ಮಂಡ್ಯ

ಬೆಟ್ಟದ ಅರಸಮ್ಮನ ಜಾತ್ರೆಗೆ ಚಾಲನೆ

Published On :

ಕ.ಪ್ರ.ವಾರ್ತೆ ್ಣ ಹಲಗೂರು ್ಣ ಮಾ.21
ಇಲ್ಲಿಗೆ ಸಮೀಪದ ಗುಂಡಾಪುರದ ಬೆಟ್ಟದ ತಪ್ಪಲಿನಲ್ಲಿ ನೆಲೆಸಿರುವ ಇಲ್ಲಿನ ಆರಾಧ್ಯ ದೇವತೆ ಬೆಟ್ಟದ ಅರಸಮ್ಮನ ಜಾತ್ರೆಯು ಗುರುವಾರದಿಂದ ಪ್ರಾರಂಭವಾಗಿ  26ನೇ ಮಂಗಳವಾರ ವೈಭವಯುತವಾಗಿ ನಡೆಯುವ ದೊಡ್ಡ ಜಾತ್ರೆ ಎಲ್ಲರನ್ನು ತನ್ನೆಡೆಗೆ ಕೈ ಬೀಸಿ ಕರೆಯುತ್ತಿದೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು, ಹಲಗೂರು ಹೋಬಳಿಯ ಗುಂಡಾಪುರಲ್ಲಿ ಒಂದು ವಾರಗಳ ಕಾಲ ನಡೆಯುವ ಬೆಟ್ಟದ ಅರಸಮ್ಮನ ಜಾತ್ರಾ ಮಹೋತ್ಸವಕ್ಕೆ ಜಿಲ್ಲೆಯಿಂದ ಮಾತ್ರವಲ್ಲ, ರಾಜ್ಯದ ಮೂಲೆ, ಮೂಲೆಯಿಂದ ಭಕ್ತರು ಅಪಾರ ಸಂಖ್ಯೆಯಲ್ಲಿ ನೆರೆದು ದರ್ಶನ ಪಡೆಯುತ್ತಾರೆ.
23ರಂದು ತಟ್ಟೆ ಪೂಜೆ ಹಾಗೂ ಸಂಜೆ ಊರ್ಜಿ ನಡೆಯುತ್ತದೆ. ಆ ದಿನ ಬೆಳಗ್ಗೆ  ಗುಂಡಾಪುರ ಸೇರಿದಂತೆ ಸುತ್ತಮುತ್ತಲಿನ 7 ಗ್ರಾಮವದವರು ಬಿದಿರು ತಟ್ಟೆಯನ್ನು ಬೆಟ್ಟದ ಮೇಲಿರುವ ಹೆಬ್ಬೆಟ್ಟದ ಬಸವವೇಶ್ವರಸ್ವಾಮಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ, ನಂತರ ಬಿದಿರು ತಟ್ಟೆಯನ್ನು 7 ಗ್ರಾಮಗಳ ಗ್ರಾಮಸ್ಥರು ತಲಾ ಒಂದೊಂದು ತಟ್ಟೆಯನ್ನು ಕಡಿದಾದ ಇಳಿಜಾರಿನಿಂದ ಕೂಡಿದ ರಸ್ತೆಯಲ್ಲಿ ಎತ್ತುಕೊಂಡು ಮುಂದೆ ಸಾಗುತ್ತಾ ಮೊದಲು ಯಾರು ಬೆಟ್ಟದ ತಪ್ಪಲಿನಲ್ಲಿ  ನೆಲೆಸಿರುವ ಬೆಟ್ಟದರಸಮ್ಮನ ಸನ್ನಿಧಿಗೆ ಬರುತ್ತಾರೋ ಎಂಬುದನ್ನು ನೋಡಲು ಅನೇಕ ಗ್ರಾಮಗಳ ಗ್ರಾಮಸ್ಥರು ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ದಿನಾಂಕ 26-03-2013ನೇ ಮಂಗಳವಾರ ನಡೆಯುವ ದೊಡ್ಡ ಜಾತ್ರಾ ಮಹೋತ್ಸವ ಈ ಬಾರಿ ವೈಭವಯುತವಾಗಿ ನಡೆಯುತ್ತದೆ. ಗುಂಡಾಪುರದ  ಮಧ್ಯಭಾಗದಲ್ಲಿರುವ ಕರಗದ ಮನೆಯಿಂದ ಬೆಟ್ಟದರಸಮ್ಮನ ಕರಗಕ್ಕೆ ವಿವಿಧ ಪುಷ್ಪಗಳಿಂದ ಆಲಂಕರಿಸಿ ಹೆಬ್ಬಾರೆ ಬಾರಿಸುತ್ತಾ ದೇವರಗುಡ್ಡರು ಗ್ರಾಮದ ಮನೆ ಮನೆಗಳಿಗೆ ಹೋಗಿ ಹೆಬ್ಬಾರೆಗಳಿಗೆ ಪೂಜೆ ಸಲ್ಲಿಸಿ ಅಚ್ಚಂದ ಪಡೆಯುತ್ತಾರೆ. ನಂತರ ಹೆಬ್ಬಾರೆ ಕರಗದ ಮನೆಗೆ ಬಂದಾಗ ವಿಶೇಷ ಪೂಜಾ ಕಾರ್ಯಕ್ರಮ  ನಡೆಯುತ್ತವೆ. ಬಾಳೆಹೊನ್ನಿಗದ ಗ್ರಾಮಸ್ಥರನ್ನು ಕಂಡರೆ ದೇವಿಗೆ ಅಚ್ಚು ಮೆಚ್ಚಂತೆ, ಅವರು ಹಳದಿ ಬಟ್ಟೆಗಳನ್ನು ತೊಟ್ಟು,
