಪಿಸಿಕೊಡುತ್ತಿದ್ದರು. ಆ ಕೆಲಸವನ್ನು ದೇವರಾಜು ಅರಸು ಅವರ ಮೂಲಕ ಮಾಡಬಹುದಿತ್ತು. ಆದರೆ,  ಮಂಡ್ಯದ ನಾಯಕರು ದುರಾಸೆಗೆ ಬಲಿಯಾಗಿ ಜಿಲ್ಲೆಯ ಭವಿಷ್ಯವನ್ನು ಹಾಳು ಮಾಡಿದರು ದೂರಿದರು.
ನಮ್ಮ ಜಿಲ್ಲೆಯಲ್ಲಿ ನಕಲಿ ಗಾಂಧಿಗಳು ಹೆಚ್ಚಾಗಿದ್ದಾರೆ. ಗಾಂಧಿವಾದ, ಗಾಂಧಿ ಹೆಸರಿನಲ್ಲಿ ಮಾಡುವ ಅಕ್ರಮಗಳು ಹೆಚ್ಚಾಗಿವೆ. ಶುದ್ಧ ರಾಜಕಾರಣವನ್ನು ನೋಡುವುದೇ ಅಪರೂಪವೆನಿಸಿದೆ. ಅಧಿಕಾರ ಇರುತ್ತೇ ಹೋಗುತ್ತೆ. ಆದರೆ, ಜನರ ಪ್ರೀತಿ ಮಾತ್ರ ನಿರಂತರವಾಗಿ ಇಟ್ಟುಕೊಳ್ಳುವ ವ್ಯಕ್ತಿ ಮಾತ್ರ ಅಪರೂಪ. ನಾನು ನೋಡಿದ ಮಟ್ಟಿಗೆ ವರನಟ ಡಾ.ರಾಜ್‌ಕುಮಾರ್ ಇಂದಿಗೂ ಕೂಡಾ ರಾಜ್ಯದ ಜನರ ಪಾಲಿಗೆ ಅಣ್ಣನಾಗಿದ್ದಾರೆ. ಅದೇ ರೀತಿಯಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡಾ ಹಿರಿಯ-ಕಿರಿಯರಿಗೆ ಪ್ರೀತಿಯ ಕುಮಾರಣ್ಣರಾಗಿ ಜನರ ಅಭಿಮಾನ ಗಳಿಸಿದ್ದಾರೆ ಎಂದು ತಮ್ಮಣ್ಣ ಮುಕ್ತ ಕಂಠದಿಂದ ಪ್ರಶಂಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.