ನ್ಯಾಯಬದ್ಧ ಸೌಲಭ್ಯಕ್ಕೆ ಆಗ್ರಹಿಸಿ ಕೂಲಿ ಕಾರ್ಮಿಕರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಮಂಡ್ಯ, ಮಾ.21
ನ್ಯಾಯಬದ್ಧ ಕೂಲಿ, ಕಾನೂನು ಬದ್ಧ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕೂಲಿ ಕಾರ್ಮಿಕರು ಗುರುವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತ ಕಾರ್ಮಿಕರು, ಜಿಲ್ಲೆಯ ವಿವಿಧ ಗೋದಾಮುಗಳಲ್ಲಿ ಮತ್ತು ರೇಲ್ವೆ ಗೂಡ್ಸ್ ಶೆಡ್ನಲ್ಲಿ ಕೆಲಸ ಮಾಡುವ ಲೋಡಿಂಗ್ ಕಾರ್ಮಿಕರಿಗೆ ನ್ಯಾಯ ಬದ್ದ ಕೂಲಿ ಮತ್ತು ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.
ಸಾಗಾಣಿಕೆ ಹಾಗೂ ಲೋಡಿಂಗ್ ಗುತ್ತಿಗೆದಾರರಿಗೆ 2 ವರ್ಷಕೊಮ್ಮೆ ನಡೆಯುವ ಕೂಲಿದರದ ಮಾತುಕತೆ ಕಳೆದ ಫೆ.15 ರಂದು ಮುರಿದು ಬಿದ್ದಿದೆ. ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಕೂಲಿ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
ಕಳೆದ 2 ಸಾಲಿನಲ್ಲೂ ಶೇ.26 ರಷ್ಟು ಕೂಲಿದರ ಏರಿಕೆ ಆಗಿತ್ತು. ಆದರೆ, ಈ ಈ 2 ವರ್ಷಗಳಲ್ಲಿ ಎಲ್ಲಾ ಅಗತ್ಯ ವಸ್ತುಗಳ ಬೆಲೆಗಳು ಶೇ.90 ರಷ್ಟು ಏರಿಕೆಯಾಗಿದೆ. ಇದರಿಂದ ಕೂಲಿ ಕಾರ್ಮಿಕರು ಜೀವನ ನಿರ್ವಹಣೆ ಕಷ್ಟವಾಗಿದೆ. ಆದ್ದರಿಂದ ವೈಜ್ಞಾನಿಕ ಮಾನದಂಡಗಳಿಗೆ ಅನುಗುಣವಾಗಿ ಕೂಲಿದರ ಏರಿಕೆ ಮಾಡಬೇಕು ಎಂದು ಆಗ್ರಹಿಸಿದರು.
ಬೇಡಿಕೆಗಳ ಈಡೇರಿಕೆಗಾಗಿ 6 ಬಾರಿ ಪ್ರತಿಭಟನೆ ಮಾಡಲಾಗಿದೆ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 3 ಬಾರಿ ಸಭೆ ನಡೆದಿದೆ. ಆದರೆ, ಇದುವರೆಗೂ ನ್ಯಾಯ ಸಿಗುತ್ತಿಲ್ಲ. ಗುತ್ತಿಗೆದಾರ ಕೇವಲ ಶೇ.5.2 ರಷ್ಟು ಕೂಲಿ ಹೆಚ್ಚಳ ಮಾಡುವುದಾಗಿ ಹೇಳಿದ್ದಾರೆ. ಇದರಿಂದ ಮಾಕುಕತೆ ಮುರಿದು ಬಿದ್ದಿದೆ ಎಂದರು.
ಮಾತುಕತೆ ಕುರಿತು ಗುತ್ತಿಗೆದಾರ ಸಂಘಕ್ಕೂ, ಜಿಲ್ಲಾಧಿಕಾರಿಗಳು, ಆಹಾರ ಇಲಾಖೆ ಉಪನಿರ್ದೇಶಕರಿಗೂ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳಿಗೂ ತಿಳಿಸಿದ್ದೇವೆ. ಆದರೆ, ಸ್ವತಃ ಜಿಲ್ಲಾಧಿಕಾರಿಗಳು ಕರೆಯುವ ಪಡಿತರ ಧಾನ್ಯ ಎತ್ತುವಳಿ ಟೆಂಡರ್ನಲ್ಲಿ ಲೋಡಿಂಗ್ ಕಾರ್ಮಿಕರಿಗೆ ಕಾನೂನು ಪ್ರಕಾರ ನೀಡಬೇಕಾದ ಯಾವ ಸೌಲಭ್ಯ ವನ್ನು ಸೂಚಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ಜನಶಕ್ತಿ ಸಂಘಟನೆಯ ಡಾ.ವಾಸು, ಜಿಲ್ಲಾಧ್ಯಕ್ಷ ಕೃಷ್ಣಪ್ರಕಾಶ್, ಕಾರ್ಯದರ್ಶಿ ಲಕ್ಷ್ಮಣ್ ಚೀರನಹಳ್ಳಿ, ಮಂಡ್ಯ ನಗರ ಸ್ಲಂ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಎನ್. ನಾಗೇಶ್, ಸಿದ್ದರಾಜು, ಸುಬ್ರಹ್ಮಣ್ಯ, ಚಲುವರಾಜು, ವರದರಾಜು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