ಬೇವಿನ ಸೊಪ್ಪನ್ನು ಸೊಂಟಕ್ಕೆ ಸುತ್ತಿಕೊಂಡು, ವಿವಿಧ ಆಕಾರಗಳಲ್ಲಿ ಗೋಣಿ ಚೀಲಗಳನ್ನು ಹಾಗೂ ಬಟ್ಟೆಗಳನ್ನು ಹರಿದು ಅದನ್ನು ಧರಿಸಿ, ಕುಣಿತದೊಂದಿಗೆ ಕರಗದ ಮನೆಗೆ ಬಂದಾಗ ಆವರ ಪರದೇಶಿ ಕುಣಿತದೊಂದಿಗೆ ದೇವರ ಕರಗವನ್ನು ಹೊತ್ತು ದೇವರಗುಡ್ಡರು ಹೆಬ್ಬಾರೆ ಬಾರಿಸುತ್ತಾ ಉತ್ಸವ ಹೊರಡುತ್ತದೆ. ಹರಕೆ ಹೊತ್ತವರು ಬಾಯಿಬೀಗ ಹಾಕಿಸಿಕೊಂಡು, ಕಳಸಹೊತ್ತ ಮುತ್ತೈದೆಯರೊಂದಿಗೆ ಛತ್ರಿ, ಚಾಮರಗಳನ್ನು ಬೀಸುತ್ತಾ ಜೋಡಿ ಬಸವಗಳ ಜೊತೆ ದೇವರ ಕರಗವನ್ನು ಬೆಟ್ಟದ ತಪ್ಪಲಿನಲ್ಲಿರುವ ದೇವಸ್ಥಾನಕ್ಕೆ  ಭಾರಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತದೆ. ಆ ದಿನ ಭಾರಿ ಸಂಖ್ಯೆಯಲ್ಲಿ ಭಕ್ತಾಧಿಗಳು ಸೇರುತ್ತಾರೆ. ಜಾತ್ರೆ ದಿನ ಬರುವ ಭಕ್ತಾಧಿಗಳಿಗೆ ಬಾಯಾರಿಕೆ ನೀಗಿಸಲು ಎತ್ತಿನ ಗಾಡಿಯಲ್ಲಿ ಬೆಲ್ಲದ ಹಣ್ಣಿನ ಪಾಲಕ, ನಿಂಬೆ ಹಣ್ಣಿನ ಷರಬತ್ತು, ಮಜ್ಜಿಗೆ ನೀಡುತ್ತಾರೆ. ಮಹಿಳೆಯರು ಪರಸ್ಪರ ಅರಿಶಿನ ಕುಂಕುಮ ಕೊಟ್ಟು, ಹೆಸರುಬೆಳೆ, ಕೋಸಂಬರಿ, ಪಾನಕ, ಬಾಳೆಹಣ್ಣು, ತಾಂಭೂಲ ಕೊಡುತ್ತಾರೆ. ಮಂಗಳವಾರ ರಾತ್ರಿ ಮತ್ತೆ ದೇವರ ಕರಗವನ್ನು ಗುಂಡಾಪುರದ ಗ್ರಾಮದೊಳಗೆ ತರುವಾಗ ಮಹಿಳೆಯರು ಆರತಿ ಎತ್ತಿ ಬರಮಾಡಿಕೊಳ್ಳುತ್ತಾರೆ.ಅಕ್ಕಪಕ್ಕದ ಗ್ರಾಮಸ್ಥರು, ಹಸುಗಳನ್ನು ಹಿಡಿದುಕೊಂಡು ಬಂದು ಊರ್ಜಿ ಆಡಿಸುವುದನ್ನು ನೋಡಲು ಬಲು ಚೆನ್ನ, ಇವುಗಳ ಜೊತೆ ಕರಗವನ್ನು ಕರಗದ ಮನೆಗೆ ತರಲಾಗುತ್ತದೆ. ಬುಧವಾರ ಕೊಂಡೋತ್ಸವ ನಡೆದು ನಂತರ ಜಾತ್ರಾ ಮಹೋತ್ಸವ ಮುಕ್ತಾಯವಾಗುತ್ತದೆ. ಜಾತ್ರೆ ಪ್ರಾರಂಭವಾಗಿ ಒಂದು ವಾರಗಳ ಕಾಲ ನಡೆಯುವ ಆ ದಿನಗಳಲ್ಲಿ  ಗುಂಡಾಪುರ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿ ಮೆಣಸಿನಕಾಯಿ ಹುರಿಯುವುದು, ಸಾರಿಗೆ ಒಗ್ಗರಣೆ ಹಾಕುವುದು ಹಾಗೂ ಮಾಂಸಾಹಾರ ಮಾಡುವುದಿಲ್ಲ. ಈ ದೇವಿಯ ಜಾತ್ರೆಯನ್ನು ಭಕ್ತಿ ಪೂರಕವಾಗಿ ಆಚರಿಸಲಾಗುತ್ತದೆ. ಮಂಗಳವಾರ ನಡೆಯುವ ದೊಡ್ಡ ಜಾತ್ರೆ ದಿನ ಭಾಗವಹಿಸೋಣ ಬನ್ನಿ...

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.